`ಕಾಶಿ’ ಎಂತಹ ಒಂದು ಧಾರ್ಮಿಕ ಸ್ಥಳವೆಂದರೆ, ಅಲ್ಲಿ ಪ್ರಾಣಿಗಳಲ್ಲೂ ಕೂಡ ದೇವರು ವಾಸಿಸುತ್ತಾನೆ. ಅಂದಹಾಗೆ, ಪ್ರತಿಯೊಬ್ಬ ಮನುಷ್ಯನಲ್ಲೂ ದೇವರು ಇದ್ದಾನೆ ಎಂಬುದು ಧರ್ಮಗುರುಗಳ ಹೇಳಿಕೆ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಹತ್ಯೆಗೈದಾಗ, ಆ ವ್ಯಕ್ತಿಗೆ ದೇವರು ಏಕೆ ಕಂಡುಬರುವುದಿಲ್ಲ?

ಜಾನುವಾರುಗಳಲ್ಲಿ ದೇವರ ರೂಪ ಕಂಡು ಪ್ರತಿಯೊಬ್ಬ ಹಿಂದೂ ಅದನ್ನು ಹೊಡೆಯುವುದರಿಂದ ದೂರ ಉಳಿಯುತ್ತಾನೆ. ಆ ಪ್ರಾಣಿ ಮನುಷ್ಯನಿಗೆ ಎಷ್ಟೇ ತೊಂದರೆ ಅಥವಾ ಜೀವಕ್ಕೆ ಹಾನಿಯನ್ನುಂಟು ಮಾಡಿದರೂ ಆತ ಸುಮ್ಮನೇ ಇರುತ್ತಾನೆ. ಇದರ ದುಷ್ಪರಿಣಾಮ ಎಂಬಂತೆ ಆ ನಗರದಲ್ಲಿ ಇಂತಹ ಜಾನುವಾರುಗಳ ಉಪಟಳ ಹೆಚ್ಚುತ್ತಲೇ ಹೊರಟಿದೆ.

ದೇವಾಲಯಗಳ ನಗರಿ ಕಾಶಿಯಲ್ಲಿ ಕಷ್ಟಪಟ್ಟು ಏನೂ ಫಲ ಸಿಗದೇ ಹೋದರೂ ಧರ್ಮದ ಹೆಸರಿನಲ್ಲಿ ಒಳ್ಳೆಯ ಗಳಿಕೆಯಂತೂ ಆಗಿಯೇ ಆಗುತ್ತದೆ. ಏನೂ ಬೇಡ, ಸತ್ತ ಕೋತಿಯೊಂದನ್ನು ಯಾರಾದರೂ ರಸ್ತೆಯ ನಡು ಮಧ್ಯದಲ್ಲಿ ತಂದಿಟ್ಟರೆಂದು ಇಟ್ಟುಕೊಳ್ಳೋಣ, ತಕ್ಷಣವೇ ಆ ಕೋತಿಯ ಅಂತ್ಯಸಂಸ್ಕಾರದ ಹೆಸರಿನಲ್ಲಿ ನೂರಾರು ರೂ. ಜಮೆಯಾಗುತ್ತದೆ. ಆ ಹಣದಿಂದ ಏನು ಬೇಕಾದರೂ ಮಾಡಿ, ಕೇಳುವರಾರು?

ಜಾನುವಾರುಗಳನ್ನು ದೇವರೆಂದು ಕಾಣುವುದರ ಪರಿಣಾಮವೇ ಇಂತಹ ಪ್ರಾಣಿಗಳ ಸಂಖ್ಯೆ ಕಾಶಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಗಿದೆ. ಅವು ಮನುಷ್ಯರನ್ನು ಹಾಯ್ದು ಅಥವಾ ಒದ್ದು ಗಾಯಗೊಳಿಸುತ್ತವೆ. ಕೋತಿಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಪ್ರತಿಯೊಂದು ಧಾರ್ಮಿಕ ಸ್ಥಳಗಳಲ್ಲೂ ಅವು ಬೇಕಾಬಿಟ್ಟಿಯಾಗಿ ಸುತ್ತಾಡುತ್ತಿರುತ್ತವೆ. ಅವನ್ನು ಬೆದರಿಸಿ, ಹೊಡೆಯುವ ಇಲ್ಲವೇ ಓಡಿಸುವ ಧೈರ್ಯ ಯಾರಿಗೆ ತಾನೆ ಇದೆ?

ಮನುಷ್ಯರಿಗಿಂತ ಪ್ರಾಣಿಗಳಿಗೆ ಮಹತ್ವ

ಈಗ ಕಾಶಿಯಲ್ಲಿ ಕೋತಿಗಳ ಸಂಖ್ಯೆ ಅದೆಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದರೆ, ಅಲ್ಲಿ ವಾಸಿಸುವವರ, ಸುತ್ತಾಡುವವರ ನೆಮ್ಮದಿಗೆ ಕುತ್ತು ಬಂದಿದೆ. ಸಮೂಹಗಳಲ್ಲಿ ವಾಸಿಸುವ ಕೋತಿಗಳು ಮನುಷ್ಯರಿಂದ ನಾಶವಾದ ಕಾಡುಗಳಿಂದಾಗಿ ಅಲ್ಲಿಂದ ಓಡಿ ಬಂದು ನಗರ ಪ್ರದೇಶಗಳಲ್ಲಿ ವಾಸಿಸಲಾರಂಭಿಸುತ್ತವೆ. ಆಹಾರ ಮತ್ತು ನೀರಿಗಾಗಿ ಮನುಷ್ಯರ ಮೇಲೆ ದಾಳಿ ಮಾಡಲಾರಂಭಿಸುತ್ತವೆ. ಆದರೆ ಅಲ್ಲಿರುವ ಅಲಿಖಿತ ನಿಯಮವೆಂದರೆ, ಅವುಗಳನ್ನು ಯಾರೂ ಹೊಡೆಯುವಂತಿಲ್ಲ. ಹನುಮಂತನ ವಂಶಜರನ್ನು ಹೊಡೆದು ಯಾರೊಬ್ಬರೂ ಪಾಪದಲ್ಲಿ ಪಾಲುದಾರರಾಗಲು ಇಚ್ಛಿಸುವುದಿಲ್ಲ.

ಶಿಕ್ಷಕ ಮಹಾಶಯರೊಬ್ಬರು ಕೆಲವು ಕೋತಿಗಳ ಮೇಲೆ ಗುಂಡು ಹಾರಿಸಿದರು. ಈ ವಿಷಯ ಕಾಳ್ಗಿಚ್ಚಿನಂತೆ ನಗರದಲ್ಲೆಲ್ಲ ಹಬ್ಬಿತು. ಧಾರ್ಮಿಕ ಮನೋಭಾವದ ಜನರಿಗೆ ಇದು ಮಹಾಪಾಪದ ಕೆಲಸವಾಗಿತ್ತು. ಹೀಗಾಗಿ ಜನ ಗುಂಪು ಗುಂಪಾಗಿ ಸೇರಿ ಠಾಣೆಯ ಎದುರು ಜಮಾಯಿಸಿದರು. ಬಳಿಕ ಆ ಶಿಕ್ಷಕನ ವಿರುದ್ಧ ಎಫ್‌ಐಆರ್‌ ದಾಖಲಾಯಿತು. ಆಗ ಜನ ನೆಮ್ಮದಿಯ ನಿಟ್ಟುಸಿರುಬಿಟ್ಟರು. ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳು ಮತ್ತು ಕಲ್ಲುಗಳಿಗೆ ಪ್ರಾಮುಖ್ಯತೆ ಕೊಡುವ ಸಮಾಜದಲ್ಲಿ ಇದಕ್ಕಿಂತ ಅತ್ಯುತ್ತಮವಾದುದನ್ನು ನಿರೀಕ್ಷಿಸಲಾಗದು.

ಕಾಶಿ ವಿಶ್ವನಾಥ ಮಂದಿರದ ಆಸುಪಾಸಿನ ಹಲವು ಕೋತಿಗಳಿಗೆ ಮಧುಮೇಹ ರೋಗವಿತ್ತು. ಆ ಕಾರಣದಿಂದ ಅವು ಬಹಳ ಸಿಡಿಮಿಡಿಗೊಳ್ಳುತ್ತಿದ್ದವು. ಭಕ್ತರು ಕೋತಿಗಳಿಗೆ ಕೊಡುತ್ತಿದ್ದ ಪ್ರಸಾದ ಪೇಡಾ ಆಗಿತ್ತು. ಹೀಗಾಗಿ ಅದನ್ನು ತಿಂದು ಅವು ಇನ್ನಷ್ಟು ಕೆರಳುವಂತಾಗಿತ್ತು. ಆಸುಪಾಸಿನ ಜನರು ಅಲ್ಲಿರುವುದೇ ಕಷ್ಟ ಎಂಬಂತಾಗಿತ್ತು. ಜನರ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಮಹಾನಗರ ಪಾಲಿಕೆಯು ಮಥುರಾದಿಂದ ಕೋತಿಗಳನ್ನು ಹಿಡಿಯಲೆಂದು ಒಂದು ವಿಶೇಷ ತಂಡವನ್ನು ಕರೆಸಿತ್ತು. ಆ ತಂಡದವರು ಸುಮಾರು 200ರಷ್ಟು ಕೋತಿಗಳನ್ನು ಹಿಡಿದು ಸಮೀಪದ ಕಾಡಿಗೆ ಬಿಟ್ಟುಬಂದರು. ಆಗ ಧಾರ್ಮಿಕ ಪ್ರವೃತ್ತಿಯ ಕೆಲವರು ಇದನ್ನು ವಿರೋಧಿಸಿದರು. ಹನುಮನ ವಂಶಜರನ್ನು ಬಂಧಿಸಿರುವುದು ತಮಗೆ ಅಪಾರ ನೋವನ್ನುಂಟು ಮಾಡಿದೆ ಎನ್ನುವುದು ಭಕ್ತರ ಅಳಲಾಗಿತ್ತು. ಧರ್ಮದ ಹೆಸರಿನಲ್ಲಿ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ತಾನು ಹಿಡಿದಿಟ್ಟಿದ್ದ 75 ಕೋತಿಗಳನ್ನು ಪುನಃ ವಾರಾಣಸಿಯ ಬೀದಿಯಲ್ಲಿ ಬಿಟ್ಟಿತು.

ನಾಯಿಗಳ ಸಂತತಿ ಕೂಡ ದಿನೇದಿನೇ ಹೆಚ್ಚುತ್ತಲೇ ಹೊರಟಿದೆ. ಹಗಲು ಹೊತ್ತು ಜನರು ಹೇಗೊ ನಡೆದಾಡುತ್ತಾರೆ. ಆದರೆ ರಾತ್ರಿ ಹೊತ್ತು ರಸ್ತೆಗಳಲ್ಲಿ ಹೆಜ್ಜೆ ಹಾಕಲು ಹೆದರುತ್ತಾರೆ. ಕೆಲವು ತಿಂಗಳುಗಳ ಹಿಂದೆ ನಾಯಿಗಳ ಗುಂಪೊಂದು 10 ವರ್ಷದ ಮಗುವನ್ನು ಕಚ್ಚಿ ಗಾಯಗೊಳಿಸಿತು. ಕಾಶಿಯಲ್ಲಿ ನಾಯಿಗಳಿಗೆ ತನ್ನದೇ ಆದ ವಿಶೇಷ ಗೌರವವಿದೆ. ಏಕೆಂದರೆ ಕಾಶಿಯ ಧಾರ್ಮಿಕ ಕೊತ್ವಾಲ ಕಾಲಭೈರವನ ಸಂಗಾತಿ. ಈಗಲೂ ಕಾಶಿಯಲ್ಲಿ  ಹೊಸ ಕೊತ್ವಾಲ ಬಂದರೆ ಎಲ್ಲಕ್ಕೂ ಮೊದಲು ನಾಯಿಯ ಆಶೀರ್ವಾದ ಪಡೆಯಲು ಸೂಚಿಸಲಾಗುತ್ತದೆ. ನಾಯಿಯ ಆಶೀರ್ವಾದದಿಂದ ಏನು ಸಿಗುತ್ತದೆ ಎಂದು ಅವರೇ ಸ್ವತಃ ಹೇಳಬೇಕು. ಇದರಿಂದ  ಅವರಲ್ಲಿ ಆತ್ಮವಿಶ್ವಾಸದ ಕೊರತೆಯಿರುವುದು ಸ್ಪಷ್ಟವಾಗುತ್ತದೆ. ಕೊತ್ವಾಲನ ಸಂಗಾತಿ ನಾಯಿಯಾಗಿರುವಾಗ ಅದನ್ನು ಯಾರಾದರೂ ಹೊಡೆಯಲು ಸಾಧ್ಯವೇ? ಧಾರ್ಮಿಕ ಪ್ರವೃತ್ತಿಯ ಜನರು ನಾಯಿಗಳ ಹಿಂಡಿಗೆ ಬಿಸ್ಕತ್ತುಗಳನ್ನು ತಿನ್ನಿಸಲು ಹೆಮ್ಮೆಪಟ್ಟುಕೊಳ್ಳುತ್ತಾರೆ. ಈ ರೀತಿಯಾಗಿ ಅವರು ಇಂತಹ ಪ್ರಾಣಿಗಳನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳುತ್ತಾರೆ. ಅವರ ಸೂಚನೆಯ ಮೇರೆಗೆ ನಾಯಿಗಳು ಯಾರ ಮೇಲಾದರೂ ಹಲ್ಲೆ ಮಾಡಲು ಸನ್ನದ್ಧವಾಗಿರುತ್ತವೆ. ತಮ್ಮ ವೈರಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಅವರು ನಾಯಿಗಳನ್ನು ಬಳಸಿಕೊಳ್ಳುತ್ತಾರೆ. ಕಾಲಭೈರವನ ಮತ್ತೊಂದು ರೂಪ ಬಟುಕಭೈರವ. ಈ ಮಂದಿರದಲ್ಲಿ ನಾಯಿಗಳ ಹಿಂಡು ಅದೆಷ್ಟು ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದರೆ, ಅಲ್ಲಿಗೆ ಬರುವ ಭಕ್ತರಿಗೆ ನಾಯಿಗಳೇ ಸ್ವಾಗತ ಕೋರುತ್ತವೆಯೇನೊ ಎಂಬಂತೆ.

ಬೀದಿ ಬೀದಿ ಸುತ್ತುವ ಗೂಳಿಗಳು

ಇದರ ಹೊರತಾಗಿ ಗೂಳಿ ಕಾಶಿಯ ಮತ್ತೊಂದು ಹೆಗ್ಗುರುತಾಗಿದೆ ಎಂಬುದು ಪ್ರಜ್ಞಾವಂತರ ಹೇಳಿಕೆಯಾಗಿದೆ. ಸ್ಮಾರ್ಟ್‌ ಸಿಟಿಯಾಗಿಸುವ ದಾರಿಯಲ್ಲಿ ಸರ್ಕಾರ ಇವನ್ನು ಕೂಡ ಸ್ಮಾರ್ಟ್‌ಗೊಳಿಸಲಿದೆಯೇ? ಮಾಡುವುದಾದರೆ ಹೇಗೆ? ಕಾಶಿಯಲ್ಲಿ ಗೂಳಿಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಮೂಢನಂಬಿಕೆ. ಜನ ತಾವು ಅಂದುಕೊಂಡದ್ದು ನೆರವೇರಿದರೆ ತಮ್ಮ ಮನೆಯಲ್ಲಿ ಹುಟ್ಟಿದ ಹೋರಿಯನ್ನು ಕಾಶಿಯಲ್ಲಿ ತಂದುಬಿಟ್ಟು ಹೋಗುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ, ಇತ್ತೀಚಿನ ವರ್ಷಗಳಲ್ಲಿ ಎತ್ತಿನ ಗಾಡಿಯ ಬಳಕೆ ತುಂಬಾ ಕಡಿಮೆಯಾಗಿರುವುದು. ಈ ಕಾರಣದಿಂದಾಗಿ ಕಾಶಿಯಲ್ಲಿ ಹೋರಿಗಳನ್ನು ತಂದು ಬಿಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಾಶಿಯ ಬೇರೆ ಬೇರೆ ಕಡೆ ಗೂಳಿಗಳು ಗುಂಪು ಗುಂಪಾಗಿ ಸುತ್ತುತ್ತಿರುವುದು ಕಂಡುಬರುತ್ತದೆ. ನಗರಕ್ಕೆ ಯಾವುದೇ ದೊಡ್ಡ ವಿಐಪಿ ಬಂದರೂ ಗೂಳಿಗಳ ಮೇಲೆ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಅವು ಹಾಯಾಗಿ ತಮ್ಮ ಪಾಡಿಗೆ ತಾವು ಸುತ್ತಾಡುತ್ತಿರುತ್ತವೆ. ಇದಕ್ಕೆ ತದ್ವಿರುದ್ಧ ಎಂಬಂತೆ ಧರ್ಮದ ಹೆಸರಿನಲ್ಲಿ ಪ್ರತಿಯೊಬ್ಬರೂ ಇವನ್ನು ಪೂಜಿಸುತ್ತಿರುತ್ತಾರೆ. ರಸ್ತೆ ನಡುವೆ ಮಧ್ಯದಲ್ಲಿ ಎರಡು ಗೂಳಿಗಳು ಪರಸ್ಪರ ಕಾದಾಟಕ್ಕಿಳಿದರೆ ಯಾರೊಬ್ಬರೂ ಅವನ್ನು ಬಿಡಿಸುವ ಗೋಜಿಗೆ ಹೋಗುವುದಿಲ್ಲ. ಅದರ ಬದಲು ಅವುಗಳ ಕದನವನ್ನು ಕುತೂಹಲದಿಂದ ವೀಕ್ಷಿಸುತ್ತಾರೆ. ಆ ಗೂಳಿಗಳ ಕಾದಾಟವನ್ನು ನೋಡಿ ಜನರು ಹೇಗೆ ಅರಚುತ್ತಿರುತ್ತಾರೆಂದರೆ, ಅದು ಸ್ಪೇನ್‌ನಲ್ಲಿ ನಡೆಯುತ್ತಿರುವ ಗೂಳಿ ಕಾಳಗವೇನೊ ಎಂಬಂತೆ ಭಾಸವಾಗುತ್ತಿರುತ್ತದೆ. ಜನರ ಗದ್ದಲ, ಕೂಗಾಟ ಕೇಳಿ ಗೂಳಿಯ ಅಟ್ಟಹಾಸ ಮತ್ತಷ್ಟು ಹೆಚ್ಚುತ್ತದೆ. ಪೊಲೀಸರು ಈ ಎಲ್ಲದರ ಮಜ ಪಡೆಯುತ್ತಿರುತ್ತಾರೆ. ಧರ್ಮ ಗುರುಗಳ ಪ್ರಕಾರ, ಎತ್ತು ಅರ್ಥಾತ್‌ `ನಂದಿ’ ಶಿವನ ವಾಹನವಾಗಿದೆ. ವಿಶ್ವನಾಥ ದೇಗುಲದಲ್ಲಿ ನಂದಿಯ ಒಂದು ಶಿಲಾಪ್ರತಿಮೆ ಕೂಡ ಇದೆ. ಆ ಮೂರ್ತಿಗೆ ಭಕ್ತರು ಹಣೆ ಮುಟ್ಟಿಸಿ ನಮಸ್ಕರಿಸುತ್ತಾರೆ. ಎತ್ತು ಅಥವಾ ಹೋರಿಯಲ್ಲಿ ಶಿವನ ಅಂಶ ಇರುತ್ತದೆ. ಹೀಗಾಗಿ ಯಾರೊಬ್ಬರೂ ಅವುಗಳ ಮೇಲೆ ಕೈ ಮಾಡುವುದಿಲ್ಲ. ಅಲ್ಲೇ ಗೂಳಿಗಳು ಜನರ ಮೇಲೆ ದಾಳಿ ಮಾಡುತ್ತಿರುತ್ತವೆ.

ಇಲಿ ಗಣೇಶನ ವಾಹನ ಎಂದು ಹೇಳಲಾಗುತ್ತದೆ. ಹೀಗಾಗಿ ಇಲ್ಲಿ ಯಾರೂ ಇಲಿಗಳನ್ನು ಸಾಯಿಸುವುದಿಲ್ಲ. ಹೆಚ್ಚೆಂದರೆ ಬೋನಿನಲ್ಲಿ ಹಿಡಿದು ಬಹುದೂರ ಹೋಗಿ ಬಿಟ್ಟುಬರುತ್ತಾರೆ. ಬನಾರಸ್‌ ಕಂಟೋನ್ಮೆಂಟ್‌ ರೈಲ್ವೆ ಸ್ಟೇಷನ್ನಿನಲ್ಲಿ ಎಷ್ಟೊಂದು ದೊಡ್ಡ ದೊಡ್ಡ ಇಲಿಗಳಿವೆ ಎಂದರೆ, ಅವನ್ನು ನೋಡಿ ಬೆಕ್ಕುಗಳು ಕೂಡ ಹೆದರಿ ಓಡುತ್ತವೆ.

ಈಗ ಹಾವುಗಳ ಕುರಿತಂತೆ ಕೇಳಿ. ಹಿಂದಿನ ಜನ್ಮದಲ್ಲಿ ಹಾವನ್ನು ಸಾಯಿಸಿದ ಕಾರಣಕ್ಕೆ ಕಾಳ ಸರ್ಪಯೋಗ ನಡೆಸಲಾಗುತ್ತದೆ. ಹಾವು ಕಚ್ಚಿದರೂ ಸರಿ, ಅದನ್ನು ಮಾತ್ರ ಯಾರೊಬ್ಬರೂ ಹೊಡೆಯುವ ಸಾಹಸ ಮಾಡುವುದಿಲ್ಲ. ಇದಕ್ಕೆ ತದ್ವಿರುದ್ಧ ಎಂಬಂತೆ `ನಾಗರಪಂಚಮಿ’ಯ ದಿನ ಅದರ ಪೂಜೆ ಮಾಡುತ್ತಾರೆ. ತಾಯಿತಂದೆಗಿಂತ ದೊಡ್ಡವರಿಲ್ಲ. ಒಂದು ವಿಡಂಬನೆಯ ವಿಷಯವೆಂದರೆ, ವೃದ್ಧರು, ವಿಕಲಚೇತನರು ಹಾಗೂ ಶಕ್ತಿಹೀನರ ಬಗ್ಗೆ ನಮ್ಮ ದೃಷ್ಟಿಕೋನ ಅಪರಿಚಿತರನ್ನು ಕಾಣುವ ರೀತಿಯಲ್ಲಿ ಇರುತ್ತದೆ. ಅದೇ ಗೋವನ್ನು ಮಾತ್ರ ಮಾತೃ ಸಮಾನ ಎಂಬಂತೆ ಪರಿಗಣಿಸಿ ಅದನ್ನು ಹೊಡೆಯುವವರನ್ನು ಹೊಡೆದು ಬಡಿದು ಗಾಯಗೊಳಿಸಲು ಕೂಡ ಹಿಂದೆ ಮುಂದೆ ನೋಡುವುದಿಲ್ಲ. 9 ತಿಂಗಳು ಗರ್ಭದಲ್ಲಿಟ್ಟುಕೊಂಡು ಪಾಲನೆ ಪೋಷಣೆ ಮಾಡಿದ ತಾಯಿಯ ಬಗೆಗೂ ಸ್ವಲ್ಪವಾದರೂ ಯೋಚಿಸಬೇಕಲ್ಲ, ಆಕೆ ವೃದ್ಧಾಪ್ಯದಲ್ಲಿ ಊಟಕ್ಕೂ ಅವರಿವರ ಮುಂದೆ ಕೈಚಾಚಬೇಕಾಗುತ್ತದೆ.

ಹಾಗೆ ನೋಡಿದರೆ ಸೊಳ್ಳೆಗಳನ್ನೂ ಸಾಯಿಸಬಾರದು. ಏಕೆಂದರೆ ಅವುಗಳಲ್ಲೂ ದೇವರು ವಾಸಿಸುತ್ತಾನೆ. ಹಂದಿಯಿಂದ `ಸ್ವೈನ್‌ ಫ್ಲೂ’ ಎಂಬ ರೋಗ ಹಬ್ಬುತ್ತದೆ. ನಮ್ಮ ಧರ್ಮಗ್ರಂಥಗಳಲ್ಲಿ ವರಾಹಮಿಹಿರನ ಉಲ್ಲೇಖವಿದೆ. ಅದರ ಮುಖ ಥೇಟ್‌ ಹಂದಿಯ ಮುಖವನ್ನೇ ಹೋಲುತ್ತದೆ.  ಜನರು ಕೋತಿಯ ಜೊತೆ ವರ್ತಿಸುವ ಹಾಗೆ ಹಂದಿಗಳ ಜೊತೆ ಏಕೆ ವರ್ತಿಸುವುದಿಲ್ಲ? ಅದು ಪೂಜನೀಯ ಅಲ್ಲವೇ? ತದ್ವಿರುದ್ಧ ಎಂಬಂತೆ ಕೆಲವರು ಅದರ ಮಾಂಸ ಸೇವನೆ ಮಾಡುತ್ತಾರೆ. ಕತ್ತೆ ಸೀತಾದೇವಿಯ ವಾಹನ. ಅದರ ಜೊತೆಗೂ ಜನರು ಮಾನವೀಯತೆಯಿಂದ ವರ್ತಿಸುವುದಿಲ್ಲ. ನನ್ನ ಪ್ರಕಾರ, ಕತ್ತೆ ಅತ್ಯಂತ ಶಾಂತಿಪ್ರಿಯ ಪ್ರಾಣಿ. ಜೀವಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಇತರರಿಗೆ ಹಿಂಸೆ ನೀಡಿ ಬದುಕುವ ಹಕ್ಕು ಇಲ್ಲ. ಯಾವುದೇ ಒಂದು ಪ್ರಾಣಿಯಿಂದ ಮಾನನ ಪ್ರಾಣಕ್ಕೆ ಅಪಾಯ ಇದ್ದರೆ, ಅದನ್ನು ಸಾಯಿಸುವ ಕಾನೂನುಬದ್ಧ ಅಧಿಕಾರ ನಾಗರಿಕರಿಗೆ ಇರಬೇಕು. ಪ್ರಾಣಿಗಳನ್ನು ಧರ್ಮದೊಂದಿಗೆ ಥಳುಕು ಹಾಕಿ ನೋಡಬಾರದು.

ನಾವು ಹಸುವನ್ನು ತಾಯಿಯಂತೆ ಕಾಣುತ್ತೇವೆ. ಅದೇ ರೀತಿ ಅದನ್ನು ನೋಡಿಕೊಳ್ಳಬೇಕು. ಕೇವಲ ಅದು ಹಾಲು ಕೊಡುವತನಕ ಮಾತ್ರ ತಾಯಿ, ಆ ಬಳಿಕ ಅನಾಥ ತಾಯಿಯ ಸ್ಥಿತಿ ಆಗಬಾರದು.

– ಭರತ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ