ಕೂರ್ಗಿ ಹುಡುಗಿಯರು ಯಾವುದೇ ಕ್ಷೇತ್ರದಲ್ಲಿರಲಿ, ಉಳಿದವರಿಗಿಂತ  ಒಂದು ಹೆಜ್ಜೆ ಸದಾ ಮುಂದಿರುತ್ತಾರೆ. ಹುಟ್ಟು ಧೈರ್ಯವಂತರು. ಹೀಗಿರೋದ್ರಿಂದ ಮುನ್ನುಗ್ಗುವ ಛಲ ಉಳಿದವರಿಗಿಂತ ಹೆಚ್ಚು.ಕ್ರೀಡೆಯಿರಲಿ  ಅಥವಾ ಸಿನಿಮಾ ರಂಗವಿರಲಿ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಜನರನ್ನು ಆಕರ್ಷಿಸಬಲ್ಲರು. ಕನ್ನಡ ಸಿನಿಮಾರಂಗದಲ್ಲೂ ಸಹ ಸಾಕಷ್ಟು ನಟಿಯರು ಕೊಡಗಿನಿಂದ ಬಂದವರೇ ಆಗಿದ್ದಾರೆ.

ಹರ್ಷಿಕಾ ಪೂಣಚ್ಚ ಕೂಡಾ ಅವರಲ್ಲೊಬ್ಬಳು. ಕೂರ್ಗಿ ಕುಟುಂಬದಲ್ಲಿ ಹುಟ್ಟಿದ ಹರ್ಷಿಕಾ ಮುದ್ದಾದ ಹುಡುಗಿಯಾಗಿದ್ದರಿಂದ ಬಹಳ ಬೇಗನೇ ಎಲ್ಲರ ಗಮನ ಸೆಳೆದಳು. ಮೊದಲಿಗೆ ಟಿ.ವಿ. ತಾರೆಯಾದ ಹರ್ಷಿಕಾ ಸಿನಿಮಾ ನಟಿಯಾಗಲು ಬಹಳ ದಿನಗಳು ಬೇಕಾಗಲಿಲ್ಲ. ಅಪ್ಪ ಅಮ್ಮನಿಗೆ ಒಬ್ಬಳೇ ಮಗಳಾದ್ದರಿಂದ ಪ್ರೋತ್ಸಾಹಕ್ಕೆ ಕೊರತೆ ಇರಲಿಲ್ಲ. ಹದಿನೆಂಟು ವರ್ಷವಿದ್ದಾಗಲೇ ಚಿತ್ರವೊಂದಕ್ಕೆ ನಾಯಕಿಯಾದಳು. ಕ್ರೈಸ್ಟ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ಹರ್ಷಿಕಾ ವಿದ್ಯಾಭ್ಯಾಸದಲ್ಲೂ ಸದಾ ಮುಂದು. ನಟನೆ ಜೊತೆಗೆ ಎಂಜಿನಿಯರಿಂಗ್‌ ಡಿಗ್ರಿ ಕೂಡಾ ಪಡೆದುಕೊಂಡಳು. ಉತ್ತಮ ಅಂಕ ಪಡೆದಿದ್ದ ಹರ್ಷಿಕಾಳಿಗೆ ಸಾಫ್ಟ್ ವೇರ್‌ ಕಂಪನಿಯೊಂದರಲ್ಲಿ ಒಳ್ಳೆ ಜಾಬ್‌ ಕೂಡಾ ಸಿಕ್ಕಿತು. ಆದರೆ ಅಭಿನಯಿಸುವುದನ್ನು ಮಾತ್ರ ಬಿಡಲಿಲ್ಲ.

“ಸಿನಿಮಾ ರಂಗಕ್ಕೆ ಬಂದದ್ದು ಆಕಸ್ಮಿಕ. ನಾನ್ಯಾವತ್ತೂ ತಾರೆಯಾಗಬೇಕೆಂದು ಕನಸು ಕಂಡವಳಲ್ಲ,” ಎನ್ನುವ ಹರ್ಷಿಕಾ ನಂತರ ಕೊಡವ ಸಿನಿಮಾ `ಪೊನ್ನಮ್ಮ’ದಲ್ಲೂ ನಟಿಸಿದ್ದಳು. ತೆಲುಗು ಸಿನಿಮಾದಲ್ಲೂ ಆಫರ್‌ ಬಂದಿತು. `ಜಾಕಿ’ ಚಿತ್ರದಲ್ಲಿ ನಟಿಸಿದ ನಂತರ ಹರ್ಷಿಕಾ ತಾರಾ ಮೌಲ್ಯ ಹೆಚ್ಚಾಯಿತು. ಶಿವರಾಜ್‌ ಕುಮಾರ್‌ ಜೊತೆ `ತಮಸ್ಸು’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದ ಹರ್ಷಿಕಾಳಿಗೆ ಬೆಸ್ಟ್ ಸಪೋರ್ಟಿಂಗ್‌ ಆರ್ಟಿಸ್ಟ್ ಅಂತ ರಾಜ್ಯ ಪ್ರಶಸ್ತಿ ಕೂಡಾ ಸಿಕ್ಕಿತು. ಆನಂತರ ಬಂದ ಅವಕಾಶಗಳು ಹರ್ಷಿಕಾಳನ್ನು ಇನ್ನಷ್ಟು ಜನಪ್ರಿಯಗೊಳಿಸಿತು. ಯಾವುದೇ ಪಾತ್ರ ಕೊಟ್ಟರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಹರ್ಷಿಕಾಳಿಗೆ ಕೆಲವು ಸಲ ತನಗಿಂತ ವಯಸ್ಸಿನಲ್ಲಿ ಹಿರಿಯ ನಟರ ಜೊತೆ ನಟಿಸಬೇಕಾಗಿ ಬಂತು. ಇದೆಲ್ಲದರ  ಜೊತೆಗೆ ಫ್ಯಾಷನ್‌ ಈವೆಂಟ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದ ಹರ್ಷಿಕಾ ಫ್ಯಾಷನ್‌ ಶೋಗಳಲ್ಲಿ ಬೇಡಿಕೆಯ ಮಾಡೆಲ್‌ ಕೂಡಾ  ಆದಳು.

harshika-poonacha

ಕಳೆದ ವರ್ಷ `ಪಾನಿಪುರಿ’ ಎನ್ನುವ ತೆಲುಗು ಚಿತ್ರದಲ್ಲಿ ನಟಿಸಿ ಬಂದ ಹರ್ಷಿಕಾ `ಅದಿತಿ’ ಎನ್ನುವ ಕನ್ನಡ ಚಿತ್ರದಲ್ಲೂ ನಟಿಸಿದಳು. ಹರ್ಷಿಕಾ ಪಾತ್ರಗಳ ಆಯ್ಕೆಯಲ್ಲಿ ತುಂಬಾನೆ ಚ್ಯೂಸಿ. ಅದರಲ್ಲೂ ಪ್ರಶಸ್ತಿಗಳು ಬಂದ ಮೇಲೆ ಬರೀ ಗ್ಲಾಮರ್‌ ತಾರೆ ಎನಿಸಿಕೊಳ್ಳುವ ಬದಲು ಉತ್ತಮ ಕಲಾವಿದೆ ಅಂತ ಹೆಸರು ಮಾಡಬೇಕೆಂದು ಬಂದ ಎಲ್ಲ ಚಿತ್ರಗಳನ್ನೂ ಒಪ್ಪಿಕೊಳ್ಳದೇ ಆಯ್ಕೆ ಮಾಡುವಾಗ ಸಹಜವಾಗಿ ಎಚ್ಚರವಹಿಸಿದಳು.

`ಕ್ರೇಜಿಲೋಕ’ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶಕಿ ಕವಿತಾ ಲಂಕೇಶ್‌ ಅವರಿಗೆ ಸಹಾಯಕ ನಿರ್ದೇಶಕಿಯಾಗಿ ಚಿತ್ರಕ್ಕೆ ಕೆಲಸ ಮಾಡಿದ್ದಳು. “ಕವಿತಾ ಅವರ ಜೊತೆ ಕೆಲಸ ಮಾಡುವುದರ ಜೊತೆಗೆ ಅವರಿಂದ ನಾನು ಬಹಳಷ್ಟು ಕಲಿತೆ. ಸಿನಿಮಾದ ಎಲ್ಲಾ ವಿಭಾಗದಲ್ಲೂ ನನಗೆ ಆಸಕ್ತಿ ಇರೋದ್ರಿಂದ ಬರೀ ನಟನೆಗೆ ಮಾತ್ರ ಫಿಕ್ಸ್ ಆಗಲಿಲ್ಲ,” ಎನ್ನುತ್ತಾಳೆ ಹರ್ಷಿಕಾ.

ಹರ್ಷಿಕಾ ತನ್ನ ಬಿಡುವಿನ ಸಮಯವನ್ನು ವ್ಯರ್ಥ ಮಾಡುವುದಿಲ್ಲವಂತೆ. ನನಗೇ ಪಾರ್ಟಿ ಗೀರ್ಟಿ ಬಗ್ಗೆ ಆಸಕ್ತಿ ಇಲ್ಲ. ಮನೆಯಲ್ಲಿರಲು ಇಷ್ಟಪಡ್ತೀನಿ. ಮ್ಯೂಸಿಕ್‌ ಕೇಳ್ತೀನಿ. ಅಪ್ಪ ಅಮ್ಮನಿಗೆ ಮುದ್ದಿನ ಮಗಳಾಗಿರೋದ್ರಿಂದ ನನ್ನನ್ನು ಬಹಳ ಮುದ್ದು ಮಾಡಿ ಸಾಕಿದ್ದಾರೆ. ಹಾಗಂತ ನಾನು ಆ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿಲ್ಲ.

ನನ್ನ ಜೊತೆ ಅಪ್ಪ ಅಥವಾ ಅಮ್ಮ ಶೂಟಿಂಗೆಗೆ ಬರೋದ್ರಿಂದ ನಾನವರನ್ನು ಹೆಚ್ಚು ಮಿಸ್‌ ಮಾಡಿಕೊಳ್ಳೋವುದಿಲ್ಲ ಎನ್ನುವ ಹರ್ಷಿಕಾ 2014ರಲ್ಲಿ ಬಿಗ್‌ಬಾಸ್‌ ಮನೆಯೊಳಗೂ ಸ್ಪರ್ಧಿಯಾಗಿ ಭಾಗವಹಿಸಿದ್ದಿದೆ.

ಹರ್ಷಿಕಾಳಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಸೋಶಿಯಲ್ ಮೀಡಿಯಾ ಕ್ವೀನ್‌ ಅಂದರೂ ತಪ್ಪಿಲ್ಲ. ತನ್ನ ಎಲ್ಲ ವಿಷಯಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಈ ಬೆಡಗಿ ಇತ್ತೀಚೆಗೆ ಪ್ರಶಸ್ತಿ ಸಮಾರಂಭಕ್ಕೆ ಧರಿಸಿದ್ದ ಡಿಸೈನರ್‌ ರೇಷ್ಮಾ ಕುನ್ಹಿ ಉಡುಗೆ ಬಗ್ಗೆ ಸಾಕಷ್ಟು ಪ್ರಶಂಸಿಸಿದ್ದಾರೆ.

ಇದೀಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿರುವ ಹರ್ಷಿಕಾ `ಉನ್‌ ಕಾದಲ್ ಇರುಂದಾಲ್’ ಚಿತ್ರದಲ್ಲಿ ನಟಿಸುತ್ತಿದ್ದಾಳೆ. “ನಾನು ಕಾಲೇಜು ಹುಡುಗಿ ಪಾತ್ರದಲ್ಲಿ ಕಾಣಿಸಲಿದ್ದೇನೆ. ಎಲ್ಲರೂ ಇಷ್ಟಪಡುವಂಥ ಹುಡುಗಿ ಪಾತ್ರ. ಎರಡು ಹಾಡುಗಳ ಚಿತ್ರೀಕರಣ ಆಗಿದೆ,” ಎಂದು ಹೇಳುವ ಹರ್ಷಿಕಾ ತಮಿಳು ಕೂಡ ಅಚ್ಚುಕಟ್ಟಾಗಿ ಮಾತನಾಡಬಲ್ಲಳು.

“ತಮಿಳು ಚಿತ್ರಗಳನ್ನು ನೋಡುತ್ತಾ ಭಾಷೆ ಕಲಿತೆ. ನನಗೆ ಮೊದಲಿನಿಂದಲೂ ನಾಯಕ ಅಜಿತ್‌ ತುಂಬಾನೆ ಇಷ್ಟ. ಅವರ ಕಟ್ಟಾ ಅಭಿಮಾನಿ,” ಎನ್ನುತ್ತಾಳೆ.

ನನ್ನ ಅಭಿನಯವನ್ನು ನೋಡಲಿಕ್ಕೆಂದೇ ಜನ ಥಿಯೇಟರ್‌ಗೆ ಬರುವಂತಾಗಬೇಕು, ಆಗಲೇ ನಾನು ನಟಿಯಾಗಿದ್ದಕ್ಕೂ ಸಾರ್ಥಕ ಎಂಬುದು ಈ ತಾರೆಯ ಆಸೆಯಾಗಿದೆ.

`ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲೂ ಹರ್ಷಿಕಾ ಮೊದಲ ಬಾರಿಗೆ ಉಪೇಂದ್ರ ಅವರ ಜೊತೆ ನಟಿಸಿದ್ದಾಳೆ. ಅಂದಹಾಗೆ ಹರ್ಷಿಕಾಳಿಗೆ ತುಂಬಾ ಇಷ್ಟವಾದ ವಸ್ತು ಯಾವುದು ಗೊತ್ತಾ?

ಪುಟ್ಟ ಹುಡುಗಿಯಿಂದಲೂ ಬಳೆಗಳೆಂದರೆ ಪ್ರಾಣವಂತೆ. ಹಬ್ಬ ಬಂದರೆ ಸಾಕು  ಕೈತುಂಬಾ ಬಳೆ ಧರಿಸಿ ಬೀಗುತ್ತಿದ್ದಳಂತೆ. ಅಕ್ಕಪಕ್ಕದ ಮನೆಯರೆಲ್ಲಾ ಹಬ್ಬದ ದಿನ ಬಳೆ ತಂದ್ದಿದ್ದೀನಿ ಬಾ ಅಂತ ಕರೆದು ತೊಡಿಸುತ್ತಿದ್ದರಂತೆ. ಆದರೀಗ ತಾರೆಯಾದ ಮೇಲೆ ಸೆಲೆಬ್ರಿಟಿಯಾಗಿ ಚಾನಲ್‌ಗಳಿಗೆ ಹೋಗಿ ಹಬ್ಬ ಆಚರಿಸಿ ಬರ್ತೀನಿ ಅಂತ ಹೇಳಿ ನಗುತ್ತಾಳೆ.

– ಸರಸ್ವತಿ 

और कहानियां पढ़ने के लिए क्लिक करें...