`ಕಾಶಿ' ಎಂತಹ ಒಂದು ಧಾರ್ಮಿಕ ಸ್ಥಳವೆಂದರೆ, ಅಲ್ಲಿ ಪ್ರಾಣಿಗಳಲ್ಲೂ ಕೂಡ ದೇವರು ವಾಸಿಸುತ್ತಾನೆ. ಅಂದಹಾಗೆ, ಪ್ರತಿಯೊಬ್ಬ ಮನುಷ್ಯನಲ್ಲೂ ದೇವರು ಇದ್ದಾನೆ ಎಂಬುದು ಧರ್ಮಗುರುಗಳ ಹೇಳಿಕೆ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಹತ್ಯೆಗೈದಾಗ, ಆ ವ್ಯಕ್ತಿಗೆ ದೇವರು ಏಕೆ ಕಂಡುಬರುವುದಿಲ್ಲ?
ಜಾನುವಾರುಗಳಲ್ಲಿ ದೇವರ ರೂಪ ಕಂಡು ಪ್ರತಿಯೊಬ್ಬ ಹಿಂದೂ ಅದನ್ನು ಹೊಡೆಯುವುದರಿಂದ ದೂರ ಉಳಿಯುತ್ತಾನೆ. ಆ ಪ್ರಾಣಿ ಮನುಷ್ಯನಿಗೆ ಎಷ್ಟೇ ತೊಂದರೆ ಅಥವಾ ಜೀವಕ್ಕೆ ಹಾನಿಯನ್ನುಂಟು ಮಾಡಿದರೂ ಆತ ಸುಮ್ಮನೇ ಇರುತ್ತಾನೆ. ಇದರ ದುಷ್ಪರಿಣಾಮ ಎಂಬಂತೆ ಆ ನಗರದಲ್ಲಿ ಇಂತಹ ಜಾನುವಾರುಗಳ ಉಪಟಳ ಹೆಚ್ಚುತ್ತಲೇ ಹೊರಟಿದೆ.
ದೇವಾಲಯಗಳ ನಗರಿ ಕಾಶಿಯಲ್ಲಿ ಕಷ್ಟಪಟ್ಟು ಏನೂ ಫಲ ಸಿಗದೇ ಹೋದರೂ ಧರ್ಮದ ಹೆಸರಿನಲ್ಲಿ ಒಳ್ಳೆಯ ಗಳಿಕೆಯಂತೂ ಆಗಿಯೇ ಆಗುತ್ತದೆ. ಏನೂ ಬೇಡ, ಸತ್ತ ಕೋತಿಯೊಂದನ್ನು ಯಾರಾದರೂ ರಸ್ತೆಯ ನಡು ಮಧ್ಯದಲ್ಲಿ ತಂದಿಟ್ಟರೆಂದು ಇಟ್ಟುಕೊಳ್ಳೋಣ, ತಕ್ಷಣವೇ ಆ ಕೋತಿಯ ಅಂತ್ಯಸಂಸ್ಕಾರದ ಹೆಸರಿನಲ್ಲಿ ನೂರಾರು ರೂ. ಜಮೆಯಾಗುತ್ತದೆ. ಆ ಹಣದಿಂದ ಏನು ಬೇಕಾದರೂ ಮಾಡಿ, ಕೇಳುವರಾರು?
ಜಾನುವಾರುಗಳನ್ನು ದೇವರೆಂದು ಕಾಣುವುದರ ಪರಿಣಾಮವೇ ಇಂತಹ ಪ್ರಾಣಿಗಳ ಸಂಖ್ಯೆ ಕಾಶಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಗಿದೆ. ಅವು ಮನುಷ್ಯರನ್ನು ಹಾಯ್ದು ಅಥವಾ ಒದ್ದು ಗಾಯಗೊಳಿಸುತ್ತವೆ. ಕೋತಿಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಪ್ರತಿಯೊಂದು ಧಾರ್ಮಿಕ ಸ್ಥಳಗಳಲ್ಲೂ ಅವು ಬೇಕಾಬಿಟ್ಟಿಯಾಗಿ ಸುತ್ತಾಡುತ್ತಿರುತ್ತವೆ. ಅವನ್ನು ಬೆದರಿಸಿ, ಹೊಡೆಯುವ ಇಲ್ಲವೇ ಓಡಿಸುವ ಧೈರ್ಯ ಯಾರಿಗೆ ತಾನೆ ಇದೆ?
ಮನುಷ್ಯರಿಗಿಂತ ಪ್ರಾಣಿಗಳಿಗೆ ಮಹತ್ವ
ಈಗ ಕಾಶಿಯಲ್ಲಿ ಕೋತಿಗಳ ಸಂಖ್ಯೆ ಅದೆಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದರೆ, ಅಲ್ಲಿ ವಾಸಿಸುವವರ, ಸುತ್ತಾಡುವವರ ನೆಮ್ಮದಿಗೆ ಕುತ್ತು ಬಂದಿದೆ. ಸಮೂಹಗಳಲ್ಲಿ ವಾಸಿಸುವ ಕೋತಿಗಳು ಮನುಷ್ಯರಿಂದ ನಾಶವಾದ ಕಾಡುಗಳಿಂದಾಗಿ ಅಲ್ಲಿಂದ ಓಡಿ ಬಂದು ನಗರ ಪ್ರದೇಶಗಳಲ್ಲಿ ವಾಸಿಸಲಾರಂಭಿಸುತ್ತವೆ. ಆಹಾರ ಮತ್ತು ನೀರಿಗಾಗಿ ಮನುಷ್ಯರ ಮೇಲೆ ದಾಳಿ ಮಾಡಲಾರಂಭಿಸುತ್ತವೆ. ಆದರೆ ಅಲ್ಲಿರುವ ಅಲಿಖಿತ ನಿಯಮವೆಂದರೆ, ಅವುಗಳನ್ನು ಯಾರೂ ಹೊಡೆಯುವಂತಿಲ್ಲ. ಹನುಮಂತನ ವಂಶಜರನ್ನು ಹೊಡೆದು ಯಾರೊಬ್ಬರೂ ಪಾಪದಲ್ಲಿ ಪಾಲುದಾರರಾಗಲು ಇಚ್ಛಿಸುವುದಿಲ್ಲ.
ಶಿಕ್ಷಕ ಮಹಾಶಯರೊಬ್ಬರು ಕೆಲವು ಕೋತಿಗಳ ಮೇಲೆ ಗುಂಡು ಹಾರಿಸಿದರು. ಈ ವಿಷಯ ಕಾಳ್ಗಿಚ್ಚಿನಂತೆ ನಗರದಲ್ಲೆಲ್ಲ ಹಬ್ಬಿತು. ಧಾರ್ಮಿಕ ಮನೋಭಾವದ ಜನರಿಗೆ ಇದು ಮಹಾಪಾಪದ ಕೆಲಸವಾಗಿತ್ತು. ಹೀಗಾಗಿ ಜನ ಗುಂಪು ಗುಂಪಾಗಿ ಸೇರಿ ಠಾಣೆಯ ಎದುರು ಜಮಾಯಿಸಿದರು. ಬಳಿಕ ಆ ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಾಯಿತು. ಆಗ ಜನ ನೆಮ್ಮದಿಯ ನಿಟ್ಟುಸಿರುಬಿಟ್ಟರು. ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳು ಮತ್ತು ಕಲ್ಲುಗಳಿಗೆ ಪ್ರಾಮುಖ್ಯತೆ ಕೊಡುವ ಸಮಾಜದಲ್ಲಿ ಇದಕ್ಕಿಂತ ಅತ್ಯುತ್ತಮವಾದುದನ್ನು ನಿರೀಕ್ಷಿಸಲಾಗದು.
ಕಾಶಿ ವಿಶ್ವನಾಥ ಮಂದಿರದ ಆಸುಪಾಸಿನ ಹಲವು ಕೋತಿಗಳಿಗೆ ಮಧುಮೇಹ ರೋಗವಿತ್ತು. ಆ ಕಾರಣದಿಂದ ಅವು ಬಹಳ ಸಿಡಿಮಿಡಿಗೊಳ್ಳುತ್ತಿದ್ದವು. ಭಕ್ತರು ಕೋತಿಗಳಿಗೆ ಕೊಡುತ್ತಿದ್ದ ಪ್ರಸಾದ ಪೇಡಾ ಆಗಿತ್ತು. ಹೀಗಾಗಿ ಅದನ್ನು ತಿಂದು ಅವು ಇನ್ನಷ್ಟು ಕೆರಳುವಂತಾಗಿತ್ತು. ಆಸುಪಾಸಿನ ಜನರು ಅಲ್ಲಿರುವುದೇ ಕಷ್ಟ ಎಂಬಂತಾಗಿತ್ತು. ಜನರ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಮಹಾನಗರ ಪಾಲಿಕೆಯು ಮಥುರಾದಿಂದ ಕೋತಿಗಳನ್ನು ಹಿಡಿಯಲೆಂದು ಒಂದು ವಿಶೇಷ ತಂಡವನ್ನು ಕರೆಸಿತ್ತು. ಆ ತಂಡದವರು ಸುಮಾರು 200ರಷ್ಟು ಕೋತಿಗಳನ್ನು ಹಿಡಿದು ಸಮೀಪದ ಕಾಡಿಗೆ ಬಿಟ್ಟುಬಂದರು. ಆಗ ಧಾರ್ಮಿಕ ಪ್ರವೃತ್ತಿಯ ಕೆಲವರು ಇದನ್ನು ವಿರೋಧಿಸಿದರು. ಹನುಮನ ವಂಶಜರನ್ನು ಬಂಧಿಸಿರುವುದು ತಮಗೆ ಅಪಾರ ನೋವನ್ನುಂಟು ಮಾಡಿದೆ ಎನ್ನುವುದು ಭಕ್ತರ ಅಳಲಾಗಿತ್ತು. ಧರ್ಮದ ಹೆಸರಿನಲ್ಲಿ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ತಾನು ಹಿಡಿದಿಟ್ಟಿದ್ದ 75 ಕೋತಿಗಳನ್ನು ಪುನಃ ವಾರಾಣಸಿಯ ಬೀದಿಯಲ್ಲಿ ಬಿಟ್ಟಿತು.