ಕೆಲವು ವರ್ಷಗಳ ಹಿಂದೆ ನಾನು ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುವ ಜನರ ಬಗ್ಗೆ ಬರೆದಿದ್ದೆ. ಅವರು ಚುನಾಣೆಯಲ್ಲಿ ಗೆದ್ದು ಡಚ್‌ ಸಂಸತ್ತಿಗೆ ಪದಾರ್ಪಣೆ ಮಾಡಿದ್ದರು. ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುವ ಜಗತ್ತಿನ ಮೊಟ್ಟ ಮೊದಲ ರಾಜಕೀಯ ಪಕ್ಷ ಅದು. ಆ ಪಕ್ಷ 2006ರಲ್ಲಿ ಸಂಸತ್ತಿಗೆ ಮೊದಲ ಬಾರಿಗೆ ಪ್ರವೇಶಿಸಿತು. 150 ಸದಸ್ಯರ ಸಂಸತ್ತಿನಲ್ಲಿ ಆ ಪಕ್ಷದ ಇಬ್ಬರು ಸಂಸದರು ಇದ್ದಾರೆ. ಅಷ್ಟೇ ಅಲ್ಲ, ಡಚ್‌ ಸೆನೆಟ್‌ನಲ್ಲೂ 1 ಸ್ಥಾನ ಹಾಗೂ ಪ್ರಾಂತೀಯ ಸರ್ಕಾರಗಳಲ್ಲಿ 9 ಜನ ಆ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಮ್ಯಾರಿಯೆಮ್ ಥೀಮ್ ಆ ಪಕ್ಷದ ಅಧ್ಯಕ್ಷರು.

ಆ ಪಕ್ಷದ ಸದಸ್ಯರು ಒಂದು ಅದ್ಭುತ ಯಶಸ್ಸನ್ನು ದಾಖಲಿಸಿದ್ದಾರೆ. ನನಗೆ ಅವರ ಈ ಸಾಧನೆಯ ಕುರಿತಂತೆ ಅಷ್ಟಿಷ್ಟು ಅಸೂಯೆ ಕೂಡ ಆಗುತ್ತದೆ. ಏಕೆಂದರೆ ಆ ಪಕ್ಷದ ಪ್ರಯತ್ನದಿಂದಾಗಿ ಡಚ್‌ ಸರ್ಕಾರ ಪ್ರಾಣಿಗಳ ಹಕ್ಕು ಹಾಗೂ ಅವುಗಳ ರಕ್ಷಣೆಗೆಂದೇ 500 ಪೊಲೀಸರನ್ನು ನೇಮಕ ಮಾಡಿದೆ. ಇದು ಸದಾಕಾಲ ಪ್ರಾಣಿಗಳ ಹಕ್ಕುಗಳಿಗಾಗಿಯೇ ಕೆಲಸ ಮಾಡಲಿದೆ.

ಈ ಒಂದು ವಿನೂತನ ಯೋಚನೆ `ಅನಿಮಲ್ ಪ್ಲಾನೆಟ್‌’ ಟಿ.ವಿ. ಚಾನೆಲ್ ನ ಅನಿಮಲ್ ಕಾಪ್ಸ್ ನಿಂದ ಬಂದಿತ್ತು. ಅಮೆರಿಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿರುವವರ ಬಗ್ಗೆ ಈ ಕಾರ್ಯಕ್ರಮದಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಲಾಗಿತ್ತು.

ಅಸ್ತಿತ್ವಕ್ಕೆ ಬಂದ ಪಕ್ಷ : ನೋಡು ನೋಡುತ್ತಿರುವಂತೆ ಪ್ರಾಣಿಗಳ ಹಕ್ಕು ರಕ್ಷಣೆ ಮಾಡುವ ರಾಜಕೀಯ ಪಕ್ಷವೆಂದು ಆಶ್ಚರ್ಯಕರ ರೀತಿಯಲ್ಲಿ ಶಕ್ತಿಶಾಲಿಯಾಗಿ ರೂಪುಗೊಂಡಿತು. ಅದೂ ಕೂಡ ಎಂತಹ ದೇಶದ ಅಂದರೆ ಅವರ ಮುಖ್ಯ ಆಹಾರ ಮಾಂಸವಾಗಿತ್ತು. ಆ ದೇಶದ ಕೆಲವರು ಪ್ರಾಣಿಗಳ ರಕ್ಷಣೆಗೆ ಸಲಹೆ ನೀಡಿದರು. ಆ ಸಲಹೆಯ ಪರಿಣಾಮ ಎಂಬಂತೆ ಗೀಲ್ಬರ್ಟ್‌ ವಿಲ್ಬರ್ಟ್‌ ನೇತೃತ್ವದಲ್ಲಿ `ಪಾರ್ಟಿ ಫಾರ್‌ ಫ್ರೀಡಂ’ ಪಕ್ಷ ಅಸ್ತಿತ್ವಕ್ಕೆ ಬಂತು.

ನಿಜ, ಏನನ್ನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದರೆ ತಂತಾನೇ ದಾರಿ ತೆರೆದುಕೊಳ್ಳುತ್ತದೆ. ಇಲ್ಲೂ ಕೂಡ ಹಾಗೆಯೇ ಆಯಿತು. `ಪಾರ್ಟಿ ಫಾರ್‌ ಫ್ರೀಡಂ’ ಡಚ್‌ ಸರ್ಕಾರದ ಪಾಲುದಾರ ಪಕ್ಷವಾಗಿದೆ. ಪ್ರಾಣಿಗಳ ಹಕ್ಕು ರಕ್ಷಣೆ ಮಾಡುವ ಪಕ್ಷದ ಅನಿಮಲ್ ಪೊಲೀಸ್‌ನ ಸಲಹೆಯನ್ನು ಪರಿಗಣಿಸಿ 3000 ಪೊಲೀಸರ ಒಂದು ಪಟ್ಟಿ ಸಿದ್ಧಪಡಿಸಲಾಯಿತು. ಆ ಪಕ್ಷದ ಒಬ್ಬ ಸಂಸದರು ಡಿ. ಗ್ರಾಸ್‌ ಅವರ ಬಳಿ ಮಾತುಕತೆ ನಡೆಸಿ ಈ ಸಲಹೆಯನ್ನು ಅನುಷ್ಠಾನಗೊಳಿಸಲು ಒತ್ತಡ ತಂದರು.

ಆ ವ್ಯಕ್ತಿ‌ ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆ ಪ್ರಾಣಿಗಳ ಚಿಕಿತ್ಸೆಯಲ್ಲಿ ಬಳಸುವ ಉತ್ಪನ್ನಗಳ ಮಾರಾಟ ಮಾಡುವಲ್ಲಿ ನಿರತರಾಗಿದ್ದರು. ಗೀಲ್ಬರ್ಟ್‌ ವಿಲ್ಡರ್ಸ್‌ ಆ 3000 ಪೊಲೀಸರಲ್ಲಿ 500 ಪೊಲೀಸರನ್ನು ಆಯ್ಕೆ ಮಾಡಿದರು. ತರಬೇತಿಯ ಬಳಿಕ ಅವರನ್ನು ಅನಿಮಲ್ ಪೊಲೀಸ್‌ಗೆ ಸೇರ್ಪಡೆಗೊಳಿಸುವುದಾಗಿತ್ತು.

ಏನಿದು ಅನಿಮಲ್ ಪೊಲೀಸ್‌?

ಅನಿಮಲ್ ಪೊಲೀಸ್‌ರಿಗೂ ಇತರೆ ಸಾಮಾನ್ಯ ಪೊಲೀಸರ ಹಾಗೆಯೇ ಕರ್ತವ್ಯಗಳಿರುತ್ತವೆ. ವ್ಯತ್ಯಾಸ ಇಷ್ಟೇ, ಇವರಿಗೆ ವಿಶೇಷ ತರಬೇತಿ ನೀಡಲಾಗಿರುತ್ತದೆ. ಈ ವಿಶೇಷ ಪೊಲೀಸರು ಪ್ರಾಣಿಗಳ ಮೇಲೆ ನಡೆಯುವ ದೌರ್ಜನ್ಯ ತಡೆ ಅಥವಾ ಪ್ರಾಣಿಗಳ ಹಕ್ಕುಗಳಿಗಾಗಿ ಅಷ್ಟೇ ಕೆಲಸ ಮಾಡುವುದಿಲ್ಲ, ಪ್ರಾಣಿಗಳ ಗಣತಿ ಪ್ರಮಾಣ ಎಷ್ಟಿದೆ, ಎಷ್ಟು ಪ್ರಾಣಿಗಳನ್ನು ಮಾಂಸಕ್ಕಾಗಿ ಬಳಸಲಾಗುತ್ತಿದೆ, ವಧಾಗಾರದಲ್ಲಿ ಪ್ರಾಣಿಗಳ ಮೇಲೆ ಎಷ್ಟರಮಟ್ಟಿಗೆ ಕ್ರೌರ್ಯ ಎಸಗುತ್ತಿದ್ದಾರೆ ಎಂಬುದನ್ನು ಕೂಡ ಕಂಡುಕೊಳ್ಳುವುದಾಗಿರುತ್ತದೆ.

ವಕ್ತಾರರಾಗಿರುವ ಜೆಲ್ಲಿ ಈಗ್‌ ಹೀಗೆ ಹೇಳುತ್ತಾರೆ, “ಡಚ್‌ ಪೊಲೀಸ್‌ ಪ್ರಧಾನ ಕಛೇರಿಯು ಈ ಹೊಸ ಪೊಲೀಸ್‌ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿದೆ. ಇಂತಹ ವ್ಯವಸ್ಥೆ ಇರಬೇಕೆಂದು ಸಾಮಾನ್ಯ ಜನರ ಜೊತೆ ಜೊತೆಗೆ ರಾಜಕಾರಣಿಗಳು ಕೂಡ ಈ ಒಂದು ಯೋಜನೆಗೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ನಾವು ಈ ವಿಶಿಷ್ಟ ಯೋಜನೆಯ ಬಗ್ಗೆ ನಿರ್ಲಕ್ಷ್ಯ ಮಾಡುವಂತಿಲ್ಲ.

”ಹಾಲೆಂಡ್‌ನಲ್ಲಿ ಪ್ರಾಣಿಗಳ ಮೇಲೆ ನಡೆಯುವ ದೌರ್ಜನ್ಯದ ಅತಿ ಹೆಚ್ಚಿನ ಪ್ರಕರಣಗಳನ್ನು ಒಂದು ಖಾಸಗಿ ಸಂಸ್ಥೆಯೇ ನಿರ್ವಹಿಸುತ್ತಿತ್ತು. ಈ ಸಂಸ್ಥೆಯ ಹೆಸರು `ಡಚ್‌ ಸೊಸೈಟಿ ಫಾರ್‌ ದಿ ಪ್ರೊಟೆಕ್ಷನ್‌ ಆಫ್‌ ಅನಿಮಲ್ಸ್.’ 1965ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯಲ್ಲಿ 2 ಲಕ್ಷಕ್ಕೂ ಹೆಚ್ಚಿನ ಸದಸ್ಯರು ಇದ್ದಾರೆ. 14 ಜನ ಪೂರ್ಣಕಾಲಿಕ ಪರೀಕ್ಷಕರು ಇದ್ದಾರೆ. 150 ಸ್ವಯಂ ಸೇವಕರ ಜೊತೆ ಈ ಪರೀಕ್ಷಕರು ಸುಮಾರು 8000 ಪ್ರಕರಣಗಳನ್ನು ನಿರ್ವಹಣೆ ಮಾಡುತ್ತಾರೆ.

ಈ ನಿರ್ಧಾರದಿಂದ ಎನ್‌ಸಿಪಿಎ ಖುಷಿಗೊಂಡಿದೆ. ಆದರೆ ಪ್ರಾಣಿಗಳನ್ನು ಕ್ರೌರ್ಯದಿಂದ ರಕ್ಷಿಸುವ ಈ ಸೊಸೈಟಿ ಹೀಗೆ ಹೇಳುತ್ತದೆ, ಪ್ರಾಣಿಗಳ ಸಂರಕ್ಷಣೆಯ ಈ ಕಾನೂನಿನಲ್ಲೂ ಸಾಕಷ್ಟು ಬದಲಾವಣೆಯ ಅವಶ್ಯಕತೆ ಇದೆ. ಏಕೆಂದರೆ ಪ್ರಾಣಿಗಳಿಗೆ ಸಂಬಂಧಪಟ್ಟ ಅಪರಾಧಗಳಲ್ಲಿ, ಅಪರಾಧಿಗಳಿಗೆ ಸೂಕ್ತ ಶಿಕ್ಷೆ ವಿಧಿಸುವ ವ್ಯವಸ್ಥೆ ಆಗಬೇಕು. ಹೀಗೆ ಮಾಡುವುದರಿಂದ ಸಾಮಾನ್ಯ ಜನರಿಗೆ ಸಮರ್ಥನೆಯೂ ದೊರೆಯುತ್ತದೆ. ಏಕೆಂದರೆ ಶೇ.60 ರಷ್ಟು ಡಚ್‌ ಜನರು ಪ್ರಾಣಿಗಳ ಹಕ್ಕು ರಕ್ಷಣೆ ಕುರಿತ ವಿಷಯವನ್ನು ಮಹತ್ವದ ವಿಷಯವೆಂದು ಭಾವಿಸುತ್ತಾರೆ.

ಬೇರೆ ದೇಶಗಳಲ್ಲೂ ಹೀಗಾಗುತ್ತದೆಯೇ?

ಅನಿಮಲ್ ಪೊಲೀಸ್‌ ವ್ಯವಸ್ಥೆ ಬೇರೆ ದೇಶಗಳಲ್ಲೂ ಜಾರಿಗೆ ಬರಬಹುದೆ? ಜರ್ಮನಿಯ ಒಂದು ಪತ್ರಿಕೆ ತನ್ನ ಶೇ.74ರಷ್ಟು ಓದುಗರ ಸರ್ವೆ ಮಾಡಿತು. ಅಂತಹ ಪೊಲೀಸ್‌ ವ್ಯವಸ್ಥೆ ತಮ್ಮ ದೇಶದಲ್ಲೂ ಇರಬೇಕು ಎಂದು ಅಲ್ಲಿನ  ಜನತೆ ಹೇಳಿದ್ದಾರೆ. ಭಾರತದ ರಸ್ತೆಗಳಲ್ಲಿ ಪ್ರಾಣಿಗಳ ಮೇಲೆ ಅದೆಷ್ಟೋ ಪ್ರಕಾರದಲ್ಲಿ ದೌರ್ಜನ್ಯಗಳು ನಡೆಯುತ್ತಿರುತ್ತವೆ.

– ಹೋರಿಗಳು ಹಾಗೂ ಕೋಣಗಳು ಎಳೆಯುವ ಚಕ್ಕಡಿಯಲ್ಲಿ ಅದೆಷ್ಟು ತೂಕ ಹೇರಲಾಗುತ್ತದೆ ಎಂದರೆ, ಭಾರ ತಾಳಾರದೆ ಒಂದು ಅಥವಾ ಎರಡೂ ಎತ್ತು/ಕೋಣಗಳು ಮೃತಪಟ್ಟ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.

– ನಾಯಿಗಳನ್ನು ಬಾಲ್ಕನಿಯಲ್ಲಿ ಕಟ್ಟಿ ಹಾಕಲಾಗಿರುತ್ತದೆ. ಅವುಗಳಿಗೆ ತೀವ್ರ ಬಿಸಿಲು ಅಥವಾ ಮಳೆ, ಗಾಳಿಯ ವಾತಾವರಣ ತೊಂದರೆಯನ್ನುಂಟು ಮಾಡುತ್ತದೆ. ಕೆಲವರು ಬೇರೆಯವರ ಸಾಕು ಪ್ರಾಣಿಗಳಿಗೆ ವಿಷ ಮಿಶ್ರಿತ ಆಹಾರ ಹಾಕಿ ಅವುಗಳ ಸಾವಿಗೆ ಕಾರಣರಾಗುತ್ತಾರೆ.

– ಕಸಾಯಿ ಖಾನೆಗಳಲ್ಲಿ ಕರುಗಳನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಲಾಗುತ್ತಿದೆ.

– ಟ್ರಕ್‌ ಮತ್ತು ಟೆಂಪೋಗಳಲ್ಲಿ ಹಸು ಮತ್ತು ಎಮ್ಮೆಗಳನ್ನು ಹೇಗೆ ತುಂಬಲಾಗುತ್ತದೆ ಎಂದರೆ, ಅಲ್ಲಿಗೆ ಹೋಗುವ ಮೊದಲೇ ಅದರಲ್ಲಿನ ಕೆಲವು ಉಸಿರುಗಟ್ಟಿ ಸತ್ತಿರುತ್ತವೆ.

– ಶಾರ್ಕ್‌ ಮೀನಿನ ಫಿನ್‌ನ್ನು ಕಿತ್ತುಹಾಕಿ ಅದು ನರಳಿ ಸಾಯುವಂತೆ ಮಾಡಲಾಗುತ್ತದೆ.

– ಕೋಳಿ ಹಾಗೂ ಟಗರುಗಳನ್ನು ಕಾಳಗಕ್ಕಿಳಿಸಿ ಅವು ಸಾಯುವಂತೆ ಮಾಡಲಾಗುತ್ತದೆ.

– ಗ್ರಾಮೀಣ ಪ್ರದೇಶದಲ್ಲಿ ಹೋರಿ, ಕೋಣ, ಕುದುರೆಗಳ ಓಟದ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಕೆಲವೊಂದು ನಡುವೆಯೇ ಮುಗ್ಗರಿಸಿ ಬಿದ್ದು ಗಾಯಗೊಳ್ಳುತ್ತವೆ. ಇಲ್ಲಿ ಮತ್ತೆ ಕೆಲವು ಅಲ್ಲೇ ಸಾಯುತ್ತವೆ.

ಈ ರೀತಿಯ ಪಟ್ಟಿ ಅಂತ್ಯಗೊಳ್ಳುವುದೇ ಇಲ್ಲ. ನಮ್ಮ ಬಳಿಯೂ ತರಬೇತಿ ಪಡೆದ ಪೊಲೀಸ್‌ ಸಿಬ್ಬಂದಿ ಇದ್ದರೆ ಈ ಪ್ರಾಣಿಗಳ ಮೇಲಿನ ಹಿಂಸೆ ಅಥವಾ ದೌರ್ಜನ್ಯಗಳನ್ನು ಖಂಡಿತವಾಗಿ ತಡೆಯಬಹುದು. ಕೆಲವೊಂದು ಕಡೆ ಹಣ್ಣು ಕೊಟ್ಟು ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಯುವಂತೆ ಮಾಡಲಾಗುತ್ತದೆ. ಪ್ರಾಣಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತದೆ. ಅದನ್ನು ತಡೆಯಬೇಕಾದ ಪೊಲೀಸರು ಕಣ್ಣುಮುಚ್ಚಿ ಕುಳಿತಿರುತ್ತಾರೆ. ಅವರು ಅಕ್ರಮ ಸಾಗಾಣಿಕೆದಾರರಿಂದ ಹಣ ಪಡೆದು ಕರ್ತವ್ಯಲೋಪ ಎಸಗುತ್ತಾರೆ. 30 ವರ್ಷಗಳಿಂದ ಅವರು ಮಾಡಿದ ಕೆಲಸ ಅಷ್ಟಕ್ಕಷ್ಟೆ. ಕೆಲವರಂತೂ ಕೆಲಸಕ್ಕೆ ಹೋಗುವುದೇ ಇಲ್ಲ. ಅವರು ರಾತ್ರಿ ಕೆಲಸಕ್ಕೆ ಬಂದು ಕಳ್ಳ ಸಾಗಾಣಿಕೆದಾರರಿಗೆ ನೆರವು ನೀಡುತ್ತಾರೆ. ಚೆನ್ನೈನಲ್ಲೂ ಅಂತಹ ಕೆಲವು ಪೊಲೀಸರು ಇದ್ದಾರೆ. ಅವರು ಕಳ್ಳಸಾಗಾಣಿಕೆದಾರರಿಂದ ಪ್ರಾಣಿಗಳನ್ನು ವಶಪಡಿಸಿಕೊಳ್ಳುತ್ತಾರೆ. ಆದರೆ ಅವರೇ ಬೇರೆ ಮಾರ್ಗದಲ್ಲಿ ಕಸಾಯಿಖಾನೆಗೆ ಮಾರುತ್ತಾರೆ. ನಮ್ಮ ದೇಶದಲ್ಲೂ ಪ್ರಾಣಿಗಳ ರಕ್ಷಣೆಗಾಗಿ ಪೊಲೀಸ್‌ ವ್ಯವಸ್ಥೆ ಇದ್ದರೆ ಬಹಳಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಾಲೆಂಡ್‌ನಲ್ಲಿ ಇದು ಸಾಧ್ಯವಾಗುವುದಾದರೂ ಸಹಾನುಭೂತಿ, ಮಾನವೀಯತೆಯ ಪರಂಪರೆಯಲ್ಲಿ ನಂಬಿಕೆ ಇಡುವ ಭಾರತದಲ್ಲಿ ಅದು ಏಕೆ ಸಾಧ್ಯವಿಲ್ಲ? ಭಾರತದಲ್ಲಿ ಇದು ಇನ್ನೂ ಉತ್ಕೃಷ್ಟ ರೀತಿಯಲ್ಲಿ ಸಾಧ್ಯ ಆಗಬಹುದು?

– ಮೇನಕಾ ಗಾಂಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ