``ನಾವು ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೆ ಭದ್ರ ಬುನಾದಿ ಹಾಕಿಕೊಟ್ಟೆವು. ಭಾರತ ಮಹಿಳಾ ಕ್ರಿಕೆಟ್‌ನ ಸ್ಥಾಪಕ ತಂಡದ ಸದಸ್ಯರು ಎನ್ನುವ ಹೆಮ್ಮೆ ನನಗಿದೆ. ಈಗ ಜೀವಮಾನ ಸಾಧನೆ ಪುರಸ್ಕಾರ ಲಭಿಸಿರುವುದು ಸಹ ಮಹಿಳಾ ಕ್ರಿಕೆಟ್‌ಗೆ ಸಿಕ್ಕ ಗೌರವವಾಗಿದೆ. ಇಷ್ಟು ತಡವಾಗಿಯಾದರೂ ಬಿಸಿಸಿಐ ಮಹಿಳಾ ಕ್ರಿಕೆಟಿಗರನ್ನು ಜೀವಮಾನ ಸಾಧನೆ ಗೌರವಕ್ಕೆ ಪರಿಗಣಿಸಿತಲ್ಲ ಎನ್ನುವುದೇ ಸಂತಸದ ವಿಚಾರ. ಅದು ನನ್ನಿಂದಲೇ ಪ್ರಾರಂಭವಾದದ್ದು ಎನ್ನುವುದು ಇನ್ನೂ ಖುಷಿ!'' ಇದು ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ)ಯಿಂದ ಜೀವಮಾನ ಸಾಧನೆ ಪುರಸ್ಕಾರಕ್ಕೆ ಭಾಜನರಾದ ಕರ್ನಾಟಕದ ಹೆಮ್ಮೆಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿಯವರ ಮನದ ಮಾತುಗಳು. ಸಿ.ವಿ. ರಂಗಸ್ವಾಮಿ ಹಾಗೂ ರಾಜಲಕ್ಷ್ಮಿಯವರ ಮಗಳಾದ ಶಾಂತಾ ಹುಟ್ಟಿದ್ದು ಚೆನ್ನೈನಲ್ಲೇ ಆದರೂ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಕ್ರಿಕೆಟಿಗರಾದ ಮೇಲೆಯೂ ಆಡಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ಮಾತ್ರ. ಹೀಗಾಗಿ ಇವರು ಅಪ್ಪಟ ಕನ್ನಡಿಗರೇ ಎನ್ನುವುದು ನಿರ್ವಿವಾದ. ಏಳು ಜನ ಸಹೋದರಿಯರಲ್ಲಿ ಶಾಂತಾ ಮೂರನೆಯವರಾಗಿದ್ದು ಪದವಿ ವ್ಯಾಸಂಗ ಮಾಡಿ ಮುಗಿಸುವ ವೇಳೆಗೆ ಕೆನರಾ ಬ್ಯಾಂಕಿನಲ್ಲಿ ನೌಕರಿ ದೊರಕಿತ್ತು. ಮುಂದೆ ಅದರಲ್ಲಿಯೇ ಜನರಲ್ ಮ್ಯಾನೇಜರ್ ಹುದ್ದೆಗೇರಿ ನಿವೃತ್ತರಾದರು. ಕೂಡು ಕುಟುಂಬದ ಹಿನ್ನೆಲೆಯಿಂದ ಬಂದ ಶಾಂತಾ ಅವರ ಮನೆಯಲ್ಲಿಯೇ ಇಪ್ಪತ್ತು ಮಕ್ಕಳಿದ್ದರು. ಅದರಲ್ಲಿಯೂ ಹುಡುಗಿಯರೇ ಹೆಚ್ಚು! ಮಹಿಳಾ ಸೇವಾ ಸಮಾಜದಲ್ಲಿ ಎಲ್ಲರೂ ಕೂಡಿ ಕ್ರಿಕೆಟ್ ಆಡುತ್ತಾ ಬಾಲ್ಯ ಕಳೆದಿದ್ದ ಶಾಂತಾ ಅವರಿಗೆ ಬಾಲ್ಯದಲ್ಲಿಯೇ ಕ್ರಿಕೆಟ್ ಕುರಿತಂತೆ ತೀವ್ರ ಆಸಕ್ತಿ ಮೂಡಿತ್ತು. ಶಾಲೆ, ಕಾಲೇಜು ದಿನಗಳಿಂದಲೂ ಕ್ರಿಕೆಟ್ ಆಡುತ್ತಿದ್ದ ಶಾಂತಾ ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾದರು. ಆಗೆಲ್ಲಾ ಮಹಿಳಾ ಕ್ರಿಕೆಟಿಗರಿಗೆ ಈಗಿನಂತೆ ಸೂಕ್ತ ಅನುಕೂಲಗಳಿರಲಿಲ್ಲ ಎಂದು ನೆನಪಿಸಿಕೊಳ್ಳುವ ಶಾಂತಾ, `ನಾನು ಕೆ.ಆರ್. ರಸ್ತೆಯಲ್ಲಿದ್ದ ನನ್ನ ಮನೆಯಿಂದ ಸೆಂಟ್ರಲ್ ಕಾಲೇಜು ಮೈದಾನಕ್ಕೆ ನಡೆದುಕೊಂಡು ಹೋಗಿ ಅಭ್ಯಾಸ ನಡೆಸುತ್ತಿದ್ದೆ. ಕಂಠೀರವ ಸ್ಟೇಡಿಯಂ, ನ್ಯಾಷನಲ್ ಹೈಸ್ಕೂಲು ಮೈದಾನದಲ್ಲಿಯೂ ನಾವು ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿದ್ದೆವು,' ಎನ್ನುತ್ತಾರೆ.
ಇದಕ್ಕೂ ಮುನ್ನ ಶಾಂತಾ, ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ತಮ್ಮ ಕಾಲೇಜು ದಿನಗಳಲ್ಲಿ ಸಾಫ್ಟ್ ಬಾಲ್ ಕ್ರೀಡಾ ತಂಡದ ನಾಯಕಿಯೂ ಆಗಿದ್ದರು ಎನ್ನುವುದು ಗಮನಾರ್ಹ. ಆ ನಂತರ ಕ್ರಿಕೆಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡುದಲ್ಲದೆ, 1976ರಲ್ಲಿ ಪ್ರಥಮ ಮಹಿಳಾ ಕ್ರಿಕೆಟ್ ರಾಷ್ಟ್ರೀಯ ತಂಡದ ನಾಯಕಿಯಾಗಿಯೂ ಆಯ್ಕೆಯಾದರು. ಮುಂದಿನದೆಲ್ಲ ಇತಿಹಾಸ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ವಿದೇಶೀ ನೆಲದಲ್ಲಿ ಶತಕ ಬಾರಿಸಿದ ಮೊದಲ ಮಹಿಳೆ. ಹಾಗೆಯೇ ಟೆಸ್ಟ್ ಪಂದ್ಯ ಗೆದ್ದ ಪ್ರಥಮ ನಾಯಕಿ ಸಹ ಇವರಾಗಿದ್ದಾರೆ. ಬಲಗೈ ಬ್ಯಾಟ್ಸ್ ಮನ್ ಮತ್ತು ಆಲ್ ರೌಂಡರ್ ಆಗಿದ್ದ ಶಾಂತಾ ಒಟ್ಟು 16 ಟೆಸ್ಟ್ ಹಾಗೂ 19 ಏಕದಿನ ಪಂದ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದು ಟೆಸ್ಟ್ ನಲ್ಲಿ 750 ಮತ್ತು ಏಕದಿನ ಪಂದ್ಯದಲ್ಲಿ 287 ರನ್‌ಗಳನ್ನು ಗಳಿಸಿದ್ದಾರೆ. 08.01.1977ರಲ್ಲಿ ನ್ಯೂಝಿಲ್ಯಾಂಡ್‌ನ ಡ್ಯುನೆಡಿನ್‌ನಲ್ಲಿ ನಡೆದ ನ್ಯೂಝಿಲ್ಯಾಂಡ್‌ನ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 108 ರನ್ ಗಳಿಸಿ, ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ ಎನಿಸಿದರು. 1976ರಲ್ಲಿ ಪುಣೆಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವುಮನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾಗಿದ್ದರು.