ಗರ್ಭಪಾತ : ಸರ್ಕಾರಿ ಹಸ್ತಕ್ಷೇಪ ಏಕೆ?
ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಇನ್ನಷ್ಟು ಸರಳಗೊಳಿಸಬೇಕು ಹಾಗೂ ಗರ್ಭಿಣಿಯ ಕಷ್ಟನಷ್ಟಗಳ ಬಗೆಗೂ ಯೋಚಿಸುವಂತಾಗಬೇಕು ಎಂದು ಸುಪ್ರೀಂಕೋಟ್ ಸಲಹೆ ನೀಡಿದೆ. ಈ ಸಲಹೆ ಚೆನ್ನಾಗಿದೆ. ಆದರೆ ಇಷ್ಟೇ ಹೇಳಿದರೆ ಸಾಲದು.
ವಾಸ್ತವದಲ್ಲಿ ಗರ್ಭಪಾತದ ಮೇಲೆ ಮಹಿಳೆಯರದ್ದೇ ಹಕ್ಕು ಇರಬೇಕು. ಗರ್ಭಪಾತ ಯಾವಾಗ ಮಾಡಿಸಿಕೊಳ್ಳಬೇಕು ಎನ್ನುವುದನ್ನು ಮಹಿಳೆ ಹಾಗೂ ಆಕೆಯ ವೈದ್ಯರು ನಿರ್ಧರಿಸಬೇಕು. ಕೈಮೇಲೊಂದು ಗುಳ್ಳೆಯಾಗಿ ಅದು ಗ್ಯಾಂಗ್ರಿನ್ ಆಗುವುದೆಂಬ ಅಪಾಯ ಇದ್ದಾಗ, ಕೈ ಕತ್ತರಿಸುವ ನಿರ್ಧಾರವನ್ನು ರೋಗಿ ಹಾಗೂ ವೈದ್ಯರು ತೆಗೆದುಕೊಳ್ಳಬೇಕು. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಏಕೆ ಮಾಡಬೇಕು?
ಇತ್ತೀಚಿನ ವರ್ಷಗಳಲ್ಲಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ವೈದ್ಯರು ರೋಗಿಯ ಅನುಮತಿ ಪಡೆದು ಕ್ಯಾನ್ಸರ್ ನಿವಾರಣೆ ಮಾಡುತ್ತಾರೆ. ಇದರಲ್ಲಿ ಸರ್ಕಾರವನ್ನು ಕೇಳುವ ಪ್ರಶ್ನೆಯೇ ಉದ್ಭವಿಸದು. ಗರ್ಭಸ್ಥ ಶಿಶುವಿನ ಸ್ಥಿತಿ ಕೂಡ ಇದೇ ಆಗಿದೆ. ಅದು ಮಹಿಳೆಯ ಅಂಗವೇ ಹೊರತು ಸರ್ಕಾರದ್ದಲ್ಲ. ಕೇವಲ ಧಾರ್ಮಿಕ ಕಾರಣಗಳಿಗಾಗಿ ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುತ್ತದೆ. ಬೇಡವಾದ ಗರ್ಭ ನಿವಾರಣೆ ಮಾಡುವುದು ಸಜೀವಹತ್ಯೆಯಲ್ಲ. ಅದು ಬೇಡವಾದ ತೊಂದರೆಯಿಂದ ಮುಕ್ತವಾಗುವವುದು.
ಮಕ್ಕಳಿಗಾಗಿ ಜನರು ಪರಿತಪಿಸುತ್ತಾರೆ. ಐವಿಎಫ್‌ನ ಉದ್ಯೋಗ ಇತ್ತೀಚಿನ ವರ್ಷಗಳಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ಲಕ್ಷಾಂತರ ದಂಪತಿಗಳು ಮಗು ಪಡೆಯಲೆಂದು ಆಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಬಹಳಷ್ಟು ಜನ ಸ್ವಾಮಿಗಳು, ಸಾಧುಗಳು ಮತ್ತು ಮುಲ್ಲಾಗಳ ಆಶೀರ್ವಾದ ಪಡೆಯಲು ಹಿಂದೇಟು ಹಾಕುವುದಿಲ್ಲ. ವಾಸ್ತವದಲ್ಲಿ ತಂದೆ ಯಾರೇ ಆಗಿರಬಹುದು, ಆದರೆ ಹೆಸರು ಪತಿಯದ್ದೇ ಆಗಿರುತ್ತದೆ. ಬಂಜೆಯರನ್ನು ನಿಕೃಷ್ಟವಾಗಿ ಕಾಣುವಂತಹ ಸ್ಥಿತಿಯಲ್ಲಿ ಗರ್ಭದಲ್ಲಿರುವ ಭ್ರೂಣವನ್ನು ಕಾರಣವಿಲ್ಲದೆಯೇ ಯಾರಾದರೂ ಸಾಯಿಸಲು ಸಾಧ್ಯವೇ?
ಗರ್ಭಪಾತಕ್ಕೆ ಹಾಗೇನಾದರೂ ಮುಕ್ತ ಅನುಮತಿ ದೊರೆತುಬಿಟ್ಟರೆ, ಜನರು ಸಾವಿರಾರು ಸಂಖ್ಯೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗುತ್ತಾರೆ ಎಂದು ಯೋಚಿಸಬೇಡಿ. ಅಪವಾದ ಎಂಬಂತೆ ಅಂತಹ ಕೆಲವು ಘಟನೆಗಳು ಘಟಿಸಬಹುದು. 20 ವಾರಗಳ ಬಳಿಕ ಗರ್ಭಪಾತಕ್ಕೆ ಮುಂದಾದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚು. ಈ ಸಂಗತಿ ಗರ್ಭಿಣಿ ಹಾಗೂ ಡಾಕ್ಟರ್ ಇಬ್ಬರಿಗೂ ಚೆನ್ನಾಗಿ ತಿಳಿದಿರುತ್ತದೆ. ಗರ್ಭಪಾತ ಮಾಡಿಸುವುದು ಅನಿವಾರ್ಯ ಸಂದರ್ಭದಲ್ಲಿ ಮಾತ್ರ. ಮದುವೆಗೂ ಮುಂಚೆಯೇ ಗರ್ಭ ಧರಿಸಿದ್ದಲ್ಲಿ ಅಥವಾ ಬೇರೆ ಏನಾದರೂ ಸಮಸ್ಯೆ ಇದ್ದಲ್ಲಿ ಗರ್ಭಪಾತದ ನಿರ್ಧಾರ ಮಾಡುತ್ತಾರೆ. ಅದೂ ಕೂಡ 20 ವಾರಗಳ ಮುಂಚೆಯೇ ನಿರ್ಧಾರ ಕೈಗೊಳ್ಳಬೇಕು. 30ರಲ್ಲಿಯೇ ಆಗಿರಬಹುದು ಅಥವಾ 40ರಲ್ಲಿ, ಆ ಬಗ್ಗೆ ವೈದ್ಯರು ಅಥವಾ ಮಹಿಳೆಯೇ ನಿರ್ಧಾರ ಕೈಗೊಳ್ಳಲಿ. ಒಂದು ವೇಳೆ ಗರ್ಭಪಾತದ ಕಾರಣದಿಂದ ಗರ್ಭಿಣಿಯ ಸಾವು ಸಂಭವಿಸುವ ಸಾಧ್ಯತೆ ಇದ್ದಲ್ಲಿ ಅದರ ಹೊಣೆ ಕೂಡ ಅವರಿಬ್ಬರದ್ದೇ. ಹೊಟ್ಟೆಯಲ್ಲಿರುವ ಮಗು ಭೂಮಿಗೆ ಬಂದರೆ ಏನಾಗಬಹುದು ಎಂಬುದು ಮಹಿಳೆಗೆ ಗೊತ್ತಿರುತ್ತದೆ. ಆ ಮಗುವನ್ನು ಕಸದ ತೊಟ್ಟಿಯಲ್ಲಿ ಎಸೆಯುವುದು ಸಮಂಜಸವಲ್ಲ. ಆಪರೇಷನ್ ಟೇಬಲ್ ಮೇಲೂ ಅದರ ಅಂತ್ಯ ಆಗುವುದು ಸರಿಯಲ್ಲ.