ಕಾವ್ಯಶ್ರೀ ಕಲಾವಿದರ ಕುಟುಂಬದಿಂದ ಬಂದಿರೋದ್ರಿಂದ ನಟನೆ ನೀರು ಕುಡಿದಷ್ಟೇ ಸುಲಭ. ಮಾತಾಡುವುದರಲ್ಲೂ ಚಿನಕುರಳಿ, ಯಾವುದೇ ಕ್ಷೇತ್ರವಿರಲಿ, ಮುನ್ನುಗ್ಗುವ ಹುಮ್ಮಸ್ಸು. ಈಗಾಗಲೇ ನಟಿಯಾಗಿ, ನಿರ್ಮಾಪಕಿಯಾಗಿ, ಉತ್ತಮ ಡ್ಯಾನ್ಸರ್‌ ಆಗಿ ಪ್ರೂವ್‌ ಮಾಡಿರುವ ಕಾವ್ಯಶ್ರೀ ಹಿರಿಯ ಕಲಾವಿದ ನಾಗೇಂದ್ರಶ್ರೀರವರ ಪುತ್ರಿ. ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿ ಬಂದಿರುವ ಕಾವ್ಯಾ ಇತ್ತೀಚೆಗೆ `ಡೇವಿಡ್‌’ ಎನ್ನುವ ಹೊಸ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಇದೇ ಸಂದರ್ಭದಲ್ಲಿ ಮಾತನಾಡುತ್ತಾ `ಡೇವಿಡ್‌’ ಚಿತ್ರದಲ್ಲಿ ನನ್ನದು ಹೊಸ ರೀತಿಯ ಪಾತ್ರ. ಒಂದು ಕೊಲೆ ಸುತ್ತ ನಡೆಯುವ ಕಥೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್‌ ಅಂಶಗಳು ಇವೆ. ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದಂಥ ಎ. ಭಾರ್ಗವ್ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂದು `ಡೇವಿಡ್‌’ ಬಗ್ಗೆ ಡೀಟೇಲ್ಸ್ ಕೊಟ್ಟಳು.

ಕಾವ್ಯಾಳ ಕಿರು ಪರಿಚಯ

ನಾನು ಮೂಲತಃ ಡ್ಯಾನ್ಸರ್‌. ಭರತನಾಟ್ಯಂನಲ್ಲಿ ಜ್ಯೂನಿಯರ್‌, ಸೀನಿಯರ್‌ ಎಗ್ಸಾಮ್ ಕಟ್ಟಿ ಪರಿಣಿತಿ ಹೊಂದಿದ್ದೇನೆ. ಅದಾದ ಮೇಲೆ ನಿರೂಪಕಿಯಾಗಿ ನಂತರ ಒಂದಷ್ಟು ಧಾರಾವಾಹಿಗಳಲ್ಲೂ ನಟಿಸಿದೆ. ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಾರಿ ಗೆಲುವನ್ನು ಪಡೆದಿದ್ದೇನೆ. ಇಂಡಿಯನ್‌ ಮಲ್ಟಿ ಟ್ಯಾಲೆಂಟೆಡ್‌ ಗರ್ಲ್ ಅಂತ ಟೈಟಲ್ ಗೆದ್ದೆ. ಅದರ ಮುಖ್ಯ ಅತಿಥಿಯಾಗಿ ಶಾರೂಖ್‌ಖಾನ್‌, ದೀಪಿಕಾ ಪಡುಕೋಣೆ ಬಂದಿದ್ದರು. ಶಾರೂಖ್‌ರಿಂದ ಟ್ರೋಫಿ ಪಡೆದದ್ದೇ ಒಂದು ಸಂಭ್ರಮದ ಕ್ಷಣವಾಗಿತ್ತು. ಅದಾದ ನಂತರ ನಾನು ನಟಿಸಿದ್ದು `ಮಿಸ್ಟರ್‌  ಮಿಸೆಸ್‌ ರಾಮಚಾರಿ’ ಚಿತ್ರದ ಮುಖ್ಯ ಪಾತ್ರದಲ್ಲಿ. ನಂತರ `ಮುಕುಂದ ಮುರಾರಿ’ ಚಿತ್ರದಲ್ಲಿ ನಟಿಸಿದೆ.

ತಮಿಳಿನಲ್ಲಿ ಖ್ಯಾತ ನಿರ್ದೇಶಕ ಬಾಲಾರವರ `ತಾರೈತಪಟ್ಟೈ’ ಚಿತ್ರದಲ್ಲಿ ನಟಿಸಿ ತುಂಬಾನೇ ಉತ್ತಮ ಪ್ರಶಂಸೆ ಪಡೆದುಕೊಂಡೆ. ಅದಾದ ಮೇಲೆ ಎರಡು ಮೂರು ತಮಿಳು ಚಿತ್ರಗಳಲ್ಲಿ ನಟಿಸಿದೆ. ಈಗ ಕನ್ನಡದಲ್ಲಿ `ಡೇವಿಡ್‌’ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದೀನಿ. ತಮಿಳಿನಲ್ಲಿ `ವಂಡಿ’ ಎನ್ನುವ ಸಿನಿಮಾ ಮುಗಿಸಿದ್ದೀನಿ. ಇದೆಲ್ಲದರ ಜೊತೆಗೆ ಜನಪ್ರಿಯ ಚಾನೆಲ್ಲೊಂದಕ್ಕೆ ಕಿರುಚಿತ್ರ ನಿರ್ಮಿಸುತ್ತಿದ್ದೇನೆ.

ನಿಮ್ಮ ತಂದೆ ನಟರಾಗಿದ್ದರಿಂದ ಬಹಳ ಸುಲಭವಾಗಿ ಅವಕಾಶಗಳು ಸಿಕ್ಕಿಬಿಡುತ್ತೆ ಅಂತ ಜನ ಅಂದ್ಕೊಂಡಿದ್ದಾರೆ. ನೀನೇನು ಹೇಳ್ತೀಯಾ?

ಕಿರುತೆರೆ, ಹಿರಿತೆರೆ ಎರಡರಲ್ಲೂ ಅವರು ಹೆಸರು ಮಾಡಿದ್ರೂ ಎಲ್ಲರೂ ಅಂದುಕೊಂಡ ಹಾಗೆ ಅವರ ಇನ್‌ಫ್ಲೂಯೆನ್ಸ್ನಿಂದ ಖಂಡಿತ ಬಂದಿಲ್ಲ. ಶಾಲಾ, ಕಾಲೇಜುಗಳಲ್ಲಿ ನಾನು ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಹಿಸುತ್ತಲೇ ಬಂದಿದ್ದೆ. ದೊಡ್ಡ ದೊಡ್ಡ ಕೊರಿಯಾಗ್ರಾಫರ್‌ ಜೊತೆ ಶೋಗಳನ್ನು ಕೊಟ್ಟಿದ್ದೇನೆ. ಅವಾರ್ಡ್‌ ಸಮಾರಂಭಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ತಿದ್ದೆ. ನನ್ನ ಸ್ವಂತ ಪ್ರಯತ್ನದಿಂದ ನಾನಿವತ್ತು ಚಿತ್ರರಂಗದಲ್ಲಿ ಒಂದಷ್ಟು ಹೆಸರು ಮಾಡಿದ್ದೇನೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ.

ಕನ್ನಡ ಸಿನಿಮಾ ರಂಗದಿಂದ ಪ್ರೋತ್ಸಾಹ ಸಿಗುತ್ತಿದೆಯಾ?

ಈಗ ಚಿತ್ರರಂಗ ತುಂಬಾನೇ ಬದಲಾಗಿದೆ. ಮೊದಲಾದರೆ ಹೊರಗಡೆಯಿಂದ ನಟಿಯರನ್ನು ಕರೆತರುತ್ತಾರೆ ಅಂತ ದೂಷಿಸುತ್ತಿದ್ದರು. ಈಗ ಕನ್ನಡದಲ್ಲಿ ಕನ್ನಡದ ಹುಡುಗಿಯರದೇ ದರ್ಬಾರು ಅಂತ ಖುಷಿಯಿಂದ ಹೇಳಬಹುದು. ಪರಭಾಷಾ ನಟಿಯರು ಬರಬಾರದು ಅಂತಲ್ಲ. ಆದರೆ ಕನ್ನಡದ ಪ್ರತಿಭೆಗಳಿಗೆ ಮೊದಲ ಆದ್ಯತೆ ನೀಡಿದರೆ ಚೆನ್ನಾಗಿರುತ್ತೆ. ಹೊಸಬರು ಹೆಚ್ಚು ಹೆಚ್ಚಾಗಿ ಸಿನಿಮಾ ಮಾಡ್ತಿರೋದ್ರಿಂದ ಹೊಸತನ ಎದ್ದು ಕಾಣ್ತಿದೆ. ಕನ್ನಡದ ಹುಡುಗಿಯರಿಗೂ ಸಾಕಷ್ಟು ಅವಕಾಶಗಳು ಸಿಗುತ್ತಿವೆ.  ರಶ್ಮಿಕಾ ಮಂದಣ್ಣ, ಆಶಿಕಾ, ರಾಧಿಕಾ ಪಂಡಿತ್‌, ಶ್ರದ್ಧಾ ಇವರೆಲ್ಲ ಕನ್ನಡದ ಹುಡುಗಿಯರೇ…. ಟಾಪ್‌ನಲ್ಲಿದ್ದಾರೆ! ಆದರೆ ಕೆಲವರಿಗೆ ಒಂದೊಂದ್ಸಲ ಪ್ರತಿಭೆಗೆ ತಕ್ಕ ಪಾತ್ರ ಸಿಗೋದಿಲ್ಲ. ಒಂದು ವೇಳೆ ನಾನೇನಾದ್ರೂ ಸಣ್ಣಪುಟ್ಟ ಪಾತ್ರ ಮಾಡಿಬಿಟ್ರೆ ಅದಕ್ಕೆ ಬ್ರಾಂಡ್‌ ಮಾಡಿಬಿಡ್ತಾರೆ. ಪರಭಾಷೆಗಳಲ್ಲಿ ಸಣ್ಣ ಪಾತ್ರದಲ್ಲಿ ಮಿಂಚಿಬಿಟ್ಟರೆ ಸಾಕು ಅವರ ಪ್ರತಿಭೆ ಗುರುತಿಸಿ ದೊಡ್ಡ ಪಾತ್ರ ಕೊಡ್ತಾರೆ. ಕಿಶೋರ್‌ ಅವರನ್ನು `ಕಬಾಲಿ’ ಚಿತ್ರದಲ್ಲಿ ಮೇನ್‌ ಖಳನಾಗಿ ತೋರಿಸಿದ್ರು. ಇತ್ತೀಚೆಗೆ ಅಚ್ಯುತ್‌ರಾವ್‌ರವರು ತಮಿಳು ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ಮಾಡಿ ಸಾಕಷ್ಟು ಗಮನಸೆಳೆದಿದ್ದಾರೆ. ನಮ್ಮಲ್ಲೂ ಪ್ರತಿಭೆ ಗುರುತಿಸುವಂತ ಕೆಲಸ ಆಗಬೇಕಿದೆ. ಸ್ಟೀರಿಯೋಟೈಪ್‌ ಅನ್ನೋದು ಬಿಟ್ಟರೆ, ನಮ್ಮ ರಂಗದಲ್ಲಿ ಹೊಸಬರನ್ನು ಪ್ರೋತ್ಸಾಹಿಸುವುದರಲ್ಲಿ ಸದಾ ಮುಂದಿದೆ.

ಯಾವ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಅಂತ ಆಸೆ ಇದೆ?

ಸಿನಿಮಾರಂಗದಲ್ಲಿ ಹೊಸತನ ತಂದಿರೋವಂಥ ಎಲ್ಲರ ಜೊತೆ ಸಿನಿಮಾ ಮಾಡುವಾಸೆ. ರಕ್ಷಿತ್‌ ಶೆಟ್ಟಿ, ಪವನ್‌ಕುಮಾರ್‌ ಇನ್ನೂ ಅನೇಕ ಪ್ರತಿಭಾವಂತ ತಂಡಗಳಿವೆ. ಅವರ ಚಿತ್ರಗಳಲ್ಲಿ ನಟಿಸುವಾಸೆ. ಹಾಗೆಯೇ ನಿರ್ದೇಶಕ ಸಂತೋಷ್‌ರವರನ್ನು ಕೂಡಾ ನಾನು ತುಂಬಾ ಇಷ್ಟಪಡ್ತೀನಿ. ಹೊಸ ಕಾನ್ಸೆಪ್ಟ್ ಗಳ ನಡುವೆ ಅವರು `ರಾಜಕುಮಾರ’ ಚಿತ್ರ ಮಾಡಿ ಇಡೀ ಕುಟುಂಬ ಒಟ್ಟಿಗೆ ಕೂತು ಸಿನಿಮಾ ನೋಡುವಂತೆ ಮಾಡಿ ಯಶಸ್ವಿಯಾಗಿದ್ದಾರೆ.

ಸಿನಿಮಾ ನಿರ್ದೇಶನ ಮಾಡುವಾಸೆ ಇದೆಯಾ?

ಖಂಡಿತ….. ಏಕೆಂದರೆ ನಿರ್ದೇಶನ ಮಾಡೋದು ಬರೀ ಆಸೆಗಲ್ಲ. ಏನಾದ್ರೂ ಹೊಸದನ್ನು ಕೊಡುವ ಉದ್ದೇಶದಿಂದ ಡೈರೆಕ್ಟರ್‌ ಆಗಬೇಕಿದೆ. ಹಾಗೆಯೇ ಸಿನಿಮಾ ನಿರ್ಮಾಣ ಮಾಡೋ ಪ್ಲಾನೂ ಇದೆ. ನಾನೇ ನಿರ್ಮಿಸಿ, ನಿರ್ದೇಶನ ಮಾಡುವಾಗ ಕಲಾವಿದರ ಆಯ್ಕೆಯಲ್ಲಿ ನನಗೆ ಸ್ವಾತಂತ್ರವಿರುತ್ತದೆ. ಆಗ ನಾನು ಪ್ರತಿಭೆಯಿರುವ ಕನ್ನಡದ ಕಲಾವಿದರನ್ನು ಹಾಕಿಕೊಂಡು ಚಿತ್ರ ಮಾಡಬಹುದು. ಶುದ್ಧವಾದ ಮನರಂಜನೆ ಚಿತ್ರ ಮಾಡಬೇಕೆಂಬುದೇ ನನ್ನ ಆಸೆ. ನಾನು ನನ್ನ ಲೈಫ್‌ನಲ್ಲಿ ತುಂಬಾ ಆಸೆಗಳನ್ನಿಟ್ಟುಕೊಂಡಿದ್ದೀನಿ.

ಇನ್ನೇನು ಆಸೆ ಇದೆ?!

ನನಗೆ ರಾಜಕೀಯದಲ್ಲಿ ಏನಾದ್ರೂ ಒಳ್ಳೆ ಕೆಲಸ ಮಾಡ್ಬೇಕು ಅನ್ನೋ ಆಸೆ. ಪಾಲಿಟಿಕ್ಸ್ ಗೆ ಸದ್ಯದಲ್ಲೇ ಎಂಟ್ರಿ ಕೊಡ್ತೀನಿ. ಯುವ ಜನತೆಯ ಪ್ರತಿನಿಧಿಯಾಗಿ ಅವರ ಧ್ವನಿಯಾಗಿ ರಾಜಕೀಯ ರಂಗದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು, ಹಾಗಾಗಿ ನಾನು ಅಂಥಿಂಥ ಪಕ್ಷವನ್ನು ಆಯ್ಕೆ ಮಾಡಿಕೊಳ್ತೀನಿ.

ಯಾವ ಪಕ್ಷ?

ಸ್ವಚ್ಛ ಭಾರತ ಆಂದೋಲನ ಶುರು ಮಾಡಿರುವ ನರೇಂದ್ರ ಮೋದಿ ನನ್ನ ಅಚ್ಚುಮೆಚ್ಚಿನ ನಾಯಕರು. ಹಾಗಾಗಿ ನಾನು ಭಾರತೀಯ ಜನತಾಪಕ್ಷಕ್ಕೆ ಸೇರುತ್ತೇನೆ. ನನಗೆ ಸಮಾಜ ಸೇವೆಯಲ್ಲಿ ತುಂಬಾನೆ ಆಸಕ್ತಿ. ಸ್ವಚ್ಛ ಭಾರತ ಇಂದಿನ ಮಕ್ಕಳನ್ನು ಸಹಾ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವಂತೆ ಮಾಡಿದೆ. ಈಗಿನ ಜನರೇಶನ್‌ ಅದನ್ನು ರೂಢಿಸಿಕೊಳ್ಳುತ್ತಿದೆ. ನಮ್ಮಂಥ ಯುವಜನತೆ ಹೆಚ್ಚಾಗಿ ರಾಜಕೀಯ ರಂಗದಲ್ಲಿ  ಕಾಣಿಸಿಕೊಳ್ಳಬೇಕು. ಉತ್ಸಾಹದಿಂದ ಕೆಲಸ ಮಾಡಬೇಕು. ಈಗಾಗಲೇ ನಾನು ಸ್ವಯಂಪ್ರೇರಿತಳಾಗಿ ಸಾಕಷ್ಟು ಕಡೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಾ ಬಂದಿದ್ದೇನೆ. ನಮ್ಮ ಏರಿಯಾದಲ್ಲಿ ಕಸ ಹಾಕಲು ಡಬ್ಬಗಳನ್ನು ಇಡಬೇಕೆಂದು ನಿರ್ಧರಿಸಿದ್ದೇನೆ. ದೇವರು ನನಗೆ ಎಲ್ಲಾ ಸೌಲಭ್ಯಗಳನ್ನು ಕೊಟ್ಟಿದ್ದಾನೆ. ಆದರೆ ನನ್ನ ವಯಸ್ಸಿನ ಹುಡುಗಿಯರಲ್ಲಿ ಕೆಲವರು ಬಹಳ ಬಡತನದಿಂದ ತಮ್ಮ ಆಸೆಗಳನ್ನೆಲ್ಲ ಬದಿಗೊತ್ತಿ ಏನೂ ಸಾಧಿಸಲಿಲ್ಲವಲ್ಲ ಅಂತ ವ್ಯಥೆ ಪಡುತ್ತಿರುತ್ತಾರೆ. ಅಂಥವರ ಬೆನ್ನೆಲುಬಾಗಿ ನಾನು ನಿಲ್ಲಬೇಕು. ರಾಜಕೀಯದಲ್ಲಿದ್ದುಕೊಂಡೇ ಅಥವಾ ಸಮಾಜಸೇವೆ ಮೂಲಕವಾದರೂ ಅವರಿಗೆ ಸಹಾಯ ಮಾಡಬೇಕೆಂಬುದೇ ನನ್ನ ಆಸೆ. ಹಾಗೆಯೇ ನಾನು ಮದುವೆಯಾಗಲಿ ಬಿಡಲಿ ಒಂದು ಅನಾಥ ಮಗುವನ್ನು ದತ್ತು ಪಡೆದು ಸಾಕಬೇಕೆಂಬ ಆಸೆಯೂ ಇದೆ. ಎಲ್ಲರೂ ಇದೇ ರೀತಿ ಯೋಚಿಸಿದರೆ ಜನಸಂಖ್ಯೆಯೂ ಕಡಿಮೆಯಾಗಬಹುದು. ಅಲ್ವಾ…..!

ಸೋಶಿಯಲ್ ನೆಟ್‌ವರ್ಕ್‌ ಈಗಿನ ಯುವಪೀಳಿಗೆಯನ್ನು ತುಂಬಾ ಆಕರ್ಷಿಸಿಬಿಟ್ಟಿದೆ. ಹಾಗೆಯೇ ದುಷ್ಪರಿಣಾಮ ಕೂಡಾ ಬೀರುತ್ತಿದೆ. ನೀನೇನು ಹೇಳ್ತೀಯಾ?

ಈ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್, ಟ್ವಿಟರ್‌…. ಇವೆಲ್ಲಕ್ಕಿಂತ ಮಿಗಿಲಾದ ಸಾಮಾಜಿಕ ನೈತಿಕತೆ ನಮ್ಮಲ್ಲಿ ಬೆಳೆಯಬೇಕು. ಎಷ್ಟೋ ಜನರಿಗೆ ಕುಡಿಯಲಿಕ್ಕೆ ನೀರು ಸಿಗುತ್ತಿಲ್ಲ. ಯಶ್‌ರವರ ಯಶೋ ಮಾರ್ಗದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರಿಗೆ ನಾನು ತುಂಬಾನೇ ಸಪೋರ್ಟ್‌ ಮಾಡ್ತೀನಿ. ನಾನು ರಾಧಿಕಾಗೆ ಸಾಕಷ್ಟು ಬಾರಿ ಹೇಳಿದ್ದೀನಿ. ಅವಕಾಶ ಸಿಕ್ಕರೆ ನಾನು ಸಹ ಯಶೋ ಮಾರ್ಗದಲ್ಲಿ ಪಾಲ್ಕೊಳ್ಳಲು ಇಷ್ಟ. ಹೀಗೆ ಹೇಳುವ ಕಾವ್ಯಶ್ರೀ ಪಕ್ಕಾ ಆಶಾವಾದಿ ಎಂದು ಅವಳ ಮಾತುಗಳಲ್ಲಿ ಹೇಳಬಹುದು. ಸಿನಿಮಾ, ರಾಜಕೀಯ, ಸಮಾಜ ಸೇವೆ ಎಲ್ಲ ಕ್ಷೇತ್ರಗಳಲ್ಲೂ ಒಳ್ಳೆ ಕೆಲಸ ಮಾಡಲು ಬಯಸುವ ಕಾವ್ಯಾಳ ನೂರಾರು ಆಸೆಗಳೆಲ್ಲ ಈಡೇರಲಿ ಎನ್ನೋಣವೇ!

– ಜಾಗೀರ್‌ದಾರ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ