ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ವಾತಾವರಣಕ್ಕೆ ತನ್ನದೇ ಆದ ಮೆರುಗು ಬರುತ್ತದೆ. ಅಂತಹ ಸಂದರ್ಭದಲ್ಲಿ ಜನರು ಜಲಪಾತಗಳ ವೈಭವ ನೋಡಲು ಮುಗಿಬೀಳುತ್ತಾರೆ. ನೀವು ಈ ವರ್ಷ ಮಹಾರಾಷ್ಟ್ರದ ಈ ಜಲಪಾತಗಳ ಜಲವೈಭವವನ್ನು ಕಣ್ತುಂಬಿಸಿಕೊಳ್ಳಲು ಒಂದೊಳ್ಳೆ ಪ್ರವಾಸದ ಯೋಜನೆ ಹಾಕಬಹುದು.

ಮಳೆಗಾಲದಲ್ಲಿ ಮಹಾರಾಷ್ಟ್ರದ ಈ ಜಲತಾಣಗಳು ಜನ ಜಂಗುಳಿಯಿಂದ ಭರ್ತಿಯಾಗಿರುತ್ತವೆ. ಮೋನಾಳಾ, ಮಾಥೇರಾನ್‌, ಮಾಲಶೇಜ್‌ ಘಾಟ್‌, ಅಂಬೋಲಿ ಘಾಟ್‌ ಇವು ಕೆಲವು ಪ್ರಮುಖ ಜಲಪಾತಗಳಾಗಿವೆ.

ಅಂದಹಾಗೆ ಮಹಾರಾಷ್ಟ್ರದಲ್ಲಿ ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಇದಕ್ಕೆ ಪ್ರಮುಖ ಕಾರಣ, ಆ ಸಮಯದಲ್ಲಿ ಇಲ್ಲಿನ ವಾತಾವರಣ ಅತ್ಯಂತ ರಮ್ಯವಾಗಿರುತ್ತದೆ. ಥೋಸೆಘರ್‌ ಪ್ಯಾಲೆಸ್‌, ಬಾಂಬಾಲಿ ಪ್ಯಾಲೆಸ್‌ ಇತರೆ ಕೆಲವು ಸುಪ್ರಸಿದ್ಧ ಪ್ಯಾಲೆಸ್‌ಗಳಿವೆ. ಕುಂಡಲಿಕಾ ವಾಟರ್‌ ರಾಫ್ಟಿಂಗ್‌, ಲೋಹಗಡ್‌ ಟ್ರೆಕಿಂಗ್‌ ಮುಂತಾದವು ಕೂಡ ಮಳೆಗಾಲದ ಆಕರ್ಷಣೆಯ ಕೇಂದ್ರಗಳಾಗಿವೆ.

ಕೆಲವು ಪ್ರಮುಖ ಸ್ಥಳಗಳು

ಮಾಲಶೇಜ್‌ ಘಾಟ್‌ :  ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಹಸಿರು ಹೊದಿಕೆಗಳಿಂದ ಆವರಿಸಿಕೊಂಡಿರುವ ಈ ತಾಣ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಇದು ಪುಣೆಯಿಂದ 130 ಕಿ.ಮೀ. ದೂರದಲ್ಲಿದೆ. ಇಲ್ಲಿ ಹಲವು ರೆಸಾರ್ಟ್‌ಗಳು ಕೂಡ ಇವೆ.

ಲೋನಾಳಾ ಮತ್ತು ಖಂಡಾಲಾ : ಇವೆರಡು ರಮ್ಯ ತಾಣಗಳು ಮುಂಬೈನಿಂದ ಬಹಳ ಹತ್ತಿರದಲ್ಲಿವೆ. ಇಲ್ಲಿ ಭೂಮಿ ಮತ್ತು ಜಲದ ಅದ್ಭುತ ಸಮನ್ವಯ ನೋಡಲು ಸಿಗುತ್ತದೆ. ಮಳೆಗಾಲದ ಸಮಯದಲ್ಲಿ ಇಲ್ಲಿನ ರಮ್ಯತೆ ಕಣ್ತುಂಬಿಸಿಕೊಳ್ಳಲು ಖುಷಿಯಾಗುತ್ತದೆ.  ಇಲ್ಲಿ ಸಮೀಪದಲ್ಲಿ  ವಿಮಾನ ನಿಲ್ದಾಣವಿಲ್ಲ. ಹಾಗಾಗಿ ಪ್ರವಾಸಿಗರು ಮುಂಬೈ ಅಥವಾ ಪುಣೆಯಿಂದ ರಸ್ತೆ ಅಥವಾ ರೈಲಿನ ಮೂಲಕ ಪ್ರಯಾಣ ಮಾಡಬೇಕಾಗುತ್ತದೆ.

ಭೂಸಿ ಡ್ಯಾಮ್, ರಜಾಮಾಚಿ ನ್ಯೂ ಪಾಯಿಂಟ್‌, ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಇವು ಖಂಡಾಲಾದಲ್ಲಿನ ನೋಡಲೇಬೇಕಾದ ಸ್ಥಳಗಳು. ಇಲ್ಲಿ ಉಳಿದುಕೊಳ್ಳಲು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ಗಳಲ್ಲದೆ, ಹಾಲಿಡೇ ರೆಸಾರ್ಟ್ಸ್ ಮತ್ತು ಹೋಟೆಲ್‌ಗಳು ಕೂಡ ಇವೆ.

ಮುಲಸಿ ಡ್ಯಾಮ್ : ಇದು ಮೂಲಾನದಿಯ ಮೇಲೆ ಕಟ್ಟಿದ ಅಣೆಕಟ್ಟು. ಇಲ್ಲಿಗೆ ಮುಂಬೈನಿಂದ ಕೇವಲ 3 ಗಂಟೆಯ ಅವಧಿಯಲ್ಲಿ ತಲುಪಬಹುದು. ವಿದ್ಯುತ್‌ ಉತ್ಪಾದನೆ ಮಾಡಿ ಮಹಾರಾಷ್ಟ್ರ ರಾಜ್ಯಕ್ಕೆ ಪೂರೈಸುವ ಪ್ರಮುಖ ಜಲವಿದ್ಯುತ್‌ ಕೇಂದ್ರವಾಗಿದೆ.

ಕಳಸೂಬಾಯಿ ಶಿಖರ : ಇದನ್ನು `ಮಹಾರಾಷ್ಟ್ರದ ಎವರೆಸ್ಟ್ ಶಿಖರ’ ಎಂದೇ ಕರೆಯುತ್ತಾರೆ. ಇದರ ಎತ್ತರ 5400 ಅಡಿ. ಇಲ್ಲಿರುವ ಕಳಸೂಬಾಯಿ ಹರಿಶ್ಚಂದ್ರ ಜೀವ ವೈವಿಧ್ಯ ತಾಣ ಬಹಳ ಪ್ರಸಿದ್ಧವಾಗಿದೆ. ಇಡೀ ವರ್ಷ ಇಲ್ಲಿಗೆ ಚಾರಣಪ್ರಿಯರು ಬರುತ್ತಿರುತ್ತಾರೆ. ಮಳೆಗಾಲದಲ್ಲಿ ಮಾತ್ರ ಕಳಸೂಬಾಯಿ ಶಿಖರ ಪ್ರದೇಶದ ರಮ್ಯತೆ ಪ್ರವಾಸಿಗರ ಮನ ಸೆಳೆಯುತ್ತದೆ.

ಭಂಡಾರಧಾರಾ : ಇದು ಅಹಮ್ಮದ್‌ ನಗರ ಜಿಲ್ಲೆಯಲ್ಲಿದೆ. ಮುಂಬೈನಿಂದ 185 ಕಿ.ಮೀ. ದೂರದಲ್ಲಿರುವ ಈ ತಾಣ ನೈಸರ್ಗಿಕ ಜಲಪಾತಗಳು, ಪರ್ವತ ಶಿಖರಗಳು, ಅದ್ಭುತ ಹಸಿರು ಸಿರಿ ಪ್ರವಾಸಿಗರ ಮನ ಸೆಳೆಯುತ್ತವೆ.

ನದಿಯ ದಂಡೆಯ ಮೇಲಿರುವ ಈ ಕ್ಷೇತ್ರ ಆರ್ಥರ್‌ ಸರೋವರ ರಂಧಾ ಜಲಪಾತದಿಂದ ಸುಪ್ರಸಿದ್ಧವಾಗಿದೆ. ಮುಂಬೈನಿಂದ ಭಂಡಾರಧಾರಾಕ್ಕೆ ತಲುಪತಲು ರಸ್ತೆ ಮಾರ್ಗವೇ ಸೂಕ್ತ.

ಅಂಬೋಲಿ ಘಾಟ್‌ : ಮಹಾರಾಷ್ಟ್ರದ ಈ ಸುಂದರ ಜಲಪಾತ ದಕ್ಷಿಣ ಭಾಗದ ಸಿಂಧು ದುರ್ಗ ಜಿಲ್ಲೆಯಲ್ಲಿದೆ. ಈ ಸುಂದರ ತಾಣ ಬೆಳಗಾವಿಯಿಂದ 71 ಕಿ.ಮೀ. ದೂರದಲ್ಲಿದೆ. ಕೇವಲ ಒಂದೂವರೆ ತಾಸಿನ ಪ್ರವಾಸ ಮಾತ್ರ. ಬೆಳಗಾವಿಯಿಂದ ಸಾಕಷ್ಟು ಬಸ್‌ಗಳು ಹೋಗುತ್ತಿರುತ್ತವೆ. ಇದು ವಿಶ್ವದ ಏಕೈಕ `ಇಕೊ ಹಾಟ್‌ಸ್ಪಾಟ್‌’ ಎಂದು ಕರೆಯಲ್ಪಡುತ್ತದೆ. ಜುಲೈನಿಂದ ಡಿಸೆಂಬರ್‌ ತನಕ ಈ ಜಲಪಾತದ ವೈಭವವನ್ನು ಕಣ್ತುಂಬಿಸಿಕೊಳ್ಳಬಹುದು. ಇಲ್ಲಿ ಉಳಿದುಕೊಳ್ಳಲು ಸಾಕಷ್ಟು ಹೋಟೆಲ್‌ಗಳಿವೆ. ರೆಸಾರ್ಟ್‌ ಕೂಡ ಇವೆ. ಇಲ್ಲಿಯೇ ಹತ್ತಿರದಲ್ಲಿ ಕೈಲಾಶ್‌ ಪಾಯಿಂಟ್‌, ಶಿರಗಾಂವಕರ್‌ ಪಾಯಿಂಟ್‌, ಮಾಧವಗಡ್‌ ಫೋರ್ಟ್‌ ಮುಂತಾದವು ನೋಡುವಂತಹ ಸ್ಥಳಗಳಾಗಿವೆ.

ಕರನಾವಾ : ಯಾವ ಕಡೆ ನೋಡಿದರೂ ಹಸಿರು ದೃಶ್ಯ ಗೋಚರಿಸುವ ಕರನಾವಾ ಮುಂಬೈನಿಂದ 80 ಕಿ.ಮೀ. ದೂರದಲ್ಲಿದೆ. ಮಳೆಗಾಲದಲ್ಲಿ ಇದು ಟ್ರೆಕಿಂಗ್‌ನ ಪ್ರಮುಖ ಆಕರ್ಷಣೆಯ ಕೇಂದ್ರವಾಗುತ್ತದೆ. ಇಲ್ಲಿಯೇ ಇರುವ ಕರನಾವಾ ಕೋಟೆಯಲ್ಲಿ ನೋಡಬಹುದಾದ ಅನೇಕ ಸ್ಥಳಗಳಿವೆ.

ಕೋವಾಡ್‌ : ಮುಂಬೈ-ಗೋವಾ ಹೆದ್ದಾರಿಯಲ್ಲಿ ಇದು ಒಂದು ಪುಟ್ಟ ಪ್ರವಾಸಿ ತಾಣ. ಅದು ಚಿಕ್ಕಪುಟ್ಟ ಪರ್ವತ ಪ್ರದೇಶಗಳಿಂದ ಆವೃತವಾಗಿದೆ. ಕುಂಡಲಿಕಾ ನದಿಯ ಮೇಲೆ ಇರುವ ಈ ಸ್ಥಳ ಮುಂಬೈನಿಂದ 120 ಕಿ.ಮೀ. ದೂರದಲ್ಲಿದೆ.

ಇಲ್ಲಿರುವ ಅಣೆಕಟ್ಟಿನಿಂದ ನೀರು ಬಿಟ್ಟಾಗ ಕೋಲಾಡ್‌ ರಾಫ್ಟರ್ಸ್‌, ಮುಂಬೈ ಹೈಕೋರ್ಟ್‌, ಮಹಾರಾಷ್ಟ್ರ ಟೂರಿಸಂ ಡೆವಲಪ್‌ಮೆಂಟ್‌ ಕಾರ್ಪೋರೇಶನ್‌ ಮುಂತಾದ ಸಂಸ್ಥೆಗಳು ರಾಫ್ಟಿಂಗ್‌ ಕ್ರೀಡೆಯ ಆಯೋಜನೆ ಮಾಡುತ್ತವೆ.

ಥೋಸೆಗರ್‌ ಫಾಲ್ಸ್ : ಮುಂಬೈಗೆ ಸಮೀಪದ ಈ ಸುಂದರ ತಾಣ ಜಲಪಾತ ಹಾಗೂ ಫ್ಲವರ್‌ ವ್ಯಾಲಿ ಎಂದು ಪ್ರಸಿದ್ಧವಾಗಿದೆ. ಇಲ್ಲಿನ ಜಲಪಾತಗಳು 20 ಮೀಟರ್‌ನಿಂದ ಹಿಡಿದು 500 ಮೀಟರ್‌ ಎತ್ತರ ಇವೆ. ಬಸ್‌ ಹಾಗೂ ಇತರೆ ವಾಹನಗಳ ಸೇವೆ ಇಲ್ಲಿ ಲಭ್ಯವಿದ್ದು, ವರ್ಷದ ಯಾವುದೇ ತಿಂಗಳಲ್ಲಿ ಇಲ್ಲಿಗೆ ಭೇಟಿ ಕೊಡಬಹುದು.

ಲೋಹಗ್‌ ಫೋರ್ಟ್‌ : ಇದು ಮುಂಬೈಗೆ ಅತ್ಯಂತ ಹತ್ತಿರದ ಆಕರ್ಷಕ ಪ್ರವಾಸಿ ತಾಣ. ಇದರ ಇತಿಹಾಸ ಬಹಳ ಹಳೆಯದು. ಶಾತವಾಹನರು, ಚಾಲುಕ್ಯರು, ರಾಷ್ಟ್ರಕೂಟರು, ಯಾದವರು, ಬಹಮನಿ ದೊರೆಗಳು, ಮೊಘಲರು ಮತ್ತು ಮರಾಠರು ಕಾಲಕಾಲಕ್ಕೆ ಈ ಕೋಟೆಯ ಮೇಲೆ ಪ್ರಭುತ್ವ ಸಾಧಿಸಿದ್ದರು. 3390 ಅಡಿ ಎತ್ತರದಲ್ಲಿ ನಿರ್ಮಾಣವಾದ ಈ ಕೋಟೆ ಮಳೆಗಾಲದಲ್ಲಿ ಅದ್ಭುತವಾಗಿ ಗೋಚರಿಸುತ್ತದೆ. ಇಲ್ಲಿಗೆ ಹೋಗುವ ದಾರಿಯಲ್ಲಿ ಬಗೆಬಗೆಯ ಅಪರೂಪದ ಸಸ್ಯಜಾತಿಗಳನ್ನು ಕಾಣಬಹುದು. ಈ ಕೋಟೆ ಮುಂಬೈ ಮತ್ತು ಪುಣೆ ವಿಮಾನ ನಿಲ್ದಾಣಗಳಿಗೆ ಅತ್ಯಂತ ಹತ್ತಿರವಾಗಿದೆ. ಇಲ್ಲಿಗೆ ಹತ್ತಿರದ ರೈಲ್ವೆ ನಿಲ್ದಾಣವೆಂದರೆ ಮಾವಾಲಿ. ಲೋಣಾವಾಲಾ ಮತ್ತು ಪುಣೆ ಕಡೆ ಹೋಗುವ ಎಲ್ಲ ರೈಲುಗಳೂ ಈ ಪ್ರವಾಸಿ ತಾಣದ ಮುಖಾಂತರ ಹಾಯ್ದುಹೋಗುತ್ತವೆ. ಮಳೆಗಾಲದಲ್ಲಿ ಟ್ರೆಕಿಂಗ್‌ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಇದರ ಹೊರತಾಗಿ ಭಾಜಾ ಕೇವ್ಸ್, ಕಾರ್ವಾ ಕೇವ್ಸ್ ಮುಂತಾದವು ಕೂಡ ನೋಡತಕ್ಕ ಸ್ಥಳಗಳಾಗಿವೆ. ಆಸುಪಾಸು ಅನೇಕ ಹೋಟೆಲ್ಸ್ ಮತ್ತು ರೆಸಾರ್ಟ್‌ಗಳು ಸಹ ಇವೆ.

– ಎಂ. ತುಳಜಾ ಭವಾನಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ