ಐಂದ್ರಿತಾ ಖಡಕ್‌ ಮಾತು

ಮೊದಲೆಲ್ಲ ಪತ್ರಕರ್ತರು ಏನೇ ಪ್ರಶ್ನೆ ಕೇಳಿದರೂ ತಾರೆಯರು  ಬಹಳ ಸಮಜಾಯಿಷಿ ಉತ್ತರ ನೀಡಿ ಎಲ್ಲಿಯೂ ಕಾಂಟ್ರೊವರ್ಸಿಗೆ ಸಿಕ್ಕಿ ಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸುತ್ತಿದ್ದರು. ಕಾಲ ಬದಲಾದಂತೆ ತಾರೆಯರೂ ಬದಲಾದರು. ಟಾಕ್‌ಟೈಮ್ ನಲ್ಲಿ ಅಕುಲ್ ಕೇಳೋ ಎಲ್ಲ ಪ್ರಶ್ನೆಗಳಿಗೂ ನೇರವಾಗಿ ದಿಟ್ಟವಾಗಿ ಉತ್ತರ ಕೊಡುತ್ತಾರೆ. ಇತ್ತೀಚೆಗೆ ಐಂದ್ರಿತಾ ರೈಗೆ ಕೇಳಲಾದ ರಾಪಿಡ್‌ ಫೈರ್‌ ಫ್ರಶ್ನೆಗಳನ್ನು ಅಷ್ಟೇ ಕೂಲಾಗಿ ಎದುರಿಸಿ ಉತ್ತರ ಕೊಟ್ಟಿದ್ದಳು. ಓವರ್‌ರೇಟೆಡ್‌ ತಾರೆಯರು ಎಂದಾಗ ಪಾರೂಲ್‌ ಯಾದವ್ ಅಂದಳು. ಬಸ್‌ ಡ್ರೈವರನ್ನು ಯಾರಿಗೆ ಹೋಲಿಸ್ತೀಯಾ ಎಂದಾಗ ಪ್ರಜ್ವಲ್ ದೇವರಾಜ್‌. ಏಕೆಂದರೆ ಅವನು ಈಸಿಯಾಗಿ ಹುಡುಗಿಯರನ್ನು ಪಿಕಪ್‌ ಮಾಡ್ತಾನೆ ಅಂದ್ಲು. ರಮ್ಯಾ ಜೊತೆ ಏಕೆ ಮಾತಾಡೋದಿಲ್ಲ ಎಂದು ಕೇಳಿದಾಗ ರಮ್ಯಾ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಆದರೂ ಆಕೆ ಬಗ್ಗೆ ದ್ವೇಷವಿಲ್ಲ. ಎದುರಿಗೆ ಬಂದ್ರೆ ಮಾತಾಡಿಸ್ತೀನಿ ಅಂದ್ಲು. ಇಂತಹ ಹಲವಾರು ಬೆಂಕಿ ಪ್ರಶ್ನೆಗಳಿಗೆ ಐಂದ್ರಿತಾ ಉತ್ತರಿಸಿ ಹ್ಯಾಂಪರ್‌ ಗೆದ್ದುಕೊಂಡು ಹೋಗಿದ್ದಳು.

ಶ್ರದ್ಧಾಳಿಗೆ ಲಕ್ಕೋ ಲಕ್ಕು!

`ಯೂಟರ್ನ್‌’ ಚಿತ್ರದಲ್ಲಿ ನಟಿಸಿದ್ದೇ ತಡ ಶ್ರದ್ಧಾ ಶ್ರೀನಾಥ್‌ ಹಿಂತಿರುಗಿ ನೋಡಿದ್ದೇ ಇಲ್ಲ. ಅವಕಾಶಗಳು ಮೇಲಿಂದ ಮೇಲೆ ಬರುತ್ತಲೇ ಇದೆ. ಮಣಿರತ್ನಂ ಚಿತ್ರದಲ್ಲಿ ನಟಿಸಿ ಬಂದ ಮೇಲಂತೂ ತಾರಾ ಮೌಲ್ಯ ಇನ್ನೂ ಹೆಚ್ಚಾಯಿತು. ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿಯಾಗಿ ಓಡುತ್ತಿರುವ `ಆಪರೇಶನ್‌ ಅಲಮೇಲಮ್ಮ’ ಚಿತ್ರದಲ್ಲಿ ಟೀಚರ್‌ ಪಾತ್ರದಲ್ಲಿ ಶ್ರದ್ಧಾ ಸಾಕಷ್ಟು ಗಮನ ಸೆಳೆದಳು. `ಯೂಟರ್ನ್‌’ ಚಿತ್ರದಲ್ಲಿ ಪತ್ರಕರ್ತೆಯಾಗಿ ಸರಳವಾಗಿ ಕಾಣಿಸಿಕೊಂಡಿದ್ದ ಶ್ರದ್ಧಾ ಇತ್ತೀಚೆಗೆ ಗ್ಲಾಮರಸ್‌ ತಾರೆಯಾಗಿ ಮಿಂಚುತ್ತಿದ್ದಾಳೆ. ಅಲಮೇಲಮ್ಮ ಚಿತ್ರದಲ್ಲಿ ಪ್ರಮೋಷನ್‌ ಹಾಡಿಗಾಗಿ ಡ್ಯಾನ್ಸ್ ಕೂಡಾ ಮಾಡಿರುವ ಶ್ರದ್ಧಾಳಿಗೆ ಉತ್ತಮ ಭವಿಷ್ಯವಿದೆ ಎಂದು ಸ್ಯಾಂಡಲ್ ವುಡ್‌ ಹೇಳುತ್ತಿದೆ.

ರಾಜುಗೆ ಕಿಚ್ಚ ಸಾಥ್

ಫಸ್ಟ್ ರಾಂಕ್‌ ರಾಜು ಮೂಲಕ ಎಲ್ಲರ ಗಮನ ಸೆಳೆದಿದ್ದ ಗುರುನಂದನ್‌ ಇದೀಗ `ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆ ಕನ್ನಡದ ಜನಪ್ರಿಯ ಸ್ಟಾರ್‌ ಕಿಚ್ಚ ಸುದೀಪ್‌ ಗೆಸ್ಟ್ ಆಗಿ ಬಂದರೂ ದೊಡ್ಡ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಫ್ಟರ್‌ ಇಂಟರ್‌ವೆಲ್‌ನಲ್ಲಿ ಬರುವ ಸುದೀಪ್‌ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಕ್ಕಾಗಿ ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಈಗ್‌ಟನ್‌ ರೆಸಾರ್ಟ್‌ನಲ್ಲಿ ಚಿತ್ರೀಕರಣ ನಡೆದಿದೆ. ಕೆ.ಎ. ಸುರೇಶ್‌ ನಿರ್ಮಾಣದ ನರೇಶ್‌ಕುಮಾರ್‌ ನಿರ್ದೇಶನದ ಈ ಚಿತ್ರಕ್ಕಾಗಿ ಸುದೀಪ್‌ ಐದು ದಿನಗಳ ಕಾಲ್ ಶೀಟ್‌ ಕೊಟ್ಟಿದ್ದಾರೆ. ಹಗಲು ರಾತ್ರಿ ಚಿತ್ರೀಕರಣ ನಡೆಯುತ್ತಿದೆ. ಆರಂಭದಲ್ಲಿ ಗೆಸ್ಟ್ ರೋಲ್ ಅಂತ ಸುದ್ದಿಯಾಗಿದ್ದರು. ಹೀರೋಗೆ ಸ್ಛೂರ್ತಿ ತುಂಬುವಂತಹ ವಿಶೇಷವಾದ ಪಾತ್ರ ಸುದೀಪ್‌ ಅವರದಾಗಿರುತ್ತೆ ಎಂದು ತಿಳಿದುಬಂದಿದೆ.

ಹೊಡಿ ಒಂಬತ್…….

ಭಟ್ರು, ಗಣೇಶ್‌ ಕಾಂಬಿನೇಶನ್‌ಗಾಗಿ ಪ್ರೇಕ್ಷಕರು ಬಹಳ ವರ್ಷಗಳಿಂದ ಕಾಯುತ್ತಲೇ ಇದ್ದರು. ಇಬ್ಬರೂ ಸೇರಿ ಒಂದು ಚಿತ್ರ ಮಾಡಬೇಕು ಅಂತ ಎಷ್ಟೇ ಬಾರಿ ಅಂದುಕೊಂಡರೂ ಅವರವರ ಚಿತ್ರಗಳಲ್ಲಿ ಬಿಜಿಯಾಗಿರುತ್ತಿದ್ದರು. ಕಡೆಗೂ ಕಾಲ ಕೂಡಿ ಬಂತು. ಮಳೆ ಹುಡುಗನೊಂದಿಗೆ ಗಾಳಿಪಟ ಹಾರಿಸಲು ಭಟ್ರು `ಮುಗುಳುನಗೆ’ ಅಂತ ಸಿನಿಮಾ ತಯಾರಿಸಿಯೇ ಬಿಟ್ಟರು. ಈ ಚಿತ್ರದಲ್ಲಿ ಗಣೇಶ್‌ ವಿಶೇಷ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಮುಗುಳುನಗೆ’ ಚಿತ್ರದಲ್ಲಿ ಇಬ್ಬರು ನಾಯಕಿಯರು. ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳು ಈಗಾಗಲೇ ಜನಪ್ರಿಯವಾಗಿದೆ. `ಹೊಡಿ ಒಂಬತ್……’ ಹಾಡಂತೂ ಫೇಮಸ್‌ ಆಗಿದೆ. ಭಟ್ರು ಬರೆದಿರೋ ಹಾಡನ್ನು ವಿಜಯ್‌ಪ್ರಕಾಶ್‌ ಸೊಗಸಾಗಿ ಹಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬಳಸುವ ಹೊಡಿ ಒಂಬತ್‌ ವರ್ಡ್‌ ಬಹಳ ದಿನಗಳಿಂದ ಭಟ್ಟರನ್ನು ಕಾಡುತ್ತಿತ್ತಂತೆ. ಈಗ ಎಲ್ಲಿ ನೋಡಿದ್ರೂ, ಕೇಳಿದ್ರೂ ಹೊಡಿ ಒಂಬತ್‌ ಅತ್ಯಂತ ಜನಪ್ರಿಯ ಹಾಡಾಗಿದೆ.

ಕಾಫಿ ತೋಟದಲ್ಲೇನಿದೆ…..?

ನಿರ್ದೇಶಕ ಟಿ.ಎನ್‌. ಸೀತಾರಾಮ್ ರವರ ಚಿತ್ರವೆಂದರೆ ಸಹಜವಾಗಿ ಎಲ್ಲರ ಗಮನ ಸೆಳೆಯುವುದೇ ಇರುವುದಿಲ್ಲ. ಈ ಬಾರಿ ಇವರು ಕೈಗೆತ್ತಿಕೊಂಡಿರೋದು ಹಾರರ್‌ ಸಬ್ಜೆಕ್ಟ್. ನಿಗೂಢ ಕಥಾ ಹಂದರವನ್ನೊಳಗೊಂಡಿರುವ ಈ ಚಿತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಕುತೂಹಲ ಕೆರಳಿಸಲಿದೆ ಎಂದು ಹೇಳಲಾಗಿದೆ. ಈ ಚಿತ್ರದ ಟೀಸರ್‌ ಈಗಾಗಲೇ ಸಾಕಷ್ಟು ವೀಕ್ಷಕರನ್ನು ಪಡೆದು ದಾಖಲೆ ಮಾಡಿದೆ. `ಕಾಫಿ ತೋಟ’ ಅಂದಾಕ್ಷಣ ಹಸಿರುಬೆಟ್ಟ, ಸುಂದರವಾದ ಲೊಕೇಶನ್‌ ಕಾಫಿ, ತೆಂಗಿನ ತೋಟಗಳು ಎಲ್ಲ ಮಲೆನಾಡಿನ ಸೊಗಡನ್ನು ಬಿಂಬಿಸುತ್ತವೆ. ಅವೆಲ್ಲವನ್ನೂ ತಮ್ಮ ಕ್ಯಾಮೆರಾದಲ್ಲಿ ಅಶೋಕ್‌ ಕಶ್ಯಪ್‌ ಸೆರೆಹಿಡಿದಿದ್ದಾರೆ. ಕೋರ್ಟ್‌ ಅಂದಾಕ್ಷಣ ಸಿ.ಎಸ್‌.ಪಿ. ನೆನಪಾಗುತ್ತಾರೆ. ಸೀತಾರಾಂ ಒಬ್ಬ ಉತ್ತಮ ಕಲಾವಿದರೂ ಆಗಿರೋದ್ರಿಂದ ಈ ಚಿತ್ರದಲ್ಲೂ ಅವರು ಕಪ್ಪು ಕೋಟು ಧರಿಸಿದ್ದಾರೆ. ರಘುಮುಖರ್ಜಿ, ನಾಯಕಿ ರಾಧಿಕಾ ಚೇತನ್‌, ಸಂಯುಕ್ತಾ ಹೊರನಾಡು, ಸುಧಾ ಬೆಳವಾಡಿ, ಸುಂದರ್‌ರಾಜ್‌ ಮುಂತಾದ ದೊಡ್ಡ ತಾರಾಬಳಗವೇ ಚಿತ್ರಕ್ಕಿದೆ.

ಸ್ವಾತಿಗೆ ಗಂಗಾ ಯೋಗ

ಚಿತ್ರರಂಗ ಸಮುದ್ರವಿದ್ದಂತೆ, ಯಾರು ಬೇಕಾದರೂ ಜಿಗಿಯಬಹುದು. ಆದರೆ ಈಜಲು ಗೊತ್ತಿರಬೇಕು ಎಂಬ ಮಾತಿದೆ. ಕೆಲವು ಸಲ ಈಜಲು ಬರುತ್ತಿದ್ದರೂ ಮುಂದೆ ಸಾಗಲು ಆಗೋದಿಲ್ಲ. ಹಾಗಂತ ಧೃತಿಗೆಡದೆ ಯಾರೂ ಸುಮ್ಮನಿರುವುದಿಲ್ಲ. ಮರಳಿ ಯತ್ನವ ಮಾಡು ಅಂತ ಈಜುತ್ತಲೇ ಇರುತ್ತಾರೆ. ಸುಮಾರು ಹತ್ತು ಹನ್ನೆರಡು ಸಿನಿಮಾಗಳಲ್ಲಿ ನಟಿಸಿದ್ದರೂ ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದ ನಟಿ ಸ್ವಾತಿ ಇದ್ದಕ್ಕಿದ್ದಂತೆ ಕಿರುತೆರೆಯಲ್ಲಿ ದಿಢೀರ್‌ ಯಶಸ್ಸು ಕಾಣುತ್ತಿದ್ದಾಳೆ. ಇದೆಲ್ಲ ಶುರುವಾಗಿದ್ದು `ಗಂಗಾ’ ಸೀರಿಯಲ್ ಮೂಲಕ. ಒಂದು ಸ್ಪೆಷಲ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡ ಸ್ವಾತಿ ಎಲ್ಲೇ ಹೋದರೂ ಮೇಡಂ ನೀವು `ಗಂಗಾ’ ಧಾರಾವಾಹಿಯಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದೀರಾ ಅಂತ ಪ್ರಶಂಸೆ ಮಾಡ್ತಾರಂತೆ. ಸಿನಿಮಾದಲ್ಲಿ ನಟಿಸುವ ಆಸಕ್ತಿ ಇದ್ದರೂ ಕೆಲವು ಸಲ ಅಪ್ರೋಚ್‌ ಸರಿ ಇರೋದಿಲ್ಲ, ಒಂದೆರಡು ಚಿತ್ರಗಳು ಡಿಸ್ಕಶ್‌ನಲ್ಲಿದೆ. ಟೈಮ್ ತಗೊಳ್ಳುತ್ತೆ ಎಂದು ಸ್ವಾತಿ ಹೇಳ್ತಾಳೆ. ಆದರೆ ಸ್ವಾತಿಗೆ ಹೆಚ್ಚು ಆಫರ್ಸ್‌ ಬರ್ತಿರೋದು ಕಿರುತೆರೆಯಿಂದಲೇ ಅಂತೆ. ಇದೆಲ್ಲದರ ಜೊತೆಗೆ ತಮಿಳು ಚಿತ್ರವೊಂದಕ್ಕೆ ಸಹಿ ಹಾಕಿದ್ದಾಳೆ. ಮುಹೂರ್ತ ಸದ್ಯದಲ್ಲೇ ಆಗಲಿದೆಯಂತೆ.

ಡ್ಯಾನ್ಸಿಂಗ್‌ ಕ್ವೀನ್‌

ಖ್ಯಾತ ಸಂಗೀತ ಸಂಯೋಜಕ ರಘು ದೀಕ್ಷಿತ್‌ರ ಪತ್ನಿ ಸುಂದರ ನೃತ್ಯಗಾರ್ತಿ ಮಯೂರಿ ವಿಸ್ತಾರ ಅಪಾರವಾದದ್ದು. ನೃತ್ಯ ಸಂಯೋಜಕಿ ಕೂಡಾ ಆಗಿರುವ ಮಯೂರಿ ಡ್ಯಾನ್ಸಿಂಗ್‌ ಕ್ವೀನ್‌ ಜಡ್ಜ್ ಆಗಿಯೂ ಸಾಕಷ್ಟು ಗಮನ ಸೆಳೆದಿದ್ದಾರೆ. ಅಮಿತಾಭ್‌ ಅವರ ಹುಟ್ಟುಹಬ್ಬ ಸಂಭ್ರಮದಂದು ಹರಿವಂಶರಾಯ್‌ ಬಚ್ಚನ್‌ರವರ ಕಾರ್ಯಗಳಿಗೆ ನೃತ್ಯರೂಪಕ  ಪ್ರದರ್ಶನ ನೀಡಿದ್ದಾಗ ಸ್ವತಃ ಅಮಿತಾಭಾ ಕಾರ್ಯಕ್ರಮದ ಕಡೆಗೆ ಮಯೂರಿಯನ್ನು ಕರೆದು, ನೀವು ನನ್ನ ಬಾಬೂಜಿಯ ನೆನಪಿನಂಗಳಕ್ಕೆ ಕರ್ಕೊಂಡು ಹೋದ್ರಿ ಎಂದು ಪ್ರಶಂಸಿಸಿದ್ದರಂತೆ. ಮಯೂರಿಗೆ ದೀಪಿಕಾ ಪಡುಕೋಣೆಗೂ ನೃತ್ಯ ಸಂಯೋಜನೆ ಮಾಡುವ ಆಸೆ ಇದೆಯಂತೆ. ದೀಪಿಕಾ ಡ್ಯಾನ್ಸರ್‌ ಅಲ್ಲದ್ದಿದರೂ ಬಹಳ ಹಾರ್ಡ್‌ವರ್ಕ್‌ ಮಾಡಿ `ಬಾಜಿ ರಾವ್ ಮಸ್ತಾನಿ’ ಚಿತ್ರದಲ್ಲಿ ಉತ್ತಮ ನೃತ್ಯ ಪ್ರದರ್ಶನ ನೀಡಿದ್ದಾರೆ. ನಾನು ಆಕೆಗೆ ಕೊರಿಯಾಗ್ರಫಿ ಮಾಡಿದರೆ ಹೇಗಿರಬಹುದೆಂಬ ಕುತೂಹಲ ಇದೆ ಎಂದು ಹೇಳಿಕೊಂಡಿದ್ದಾರೆ. ಆ ಕಾಲ ಬೇಗ ಕೂಡಿಬರಲಿ.

ಮ್ಯಾಗಿ ಆದ ಮಿಸ್‌ ವಾಗ್ಲೆ

ಮಹಿಳಾ ಪ್ರಧಾನ ಚಿತ್ರಗಳ ಮೂಲಕ ತನ್ನನ್ನು ಹೆಚ್ಚು ಗುರುತಿಸಿಕೊಂಡಿರುವ `ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಂತರ ಸುಕೃತಾ `ಮೇಘಾ ಆಲಿಯಾಸ್‌ ಮ್ಯಾಗಿ’ ಹೆಸರಿನ ಚಿತ್ರದಲ್ಲಿ ವಿಶೇಷ ಲುಕ್‌ನೊಂದಿಗೆ ಕಾಣಿಸಲಿದ್ದಾಳೆ. ರಗಡ್‌ ಲುಕ್ಸ್ ಇರುವ ಸುಕೃತಾಳದು ಟಾಮ್ ಬಾಯ್‌ ರೀತಿಯ ಪಾತ್ರ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೆ ಈ ಸಿನಿಮಾದ ಟೀಸರ್‌ ರಿಲೀಸ್‌ ಆಗಿದ್ದು, ಸುಕೃತಾಳ ಖಡಕ್‌ಲುಕ್‌ ಎಲ್ಲರ ಗಮನ ಸೆಳೆಯುವಂತಿದೆ. ವಿಶಾಲ್ ಪುಟ್ಟಣ್ಣ ನಿರ್ದೇಶನದ ಈ ಸಿನಿಮಾದಲ್ಲಿ ಮೇಘಾ ಮ್ಯಾಗಿ ಹೇಗೆ ಆಗುತ್ತಾಳೆಂಬುದೇ ಕಥೆಯ ವಿಶೇಷವಂತೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ