ಕಥೆ – ಆರ್. ಸುಧಾಮಣಿ
ವಿನೋದ್ ಮದುವೆಯಾಗಿ ಎರಡು ವರ್ಷ ಕಳೆದಿತ್ತು ಜಾಹೀರಾತು ಸಂಸ್ಥೆಯೊಂದರಲ್ಲಿ ಉತ್ತಮ ಹುದ್ದೆಯಲ್ಲಿದ್ದ ಅವನಿಗೆ ಮೊದಲಿನಿಂದಲೂ ಅಡ್ವೆಂಚರ್, ಥ್ರಿಲ್ ಎಂದರೆ ಬಹಳ ಆಸಕ್ತಿ. ಕೆಲವೊಮ್ಮೆ ಬೇರೆಯವರಿಗೆ ಇವನದ್ದು ಹುಚ್ಚಾಟವೆಂತಲೂ ಅನಿಸುತ್ತಿತ್ತು. ಆದರೆ ಯಾವಾಗಲೂ ತನ್ನ ಇಷ್ಟದಂತೆಯೇ, ಬದುಕುತ್ತಿದ್ದ ವಿನೋದ್‌ಗೆ ಮಾತ್ರ ಯಾರ ಮಾತಿಗೂ ಬೆಲೆ ಕೊಡದೆ ಖುಷಿ ಖುಷಿಯಾಗಿರುತ್ತಿದ್ದ. ಅತ್ಯಂತ ಹೆಚ್ಚಾಗಿ ಪ್ರೀತಿಸುವ ಪತ್ನಿ, ಓಡಾಡಲು ಕಾರ್, ಅಪಾರ್ಟ್‌ಮೆಂಟ್‌ನಲ್ಲಿ ವಾಸ ಇಷ್ಟರ ಹೊರತು ಇನ್ನೇನು ಬೇಕು?
ಅದೊಮ್ಮೆ ಪತ್ನಿ ಮೂರು ದಿನಗಳ ಮಟ್ಟಿಗೆ ಅವಳ ತಂದೆಯ ಮನೆಗೆ ಹೋಗಿದ್ದಳು. ವಿನೋದ್ ಹೊಸದೊಂದು ಥ್ರಿಲ್ಲಿಂಗ್ ಪಡೆಯುವುದಕ್ಕೆ ಮುಂದಾಗಿದ್ದ. ಅದರಂತೆ ಪ್ರಖ್ಯಾತವಾಗಿರುವ ವೈವಾಹಿಕ ನೋಂದಣಿ ಜಾಲತಾಣದಲ್ಲಿ ತನ್ನ ಹೆಸರು, ಸ್ವವಿವರವನ್ನು ಅಪ್‌ಲೋಡ್ ಮಾಡಿ ತನಗೆ ಸುಂದರ, ವಿದ್ಯಾವಂತ ಯುವತಿ ಬೇಕಾಗಿದ್ದಾಳೆ ಎಂದು ಕೇಳಿದ್ದ. ಅದರ ಮರುದಿನವೇ ಬಹಳಷ್ಟು ಯುವತಿಯರಿಂದ ಅವರ ಪೋಷಕರಿಂದ ವಿನೋದ್‌ಗೆ ಇಮೇಲ್ ಬರಲಾರಂಭಿಸಿದವು. ಕಡೆಗೆ ಆ ಜಾಲತಾಣದವರ ಕಡೆಯಿಂದ ತಿಂಗಳ ಕಡೆಯ ಭಾನುವಾರ ನಗರದ ಪ್ರಸಿದ್ಧ ಹೋಟೆಲ್‌ನಲ್ಲಿ ವಧೂವರರ ಸಮಾವೇಶ ಕಾರ್ಯಕ್ರಮವಿದ್ದು, ಆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕರೆ ಬಂದಿತು.
ವಿನೋದ್ ಇಂತಹ ಅವಕಾಶವನ್ನು ಕಳೆದುಕೊಳ್ಳುವನೇ? ಕಾರ್ಯಕ್ರಮಕ್ಕೆ ಹೊರಟೇಬಿಟ್ಟ.ಹೋಟೆಲ್‌ನ ಪಾರ್ಟಿ ಹಾಲ್ ತುಂಬಾ ತರುಣ, ತರುಣಿಯರು, ಅವರ ಪೋಷಕರಿದ್ದರು. ಎರಡೂ ಕಡೆಯವರು ಪರಸ್ಪರ ಪರಿಚಯಿಸಿಕೊಳ್ಳುವುದು, ಹೊಂದಾಣಿಕೆ, ಆದರ ಮೊಗದಲ್ಲಿ ಆನಂದ, ಉತ್ಸಾಹ, ಲವಲವಿಕೆ ಒಟ್ಟಾರೆ ವಾತಾವರಣವೇ ಸಂಭ್ರಮ, ಸಡಗರಗಳಿಂದ ಕೂಡಿತ್ತು.
ವಿನೋದ್ ಉತ್ತಮವಾದ ಆಕರ್ಷಕ ಉಡುಗೆ ತೊಟ್ಟು ಜೊತೆಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದ. ಪಾರ್ಟಿ ಹಾಲ್ ಸಾಕಷ್ಟು ದೊಡ್ಡದಾಗಿತ್ತು. ಅದರಲ್ಲಿ ಎರಡು ಸುತ್ತು ಸುತ್ತಿದ ವಿನೋದ್‌ಗೆ ಅಲ್ಲಿ ಕೆಂಪು ಬಣ್ಣದ ಸೀರೆ, ಅದಕ್ಕೆ ಮ್ಯಾಚಿಂಗ್ ಬ್ಲೌಸ್ ತೊಟ್ಟು ಜೊತೆಗೆ ಜ್ಯೂವೆಲರಿ ಧರಿಸಿದ್ದ ಯುವತಿಯೊಬ್ಬಳು ಕಾಣಿಸಿದಳು.
“ಹಾಯ್….”
“ಹಲೋ….”
“ಐ ಆ್ಯಮ್ ವಿನೋದ್.”
“ರಶ್ಮಿ…..” ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡರು. ವಿನೋದ್ ಅಲ್ಲೇ ಇದ್ದ ಡೈನಿಂಗ್ ಹಾಲ್‌ಗೆ ಅವಳನ್ನು ಕರೆದು ಅಲ್ಲಿ ಕೂಲ್ ಡ್ರಿಂಕ್ಸ್ ಗೆ ಆರ್ಡರ್ ಮಾಡಿದ. ಇಬ್ಬರೂ ಕುಳಿತು ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಕೆಲವೇ ನಿಮಿಷಗಳಲ್ಲಿ ಇಬ್ಬರೂ ಸ್ನೇಹಿತರಾದರು. ಕೆಲವು ನಿಮಿಷಗಳಲ್ಲಿ ವಿನೋದ್ ಮತ್ತು ರಶ್ಮಿ ಇಬ್ಬರಿಗೂ ತಾವು ಪರ್ಫೆಕ್ಟ್ ಮ್ಯಾಚ್ ಎನಿಸುತ್ತಿತ್ತು. ಅಷ್ಟರಲ್ಲಿ ರಶ್ಮಿ ಅರ್ಧದಲ್ಲೇ ಎದ್ದು ಹೊರ ಹೋಗಲು ತೊಡಗಿದಳು.
“ಏಕೆ…. ಏನಾಯ್ತು?” ವಿನೋದ್ ಅವಳನ್ನೇ ಹಿಂಬಾಲಿಸಿ ಕೇಳಿದ.
“ಏನಿಲ್ಲ…”
“ಮತ್ತೆ ಏಕೆ ಅರ್ಧಕ್ಕೆ ಎದ್ದು ಹೊರಟಿರಿ?”
“ಅದು ನನಗೆಲ್ಲೋ ನಿಮ್ಮ ಮೇಲೆ ಇಷ್ಟವಾಗುಂತೆ ಕಾಣುತ್ತಿದೆ. ನಿಮಗೂ ನಾನು ಇಷ್ಟವಾಗಿರಬಹುದು. ಅದಕ್ಕೆ ನೀನು ಇಲ್ಲಿ ನಾನು ಪ್ರಪೋಸ್ ಮಾಡುವ ಮುನ್ನ ನಾವಿಬ್ಬರೂ ದೂರವಾಗುವುದೇ ಉತ್ತಮ.”
“ಹ್ಞಾಂ! ಏನು ಹೇಳುತ್ತಿದ್ದೀರಿ? ಏಕೆ….?”
“ಅದು…. ನಾನು ಸತ್ಯವನ್ನು ಹೇಳಿಬಿಡುತ್ತೇನೆ…..” ರಶ್ಮಿ ತುಸು ತಡೆದು ನುಡಿದಳು, “ನಾನು ಇಲ್ಲಿಗೆ ಬಂದದ್ದು ಯಾರೊಬ್ಬರನ್ನು ಮದುವೆಯಾಗಬೇಕೆಂದು ಅಲ್ಲ. ಕೇವಲ ಮನರಂಜನೆಗಾಗಿ ಮಾತ್ರ! ಯಾವ ಹುಡುಗನೊಂದಿಗೂ ವಿವಾಹವಾಗಲು ನನಗೆ ಇಚ್ಛೆ ಇಲ್ಲ.”
“ಓ….. ನೀವೇಕೆ ಹೀಗೆ ಹೇಳುತ್ತಿದ್ದೀರಿ?” ವಿನೋದ್ ಸಹ ಗಾಬರಿಯಿಂದ ಕೇಳಿದ.
“ಅದು ನಾನು….. ನಾನು ಈಗಾಗಲೇ ಮದುವೆಯಾಗಿದ್ದೇನೆ. ಮತ್ತೆ ಮದುವೆ ಆಗಲು ಸಾಧ್ಯವಿಲ್ಲ….” ರಶ್ಮಿ ತಡೆದು ತಡೆದೂ ಹೇಳಿದಳು,
“ನನ್ನನ್ನು ಬಿಟ್ಟು ಬಿಡಿ. ನನಗಿಂತ ಚೆನ್ನಾಗಿರುವಳು ನಿಮಗೆ ಇಲ್ಲೇ ಸಿಗಬಹುದು,” ಎಂದವಳೇ ಅವನಿಂದ ದೂರ ಸರಿದಳು.
ವಿನೋದ್ ಪುನಃ ಅವಳನ್ನು ಹಿಂಬಾಲಿಸಿಕೊಂಡೇ ನಡೆದ.
“ಮತ್ತೆ ಮತ್ತೆ ಏಕೆ ನನ್ನ ಹಿಂದೆ ಬರುತ್ತಿರುವಿರಿ….?”
“ಅದು…. ಅದೂ…. ನಾನೂ ಸಹ ನಿಮ್ಮಂತೆಯೇ ಮದುವೆಯಾದನು. ಇಲ್ಲಿ ಕೇವಲ ಥ್ರಿಲ್ ಅನುಭವಿಸಲು ಬಂದಿದ್ದೇನೆ…!” ವಿನೋದ್ ಹೇಳಿದಾಗ ರಶ್ಮಿ ಪುನಃ ಅವನತ್ತ ತಿರುಗಿ….. “ಹ್ಞಾಂ….. ರಿಯಲಿ…? ಹಾಗಿದ್ದರೆ ಏನೂ ಸಮಸ್ಯೆ ಇಲ್ಲ. ನಾವಿಬ್ಬರೂ ಒಟ್ಟಾಗಿ ಎಂಜಾಯ್ ಮಾಡಬಹುದು….” ಎಂದಳು.
“ಸರಿ… ಬನ್ನಿ ಟೇಬಲ್‌ಗೆ ಹಿಂತಿರುಗೋಣ…..”ಇಬ್ಬರೂ ಪುನಃ ಒಂದು ಟೇಬಲ್ ಹಿಡಿದು ಕುಳಿತರು. ಈ ಬಾರಿ ಇಬ್ಬರಿಗೂ ಸ್ನೇಹ ಇನ್ನಷ್ಟು ಬೆಳೆದು ಗಟ್ಟಿಯಾಯಿತು. ಜೊತೆಗೆ ಇಬ್ಬರೂ ಮನಬಿಚ್ಚಿ ಹರಟಿದರು. ಅದಲ್ಲದೆ ಇಬ್ಬರೂ ತಮ್ಮ ಸ್ವಂತ ದಾಂಪತ್ಯದ ಜೀವನದ ಕ್ಷಣಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಸುಮಾರು ಅರ್ಧ ತಾಸು ಹೇಗೆ ಕಳೆಯಿತೋ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾದರು.
ಸ್ವಲ್ಪ ಸಮಯದ ನಂತರ, “ಹೌದು…. ನಾವು ಏಕೆ ಮದುವೆ ಆಗಬಾರದು?” ವಿನೋದ್ ಕೇಳಿದ ಪ್ರಶ್ನೆಗೆ ರಶ್ಮಿ ಮುಖದಲ್ಲಿ ಆತಂಕ ಕಾಣಿಸಿತು.
“ನೀವು ಏನು ಹೇಳುತ್ತಿದ್ದೀರಿ….? ನಾವು ಈಗಾಗಲೇ ಮದುವೆಯಾದವರು ಎನ್ನುವುದನ್ನು ಮರೆತಿರಾ….?”
“ಆದರೆ ಏನಾಯಿತು….? ನಾವಿಬ್ಬರೂ ನಮ್ಮ ಮನೆಯವರಿಂದ ವಿಚ್ಛೇದನ ಪಡೆದು ಮದುವೆ ಆಗೋಣ.”
“ವಿನೋದ್…., ನಿಮ್ಮ ಪತ್ನಿಯನ್ನು ನೀವು ಪ್ರೀತಿಸುವುದಿಲ್ಲವೇ…?”
“ಹೌದು…. ನನ್ನ ಪ್ರಾಣಕ್ಕಿಂತ ಮಿಗಿಲಾಗಿ.”
“ಈಗೇಕೆ ವಿಚ್ಛೇದನದ ಮಾತನಾಡುತ್ತಿರುವಿರಿ? ನಾನೂ ಸಹ ನನ್ನವರನ್ನು ಹೃದಯ ತುಂಬಿ ಪ್ರೀತಿಸುತ್ತೇನೆ. ಅಂತಹದರಲ್ಲಿ ಅವರಿಂದ ಹೇಗೆ ವಿಚ್ಛೇದನ ಪಡೆಯಲಿ?”
ಇದೀಗ ಇಬ್ಬರ ನಡುವೆಯೂ ಮೌನ ಆವರಿಸಿತು. ಸಾಕಷ್ಟು ಸಮಯ ಹೀಗೇ ಕಳೆಯಿತು. ಇಬ್ಬರೂ ತಮ್ಮ ಮನೆಯವರ ಪ್ರೀತಿ ಮತ್ತು ಪ್ರಸ್ತುತವಾಗಿ ಹುಟ್ಟಿದ ಆಕರ್ಷಣೆ ಎರಡನ್ನೂ ಅಳೆದು ತೂಗುತ್ತಿದ್ದರು.
“ರಶ್ಮಿ, ನಾನು ಮನೆಯವರನ್ನು ಒಪ್ಪಿಸಿ ವಿಚ್ಛೇದನ ಪಡೆಯಲು ಸಿದ್ಧನಿದ್ದೇನೆ. ನನ್ನ ಜೀವನದಲ್ಲಿ ನಿನ್ನಂತಹ ಚೂಟಿಯಾಗಿ, ಚಟುವಟಿಕೆಯಿಂದಿರುವ ಹುಡುಗಿ ಬೇಕು. ನೀನೂ ನಿನ್ನ ಮನೆಯವರನ್ನು ಒಪ್ಪಿಸು…..”
ಈಗ ರಶ್ಮಿಗೂ ತಾನು ವಿನೋದ್‌ನನ್ನು ಮದುವೆಯಾಗಬಹುದು ಎನ್ನುವ ಕುರಿತು ಮನಸ್ಸು ನಿಧಾನವಾಗಿ ದೃಢ ನಿಶ್ಚಯಕ್ಕೆ ಬರತೊಡಗಿತು. ಆದರೂ ಮನೆಯಲ್ಲಿ ನಡೆಯಬಹುದಾದ ಘಟನೆಗಳನ್ನು ಹೇಗೆ ಎದುರಿಸುವುದು ಎನ್ನುವ ಗೊಂದಲಕ್ಕೆ ಉತ್ತರವಿರಲಿಲ್ಲ.
“ನಿನಗೆ ಯೋಚಿಸಲು ಸಮಯ ಬೇಕಾದಲ್ಲಿ ತೆಗೆದುಕೋ. ನಾನು ಹತ್ತು ನಿಮಿಷ ಬಿಟ್ಟುಬರುತ್ತೇನೆ. ಆದರೆ ನಿನ್ನ ಕಡೆಯ ಉತ್ತರ ಪಾಸಿಟಿವ್ ಆಗಿರುತ್ತದೆ ಎಂಬ ನಿರೀಕ್ಷೆ ನನ್ನದು,” ಎಂದ ವಿನೋದ್ ಅವಳಿಂದ ತುಸು ದೂರ ಹೊರಟವನಂತೆ ಆ ಹಾಲ್‌ನ ಇನ್ನೊಂದು ಮೂಲೆಗೆ ಬಂದು ನಿಂತ.
`ತನ್ನನ್ನು ಇಷ್ಟು ಪ್ರೀತಿಸುವ ಈ ವ್ಯಕ್ತಿಯನ್ನು ನಾನೇಕೆ ಮದುವೆ ಆಗಬಾರದು?’ ರಶ್ಮಿ ವಿನೋದನ ವ್ಯಕ್ತಿತ್ವಕ್ಕೆ ಮಾರುಹೋದಳು. ಅಷ್ಟರಲ್ಲಿ ಅವಳ ಮೊಬೈಲ್ ರಿಂಗಣಿಸಿತು.
“ಹೋ….” ಅತ್ತ ಕಡೆಯಿಂದ ಅವಳ ಪತಿ ಮಾತನಾಡುತ್ತಿದ್ದ.
“ನಾನು ನನ್ನ ಸ್ನೇಹಿತರೊಡನೆ ವೀಕೆಂಡ್ ಪಾರ್ಟಿಗೆ ಬಂದಿದ್ದೇನೆ. ಇನ್ನು ಒಂದು ಗಂಟೆಯಲ್ಲಿ ಬರುತ್ತೇನೆ.”
ಕರೆ ನಿಷ್ಕ್ರಿಯಗೊಂಡ ಕೆಲವು ನಿಮಿಷದ ಬಳಿಕ ಪುನಃ ವಿನೋದ್ ಟೇಬಲ್‌ನ ಮುಂದೆ ಹಾಜರಾದ.
“ಯಾರಿಗೋ ಕರೆ ಮಾಡಿದಂತಿತ್ತು….?”
“ನನ್ನ ಮನೆಯವರು ಕರೆ ಮಾಡಿದ್ದರು. ನಾನು ಸ್ನೇಹಿತರೊಡನೆ ಪಾರ್ಟಿಯಲ್ಲಿದ್ದೇನೆ ಎಂದೆ….”
“ಓಹೋ… ! ಈಗ ನಮ್ಮ ಮುಂದಿನ ಜೀವನದ ಕುರಿತು ಏನು ನಿರ್ಧರಿಸಿದೆ?”
“ವಿನೋದ್…. ನಾವು ಒಂದಾಗಿ ಬಾಳುವುದೇ ಸರಿ. ನಾನೂ ಸಹ ಯೋಚಿಸಿದೆ. ಇಂದು ಮನೆಗೆ ಹೋಗಿ ಅವರನ್ನು ಒಪ್ಪಿಸಿ ವಿಚ್ಛೇದನ ಪಡೆದುಕೊಳ್ಳುವೆ. ಮುಂದೆ ನಾವಿಬ್ಬರೂ ವಿವಾಹವಾಗಿ ಮುಂದೆ ಉತ್ತಮ ಭವಿಷ್ಯ ಕಟ್ಟೋಣ….”
“ಓ.ಕೆ. ಸರಿ… ಐ ಆ್ಯಮ್ ಸೋ ಹ್ಯಾಪಿ ನೌ…..” ಎನ್ನುತ್ತಾ ವಿನೋದ್ ರಶ್ಮಿಯ ಕೈಯನ್ನು ಮೃದುವಾಗಿ ಹಿಸುಕಿದ. ಇದೀಗ ಇಬ್ಬರ ಕಣ್ಣುಗಳೂ ಮಿನುಗುತ್ತಿದ್ದವು. ಭವಿಷ್ಯದ ಹೊಸ ಬಾಳಿನ ಕನಸನ್ನು ಇಬ್ಬರೂ ಎದುರು ನೋಡುತ್ತಿದ್ದರು.
ಇತ್ತ ಕಡೆ ಹಾಲ್‌ನಲ್ಲಿದ್ದ ಇತರೆ ಯುವಕ-ಯುವತಿಯರು ತಾವು ಆರಿಸಿಕೊಂಡ ಸಂಗಾತಿಯೊಂದಿಗೆ ಅಲ್ಲಿದ್ದ ವೇದಿಕೆ ಏರಿ ಫೋಟೋ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಪರಸ್ಪರ ಸಂಭಾಷಣೆಯಲ್ಲಿ ನಿರತರಾಗಿದ್ದರು.
ರಶ್ಮಿ ಮತ್ತು ವಿನೋದ್ ಇಬ್ಬರೂ ವಿವಾಹವಾಗುವುದೆಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದರು. ಆಗ ವಿನೋದ್ ಹೇಳಿದ, “ನೋಡು… ನಾವು ವಿವಾಹವಾಗಲಿರುವ ವಿಷಯವನ್ನು ಈ ವೇದಿಕೆಯಲ್ಲಿ ಘೋಷಿಸಿಕೊಳ್ಳೋಣ. ನಮ್ಮಿಬ್ಬರ ನೂತನ ಬಾಳಿಗೆ ಈ ವೇದಿಕೆಯ ಘೋಷಣೆಯೇ ನಾಂದಿ ಆಗಲಿ……”
ರಶ್ಮಿಯೂ ಅದಕ್ಕೆ ಒಪ್ಪಿದಳು. ವಿನೋದ್ ರಶ್ಮಿಯ ಕೈ ಹಿಡಿದು ವೇದಿಕೆ ಏರಿದ.
“ಹೋ…. ಇಲ್ಲಿ ಸೇರಿರುವ ಎಲ್ಲ ನವ ಜೋಡಿಗಳಾಗ ಬಯಸುವ ಯುವಕ-ಯುವತಿಯರಿಗೆ ನನ್ನ ಕಡೆಯಿಂದ ಶುಭಕಾಮನೆಗಳು,” ವೇದಿಕೆ ಮುಂದೆ ನೆರೆದಿದ್ದ ಎಲ್ಲ ಯುವಕ/ಯುವತಿಯರಿಗೆ ಅವರ ಪೋಷಕರಿಗೆ ಕೇಳುವಂತೆ ವಿನೋದ್ ಮೈಕ್ ಹಿಡಿದು ಗಟ್ಟಿಯಾಗಿ ಹೇಳಿದ.
“ಪ್ರತಿಯೊಬ್ಬರೂ ಎರಡು ನಿಮಿಷ ನನ್ನ ಮಾತನ್ನು ಕೇಳಿರಿ. ನಾವು ಇಲ್ಲಿ ನನ್ನ ಜೀವನದ ಅತ್ಯಂತ ಪ್ರಮುಖ ಘೋಷಣೆ ಮಾಡಲು ನಿರ್ಧರಿಸಿದ್ದೇವೆ.”
ಇದೀಗ ಎಲ್ಲರೂ ವೇದಿಕೆಯ ಕಡೆ ತಿರುಗಿದರು.
“ನಾವಿಬ್ಬರು ಮದುವೆಯಾದವರು…. ಮತ್ತೆ ಮದುವೆಯಾಗಬೇಕೆಂದು ನಿರ್ಧರಿಸಿದ್ದೇವೆ!” ವಿನೋದ್ ಹೀಗೆನ್ನುತ್ತಲೇ ಇಡೀ ಜನಸಮೂಹ ಸ್ತಬ್ಧವಾಗಿತ್ತು. ಈ ಕಾರ್ಯಕ್ರಮ ಆಯೋಜಿಸಿದ್ದ ಜಾಲತಾಣದ ಮುಖ್ಯಸ್ಥರು ಸೇರಿ ಎಲ್ಲರೂ ಬೆರಗಾದರು.
“ನಾವು ಈ ವೇದಿಕೆ ಮೇಲೆ ಘೋಷಿಸುವುದೇನೆಂದರೆ, ನಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆ ಆಗಬೇಕೆಂದಿದ್ದೇವೆ. ಈಗಾಗಲೇ ನಾವು ನಮ್ಮ ಮನೆಯವರೆದುರಿನಲ್ಲಿಯೇ ವಿವಾಹವಾಗಿದ್ದರೂ ಈಗ ಮತ್ತೊಮ್ಮೆ ವಿವಾಹ ಆಗಬೇಕೆಂದು ನಿರ್ಧರಿಸಿದ್ದೇವೆ,” ಎಂದ. ಒಂದೆರಡು ಕ್ಷಣ ಸಭಾಂಗಣವೇ ಮೌನವಾಯಿತು. ಸುತ್ತಲೂ ಜನ ಸೇರಿ ಇವರ ಮಾತುಗಳನ್ನು ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದರೂ ಸಹ ಇವರೇನು ಹೇಳುತ್ತಿದ್ದಾರೆಂದು ತಿಳಿಯದೆ ಕ್ಷಣ ಕಾಲ ಗೊಂದಲದಲ್ಲಿ ಸಿಲುಕಿದರು.
ವಿನೋದ್ ಮತ್ತೊಮ್ಮೆ ರಶ್ಮಿಯ ಕೈಯನ್ನು ಹಿಡಿದು ತನ್ನ ಬಳಿ ಸೆಳೆದುಕೊಂಡವನೇ, “ನಿಮಗೆಲ್ಲ ಗೊಂದಲವಾಗಿರಬಹುದು. ಇಲ್ಲಿಗೆ ನಾವು ಬಂದದ್ದೇ ನಮ್ಮ ಕುತೂಹಲ ತಣಿಸಿಕೊಳ್ಳಲು, ಜೊತೆಗೆ ನಮ್ಮ ಎರಡನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು. ನಾವು ಇಲ್ಲಿ ಬಂದದ್ದು ಮದುವೆ ಮಾಡಿಕೊಳ್ಳುವ ಸಲುವಾಗಿಯಂತೂ ಅಲ್ಲ. ನಮ್ಮ ವಿವಾಹ ವಾರ್ಷಿಕೋತ್ಸವವನ್ನು ಈ ವೇದಿಕೆಯಲ್ಲಿ ವಿಭಿನ್ನವಾಗಿ ಆಚರಿಸಿಕೊಳ್ಳುವ ಸಲುವಾಗಿಯೇ….” ವಿನೋದ್ ವಿವರಿಸುತ್ತಾ ಹೊರಟ.
“ನಾವಿಬ್ಬರೂ ಪ್ರೀತಿಸಿ ಮದುವೆ ಆಗಿದ್ದೇವೆ. ಅಷ್ಟಕ್ಕೂ ಪೋಷಕರು ಒಪ್ಪಿಕೊಂಡೇ ನಡೆದ ವಿವಾಹವಿದು. ನನಗೆ ಮೊದಲಿನಿಂದಲೂ ಹೊಸ ಹೊಸ ಬಗೆಯಲ್ಲಿ ಜೀವನವನ್ನು ಸಂತೋಷದಿಂದ ಅನುಭವಿಸುವುದು ಬಹಳ ಖುಷಿ ನೀಡುತ್ತಿತ್ತು. ಥ್ರಿಲ್ ಅನುಭವಿಸುವುದು ಎಂದರೆ ನನಗೆ ಬಲು ಇಷ್ಟ. ಹಾಗೇ ನನ್ನವಳಿಗೂ ಸಹ ಜೀವನದ ಚಿಕ್ಕ ಚಿಕ್ಕ ವಿಚಾರಗಳಲ್ಲಿಯೂ ಕುತೂಹಲವಿರುತ್ತಿತ್ತು.
“ನಾವು ಮೊದಲೇ ಪ್ಲಾನ್ ಮಾಡಿಕೊಂಡಂತೆ ಅವಳು ತವರು ಮನೆಗೆ ಹೊರಟಾಗ ನಾವು ಈ ವೈವಾಹಿಕ ಅಂಕಣಕ್ಕೆ ನಮ್ಮ ಹೆಸರು ಜೊತೆಗೆ ವಿವರಗಳನ್ನು ಅಪ್ಲೋಡ್ ಮಾಡಿದ್ದೆವು. ಅದಾಗಿ ನಾಲ್ಕೈದು ದಿನಗಳಲ್ಲಿ ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿತ್ತು. ನಾವು ಬೇರೆ ಬೇರೆಯಾಗಿಯೇ ಈ ವೇದಿಕೆಗೆ ಆಗಮಿಸಿದ್ದೆವು. ಕಡೆಗೆ ನಾವು ನೂತನವಾಗಿ ಪರಿಚಯವಾದವರಂತೆ ಮಾತನಾಡುತ್ತಿದ್ದೆವು, ಈ ನಡುವೆ ನಾನು ಅವಳಿಗೆ ಮತ್ತೆ ಮದುವೆಯ ಪ್ರಪೋಸ್ ಕೊಟ್ಟಿದ್ದೆ. ಆಗ ಅವಳು ಅದನ್ನೊಪ್ಪಲು ನಿರಾಕರಿಸಿದ್ದಳು. ಅವಳಿಗೆ ಅವಳ ಮನೆಯವರಿಂದ ಹುಸಿ ಕರೆಯೂ ಬಂದಿತ್ತು.” ಎಂದು ಹೇಳಿ ವಿನೋದ್ ಮೌನವಹಿಸಿದ.
ನಂತರ ರಶ್ಮಿ ಮಾತಿಗಾರಂಭಿಸಿ, “ನಾನು ಮನೆಯವರನ್ನೆಲ್ಲ ತೊರೆದು ವಿನೋದ್‌ನನ್ನೇ ಮದುವೆ ಆಗುವ ನಿರ್ಧಾರ ತೆಗೆದುಕೊಳ್ಳುವಂತೆ ಆಗಿತ್ತು. ಇದೆಲ್ಲ ಕೇವಲ ಕೃತಕ ನಟನೆ. ಎಷ್ಟೇ ಆದರೂ ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತೇವೆ. ಜೀವನದ ಪ್ರತಿ ಕ್ಷಣವನ್ನೂ ಸಂತಸದಿಂದ ಅನುಭವಿಸಬೇಕು ಎನ್ನುವುದು ನಮ್ಮಿಬ್ಬರ ನಿಲುವು.
“ಇಂದು ನಮ್ಮಿಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ದಿನ! ನಮ್ಮ ದ್ವಿತೀಯ ವಿವಾಹ ವಾರ್ಷಿಕೋತ್ಸವ ದಿನ. ಈ ದಿನವನ್ನು ವಿಭಿನ್ನವಾಗಿ ಕಳೆಯಬೇಕೆನ್ನುವ ಉದ್ದೇಶದಿಂದ ನಾವು ಈ ವೇದಿಕೆಯನ್ನು ಆಯ್ದುಕೊಂಡೆವು.
“ನೀವೆಲ್ಲರೂ ತಂತಮ್ಮ ಸಂಗಾತಿಗಳನ್ನು ಆರಿಸಿಕೊಂಡು ಹೊಸ ಬಾಳಿಗೆ ಅಡಿ ಇಡಲು ನಿರ್ಧರಿಸುವ ಈ ಹೊತ್ತಿನಲ್ಲಿ ನಾವು ಒಂದೆರಡು ಮಾತು ಹೇಳಲು ಇಚ್ಛಿಸುತ್ತೇವೆ.
“ಬದುಕಿನಲ್ಲಿ ಯಾವತ್ತೂ ಹೊಸತನವನ್ನು ಉಳಿಸಿಕೊಳ್ಳಿರಿ. ಜೀವನದ ಉದ್ದಕ್ಕೂ ನಿಮ್ಮವರ ಕುರಿತಂತೆ ಕುತೂಹಲ, ಪ್ರೀತಿ ಉಳಿದು ಬೆಳೆಯುವಂತೆ ನೋಡಿಕೊಳ್ಳಿ. ನಿಮ್ಮ ಬಾಳ ಸಂಗಾತಿ ನಿಮಗಾಗಿ ಎಷ್ಟೆಲ್ಲ ಬದಲಾಗುತ್ತಾರೆ ಎನ್ನುವುದು ಮುಖ್ಯವಲ್ಲ. ಆ ಬದಲಾವಣೆ ನಿಮ್ಮ ಜೀವನದಲ್ಲಿ ಯಾವ ರೀತಿಯಲ್ಲಿ ಮಾರ್ಪಾಡು ತರುತ್ತದೆ ಎನ್ನುವುದು ಮುಖ್ಯವಾಗುತ್ತದೆ,” ಎಂದಳು.
ನಂತರ ವಿನೋದ್ ಮಾತಿನಲ್ಲಿ ತೊಡಗಿದ, “ಮದುವೆಯಾದ ಹೊಸತರಲ್ಲಿ ನಿಮ್ಮಲ್ಲಿರುವ ಪ್ರೀತಿ, ಆಕರ್ಷಣೆಗಳು ಜೀವನದುದ್ದಕ್ಕೂ ಹಾಗೆಯೇ ಇರುವುದಿಲ್ಲ ಎನ್ನುವುದು ನಿಜ. ಆದರೆ ಸಂಸಾರದಲ್ಲಿ ಮಧುರ ಬಾಂಧವ್ಯ ಎಂದೂ ಕಡಿದು ಹೋಗಲು ಬಿಡಬಾರದು. ಯಾರು ಚಿಕ್ಕ ಪುಟ್ಟ ವಿಚಾರಗಳಲ್ಲಿ ಸಂತಸ ಪಡುವರೋ ಅವರಿಗೆ ಕಷ್ಟಗಳು ಸಹ ಭಾರಿನಿಸಾರ.
“ಜೀವನ ಮತ್ತು ಸಂಸಾರವನ್ನು ಎಂದೂ ಭಾರವೆಂದೆಣಿಸಬೇಡಿ. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವುದರೊಂದಿಗೆ ನಿಮ್ಮ ಸಂಗಾತಿಯನ್ನೂ ಅರ್ಥ ಮಾಡಿಕೊಳ್ಳಿರಿ. ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು, ಹೊಂದಾಣಿಕೆಯಿಂದ ಜೀವನ ನಡೆಸಿದರೆ, ಅದೇ ಸ್ವರ್ಗ ಸುಖ….” ಎಂದು ಹೇಳಿದ ವಿನೋದ್
ರಶ್ಮಿ ಮಾತು ಮುಗಿಸಿ ಮೈಕ್ ಕೆಳಗಿಟ್ಟಾಗ ಇಡೀ ಜನಸ್ತೋಮ ಕಿವಿಗಡಚಿಕ್ಕುವಂತೆ ಕರತಾಡನ ಮಾಡಿತು. ಅವರಿಬ್ಬರ ದಾಂಪತ್ಯ ಜೀವನ, ಅನುಭವದ ನುಡಿಗಳ ಜೊತೆಗೆ ಹುರಿದುಂಬಿಸುವ ಮಾತುಗಳನ್ನು ಕೇಳಿ ಅಲ್ಲಿ ನೆರೆದಿದ್ದ ಯುವಕ/ಯುವತಿಯರು, ಅವರ ಪೋಷಕರು ವಿನೋದ್ ದಂಪತಿಗಳಿಗೆ ಶುಭ ಕೋರಿದರು.