ಸಿನಿಮಾರಂಗಕ್ಕೆ ಬಂದು ಮೂರು ವರ್ಷಗಳಾಗಿವೆ. ಮಾಡಿದ್ದು ಕಡಿಮೆ ಚಿತ್ರಗಳಾದರೂ ಎಲ್ಲರ ಮನಸ್ಸಿನಲ್ಲಿ ನೆಲೆಯೂರಿರುವ ಸರಳ ಸುಂದರಿ ಮಿಲನಾ ನಾಗರಾಜ್‌. ಪ್ರೀತಮ್ ಗುಬ್ಬಿಯವರ `ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದ ಮೂಲಕ ನಟಿಯಾದ ಮಿಲನಾ ಹಾಸನ ಮೂಲದವಳು. ಚಿಕ್ಕ ವಯಸ್ಸಿನಿಂದಲೇ ಈಜು ಕಲಿತಿದ್ದರಿಂದ ಮೀನಿನಂತೆ ಸದಾ ನೀರಿನಲ್ಲೇ ಇರಲು ಬಯಸುತ್ತಿದ್ದ ಈ ಮಿಲನಾ ಮುಂದೊಂದು ದಿನ ರಾಷ್ಟ್ರೀಯ ಮಟ್ಟದಲ್ಲಿ ಈಜುಗಾರ್ತಿಯಾಗಿ ಚಾಂಪಿಯನ್‌ ಆಗಿದ್ದು, ಅಲ್ಲಿಂದ ಸಿನಿಮಾರಂಗಕ್ಕೆ ಬಂದದ್ದು ಎಲ್ಲ ಆಗಿ ಮೂರು ವರ್ಷ ಕಳೆದಿದೆ.

ಮಾಡೆಲಿಂಗ್‌ ಕ್ಷೇತ್ರ ಕೈಬೀಸಿ ಕರೆದರೂ ತನ್ನ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಕೊಡುತ್ತಿದ್ದ ಮಿಲನಾ, ರೂಪದರ್ಶಿಯಾಗಿ ಸಾಕಷ್ಟು ಪ್ರಾಡಕ್ಟ್ ಗಳಿಗೆ ಮಾಡೆಲ್ ಆಗಿದ್ದುಂಟು. ಪ್ರಿಂಟ್‌ ಆ್ಯಡ್‌ ಮತ್ತು ವಿಷನ್‌ ಆ್ಯಡ್‌ಗಳಲ್ಲಿ ಮಿಲನಾ ಸಾಕಷ್ಟು ಹೆಸರು ಮಾಡಿರುವಂಥ ನಟಿ. `ಬೃಂದಾವನ’ ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ನಟಿಸಿದ ನಂತರ ಮಿಲನಾ ತಾರಾ ವೃತ್ತಿಯಲ್ಲಿ ಸಾಕಷ್ಟು ಬದಲಾವಣೆ ಕಂಡಿತು. ಹಾಗಂತ ಬಂದ ಅವಕಾಶಗಳನ್ನೆಲ್ಲ ಬಾಚಿಕೊಳ್ಳದೇ ಪಾತ್ರದತ್ತ ಹೆಚ್ಚು ಗಮನ ಕೊಡುತ್ತಾ ಹೋದಳು.

actress

ಯಾರಿಗೆ ಆಗಲಿ ಗೆಲುವು ಸುಲಭವಾಗಿ ಸಿಗುವಂಥದ್ದಲ್ಲ. ಹಾಗೆಯೇ ಸೋಲು ಕೂಡಾ ದಿ ಎಂಡ್‌ ಅಲ್ಲ ಎಂದು ನಂಬಿರುವವರಲ್ಲಿ ಮಿಲನಾ ಕೂಡ ಒಬ್ಬಳು.

ಈಜು ಕೊಳದಿಂದ ಜಿಗಿದು ಎಂಜಿನಿಯರಿಂಗ್‌ ಮಾಡಲು ಬೆಂಗಳೂರಿಗೆ ಬಂದ ಮಿಲನಾ ಮಿಸ್‌ ಕರ್ನಾಟಕ ಸ್ಪರ್ಧೆಯಲ್ಲಿ ಗೆದ್ದು ರೂಪದರ್ಶಿಯಾದ ನಂತರವೇ ಬಣ್ಣ ಹಚ್ಚಿದ್ದು.

ನಮ್ ದುನಿಯಾ ನಮ್ ಸ್ಟೈಲ್, ಬೃಂದಾವನ, ಚಾರ್ಲಿ ನಂತರ ಪರಭಾಷೆಗಳಲ್ಲೂ ನಟಿಸಿ ಬಂದ ಮಿಲನಾಳ ಮೂರು ಚಿತ್ರಗಳು ಈಗ ಬಿಡುಗಡೆಗೆ ಕಂಡಿವೆ.

bolly

ವಿಜಯ್‌ ರಾಘವೇಂದ್ರ ಜೊತೆಯಲ್ಲಿ `ಜಾನಿ’ ಬಿಡುಗಡೆಯಾಗಿದೆ. ಮಲೆಯಾಳಂ ಚಿತ್ರವೊಂದನ್ನು ಮುಗಿಸಿ ಬಂದಿದ್ದಾಳಿ. `ಫ್ಲೈ’ ಚಿತ್ರ ರೆಡಿಯಾಗಿದೆ. ಇದೆಲ್ಲದರ ಜೊತೆಗೆ ಜ್ಯೂವೆಲರಿ ಜಾಹೀರಾತೊಂದರಲ್ಲಿ ಮಿಲನಾ ಸಾಕಷ್ಟು ಮಿಂಚುತ್ತಿದ್ದಾಳೆ.

ಅವಕಾಶಗಳು ಸಿಕ್ಕಿದ್ರೂ ಏಕೆ ಹೆಚ್ಚು ಚಿತ್ರಗಳಲ್ಲಿ ನಟಿಸಲಿಲ್ಲ?

ನನಗೆ ಜನಪ್ರಿಯತೆ ಮುಖ್ಯವಲ್ಲ, ಹಾಗೆಯೇ ಚಿತ್ರಗಳ ಸಂಖ್ಯೆಗಳೂ ಅಲ್ಲ. ನಾನೊಬ್ಬ ನಟಿಯಾಗಿ ಜನ ಗುರುತಿಸುವಾಗ ಆ ಪಾತ್ರದಲ್ಲಿ ಎಷ್ಟು ಚೆನ್ನಾಗಿ ಮಾಡಿದ್ರಲ್ಲ ಅಂತ ನೆನಪಿಸಿಕೊಳ್ಳಬೇಕು. ಆಗಲೇ ನಾನು ನಟಿಯಾಗಿದ್ದಕ್ಕೂ ಸಾರ್ಥಕ ಅನಿಸುತ್ತೆ. ಅಂಥ ಪಾತ್ರಗಳು ಸಿಗುವುದಕ್ಕೂ ಅದೃಷ್ಟ ಮಾಡಿರಬೇಕು. `ಜಾನಿ’ ಚಿತ್ರದಲ್ಲಿ ನನಗಂಥ ಪಾತ್ರವಿತ್ತು. ಹಾಗೆಯೇ `ಫ್ಲೈ’ ಚಿತ್ರದಲ್ಲಿ ಮಾಡಿರೋ ಪಾತ್ರ ಕೂಡಾ ನನಗೆ ಸಿಕ್ಕಾಪಟ್ಟೆ ತೃಪ್ತಿ ಕೊಟ್ಟಿದೆ. ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದೀನಿ.

ಹೌದು, ಬೇಕಾದಷ್ಟು ಅವಕಾಶಗಳು ಬಂದವು. ಆದರೆ ಪಾತ್ರ ನನಗಷ್ಟು ಇಷ್ಟವಾಗ್ತಿರಲಿಲ್ಲ. ಸಿನಿಮಾ ಮಾಡಬೇಕಲ್ಲ ಅಂತ ಯಾವತ್ತೂ ನಾನು ಒಪ್ಪಿಕೊಂಡು ಮಾಡಿದವಳಲ್ಲ. ನಾವು ನಮ್ಮ ವೃತ್ತಿಯಲ್ಲಿ ಬೆಳೆಯಬೇಕು, ಗುರುತಿಸಿಕೊಳ್ಳಬೇಕು ಅಂದ್ರೆ ಪಾತ್ರಗಳು ಬಹಳ ಮುಖ್ಯವಾಗುತ್ತೆ.

ಸಿನಿಮಾ ಇಲ್ಲ ಅಂದ್ರೆ ನಾನು ಟಿ.ವಿ., ಕಮರ್ಷಿಯಲ್ಸ್ ಮತ್ತು ಜಾಹೀರಾತುಗಳಲ್ಲಿ ನಟಿಸ್ತೀನಿ. ಮಲೆಯಾಳಂ ಚಿತ್ರದಲ್ಲಿ ಒಳ್ಳೆ ಪಾತ್ರ ಸಿಕ್ತು ಅಂತ ನಟಿಸಿ ಬಂದೆ.

ನಾನು ಎಷ್ಟೇ ಚಿತ್ರ ಮಾಡಿದ್ರೂ ನನ್ನ ಜನ `ಓಹ್‌, ನೀವು ಬೃಂದಾವನ ಚಿತ್ರದಲ್ಲಿ ನಟಿಸಿದ್ರಲ್ಲ!’ ಅಂತ ಗುರುತಿಸುತ್ತಾರೆ. ಅಂಥ ರೆಕಗ್ನೈಸೇಶನ್‌ ಒಳ್ಳೆಯದು. ಆದ್ರೆ ಅದಕ್ಕೂ ಮೀರಿ ನಾವು ಬೆಳೆಯಬೇಕಲ್ವಾ..?

ಗಾಡ್‌ಫಾದರ್‌ ಇರಬೇಕು ಅನ್ಸುತ್ತಾ?

ಇದ್ದರೂ ತಪ್ಪೇನಿಲ್ಲ. ಆದ್ರೆ ಒಂದು ಚಿತ್ರಕ್ಕೆ ಬ್ರೇಕ್‌ ಸಿಗಬಹುದು. ಆಗ ಪ್ರೂವ್ ಮಾಡದೇ ಹೋದರೆ ಏನು ಪ್ರಯೋಜನ? ನಮ್ಮಲ್ಲಿ ಆ ಸಾಮರ್ಥ್ಯ ಇಲ್ಲದಿದ್ದರೆ ಯಾರೂ ಏನು ಮಾಡೋಕ್ಕೂ ಆಗೋಲ್ಲ. ಗಾಡ್‌ಫಾದರ್‌ಗಿಂತ ನಾವು ಮಾಡುವ ಪಾತ್ರ, ಅದನ್ನು ನಿರ್ದೇಶಿಸುವ ವ್ಯಕ್ತಿ ತುಂಬಾನೆ ಮುಖ್ಯವಾಗುತ್ತೆ.

ಹೊಸಬರ ಆಗಮನದಿಂದ ಈಗ ತಂಬಾ ಕಾಂಪಿಟೇಶನ್‌ ಇದೆ ಅನ್ಸುತ್ತಾ?

ನಿಜಕ್ಕೂ ಉತ್ತಮವಾದ ಬದಲಾವಣೆ. ಜನ ಹೊಸಬರ ಟ್ಯಾಲೆಂಟ್‌ನ್ನು ಗುರುತಿಸುತ್ತಿದ್ದಾರೆ. ಏನೇ ಹೊಸ ಪ್ರಯೋಗ ಮಾಡಿದ್ರೂ ಯಶಸ್ವಿಯಾಗುತ್ತಿದೆ. ನಿಜಕ್ಕೂ ಇದು ವೆರಿಗುಡ್‌. ಈಗ ನಾನು `ಫ್ಲೈ’ ಚಿತ್ರ ಒಪ್ಕೊಂಡಿರೋದು ಅದೇ ಕಾರಣಕ್ಕಾಗಿ. ನಿಜಕ್ಕೂ ಬ್ಯೂಟಿಫುಲ್ ಎಕ್ಸ್ ಪೆರಿಮೆಂಟ್‌. ನನಗೆ ಸಿಕ್ಕಿರೋ ಪಾತ್ರದಿಂದ ಮುಂದೆ ನಾನೇನಾದ್ರೂ ಪ್ರೂವ್ ಮಾಡಬಹುದು ಎನ್ನುವಷ್ಟು ಚೆನ್ನಾಗಿದೆ ಆ ಪಾತ್ರ. ನನಗಂತೂ ಈ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇದೆ.

ನಾಳೆ ನಾನು ನಾಲ್ಕು ರೀಮೇಕ್‌ ಸಿನಿಮಾ ಮಾಡ್ಬಿಟ್ಟು ನನ್ನನ್ನು ಯಾರೂ ಗುರುತಿಸಲಿಲ್ಲ ಅಂತ ಹೇಳಿಕೊಂಡರೆ ತಪ್ಪು ನನ್ನದೇ. ನಮ್ಮ ವೃತ್ತಿ ನಮ್ಮ ಕೈಯಲ್ಲಿರುತ್ತೆ, ನಾವೇ ಅದನ್ನು ರೂಪಿಸಿಕೊಂಡು ಹೋಗಕು. ನನಗಾಗಿ ಯಾರೂ ಕಾಯೋದಿಲ್ಲ, ನಾನೇ ಉತ್ತಮ ಅವಕಾಶಗಳಿಗೆ ಕಾಯಬೇಕಷ್ಟೆ. ಬಾರಮ್ಮ ಈ ಪಾತ್ರ ಮಾಡು ಅಂತ ಯಾರೂ ಕರೆಯೋದಿಲ್ಲ. ನಾನು ತುಂಬಾನೇ ಪ್ರಾಕ್ಟಿಕಲ್. ನನಗೆ ಸಿಕ್ಕಿರುವ ಒಂದಷ್ಟು ರೆಕಗ್ನೈಸೇಶನ್ಸ್ ಬಳಸಿ ಚಿತ್ರರಂಗದಲ್ಲಿ ಒಳ್ಳೆ ಪಾತ್ರಗಳ ಮೂಲಕ ಗುರುತಿಸಿಕೊಳ್ಳುವುದಷ್ಟೇ ನನ್ನ ಉದ್ದೇಶ. ನನ್ನಲ್ಲಿ ಅಂಥ ಸಾಮರ್ಥ್ಯ ಇದೆ ಅಂತ ಗೊತ್ತಿದೆ. ಎಷ್ಟೋ ಜನ ಬಂದು ಒಳ್ಳೆ ಚಿತ್ರಕ್ಕಾಗಿ ಅದೆಷ್ಟು ವರ್ಷ ಕಾದಿರುತ್ತಾರೋ…. `ಫ್ಲೈ’ ಬಗ್ಗೆ ತುಂಬಾ ನಂಬಿಕೆ ಇದೆ.

ಪರಭಾಷೆಗಳಲ್ಲಿ ಅವಕಾಶ ಹೆಚ್ಚು ಸಿಕ್ಕಿದ್ರೆ…..?

ಕಲೆಗೆ ಭಾಷೆ ಇಲ್ಲ ಅಂತಾರೆ, ಮಲೆಯಾಳಂ ಚಿತ್ರಗಳನ್ನು ನೋಡಿದಾಗ ನಾನೂ ಒಂದು ಮಲೆಯಾಳಂ ಚಿತ್ರದಲ್ಲಿ ನಟಿಸಬೇಕು ಅಂತ ಆಸೆ ಪಟ್ಟೆ. ಎರಡು ಚಿತ್ರಗಳಲ್ಲಿ ಆ್ಯಕ್ಟ್ ಮಾಡಿದೆ. ಪರಭಾಷೆಗಳಲ್ಲಿ ನಟಿಸಿದರೂ ಕನ್ನಡದ ಬಗ್ಗೆ ಒಂದು ರೀತಿ ಸೆಂಟಿಮೆಂಟ್‌ ಇದ್ದೇ ಇರುತ್ತೆ. ಕನ್ನಡದಲ್ಲೇ ಹೆಚ್ಚು ನಟಿಸಬೇಕು ಅನ್ಸುತ್ತೆ. ಜಾನಿ, ಫ್ಲೈ ನಂತರ ಮತ್ತೊಂದು ಹೊಸ ಚಿತ್ರ ಸಿಕ್ಕಿದೆ. ರಘು ದೀಕ್ಷಿತ್‌ ಸಂಗೀತ ಸಂಯೋಜನೆ ಇದೆ.

ಲೈಫ್‌ನಲ್ಲಿ ಏನನ್ನು ತುಂಬಾ ಮಿಸ್‌ ಮಾಡ್ಕೊಂಡಿದೀಯಾ?

ನಾನು ಚಿಕ್ಕ ವಯಸ್ಸಿನಿಂದಲೇ ಈಜುಗಾರ್ತಿ. ಬೋರ್ಡ್‌ ಎಗ್ಸಾಮ್ ಗೆ ಮೊದಲೇ ಆ್ಯಕ್ಸಿಡೆಂಟಾಗಿ ಕಾಲು ಮುರಿದುಕೊಂಡೆ. ಒಂದಷ್ಟು ದಿನ ವಾಕರ್‌ನಲ್ಲೇ ಓಡಾಡುತ್ತಿದ್ದೆ. ಹಾಗಾಗಿ ಸ್ವಿಮ್ಮಿಂಗ್‌ ಮಾಡಲು ಆಗುತ್ತಿರಲಿಲ್ಲ. ವಿದ್ಯಾಭ್ಯಾಸದ ಕಡೆ ಗಮನ ಕೊಡಲು ಶುರು ಮಾಡಿದೆ. ಎಂಜಿನಿಯರಿಂಗ್‌ ಸೇರಿಕೊಂಡೆ, ಕಂಪ್ಯೂಟರ್‌ ಸೈನ್ಸ್ ನಲ್ಲಿ ಪದವಿ ತಗೊಂಡ್ರೂ ಸಾಫ್ಟ್ ವೇರ್‌ ಕಂಪನಿಗಳಲ್ಲಿ ಕೆಲಸ ಮಾಡಲು ಮನಸ್ಸು ಬರಲಿಲ್ಲ. ನನ್ನ ಭವಿಷ್ಯದಲ್ಲಿ ಸಿನಿಮಾರಂಗ ಬರೆದಿತ್ತು ಅನ್ಸುತ್ತೆ. ಆದರೆ ನಾನು ತುಂಬಾ ಮಿಸ್‌ ಮಾಡ್ಕೊಳೋದು ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲವಲ್ಲ ಅಂತ. ಈಗಲೂ ಪೂಲ್‌ ಕಂಡರೆ ಡೈವ್‌ ಹೊಡೆಯದೇ ಇರೋದಿಲ್ಲ. ನನಗೆ ಆ್ಯಕ್ಸಿಡೆಂಟ್‌ ಆಗದೇ ಇದ್ದಿದ್ರೆ ನಮ್ಮ ದೇಶದ ಪ್ರತಿನಿಧಿಯಾಗಿ ಈಜು ಸ್ಪರ್ಧೆಯಲ್ಲಿ ಖಂಡಿತಾ ಭಾಗವಹಿಸುತ್ತಿದ್ದೆ! ಆದರೆ ಆ ಭಗವಂತ ನನಗೆ ಬೇರೊಂದು ಪ್ಲಾನ್‌ ಮಾಡಿದ್ದ. ಹಾಗಾಗಿ ಈ ಬಣ್ಣದ ಲೋಕಕ್ಕೆ ಬಂದೆ ಅನಿಸುತ್ತೆ.

ಎತ್ತರದ ನಿಲುವಿನ ಮಿಲನಾ ಬುದ್ಧಿವಂತೆ, ವಿದ್ಯಾವಂತೆ, ಕಲೆ ಬಗ್ಗೆ ಅಪಾರ ಗೌರವ, ನೃತ್ಯಪಟು, ಜೊತೆಗೆ ಕ್ರೀಡೆಗಳಲ್ಲೂ ಅತೀ ಉತ್ಸಾಹ. ಟೆನ್ನಿಸ್‌ ಆಡೋದು, ಉತ್ತಮ ಚಿತ್ರಗಳನ್ನು ನೋಡೋದು ಈ ತಾರೆಯ ಹವ್ಯಾಸಗಳು.

– ಸರಸ್ವತಿ

Tags:
COMMENT