ಮಹಾರಾಣಿ ಗಾಯತ್ರಿ ದೇವಿಯ ಬಯೋಪಿಕ್ ಚಿತ್ರ
ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಬಾಲಿವುಡ್ ನಟಿ ಪ್ರಾಚಿ ದೇಸಾಯಿ, ತನ್ನ ಆರಂಭದ `ರಾಕ್ ಆನ್’ ಚಿತ್ರದಿಂದಲೇ ತಾನೆಂಥ ಪ್ರತಿಭಾವಂತೆ ಎಂದು ನಿರೂಪಿಸಿದ್ದಾಳೆ. ಸೌಂದರ್ಯದ ಖನಿ ಎನಿಸಿದ್ದ ಮಹಾರಾಣಿ ಗಾಯತ್ರಿದೇವಿಯ ಬಯೋಪಿಕ್ ಚಿತ್ರದಲ್ಲಿ ತಾನು ರಾಣಿಯಾಗಿರಬೇಕೆಂದು ಬಯಸುವ ಈಕೆ, “ಇತರ ಕ್ಷೇತ್ರಗಳಿಗೆ ಹೋಲಿಸಿದಾಗ ಸಿನಿಮಾ ಜಗತ್ತು ಸೌಂದರ್ಯ, ರೂಪಲಾವಣ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಎಷ್ಟೋ ಕಲಾವಿದರು ಪ್ರತಿಭಾಶಾಲಿಗಳಾಗಿದ್ದರೂ ಈ ಕಾರಣದಿಂದ ಅವಕಾಶ ಕಳೆದುಕೊಳ್ಳುತ್ತಾರೆ. ನಮ್ಮ ಬಾಲಿವುಡ್ನಲ್ಲಂತೂ ಈ ಅಂಶಗಳಿಗೆ ಅತಿ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾರೆ,” ಎನ್ನುತ್ತಾಳೆ.
ಸುಚಿತ್ರಾ ಸೇನ್ರ ಬಯೋಪಿಕ್ ಮಾಡುವಾಸೆ
ಮೂನ್ಮೂನ್ಸೇನ್ರ ಮಗಳು ಹಾಗೂ ಸುಚಿತ್ರಾ ಸೇನ್ರ ಮೊಮ್ಮಗಳಾದ ರೀಮಾ ಸೇನ್ ಹಿಂದಿ ಸಿನಿಮಾಗಳಿಗಿಂತ ಬಂಗಾಳಿ ಚಿತ್ರಗಳಲ್ಲೇ ಹೆಚ್ಚು ಬಿಝಿ. ಇತ್ತೀಚೆಗಷ್ಟೆ `ವಾರಾಣಸಿ 2014′ ಚಿತ್ರದಲ್ಲಿ ಕಾಣಿಸಿದ ಈಕೆಯ ಮನದಾಳದ ಬಯಕೆ ಎಂದರೆ ತನ್ನ ಅಜ್ಜಿಯ ನಿಜ ಜೀವನವನ್ನು ಬೆಳ್ಳಿ ಪರದೆ ಮೇಲೆ ತೋರಿಸಬೇಕೆಂಬುದು. ಆ ಪಾತ್ರಕ್ಕೆ ವಿದ್ಯಾಬಾಲನ್ ಹೆಚ್ಚು ಸೂಕ್ತ ಎನ್ನುತ್ತಾರೆ ಈಕೆ.
ರಿಚಾ ಈಗ ಮಾಡುತ್ತಿರುವುದೇನು?
ಯಾರಿಗೆ ಯಾರೊಂದಿಗೆ ನಂಟಾಯಿತು, ಯಾರು ಯಾರನ್ನು ಬಿಟ್ಟರು ಎಂಬುದು ಸಿನಿ ಸುದ್ದಿಗಾರರಿಗೆ ಹೇಗ್ಹೇಗೋ ಗೊತ್ತಾಗೇ ಆಗುತ್ತದೆ. ತಾಜಾ ಸುದ್ದಿ `ಫಕ್ರೆ’ ಹುಡುಗಿ ರಿಚಾಳದು. ಇತ್ತೀಚೆಗೆ ಆಕೆ ಅಂಗದ್ ಬೇಡಿ ಜೊತೆ ಹೆಚ್ಚು ಹೆಚ್ಚು ಬಿಝಿ ಅಂತೆ! ರಿಚಾಳನ್ನು ಹೊಸ ಮನೆಗೆ ಶಿಫ್ಟಿಂಗ್ ಮಾಡಿಸುವುದರಿಂದ ಹಿಡಿದು ಆಕೆಯ ಸಣ್ಣಪುಟ್ಟ ಕೆಲಸಗಳಲ್ಲೂ ಅಂಗದ್ ಬಹಳ ಬಹಳ ಸಹಾಯ ಮಾಡುತ್ತಾನಂತೆ. ಇಬ್ಬರೂ ಒಟ್ಟೊಟ್ಟಿಗೆ ಫರ್ಹಾನ್ ಅಖ್ತರ್ರ ಆನ್ಲೈನ್ ವೆಬ್ ಸೀರಿಸ್ `ಇನ್ಸೈಡ್ ಏಜ್’ನಲ್ಲಿ ಕೆಲಸ ಮಾಡಿದ್ದರು. ಇದಕ್ಕೆ ಮೊದಲು ಈಕೆ ಒಬ್ಬ ಪರಂಗಿಯವನಿಗೆ ಮಾರುಹೋಗಿ ಅವನನ್ನು ಭೇಟಿಯಾಗಲು ಆಗಾಗ ಫ್ರಾನ್ಸ್ ಗೆ ಹೋಗುತ್ತಿದ್ದಳು. ಅದೇನೂ ಕೈಗೆಟುಕದೆ, ಹುಳಿ ದ್ರಾಕ್ಷಿ ಕಂಡ ನರಿಯಂತೆ ವಾಪಸ್ಸು ಹುಟ್ಟಿದೂರಿಗೆ ಬಂದು, “ಈ ಮಣ್ಣಿನ ಹೈದನೇ ಸರಿ,” ಎಂದು ಅಂಗದನಿಗೆ ಶರಣಾಗಿದ್ದಾಳೆ. ಮುಂದೆ….? ನಿರೀಕ್ಷಿಸಿ!
ನಶಾಖೋರಿ ಪೂಜಾ
ತಂದೆ ಮಹೇಶ್ ಭಟ್ರ `ಡ್ಯಾಡಿ’ ಚಿತ್ರದಿಂದ ಬಾಲಿವುಡ್ಗೆ ಡೆಬ್ಯು ಪಡೆದ ಪೂಜಾ ಭಟ್, ತನ್ನ ಸಮಕಾಲೀನ ನಟಿಯರಲ್ಲಿ ಎಲ್ಲರಿಗಿಂತ ಬೋಲ್ಡ್ ಎನಿಸಿದಳು. ಈಕೆ ಯಾವುದೇ ಬಗೆಯ ಬೋಲ್ಡ್ ಸೀನ್ ಮಾಡಲಿಕ್ಕೂ ಹಿಂಜರಿದವಳಲ್ಲ. ಸಡಕ್, ದಿಲ್ ಹೈ ಕಿ ಮಾನ್ತಾ ನಹೀ…. ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಪೂಜಾ ತನ್ನದೇ ಕಂಪನಿ ಫಿಶ್ ಐ ನೆಟ್ವರ್ಕ್ ಆರಂಭಿಸಿದಳು. ಅಭೀಕ್ ಬರುವಾರ `ಸಿಟಿ ಆಫ್ ಡೆತ್’ ಪತ್ತೇದಾರಿ ಕಾದಂಬರಿ ಆಧರಿಸಿ ಅದೇ ಹೆಸರಲ್ಲಿ ಹೊಸ ಚಿತ್ರ ಮಾಡುತ್ತಿದ್ದಾಳೆ, ತಾನು ಪ್ರಧಾನ ಪಾತ್ರ ವಹಿಸುತ್ತಿದ್ದಾಳೆ. ಇದರಲ್ಲಿ ಈಕೆ ಒಬ್ಬ ನಶಾಖೋರಿ ಪೊಲೀಸ್ ಅಂತೆ. ರುಂಡವಿಲ್ಲದ ಒಬ್ಬ ಹುಡುಗಿಯ ಹೆಣದ ರಹಸ್ಯ ಭೇದಿಸುವುದೇ ಈ ಚಿತ್ರದ ಸಸ್ಪೆನ್ಸ್.
ಪ್ರೇಮಿಗಳ ಪರಾರಿ
ಯಶ್ರಾಜ್ರ ಬೀ ಟೌನ್ ಚಿತ್ರ `ಇಶ್ಕ್ ಪರಿಂದೆ’ಯಿಂದ ಬಾಲಿವುಡ್ ಎಂಟ್ರಿ ಪಡೆದ ಅರ್ಜುನ್ ಕಪೂರ್, ಪರಿಣಿತಿಗೆ ನಾಯಕನಾಗಿದ್ದ. ಅದು ಅವಳ ಎರಡನೇ ಚಿತ್ರ. ಈ ಜೋಡಿಯ ಹಿಟ್ ಚಿತ್ರವೆಂದೇ ಇದು ಹೆಸರಾಯಿತು. ಅದಾಗಿ ಸುಮಾರು ಫ್ಲಾಪ್ ಚಿತ್ರಗಳಾದ ನಂತರ ಇಬ್ಬರೂ ಒಂದು ಮೆಗಾಹಿಟ್ ಚಿತ್ರಕ್ಕಾಗಿ ಕಾದಿದ್ದಾರೆ. ಆಕೆಯ `ಮೇರಿ ಪ್ಯಾರಿ ಬಿಂದು’ ಅಥವಾ ಆತನ `ಕೀ ಕಾ’ ಎರಡೂ ಫ್ಲಾಪ್ ಆಗಿದ್ದವು. ಹೀಗಾಗಿ ಇಬ್ಬರೂ ಹಳೆಯ ಬ್ಯಾನರ್ನ ಯಶ್ರಾಜ್ ಫಿಲಮ್ಸ್ನಲ್ಲಿ, ದಿವಾಕರ್ ಬ್ಯಾನರ್ಜಿ ನಿರ್ದೇಶಿತ `ಸಂದೀಪ್ ಔರ್ ಪಿಂಕಿ ಪರಾರ್’ ಚಿತ್ರದಲ್ಲಿ ಮತ್ತೆ ಒಟ್ಟಾಗಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ನಿಂದ ಪರಾರಿ ಆಗದಿದ್ದರೆ ಸರಿ.
ಅವರವರ ಭಾವಕ್ಕೆ….
ಇಂಥ ಫ್ಲರ್ಟಿಂಗ್ ಎಲ್ಲಾ ಬಿಟ್ಟುಬಿಡು. ದೀಪೂಗೆ ಈ ಬಗ್ಗೆ ಗೊತ್ತಾದರೆ ಅಷ್ಟೇ…..
ನನ್ನನ್ನೇನು ಸಾಮಾನ್ಯದವನು ಅಂದುಕೊಂಡಿದ್ದೀಯಾ? ಎಂತೆಂಥವರಿಗೋ ಚಳ್ಳೇಹಣ್ಣು ತಿನ್ನಿಸಿದ್ದೀನಿ ಗೊತ್ತಾ….?
ಆದರೆ ನನ್ನ ಬಳಿ ನಿನ್ನ ಆಟ ನಡೆಯಲ್ಲ…ಜಾಸ್ತಿ ಮಾತಾಡಿದ್ರೆ ಕುತ್ತಿಗೆ ಹಿಸುಕಿಬಿಡ್ತೀನಿ!
ಬಾಲಿವುಡ್ ಬಾಲೆಯರ ಶೋಕಿ
ವಿಶ್ವದಲ್ಲಿ ಎಲ್ಲೆಡೆ ಜನ ಚಿತ್ರವಿಚಿತ್ರ ಶೋಕಿ ಬೆಳೆಸಿಕೊಂಡಿರುತ್ತಾರೆ. ಇದರಲ್ಲಿ ಬಾಲಿವುಡ್ ಕೂಡ ಕಡಿಮೆ ಏನಲ್ಲ. ಇಲ್ಲಿನ ತಾರೆಯರು ಚಪ್ಪಲಿ ಸ್ಯಾಂಡಲ್ಸ್ ಗಾಗಿ ಒಂದು ಕೋಣೆ, ಕೈ ಬೆರಳಿನ ಉಂಗುರಗಳನ್ನು ಇರಿಸಲು ವಿವಿಧ ವಾರ್ಡ್ರೋಬ್ ಹೀಗೆಲ್ಲಾ ಹೊಂದಿದ್ದಾರೆ.
ಈ ನಿಟ್ಟಿನಲ್ಲಿ ಇಲಿಯಾನಾ ಕ್ರೂಝ್ ಎಲ್ಲರಿಗಿಂತ ವಿಭಿನ್ನ. ಈಕೆ ವಿಶ್ವಾದ್ಯಂತ ಎಲ್ಲಿಗೇ ಪ್ರವಾಸ ಹೊರಡಲಿ, ಆಯಾ ಊರುಗಳಿಂದ ತಪ್ಪದೇ ಬಗೆಬಗೆಯ ವಜ್ರದುಂಗುರಗಳನ್ನು ಖರೀದಿಸುವುದೇ ದೊಡ್ಡ ಹಾಬಿ, ಅದಕ್ಕಾಗಿ ಭಾರಿ ವಾರ್ಡ್ರೋಬ್ ಇದೆಯಂತೆ.
ಅದೇ ತರಹ ಕಲ್ಕಿ ಕೋಚ್ಲೀನ್ ಸಹ. ಇವಳು ತನ್ನ ಚಪ್ಪಲಿಗಳಿಗಾಗಿಯೇ ಒಂದು ಕೋಣೆ ಭರ್ತಿ ಶೆಲ್ಫ್ ಮಾಡಿಸಿದ್ದಾಳಂತೆ.
ಇನ್ನು ಆ ಕಾಲದ ನಟಿ ರೇಖಾರ ಬಂಗಾರದ ವ್ಯಾಮೋಹ, ಕಾಂಜೀವರಂ ಸೀರೆಗಳ ಬಗ್ಗೆ ಹೇಳುವುದೇ ಬೇಡ! ಯಾವ ಊರಿಗೆ ಹೋದರೂ ಅಲ್ಲಿನ ಪ್ರಖ್ಯಾತ ಒಡವೆಗಳನ್ನು ಖರೀದಿಸದೆ ಬರುವುದಿಲ್ಲವಂತೆ.
ಈ ಬಾರಿಯ ಡ್ಯಾನ್ಸ್ ಲೆವೆಲ್ ತುಸು ಭಿನ್ನ
ಸ್ಟಾರ್ಪ್ಲಸ್ನಲ್ಲಿ ಶುರುವಾಗಲಿರುವ `ಡ್ಯಾನ್ಸ್ ಕ್ಲಾಸ್ 3′ ರಿಯಾಲಿಟಿ ಶೋನ ಪ್ರಮೋಶನ್ಗಾಗಿ ದೆಹಲಿ ತಲುಪಿದ ಶೋದ ಹೋಸ್ಟ್ ರಾಘವ್ ಮತ್ತು ಮೆಂಟರ್ ಧರ್ಮೇಶ್ ಹೇಳುತ್ತಾರೆ, “ಈ ಬಾರಿ ಡ್ಯಾನ್ಸ್ ಕ್ಲಾಸ್ನಲ್ಲಿ ರೆಮೋ ಸಾರ್ ಅವರ ತಂಡದಲ್ಲಿ ಇಂಟರ್ನ್ಯಾಷನಲ್ ಡ್ಯಾನ್ಸ್ ಆರ್ಟಿಸ್ಟ್ ಇರುತ್ತಾರೆ. ಪ್ರತಿ ಭಾನುವಾರ ನಮ್ಮ ತಂಡದೊಂದಿಗೆ ಅವರು ಪೈಪೋಟಿ ನಡೆಸುತ್ತಾರೆ. ಅಂತಾರಾಷ್ಟ್ರೀಯ ಕಲಾವಿದರೊಂದಿಗೆ ನಮ್ಮ ಲೋಕಲ್ ಹುಡುಗರ ಪೈಪೋಟಿ ಬಲು ಥ್ರಿಲ್ಲಿಂಗ್ ಆಗಿರುತ್ತದೆ. ಆದರೆ ಇದನ್ನು ನಾವು ಸಾಧಿಸಿ ತೋರಿಸಿದ್ದೇವೆ.”
ಈ ಸಲ ಹೋಸ್ಟ್ ರಾಘವ್ ಸ್ಟೇಜ್ನ್ನೇ ತನ್ನ ಮನೆಯಾಗಿಸಿಕೊಂಡಿದ್ದಾನೆ. ನಡುನಡುವೆ ಆತ ಎಲ್ಲರನ್ನೂ ಮಾತಿನ ಕಚಗುಳಿಯಿಂದ ನಗಿಸುತ್ತಾನೆ. ಕ್ರಿಯೇಟಿವ್ ಟೀಂ ತನಗೆ ಈ ಬಗ್ಗೆ ಐಡಿಯಾ ನೀಡಿದಾಗ, ಅದು ಬಹಳ ಇಷ್ಟವಾಯ್ತು ಎನ್ನುತ್ತಾನೆ ರಾಘವ್.
ಅನುಷ್ಕಾ ತೆರೆದಿಟ್ಟ ಶಾರೂಖ್ ರಹಸ್ಯ
ಈಗಾಗಲೇ ಶಾರೂಖ್ ಜೊತೆ 4 ಹಿಟ್ ಚಿತ್ರ ನೀಡಿರುವ ಅನುಷ್ಕಾ, ನಿರ್ದೇಶಕ ಆನಂದ್ ರಾವ್ರ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಮತ್ತೆ ಆತನ ಜೊತೆ ಕಾಣಿಸಿಲಿದ್ದಾಳೆ. `ಹ್ಯಾರಿ ಮೀಟ್ಸ್ ಸೇಜ್’ ಚಿತ್ರದ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಅನುಷ್ಕಾ, ಚಿತ್ರದ ಬಗ್ಗೆ ಹೇಳುತ್ತಾ ಶಾರೂಖ್ ಕುರಿತು ವೀಕ್ಷಕರಿಗೆ ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ಹಂಚಿಕೊಂಡಳು.
ಅನುಷ್ಕಾ ಹೇಳುತ್ತಾಳೆ, “ಯೂರೋಪ್ನ ಮೈ ಕೊರೆಯುನ ಚಳಿಯಲ್ಲೂ ಶಾರೂಖ್ ಯಾವುದೇ ಥರ್ಮಲ್ ವೇರ್ ಧರಿಸದೆ, ಊಟದ ಬಗ್ಗೆ ನಖರಾ ತೋರಿಸದೆ ಇರುತ್ತಿದ್ದರು. ಎಲ್ಲಿಗೆ ಹೋದರೂ ತಮ್ಮ ಲಗೇಜ್ ಜೊತೆಗೇ ಇಟ್ಟುಕೊಳ್ಳುತ್ತಿದ್ದರು. ಒಂದು ದಿನ ಶೂಟಿಂಗ್ ಸಂದರ್ಭದಲ್ಲಿ ನಾನು ಶಾರೂಖ್ಗೆ ಒಂದು ಆ್ಯಕ್ಷನ್ ಸೀನ್ ಶೂಟ್ ಮಾಡಬೇಕೆಂದು ತಿಳಿಸಿದೆ. ಆಗ ಆತ, ಗಾಳಿಯಲ್ಲಿ ಲಾಗ ಹೊಡೆಯುತ್ತಾ ಆ್ಯಕ್ಷನ್ ಸೀನ್ ಮಾಡುವಾಗ ಹಾರ್ನೆಸ್ ಹೇಗೆ ಬಳಸುವುದೆಂದು ತೋರಿಸಿಕೊಟ್ಟರು. ಇದಕ್ಕಾಗಿ ಅವರು ತಮ್ಮ ಖಾಸಗಿ ಲಗೇಜ್ನಿಂದಲೇ ಇದನ್ನು ತರಿಸಿಕೊಟ್ಟಿದ್ದರು. ಇದನ್ನೆಲ್ಲ ನೀವು ಯಾವಾಗಲೂ ಶೂಟಿಂಗ್ ಸ್ಪಾಟ್ಗೆ ತರುತ್ತೀರಾ ಎಂದಾಗ, ಹೌದು…. ಅಗತ್ಯದ ವಸ್ತುಗಳನ್ನು ನಾನೇ ಮರೆಯದೆ ತರುತ್ತೇನೆ ಎಂದರು.”
ಕತ್ರೀನಾ ನನ್ನ ಮೆಚ್ಚಿನವಳಲ್ಲ!
ಕತ್ರೀನಾಳೊಂದಿಗೆ ಬ್ರೇಕ್ಅಪ್ ಆದ ನಂತರ ರಣಬೀರ್ ಉದುರಿಸಿದ ಅಣಿಮುತ್ತುಗಳಿವು….. ಇದಕ್ಕೆ ಮೊದಲು ಆತ ದೀಪಿಕಾ ಪಡುಕೋಣೆಯೊಂದಿಗೆ ಬ್ರೇಕ್ಅಪ್ ಮಾಡಿಕೊಂಡಾಗ ಕತ್ರೀನಾಳನ್ನು ಬಾಯಿ ತುಂಬಾ ಹೊಗಳುತ್ತಿದ್ದುದು ಮರೆತೇ ಹೋದಂತಿದೆ. ಆದರೆ ಈಗ ಹೇಳಿದ ಈ ಮಾತು, ಕತ್ರೀನಾ ಈ ಚಿತ್ರಕ್ಕೆ ನಾಯಕಿ ಆಗುವುದರ ಬಗ್ಗೆ ಅಂತೆ. “ಆಕೆಯನ್ನು ಈ ಚಿತ್ರಕ್ಕೆ ಬುಕ್ ಮಾಡುವ ನಿರ್ಣಯ ನಿರ್ದೇಶಕ ಅನುರಾಗ್ ಕಶ್ಯಪ್ರದು. ಅವರೇ ತಾನೇ ಈ ಚಿತ್ರದ ಕ್ಯಾಪ್ಟನ್?” ಅಂತೂ ಇಂತೂ ಶೂಟಿಂಗ್ ಮುಗಿದರೂ ಇದೀಗ ಇವರಿಬ್ಬರನ್ನು ಡಬ್ಬಿಂಗ್ಗಾಗಿ ಒಂದೆಡೆ ಕೂರಿಸುವುದೇ ಕಷ್ಟವಾಗಿದೆಯಂತೆ. ಮಾತು ಮಾತಿಗೂ ಜಗಳವಾಡಿಕೊಳ್ಳುವ ಇವರನ್ನು ಓಲೈಸಿ, ಡಬ್ಬಿಂಗ್ ಮೂಡ್ಗೆ ತರುವಷ್ಟರಲ್ಲಿ ನಿರ್ದೇಶಕರು ಹೈರಾಣಾಗಿದ್ದಾರಂತೆ.
ಸರಣಿ ಫ್ಲಾಪ್ ಚಿತ್ರಗಳ ನಾಯಕಿ ವಿದ್ಯಾ
ವಿದ್ಯಾ ಮಿಸೆಸ್ ರಾಯ್ ಆದಾಗಿನಿಂದ ಆಕೆಯ ಕೆರಿಯರ್ ಲಾಗಾ ಹೊಡೆಯುತ್ತಿದೆ. ಶಾದಿ ಕೆ ಸೈಡ್ ಎಫೆಟ್ಸ್, ಭಾಬಿ ಜಾಸೂಸ್, ಹಮಾರಿ ಅಧೂರಿ ಕಹಾನಿ, ಬೇಗಂ ಜಾನ್ ಇತ್ಯಾದಿಗಳೆಲ್ಲ ಬಾಕ್ಸ್ ಆಫೀಸಿನಲ್ಲಿ ಸತತ ತೋಪಾದವು. ಈ ಪರಿ ಫ್ಲಾಪ್ ಆಗಬಹುದು ಎಂದು ವಿದ್ಯಾ ಮಾತ್ರಲ್ಲ ಈ ಚಿತ್ರದ ನಿರ್ಮಾಪಕರುಗಳೂ ಯೋಚಿಸಿರಲಿಲ್ಲ. ಅದಕ್ಕೂ ಮುಖ್ಯ ಎಂದರೆ, ಈಕೆಯ ಈ ಚಿತ್ರಗಳು ರಿಲೀಸ್ ಆದಾಗೆಲ್ಲ ಸ್ತ್ರೀ ಪ್ರಧಾನ ಚಿತ್ರಗಳಾದ ರಂಗೂನ್, ಅನುಷ್ಕಾಳ ಚಿತ್ರ ಫಿಲ್ಲೋರಿ, ನಾವ್ ಶಬಾನಾ ಮುಂತಾದವುಗಳೆಲ್ಲ ತಾವು 5-6 ಕೋಟಿ ಬಾಚಿದ್ದರೆ, ಬೇಗಂ ಜಾನ್ ಚಿತ್ರ ಎಷ್ಟೇ ಕುಂಟಿದರೂ 3 ಕೋಟಿ ಕೂಡ ದಾಟಲಿಲ್ಲವಂತೆ! ಪಾಪ, ವಿದ್ಯಾಳ ಡರ್ಟಿ ಮೋಡಿ ಮುಗಿಯಿತೆಂದು ಅರ್ಥವೇ ಅಥವಾ ಪ್ರೇಕ್ಷಕರ ಅಭಿರುಚಿ ಬದಲಾಯಿತೇ….?
ರಜನಿಯ ಪತ್ನಿ ಪಾತ್ರ ಒಲ್ಲದ ಹುಮಾ
ಕೆಲವು ದಿನಗಳ ಹಿಂದೆ ಇದ್ದ ಸುದ್ದಿ ಪ್ರಕಾರ, ಹುಮಾ ಕುರೇಶಿ ರಜನಿಕಾಂತ್ರ ಬರಲಿರುವ ಬ್ಲಾಕ್ಬಸ್ಟರ್ `ಕಾಲಾ’ ಚಿತ್ರದಲ್ಲಿ ಆತನ ಪತ್ನಿಯಾಗಿ ನಟಿಸಲಿದ್ದಳು. ಆದರೆ ಏನಾಯಿತೋ ಏನೋ…. ಈಗ ಆಕೆ ಈ ಸೀನಿಯರ್ ಪಾತ್ರದ ಬದಲು ಮತ್ತೊಂದು ಮಹತ್ವಪೂರ್ಣ ಜರೀನಾಳ ಪಾತ್ರ ವಹಿಸುತ್ತಿದ್ದಾಳಂತೆ. ಈ ಚಿತ್ರದ ಪುಢಾರಿ ಪಾತ್ರಕ್ಕೆ ನಾನಾ ಪಾಟೇಕರ್ನ್ನು ಒಪ್ಪಿಸುವಲ್ಲಿ ಹುಮಾ ರಜನಿಗೆ ಸಹಾಯ ಮಾಡಿದಳಂತೆ…. `ಗ್ಯಾಂಗ್ಸ್ ಆಫ್ ವಾಸೆಪುರ್’ ಚಿತ್ರದ ಈ ಹಿಟ್ ಹೀರೋಯಿನ್ ಇತ್ತೀಚೆಗೆ ಫ್ಲಾಪ್ ಎನಿಸುತ್ತಿದ್ದಾಳೆ. ತನ್ನ ತಮ್ಮನೊಂದಿಗೆ `ದೋಬಾರಾ’ ಚಿತ್ರದಲ್ಲೇನೋ ನಟಿಸಿದ್ದಳು, ಅದನ್ನು ನೋಡಲು `ಬಾರಾ’ ಎಂದು ವೀಕ್ಷಕರನ್ನು ಕರೆದರೆ ಒಬ್ಬರೂ ಬರುತಿಲ್ಲವಂತೆ….! ಈಗ ರಜನಿಯ ಚಿತ್ರದ್ದೊಂದೇ ದೊಡ್ಡ ಆಶಾಕಿರಣವಾಗಿದೆ, ಈಕೆಯ ಕೆರಿಯರ್ ದೋಣಿ ಮುಳುಗದಿರಲು!
ಕೇವಲ ಪಾರ್ಟಿಶನ್ ಒಂದೇ ಮೂಲ
ವಿದೇಶಗಳಲ್ಲಿ `ವೈಸ್ರಾಯ್ ಹೌಸ್’ ಹೆಸರಿನಿಂದ ಈಗಾಗಲೇ ರಿಲೀಸ್ ಆಗಿರುವ ಗುರಿಂದರ್ ಚಡ್ಡಾರ ಚಿತ್ರ ನಮ್ಮ ದೇಶದಲ್ಲಿ ಮಾತ್ರ `ಪಾರ್ಟಿಶನ್ 1947′ ಹೆಸರಿನಲ್ಲಿ ರಿಲೀಸ್ ಆಗುತ್ತಿದೆ. ಎ.ಆರ್. ರೆಹಮಾನ್ರ ಸಂಗೀತವಿರುವ ಈ ಚಿತ್ರದಲ್ಲಿ, ನೆಹರೂ ಮತ್ತು ಮೌಂಟ್ಬೆಟನ್ರ ಕಥಾಹಂದರವಿದೆ ಎಂಬ ಊಹಾಪೋಹಗಳಿದ್ದವು. ಆದರೆ ಅದನ್ನು ಸಾರಾಸಗಟಾಗಿ ನಿರಾಕರಿಸಿದ ನಿರ್ದೇಶಕಿ ಗುರಿಂದರ್, ಇದು ಕೇವಲ ಭಾರತ-ಪಾಕಿಸ್ತಾನದ ವಿಭಜನೆಯ ಕುರಿತಾದ ಚಿತ್ರ ಎನ್ನುತ್ತಾರೆ. ಆ ಸಂದರ್ಭಕ್ಕೆ ಈ ಹಿರಿಯ ಮುತ್ಸದ್ದಿಗಳ ಪಾತ್ರಪೋಷಣೆ ಎಷ್ಟಿತ್ತೋ ಅಷ್ಟು ಮಾತ್ರ ತೋರಿಸಲಾಗಿದೆ ಎನ್ನುತ್ತಾರೆ. ಚಿತ್ರದ ಬೆಳಣಿಗೆಗೆ ಅವರ ವೈಯಕ್ತಿಕ ಬದುಕಿನ ಚಿತ್ರಣ ಬೇಕಿರಲಿಲ್ಲವಂತೆ.
ಹೆಣ್ಣಿನ ತ್ಯಾಗ ಸಾಹಸದ ಕಥೆ
ಸೋನಿ ಟಿ.ವಿ.ಯಲ್ಲಿ ಮೂಡಿಬರುತ್ತಿರುವ ಹೊಸ `ಪಹರೇದಾರ್ ಪಿಯಾ ಕೀ’ ಧಾರಾವಾಹಿಯಲ್ಲಿ ರಾಜಾಸ್ಥಾನ್ ರಾಜಪರಿವಾರದ ಕಥಾ ಹಂದರವಿದೆ. ಈ ಕಥೆಯಲ್ಲಿ ಅನಿವಾರ್ಯ ಕಾರಣಗಳಿಂದ ನಾಯಕಿ 10 ವರ್ಷದ ಯುವರಾಜನನ್ನೇ ವರಿಸುವ ಪ್ರಮುಖ ತಿರುವು ಬರುತ್ತದೆ, ಆದರೆ ಮುಂದೆ ಅವರು ದಾಂಪತ್ಯ ಹೊಂದುವುದಿಲ್ಲ ಎಂದು ಆ ಹೆಣ್ಣಿನ ತ್ಯಾಗ, ಸಾಹಸದ ಕುರಿತು ನಿರ್ದೇಶಕರು ಹೇಳುತ್ತಾರೆ.
ಭಾರತಿಗೆ ದೊರಕಿದ ಸರ್ಪ್ರೈಸ್
ಕೇವಲ ಕಲರ್ಸ್ (ಹಿಂದಿ) ವಾಹಿನಿಗೆ ಮಾತ್ರ ಸೀಮಿತಳಾಗಿದ್ದ ಹಾಸ್ಯನಟಿ ಭಾರತಿಗೆ, ಆಕೆಯ ಬರ್ತ್ಡೇ ದಿನ ಹಾಸ್ಯ ಕಲಾವಿದ ಕಪಿಲ್ ಶರ್ಮಾ ದೊಡ್ಡದೊಂದು ಸರ್ಪ್ರೈಸ್ ನೀಡಿದ್ದಾನೆ. ಅಂದು ಶೂಟಿಂಗ್ ಮಧ್ಯೆ ಸ್ಟೇಜ್ ಮೇಲೆ ಈಕೆ ಕೇಕ್ ಕತ್ತರಿಸುವಂತೆ ಕಪಿಲ್, ಭಾರತೀಯ ಹಾಕಿ ಕ್ರೀಡಾಪಟುಗಳ ಜೊತೆ ಬಂದು ತಾಕೀತು ಮಾಡಿದ. ಇದರಿಂದ ಸಂತಸಗೊಂಡ ಈಕೆ, “ನನ್ನ ಬರ್ತ್ಡೇ ಕುರಿತು ನಾನು ಯಾರಿಗೂ ತಿಳಿಸಿರಲಿಲ್ಲ. ಆದರೆ ನಾನು ಎಣಿಸಿದ್ದಕ್ಕಿಂತಲೂ ಸೋನಿ ಎಂಟರ್ಟೇನ್ಮೆಂಟ್ ಟೆಲಿವಿಷನ್ ಮಂದಿ ಬಲು ಪ್ರಿಯಜನರೆಂದೇ ಹೇಳಬೇಕು. ಏಕೆಂದರೆ ನನ್ನ ಕೆರಿಯರ್ ಆರಂಭಗೊಂಡಿದ್ದೇ ಇಲ್ಲಿಂದ. ಇನ್ನು ಕಪಿಲ್ ಬಗ್ಗೆ ಏನು ಹೇಳುವುದು…. ನನ್ನ ರಾಜ್ಯವಾದ ಪಂಜಾಬ್ನ ದಿಲ್ದಾರ್ ಆತ!” ಎನ್ನುತ್ತಾಳೆ.
ತೆನಾಲಿಯ ಚಾತುರ್ಯ ಇದೀಗ ಹಿಂದಿಯಲ್ಲಿ
ದಕ್ಷಿಣ ಭಾರತದಲ್ಲಿ ತೆನಾಲಿ ರಾಮಕೃಷ್ಣನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಆತನ ವಾಕ್ಚಾತುರ್ಯವನ್ನು ಉತ್ತರದವರಿಗೂ ಪರಿಚಯಿಸಲೆಂದೇ ಇದೀಗ ಸೋನಿ ಸಬ್ ಟಿ.ವಿ.ಯಲ್ಲಿ ತೀಕ್ಷ್ಣಬುದ್ಧಿಯ ಈ ವಿಕಟಕವಿಯ ಬಗ್ಗೆ ಹೊಸ ಧಾರಾವಾಹಿ ಜನಪ್ರಿಯವಾಗಿದೆ. ಕೃಷ್ಣ ಭಾರದ್ವಾಜ್ ತೆನಾಲಿಯಾಗಿದ್ದರೆ, ಆತನ ಪತ್ನಿ ಪಾತ್ರದಲ್ಲಿದ್ದಾರೆ ಪ್ರಿಯಂವದಾ ಕಾಂತ್. ರಾಜ ಕೃಷ್ಣದೇವರಾಯನ ಆಸ್ಥಾನದ ನವರತ್ನಗಳಲ್ಲಿ ಒಬ್ಬನೆನಿಸಿದ ತೆನಾಲಿಯ ವಿವಿಧ ಕಥೆಗಳು ಪ್ರತಿ ಎಪಿಸೋಡ್ನಲ್ಲೂ ಮೂಡಿ ಬರಲಿವೆ.
ಒಂದು ಮಿನಿ ಸಂದರ್ಶನ ಶೃತಿ ಸೇಠ್ (ಹಾಸ್ಯ ನಟಿ)
ಅಂದು ಕೇವಲ ಡಿ.ಡಿ. ಮಾತ್ರವೇ ಮನರಂಜನೆಗೆ ಆಧಾರವಾಗಿದ್ದ ಕಾಲದಿಂದ ಇಂದಿನವರೆಗೂ ತಮ್ಮ ವೈವಿಧ್ಯಮಯ ಪಾತ್ರಗಳಿಂದ ನಗಿಸುತ್ತಿರುವ ಶೃತಿ ಸೇಠ್, ಸೋಶಿಯಲ್ ಮೀಡಿಯಾದಲ್ಲೂ ಅಷ್ಟೇ ಜನಪ್ರಿಯ. ಸಬ್ ಟಿ.ವಿ. ಯ `ಟೀವಿ ಬೀವಿ ಔರ್ ಮೈ’ ಶೂಟಿಂಗ್ ಮಧ್ಯೆ ಶೃತಿ ನುಡಿದದ್ದು :
ಯಾವ ಶೋ ನಿಮ್ಮ ಪರಿಚಯ ಮಾಡಿಸಿತು?
ನನ್ನ ಪಾಪ್ಯುಲರ್ ಶೋ ಎಂದರೆ ಶರಾರತ್. ವೀಕ್ಷಕರ ಒತ್ತಾಯದ ಮೇರೆಗೆ ಇದರ ಕಂತುಗಳನ್ನು ಹೆಚ್ಚಿಸಲಾಯಿತು. ಇದರ ಯಶಸ್ಸಿನ ನಂತರ ನಾನು ಹಾಸ್ಯನಟಿ ಎಂದು ಹೆಸರು ಗಳಿಸಿದೆ.
ನಟನೆಯಲ್ಲಿ ನೀವು ಕಾಮಿಡಿಯನ್ನೇ ಆರಿಸಿಕೊಂಡದ್ದೇಕೆ?
ಡಿ.ಡಿ.ಯ `ಮಾನ್’ ನನ್ನ ಮೊದಲ ಧಾರಾವಾಹಿ. ಆಗ ಮನರಂಜನೆಗೆ ಇದೊಂದೇ ಮೂಲವಾಗಿತ್ತು. `ಶರಾರತ್’ನಲ್ಲಿ ಆಫರ್ ಬಂದಾಗ ನಾನು ಈ ವಿಭಾಗ ಆರಿಸಿಕೊಂಡೆ. ಇದಾದ ಮೇಲೆ ನಾನು ಕಾಮಿಡಿ ವಿಭಾಗದಲ್ಲೇ ಉಳಿದುಬಿಟ್ಟೆ.
ಸೋಶಿಯಲ್ ಮೀಡಿಯಾದಲ್ಲೂ ನೀವು ಸಾಕಷ್ಟು ಜನಪ್ರಿಯ……
ಮೋದಿಯವರ ಕುರಿತು ಟ್ವೀಟ್ ಮಾಡಿದ ವಿಷಯ 2 ವರ್ಷ ಹಳೆಯದಾಯಿತು. ನೀವು ಸೋಶಿಯಲ್ ಮೀಡಿಯಾದಲ್ಲಿ ಏನೇ ಹೇಳಿದರೂ ಅದಕ್ಕೆ ಪ್ರತಿಕ್ರಿಯೆ ಸ್ವೀಕರಿಸಲು ಸದಾ ಸಿದ್ಧರಾಗಿರಿ. ನಿಮ್ಮ ಮಾತನ್ನು ಸಮರ್ಥಿಸುವ ಹಕ್ಕು ನಿಮಗಿರುವಂತೆ, ಅದೇ ರೀತಿ ನಿಮ್ಮ ಮಾತನ್ನೂ ಖಂಡಿಸುವ ಹಕ್ಕೂ ಇತರರಿಗಿರುತ್ತದೆ.
ಮದುವೆ ಮಗು ನಂತರ ಏನಾದರೂ ವ್ಯತ್ಯಾಸ?
ಜೀವನದ ನಿಜವಾದ ತೃಪ್ತಿಯನ್ನು ನಾನು ತಾಯಿ ಆದ ನಂತರವೇ ಕಂಡುಕೊಂಡದ್ದು. ಹಿಂದೆಲ್ಲ ನಾನು ಒಂದಿಷ್ಟೂ ಯೋಚಿಸದೆ 2-3 ಶಿಫ್ಟ್ ಗಳ ಕೆಲಸ ಒಪ್ಪಿಕೊಳ್ಳುತ್ತಿದ್ದೆ. ಆದರೆ ಈಗ…. ಹೊಸ ಆಫರ್ಸ್ ಬಂದಂತೆ ಯಾವ ರೀತಿ ಕೆಲಸ, ಮಗಳು ಎರಡನ್ನೂ ನಿಭಾಯಿಸುವುದು ಎಂದು 2-2 ಸಲ ಯೋಚಿಸುತ್ತೇನೆ. ನನಗೆ ನನ್ನ ಪತಿ, ಅತ್ತೆ ಮಾವಂದಿರ ಹೆಚ್ಚಿನ ಸಪೋರ್ಟ್ ಇರುವುದರಿಂದ ಮತ್ತೆ ನಾನು ಕಿರುತೆರೆಗೆ ಬರುವಂತಾಯಿತು.