ಕಾಲೇಜುಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವುದರ ಜೊತೆ ಜೊತೆಗೆ ಮತ್ತೊಂದು ಬಹುದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು. ಈ ಸಮಸ್ಯೆಯ ಬಗ್ಗೆ ಪೋಷಕರು ಯಾವ ರೀತಿ ಎಚ್ಚರದಿಂದಿರಬೇಕು ಎಂಬ ಬಗ್ಗೆ ತಿಳಿದುಕೊಳ್ಳಬೇಕು!
ಕೇರಳದ ಕೋಳಿಕೋಡ್ನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೆ.ಪಿ. ಅವಸ್ಥಿ ಎಂಬ ವಿದ್ಯಾರ್ಥಿಗೆ ತಾನು ಬದುಕುಳಿದದ್ದೇ ಶಿಕ್ಷೆ ಎಂಬಂತೆ ಅನಿಸುತ್ತಿದೆ. ಏಕೆಂದರೆ ಅವನ 5 ಸೀನಿಯರ್ ವಿದ್ಯಾರ್ಥಿಗಳು ಅವನಿಗೆ ಬಾಥ್ರೂಮ್ ಸ್ವಚ್ಛತೆ ಮಾಡುವ ಕೀಟನಾಶಕ ಕುಡಿಯಲು ಒತ್ತಡ ಹೇರಿದ್ದರು.ಇದು ಪ್ರಮುಖ ಕಾಲೇಜೊಂದರಲ್ಲಿ ನಡೆದ ಘಟನೆ. ಅದು ನರ್ಸಿಂಗ್ ಕೋರ್ಸ್ಗೆ ಹೆಸರಾದ ಕಾಲೇಜ್. ಅಲ್ಲಿ ಕೇರಳದ ವಿದ್ಯಾರ್ಥಿಗಳೇ ಹೆಚ್ಚಾಗಿ ಪ್ರವೇಶ ಪಡೆಯುತ್ತಾರೆ. ನರ್ಸಿಂಗ್ ವೃತ್ತಿಯಲ್ಲಿ ಕೇರಳದ್ದೇ ಪ್ರಾಬಲ್ಯ ಎನ್ನುವುದು ಜನಜನಿತ ಸಂಗತಿ.
ಮೇ. 9, 2016 ರಂದು ನಡೆದ ಈ ಘಟನೆಯ ಎಫ್.ಐ.ಆರ್. ದಾಖಲಾದದ್ದು ಜೂನ್ 22, 2016 ರಂದು. ಅಂದರೆ 42 ದಿನಗಳ ಬಳಿಕ. ಈ ಒಂದು ವಿಷಯದಿಂದಲೇ ಈ ಪ್ರಕರಣದಲ್ಲಿ ಎಷ್ಟರಮಟ್ಟಿಗೆ ನಿರ್ಲಕ್ಷ್ಯ ತೋರಲಾಯಿತು ಎಂಬುದು ಖಾತ್ರಿಯಾಗುತ್ತದೆ. ರಾಗಿಂಗ್ ಕಾನೂನು ಅದೆಷ್ಟು ದುರ್ಬಲವಾಗಿದೆ ಎಂಬುದನ್ನು ಕೂಡ ಈ ಘಟನೆ ಬೆರಳು ಮಾಡಿ ತೋರಿಸುತ್ತದೆ. ಮೇ 9 ರಂದು ಅವಸ್ಥಿಗೆ ಅವನ ಸೀನಿಯರ್ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಫಿನೈಲ್ ಕುಡಿಯಲು ಒತ್ತಡ ಹೇರಿದರು. ಅವಸ್ಥಿ ಅಲ್ಲಿಂದ ಕಾಲ್ಕೀಳಲು ನೋಡಿದ. ಆದರೆ ಅವರು ಅವನನ್ನು ಎತ್ತಿಕೊಂಡು ಬಂದು ಫಿನೈಲ್ ಕುಡಿಯಲು ಒತ್ತಾಯ ಮಾಡಿದರು. ಫಿನೈಲ್ ಕುಡಿದ ಬಳಿಕ ಅವನು ಕೆಳಗೆ ಕುಸಿದುಬಿದ್ದ. ಬಳಿಕ ಅವನ ಸ್ನೇಹಿತರು ಅವನನ್ನು ಆಸ್ಪತ್ರೆಗೆ ಸೇರಿಸಿದರು. ಅವನ ಸ್ಥಿತಿ ಸುಧಾರಣೆಯಾಗುವ ಬದಲು ಮತ್ತಷ್ಟು ಹದಗೆಟ್ಟುಹೋಯಿತು. ಹೀಗಾಗಿ ಅವನನ್ನು ಅವನ ತವರು ರಾಜ್ಯಕ್ಕೆ ಕಳಿಸಿಕೊಡಲಾಯಿತು.
ವೈದ್ಯರ ಪ್ರಕಾರ ಆ ವಿದ್ಯಾರ್ಥಿಯ ಒಳ ಅಂಗಗಳು ಬೆಂದುಹೋಗಿದ್ದವು. ಅವನಿಗೆ ಬಹುದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಏಕೆಂದರೆ ಫಿನೈಲ್ ಅವನ ಅನ್ನನಾಳವನ್ನು ಹಾಳುಗೆಡವಿತ್ತು. ಅಷ್ಟೇ ಅಲ್ಲ, ಗಂಟಲು ಹಾಗೂ ಹೊಟ್ಟೆಯ ಮಧ್ಯಭಾಗವನ್ನು ಸಾಕಷ್ಟು ಹಾನಿಗೀಡು ಮಾಡಿತ್ತು. ಆ ನೋವಿನಿಂದ ಸಂಪೂರ್ಣ ಗುಣಮುಖನಾಗಲು ಅವನಿಗೆ ಏನಿಲ್ಲವೆಂದರೂ 4 ತಿಂಗಳು ಬೇಕಾಯಿತು.
ಇಂತಹ ಪ್ರಕರಣಗಳಲ್ಲಿ ಅವರು ಗುಣಮುಖರಾದರೂ ಅವರ ಒಳಗಿನ ಎಲ್ಲ ಅಂಗಾಂಗಗಳು ಸಂಪೂರ್ಣವಾಗಿ, ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಅವಸ್ಥಿಗೆ ಮೊದಲ ದಿನದಿಂದಲೇ ಹಿಂಸೆ ನೀಡಲಾಗುತ್ತಿತ್ತು. ಆದರೆ ಅವನ ಗೋಳನ್ನು ಕೇಳುವವರು ಅಲ್ಲಿ ಯಾರೂ ಇರಲಿಲ್ಲ. ಕಾಲೇಜು ಆಡಳಿತ ಮಂಡಳಿ ಕೂಡ ಆ್ಯಂಟಿ ರಾಗಿಂಗ್ ಕಾನೂನನ್ನು ಬಳಸಿಕೊಳ್ಳಬಹುದಾಗಿತ್ತು. ಆದರೆ ಅದು ಹಾಗೇನೂ ಮಾಡಲಿಲ್ಲ. ಪೊಲೀಸರಿಗೆ ದೂರು ಕೂಡ ಸಲ್ಲಿಕೆಯಾಗಲಿಲ್ಲ.
ಎಷ್ಟೋ ದಿನಗಳ ಬಳಿಕ ಎಫ್.ಐ.ಆರ್ ದಾಖಲಾದ ನಂತರ ಸೀನಿಯರ್ ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ಆ ಸೀನಿಯರ್ ವಿದ್ಯಾರ್ಥಿಗಳಿಗೆ ಅವಸ್ಥಿಯ ಮೇಲೆ ಅದೇನು ದ್ವೇಷವಿತ್ತೋ ಏನೋ? ಅವನ ಮೇಲೆ ಈ ರೀತಿ ಸೇಡು ತೀರಿಸಿಕೊಂಡಿದ್ದರು. ಅದರಲ್ಲಿ ಒಬ್ಬ ವಿದ್ಯಾರ್ಥಿನಿ ಕೂಡ ಇದ್ದದ್ದು ಗಮನಿಸಬೇಕಾದ ಸಂಗತಿ.
ಅವಸ್ಥಿಯ ತಾಯಿ ದಿನಗೂಲಿ ಮಾಡುವವಳು. ಆಕೆ ತನ್ನನ್ನು ಭೇಟಿಯಾದ ಪತ್ರಕರ್ತರಿಗೆ ಹಾಗೂ ರಾಜಕಾರಣಿಗಳಿಗೆ ಹೇಳಿದ್ದು ಒಂದೇ, “ನನ್ನ ಮಗನಿಗಾದ ಸ್ಥಿತಿ ಮತ್ತಾರಿಗೂ ಬಾರದಿರಲಿ….” ಆ ಬಳಿಕ ಶಾಸಕರೊಬ್ಬರು ಕೇರಳ ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು. ಆಗ ಜನರಿಗೆ ಇನ್ನೂ ರಾಗಿಂಗ್ ಜೀಂತವಿದೆ ಎನ್ನುವುದು ಗೊತ್ತಾಯಿತು.
ಹಿಂಸೆಯ ರೂಪ ಪಡೆದ ರಾಗಿಂಗ್
ಕಳೆದ 50 ವರ್ಷಗಳಲ್ಲಿ ರಾಗಿಂಗ್ನ ವಿಧಾನಗಳಲ್ಲಿ ಬದಲಾವಣೆಯಾಗಿಲ್ಲ. ಆದರೆ ಇದು ವರ್ಷಗಳಿಂದ ವರ್ಷಕ್ಕೆ ಅಮಾನವೀಯ, ಕ್ರೂರತನದ ಮಟ್ಟ ತಲುಪಿದೆ. ಮೊದಲು ಪರಿಚಿತ ಅಂದರೆ ಕ್ಯಾಂಪಸ್ ವಲಯದಲ್ಲಿ ಮಾತ್ರ ಸೀಮಿತವಾಗಿರುತ್ತಿತ್ತು. ಈಗ ಬೇರೆ ಬೇರೆ ಕಡೆ ಕರೆದುಕೊಂಡು ಹೋಗಿ ವಿಕೃತ ಹಿಂಸೆ ಕೊಡುವಷ್ಟರ ಮಟ್ಟಿಗೆ ವಿಕೋಪಕ್ಕೆ ತಲುಪಿದೆ.
“ಜೂನಿಯರ್ಗಳಿಗೆ ಕಾರಣವಿಲ್ಲದೆಯೇ ಬಗೆಬಗೆಯ ರೀತಿಯಲ್ಲಿ ಹಿಂಸೆ ನೀಡುವುದು ಯಾವ ರೀತಿಯ ಪುಂಡಾಟಿಕೆ,” ಎಂದು ಪುಣೆಯ ಸವಿತಾ ಕೇಳುತ್ತಾರೆ. ಅವರ ಏಕೈಕ ಪುತ್ರ ರಾಗಿಂಗ್ನ ದುಷ್ಟ ಚಕ್ರಕ್ಕೆ ಸಿಲುಕಿ ನಲುಗಿ ಹೋದ.
ಇದು 6 ವರ್ಷಗಳ ಹಿಂದೆ ನಡೆದ ಘಟನೆ. ಮಗನನ್ನು ಮುಂಬೈನ ಕಾಲೇಜಿಗೆ ಸೇರಿಸಿ ಬಂದಿದ್ದರು. ಅವರು ಮನೆಗೆ ಬಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಮಗ ಯಾವುದೇ ಮುನ್ಸೂಚನೆ ನೀಡದೆ ಊರಿಗೆ ಬಂದು ಬಿಟ್ಟ. ತಾನು ಸೀನಿಯರ್ ವಿದ್ಯಾರ್ಥಿಗಳ ರಾಗಿಂಗ್ ಕಾಟಕ್ಕೆ ಬೇಸತ್ತು ಊರಿಗೆ ಬಂದಿದ್ದಾಗಿ ಹೇಳಿದ. ಸತ್ತರೂ ಪರವಾಗಿಲ್ಲ ಆದರೆ ಆ ಕಾಲೇಜಿಗೆ ಮತ್ತೆಂದೂ ಹೋಗಲಾರೆ ಎಂದು ಹೇಳಿದ.
ಪೋಷಕರ ಪಾತ್ರ
ಮಕ್ಕಳನ್ನು ಬೇರೆ ನಗರಗಳಲ್ಲಿ ಓದಿಸುವುದು ಹಾಗೂ ಅಲ್ಲಿನ ಹಾಸ್ಟೆಲ್ನಲ್ಲಿ ಇರಿಸುವುದು ಅನಿವಾರ್ಯ. ಆದರೆ ಅಲ್ಲಿನ ಸುರಕ್ಷತೆ ಅತ್ಯಂತ ಮುಖ್ಯ. ಆದರೆ ಆ ಸುರಕ್ಷತೆ ಹೇಗಿರಬೇಕು ಎನ್ನುವುದಕ್ಕೆ ಯಾವುದೇ ನಿಖರ ಉತ್ತರ ದೊರೆಯುವುದಿಲ್ಲ. ಆದರೂ ಕೆಲವು ಸಂಗತಿಗಳ ಬಗ್ಗೆ ಪೋಷಕರು ಗಮನಹರಿಸಿದರೆ ರಾಗಿಂಗ್ ಫ್ರೀ ಆಗಿ ಮಾಡದಿದ್ದರೂ ಆ ಒಂದು ಉಪಟಳದಿಂದ ಅವರನ್ನು ರಕ್ಷಿಸಬಹುದಾಗಿದೆ.
– ಪೋಷಕರು ಮಕ್ಕಳ ಜೊತೆ ನಿಯಮಿತವಾಗಿ ದೂರವಾಣಿ ಸಂಪರ್ಕದಲ್ಲಿರಬೇಕು.
– ಆರಂಭದಲ್ಲಿ ತಿಂಗಳಿಗೆ 1 ಅಥವಾ 2 ಬಾರಿ ಹಾಸ್ಟೆಲ್ಗೆ ಹೋಗಿ ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬನ್ನಿ. ನಿಮ್ಮ ಈ ನಿಯಮಿತ ಭೇಟಿಯಿಂದ ಅವರಲ್ಲಿ ಒಂದು ರೀತಿಯ ಭಯ ಇರುತ್ತದೆ.
– ನಿಮ್ಮ ಮಗ ಅಥವಾ ಮಗಳು ಇರುವ ನಗರದಲ್ಲಿ ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಪರಿಚಿತರು ಯಾರಾದರೂ ಇದ್ದರೆ ಅವರ ಜೊತೆಗೆ ನಿಕಟತೆ ಹೆಚ್ಚಿಸಿಕೊಳ್ಳಿ. ಅವರಿಗೂ ಕೂಡ ಆಗಾಗ ಹಾಸ್ಟೆಲ್ಗೆ ಹೋಗಿ ನಿಮ್ಮ ಮಗ ಅಥವಾ ಮಗಳನ್ನು ಭೇಟಿಯಾಗಿ ಮಾತನಾಡಲು ತಿಳಿಸಿ.
– ಹಾಸ್ಟೆಲ್ನಲ್ಲಿ ರಾತ್ರಿ 11-12 ಗಂಟೆ ಸುಮಾರಿಗೆ ರಾಗಿಂಗ್ ಘಟನೆಗಳು ನಡೆಯುತ್ತವೆ. ಆ ಸಮಯದಲ್ಲಿಯೇ ಮಗ/ಮಗಳ ಜೊತೆ ಫೋನ್ ಸಂಪರ್ಕದಲ್ಲಿರಿ. ಆ ಸಮಯದಲ್ಲಿಯೇ 2-3 ದಿನಗಳ ಕಾಲ ಫೋನ್ ಸಂಪರ್ಕ ಸಿಗದಿರುವುದು ಗಮನಕ್ಕೆ ಬಂದರೆ ಏನೋ ನಡೆಯಬಾರದ್ದು ನಡೆಯುತ್ತಿದೆ ಎಂದು ಊಹಿಸಿ.
– ನಿಮ್ಮ ಮಗ/ಮಗಳು ಮನೆಗೆ ಬಂದಾಗ ಅಸಹಜವಾಗಿ ಅಥವಾ ಒತ್ತಡದಲ್ಲಿರುವುದು ಕಂಡುಬಂದರೆ ನೀವು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ನಿನ್ನ ಪೋಷಕರಷ್ಟೇ ಅಲ್ಲ, ಹಿತಚಿಂತಕರು ಮತ್ತು ಸ್ನೇಹಿತರು ಕೂಡ ಎಂದು ಭರವಸೆ ಮೂಡಿಸಿ. ಆಗ ನಿಮ್ಮ ಮಕ್ಕಳು ತಮ್ಮ ಸಮಸ್ಯೆಯನ್ನು ನಿಮ್ಮ ಮುಂದೆ ಮನಬಿಚ್ಚಿ ಹೇಳಬಹುದು.
ಭೂಪಾಲದ ಪ್ರೊಫೆಸರ್ರೊಬ್ಬರ ಮಗ ಆಡಳಿತ ಸೇವೆಯ ತರಬೇತಿ ಪಡೆಯಲು ಜೈಪುರ್ಗೆ ಹೋದ. ಅಲ್ಲಿ ಅವನ ಮೇಲೆ ಸೀನಿಯರ್ ವಿದ್ಯಾರ್ಥಿಗಳು ರಾಗಿಂಗ್ಗೆ ಗುರಿಪಡಿಸಿದ್ದರಿಂದ ಅವನು ಅಲ್ಲಿಂದ ಓಡಿಹೋಗಿ ಧಾರ್ಮಿಕ ಸ್ಥಳವೊಂದರಲ್ಲಿ ತಂಗಿದ್ದ. ಈ ವಿಷಯನ್ನು ಅವನು ತನ್ನ ಪೋಷಕರಿಗೆ ತಿಳಿಸಿರಲೇ ಇಲ್ಲ. ಅವನ ಸ್ನೇಹಿತರ ಮುಖಾಂತರ ಈ ವಿಷಯ ಅವನ ತಂದೆಯ ಕಿವಿಗೂ ಬಿತ್ತು. ಅವರು ತಕ್ಷಣವೇ ಜೈಪುರಕ್ಕೆ ಧಾವಿಸಿದರು.
ಪ್ರೊಫೆಸರ್ ತಮ್ಮ ಮಗನ ಮಾನಸಿಕ ಸ್ಥಿತಿಯನ್ನು ಗಮನಿಸಿ ಅವನನ್ನು ತಕ್ಷಣವೇ ಮನೆಗೆ ಕರೆದುಕೊಂಡು ಹೋದರು. ಕೆಲವು ತಿಂಗಳುಗಳ ಬಳಿಕ ಅವನು ಸಾಮಾನ್ಯ ಸ್ಥಿತಿಗೆ ಮರಳಿದಾಗ ಹೇಳಿದ ಮಾತು ಎಂಥವರನ್ನೂ ಘಾಸಿಗೊಳಿಸುತ್ತದೆ, “ಹಾಗೊಂದು ವೇಳೆ ನಾನು ಅಲ್ಲಿಯೇ ಇದ್ದಿದ್ದರೆ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಿದ್ದೆ.”
ಹುಡುಗಿಯರ ಬಾಬತ್ತಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಹುಡುಗರಾಗಿದ್ದರೆ ರಾಗಿಂಗ್ಗೆ ಹೆದರಿ ಯಾವುದಾದರೂ ಲಾಜ್ ಅಥವಾ ಧರ್ಮಶಾಲೆಗಳಲ್ಲಿ ಆಶ್ರಯ ಪಡೆಯಬಹುದು. ಆದರೆ ಹುಡುಗಿಯರು ಹೀಗೆ ಮಾಡಲು ಖಂಡಿತ ಸಾಧ್ಯವಿಲ್ಲ. ಯಾವುದೇ ಸಂಗತಿಯ ಬಗ್ಗೆ ಏನನ್ನೂ ಮುಚ್ಚಿಡಬಾರದು ಎಂದು ನೀವು ಅವರಿಗೆ ಸೂಕ್ತ ಸಲಹೆ ನೀಡಿ. ಇದರಲ್ಲಿ ತಾಯಿಯ ಪಾತ್ರ ಮುಖ್ಯವಾಗಿರುತ್ತದೆ.
ದುರ್ಬಲ ಕಾನೂನು
ರಾಗಿಂಗ್ನ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕಾನೂನುಗಳೇನೋ ಇವೆ. ಆದರೆ ಇಲ್ಲಿರುವ ಅಡ್ಡಿ ಏನೆಂದರೆ ತಪ್ಪಿತಸ್ಥರ ವಿರುದ್ಧ ದೂರುಗಳು ಸಲ್ಲಿಕೆಯಾಗದಿರುವುದು. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳಿಗೆ ಹಾಕುವ ಜೀವ ಬೆದರಿಕೆ. ಜೂನಿಯರ್ ವಿದ್ಯಾರ್ಥಿಗಳು ಭವಿಷ್ಯದ ಚಿಂತೆಯಿಂದ ತಪ್ಪಿತಸ್ಥರ ವಿರುದ್ಧ ಯಾವುದೇ ದೂರು ಕೊಡಲು ಹಿಂದೇಟು ಹಾಕುತ್ತಾರೆ.
ಪ್ರತಿಯೊಂದು ಕಾಲೇಜಿನಲ್ಲೂ ರಾಗಿಂಗ್ ತಡೆಗೆ, ದೂರುಗಳ ಬಗ್ಗೆ ವಿಚಾರಣೆ ನಡೆಸಲು ಒಂದು ಕಮಿಟಿಯನ್ನೇನೋ ರಚಿಸಲಾಗಿರುತ್ತದೆ. ಆದರೆ ಅವು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದಿಲ್ಲ. ಜೂನಿಯರ್ ವಿದ್ಯಾರ್ಥಿಗಳು ಯಾರಾದರೂ ದೂರು ಸಲ್ಲಿಸಿದರೆ ಅದರ ಬಗ್ಗೆ ಕ್ರಮ ಕೈಗೊಳ್ಳುವ ಬದಲು ಇದು ಅಷ್ಟಿಷ್ಟು ನಡೆದೇ ನಡೆಯುತ್ತೆ, ಹೆಚ್ಚಿನ ಪ್ರಮಾಣದಲ್ಲಿ ನಡೆದರೆ ತಿಳಿಸಿ ಎಂದು ಅವರಿಗೆ ಬುದ್ಧಿವಾದ ಹೇಳಲಾಗುತ್ತದೆ. ಆ್ಯಂಟಿ ರಾಗಿಂಗ್ ಕಮಿಟಿಯಲ್ಲಿ ಸಾಮಾನ್ಯವಾಗಿ ಕಾಲೇಜಿನ ಪ್ರೊಫೆಸರ್ ಗಳೇ ಇರುತ್ತಾರೆ. ಅವರಿಗೆ ರಾಗಿಂಗ್ ತಡೆಯುವ ಕೆಲಸ ಒತ್ತಾಯಪೂರ್ಕವಾಗಿ ಹೇರಲ್ಪಟ್ಟ ಕೆಲಸ ಎಂಬಂತೆ ಭಾಸವಾಗುತ್ತದೆ. ಇದರ ಹೊರತಾಗಿ ಕಾಲೇಜಿನ ಪ್ರತಿಷ್ಠೆಗಾಗಿ ಅವರ ಮೊದಲ ಪ್ರಯತ್ನ ಅದೊಂದು ಗತಿಸಿಹೋದ ಮರೆತು ಹೋದ ಘಟನೆ ಎಂಬಂತೆ ಬಿಂಬಿಸಲ್ಪಡುತ್ತದೆ.
ಎರಡನೇ ಮಹತ್ವದ ಕಾರಣವೆಂದರೆ, ಸೀನಿಯರ್ಗಳ ಹೆದರಿಕೆಯೂ ಆಗಿರುತ್ತದೆ. ಎನ್ಐಟಿಯ ಒಬ್ಬ ಪ್ರೊಫೆಸರ್ರ ಪ್ರಕಾರ, ನಾವು ಕೂಡ ಕುಟುಂಬಸ್ಥರು. ಒಂದು ವೇಳೆ ಮಧ್ಯರಾತ್ರಿಯ ಹೊತ್ತಿಗೆ ಸೀನಿಯರ್ಗಳಿಂದ ರಾಗಿಂಗ್ ಘಟನೆ ನಡೆಯುತ್ತಿದ್ದರೆ ನಾವೇನು ಮಾಡಲು ಸಾಧ್ಯ? ನಾವು ಹಾಸ್ಟೆಲ್ನಲ್ಲಿ ಮಲಗಿರಬೇಕಾ? ದೂರು ಬರುತ್ತಿದ್ದಂತೆ ಸೀನಿಯರ್ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿದರೆ ಅವರು ಕೇಳಿಸಿಕೊಳ್ಳುತ್ತಾರೆಯೇ? ಅವರು ಅದೆಷ್ಟು ನಿರ್ಭೀತರಾಗಿರುತ್ತಾರೆಂದರೆ, ಅವರು ನಮ್ಮ ಎಚ್ಚರಿಕೆಗೂ ಮಣಿಯುವುದಿಲ್ಲ. ಒಂದು ವೇಳೆ ಪೊಲೀಸರಿಗೆ ದೂರು ಕೊಟ್ಟರೆ, ನಾವು ತೊಂದರೆ ಸಿಲುಕಿದರೆ ಏನು ಮಾಡುವುದು?
ಆ್ಯಂಟಿ ರಾಗಿಂಗ್ ಕಾನೂನು ಬೇರೆ ಕಾನೂನುಗಳ ಹಾಗೆ ಒಂದು ಕಾನೂನೇನೋ ಆಗಿದೆ. ಈ ಕಾನೂನಿನಲ್ಲಿ ತಪ್ಪಿತಸ್ಥರಿಗೆ 2 ವರ್ಷಗಳ ಶಿಕ್ಷೆ ಹಾಗೂ 10,000 ರೂ.ಗಳ ದಂಡ ವಿಧಿಸಬಹುದಾಗಿದೆ. ಆದರೆ ಅಪರಾಧ ಸಾಬೀತಾದರೆ ಮಾತ್ರ. ನೇರವಾಗಿ ಹೇಳಬೇಕೆಂದರೆ ಐಪಿಸಿ ಕಾನೂನುಗಳನ್ನು ರೂಪಾಂತರಿಸಿ ಅದಕ್ಕೆ ಆ್ಯಂಟಿ ರಾಗಿಂಗ್ ಕಾನೂನಿನ ಹೆಸರು ಕೊಡಲಾಗಿದೆ. ಅದರನ್ವಯ ಮೊದಲು ಎಫ್ಐಆರ್ ದಾಖಲಿಸಲಾಗುತ್ತದೆ. ಆಪಾದಿತರನ್ನು ಬಂಧಿಸಲಾಗುತ್ತದೆ. ಅವರಿಗೆ ಜಾಮೀನು ಸಹ ನೀಡಲಾಗುತ್ತದೆ. ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಉಳಿದವರು ಹಾಗೆಯೇ ನುಣುಚಿಕೊಂಡಿದ್ದಾರೆ.
ವಿಶ್ವವಿದ್ಯಾಲಯ ಅನುದಾನ ಆಯೋಗ ಹಾಗೂ ಬೇರೆ ಏಜೆನ್ಸಿಗಳು ಕೇವಲ ಶಿಫಾರಸುಗಳನ್ನು ಮಾಡುತ್ತಾ ಇರುತ್ತವೆ, ಎಚ್ಚರಿಕೆಗಳನ್ನು ಕೊಡುತ್ತ ಇರುತ್ತವೆ. ಯಾವುದೇ ಕಾರಣಕ್ಕೂ ರಾಗಿಂಗ್ ಆಗಬಾರದೆನ್ನುವುದು ಯುಜಿಸಿಯ ಎಚ್ಚರಿಕೆಯ ಸಂದೇಶ. ಆದರೆ ರಾಗಿಂಗ್ನ ಘಟನೆಗಳು ದೇಶದ ಬೇರೆ ಬೇರೆ ನಗರಗಳಲ್ಲಿ ನಡೆಯುತ್ತಲೇ ಇರುತ್ತವೆ.
ಸರ್ಕಾರ ಹಾಗೂ ಅದರ ಏಜೆನ್ಸಿಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ರಾಗಿಂಗ್ನ ಮನಸ್ಥಿತಿ ಹಾಗೂ ಅದರ ಪರಂಪರೆಯನ್ನು ಹೊಸಕಿ ಹಾಕಲು ದಿಟ್ಟ ಹೆಜ್ಜೆ ಇಡಬೇಕಾಗಿದೆ. ಇಲ್ಲದಿದ್ದರೆ ಇಂತಹ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿರುತ್ತವೆ. ಹೊಡೆಯುವವರು ಹೊಡೆಯುತ್ತಲೇ ಹೋಗುತ್ತಾರೆ, ಹೊಡೆಸಿಕೊಳ್ಳುವವರು ಹೊಡೆಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಕೆಲವರು ಬೇಸತ್ತು ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಾರೆ. ಇದನ್ನು ತಡೆಯುವ ಪ್ರಯತ್ನ ಆಗಬೇಕು.
– ಜಿ. ಭವಾನಿ