ಕಥೆ – ಬಿಂಡಿಗನವಿಲೆ ಭಗವಾನ್
ತನ್ನ ಮಗನನ್ನು ನೋಡಿಕೊಳ್ಳಲು ಕೆಲಸದಾಳು ಮಾದೇವಿ ಸುಮಾರು ಒಂದೂವರೆ ವರ್ಷ ಕಾಲ ಇತರ ಮನೆಗೆಲಸಗಳನ್ನು ಬದ್ದಿಗೊತ್ತಿ, ಮದುವೆಯಾದ ಮೇಲೂ ಮಧುಚಂದ್ರಕ್ಕೆ ಹೋಗದೆ ಜೀವ ತೇಯ್ದದ್ದು ವೀಣಾಳಿಗೆ ಚೆನ್ನಾಗಿ ನೆನಪಿದೆ. ಅಂಥವಳಿಗೊಂದು ಸಮಸ್ಯೆ ಎದುರಾದಾಗ, ತಾನೇ ಅದಕ್ಕೆ ಪರಿಹಾರ ಕಂಡುಕೊಂಡಳು ವೀಣಾ. ಮಾದೇವಿಯ ಸಮಸ್ಯೆಗೆ ವೀಣಾ ಹುಡುಕಿದ ಪರಿಹಾರವೇನು…..?
ತೇಜಸ್ ನಿನ್ನೆಯೇ ಅಪ್ಪನ ಬಳಿ ಹೋಂವರ್ಕ್ ಮಾಡಿಸಿಕೊಂಡಿದ್ದರಿಂದ ಇವತ್ತು ಭಾನುವಾರ ಪೂರ್ಣ ಬಿಡುವು.
“ರೀ, ರಾಮನಗರದ ಹತ್ತಿರ ಜಾನಪದ ಲೋಕ ಬಹಳ ಚೆನ್ನಾಗಿದೆಯಂತೆ ನಮ್ಮ ಆಫೀಸಿನ ಸುಶೀಲಾ ಹೇಳ್ತಿರ್ತಾಳೆ. ಅಲ್ಲಿಗೆ ಹೋಗೋಣವೇ?” ಎಂದಳು ವೀಣಾ.
“ಆಯ್ತು. ಈಗ್ಲೇ ಏಳಾಯ್ತು. ಬೇಗ ನಡಿ. ತೇಜೂನ ಎಬ್ಬಿಸು,” ಎಂದ ಅರವಿಂದ.
“ಸ್ವಲ್ಪ ಇರಿ. ಮೂಲೆ ಮನೆ ಮುಂದೆ ಬಟ್ಟೆ ಒಣಗಾಕಿದ್ಯಾ ನೋಡ್ತೀನಿ,” ಅಂತ ರಮಾ ಮನೆಯ ಗೇಟು ತೆರೆದಳು.
“ಅರೆ! ಅವರ ಮನೆಯ ಒಗೆದ ಬಟ್ಟೆಗೂ ನಾವು ಹೊರಡೋಕು ಏನೇ ಸಂಬಂಧ?” ಎಂದ ಅರವಿಂದ.
“ಖಂಡಿತಾ ಇದೆ ರೀ. ಮಾದೇವಿ ಮೊದಲು ಅಲ್ಲಿಗೆ ಬಂದು ಪಾತ್ರೆ, ಬಟ್ಟೆ ಮುಗಿಸಿ ಆಮೇಲೆ ಹಿಂದಿನ ಬೀದಿಲಿರೊ ಒಂದು ಮನೆ ಮಾಡೀನೇ ಅವಳು ನಮ್ಮನೆಗೆ ಬರೋದು,” ಎಂದು ಒಗಟೊಡೆದಳು.
“ಹಾಗಾದ್ರೆ ಒಟ್ಟು ಎಂಟು ಮನೇಲಾದ್ರೂ ಕೆಲಸ ಮಾಡ್ತಾಳೆ ಅನ್ನು,” ಅಂದ .
ವೀಣಾ, “ಹೌದು ಅದಕ್ಕೆ ತಾನೇ ಅವಳು ಸ್ಕೂಟೀಲಿ ಓಡಾಡೋದು,” ಎಂದಳು.
ವೀಣಾ ಮಾದೇವಿಯ ದಿನಚರಿ ತೆರೆದಿಟ್ಟಳು, “ಬೆಳಗ್ಗೆ ಐದಕ್ಕೇ ಎದ್ದು ತನ್ನ ಮನೆ ಕೆಲಸ ಇದ್ದಿದ್ದೇ ತಾನೇ, ಅಡುಗೆ ಮಾಡಬೇಕು, ಗಂಡಂಗೆ ಫ್ಯಾಕ್ಟರಿಲಿ ಕೆಲಸ. ಅವನಿಗೆ ಬುತ್ತಿಯಾದಿಯಾಗಿ ಬೇಕು ಬೇಡ ನೋಡ್ಬೇಕು. ಅವಳಿಗೆ ಮಕ್ಕಳಿಲ್ಲ. ಅದೇನೋ ಸಮಸ್ಯೆಯಂತೆ. ಕ್ಯಾನ್ಸರ್‌ನಿಂದ ತೀರಿಕೊಂಡ ತನ್ನ ಅಕ್ಕನ ಮಗನನ್ನು ಸಾಕುತ್ತಿದ್ದಾಳೆ. ಸ್ಕೂಲಿಗೆ ಆ ಹುಡುಗನ್ನ ರೆಡಿ ಮಾಡಬೇಕು. ಆಮೇಲೆ ತಾನಷ್ಟು ತಿಂದು ಕೆಲಸದ ಮನೆಗಳನ್ನು ಒಂದೊಂದಾಗಿ ನಿಭಾಯಿಸಬೇಕು.
“ಎಲ್ಲರೂ ಒಂದೇ ತರಹ ಇದ್ದಿದ್ದರೆ ಸಮಸ್ಯೆಯೇ ಇರದು. ಆದರೆ ಮನೆ ಮನೆಯದು ಒಂದೊಂದು ಕಥೆ. ಕೆಲವರು ನಿಧಾನವಾಗಿ ಬಾ ಯಾರೂ ಎದ್ದಿರೋಲ್ಲ ಅಂದ್ರೆ, ಮತ್ತೆ ಕೆಲವರು ಪಾತ್ರೆ ತೊಳೆದ ಮೇಲೆ ಬಟ್ಟೆ ಒಗೆಯೋಕೆ ಅರ್ಧ ಗಂಟೆನಾದ್ರೂ ಬಿಟ್ಟು ಬಾ, ನಮ್ಮನೇಲಿ ಸ್ನಾನ ನಿಧಾನ ಅಂತಾರೆ. ಅಜ್ಜ, ಅಜ್ಜಿ ಇದ್ರೆ ಅವರ ಸೇವೇನೂ ಮಾಡಬೇಕಾಗುತ್ತೆ. ಒಂದು ಮನೇಲಿ ಅಜ್ಜನನ್ನು ವಾರಕ್ಕೆರಡು ಬಾರಿ ಡಯಾಲಿಸಿಸ್‌ಗೆ ಕರ್ಕೊಂಡ್ಹೊಗ್ಬೇಕಂತೆ. ಈಚೆಗೆ ಗಂಡ ನಾಲ್ಕು ಕಾಸು ಜಾಸ್ತಿ ಓಡಾಡಿದ್ರೆ ಪಕೋಡ ಜೊತೆಗೆ ಬಾಟಲ್ಲು ಇಷ್ಟಪಡ್ತಾನಂತೆ…. ಅರ್ಥವಾಯ್ತ ರೀ,” ಎಂದಳು.
ಪರವಾಗಿಲ್ಲವೇ ಅರ್ಧಾಂಗಿ ಇಷ್ಟೊಂದು ನವಿರಾಗಿ ಮಾತಾಡುವುದು ಯಾವಾಗ ಕಲಿತಳು ಅನ್ನಿಸಿತು, ತನ್ನ ಗುಟ್ಟು ಗುಟ್ಟಾಗಿಯೇ ಉಳಿದ್ರೆ ಸಾಕೆಂದು ನೀಳವಾಗಿ ಉಸಿರೆಳೆದುಕೊಂಡ. ಅವನ ಆಫೀಸಿನ ಗೆಳೆಯರು ತಿಂಗಳಿಗೊಮ್ಮೆಯಾದರೂ ಪಾರ್ಟಿ ಸೇರುವುದಿದೆ. ಮಾತು ಇನ್ನೆಲ್ಲಿಗಾದರೂ ಹೋದೀತೇನೋ ಎಂಬ ಆತಂಕವಾಗಿ ಮತ್ತೆ ನಡಿ ನಡಿ ತಡವಾಗುತ್ತೆ ಎಂದು ಅವಸರಿಸಿದ. ಸರಣೀ ರಜೆಯಲ್ಲಿ ಅವರು ಎಲ್ಲಿಗಾದರೂ ಪ್ರವಾಸ ಹೋಗಿ ಬರುವುದು ಮಾಮೂಲು. ಅದರಲ್ಲೂ ತೇಜಸ್ ಹುಟ್ಟಿದ ಮೇಲೆ ಆ ಸಡಗರಕ್ಕೆ ಸಾಟಿಯಿಲ್ಲ. ಮಗುವಿನ ಆನಂದದಲ್ಲಿ ತಂದೆ, ತಾಯಿ ಪರಮಾನಂದಿಸುತ್ತಾ ರಂತೆ.
ಒಮ್ಮೊಮ್ಮೆ ವೀಣಾ ಕೇಳುತ್ತಾಳೆ, “ರೀ, ಹೆಣ್ಣು ಮಗುವಾಗಿದ್ದರೆ ನೀವು ಇಷ್ಟು ಹಚ್ಚಿಕೊಳ್ಳುತ್ತಿದ್ದಿರಾ…? ನಿಜ ಹೇಳಿ,”
ಅರವಿಂದ ನಗೆ ಸೂಸಿ ತನ್ನ ನಿರುತ್ತರತೆ ಬಿಂಬಿಸುತ್ತಾನೆ.
ತೇಜಸ್ ಚಟುವಟಿಕೆಯಿಂದ ಆಟವಾಡುತ್ತಿದ್ದರೆ ವೀಣಾಳ ಮನಸ್ಸು ಆರು ವರ್ಷಗಳ ಹಿಂದಕ್ಕೆ ಧಾವಿಸುತ್ತದೆ. ಅರವಿಂದನೊಡನೆ ಸಂಸಾರ ಹೂಡಿದಾಗಾಯ್ತಿನಿಂದ ಮಾದೇವಿ ಮನೆ ಸಹಾಯಕಿ.
“ಪಾಪೂನ ನೋಡೋದು ನಂಗೆ ಬುಡಿ. ನೀವಿಬ್ರು ಆಫೀಸಿಗೆ ನಿರಾಳವಾಗಿ ಹೋಗ್ಬನ್ನಿ,” ಅಂತ ಅವಳು ಹೇಳದ ದಿನವೇ ಇಲ್ಲ.
ತೇಜಸ್‌ಗೆ ಒಂದೂವರೆ ವರ್ಷವಾಗುವ ತನಕ ನಿಜವಾಗಿ ಅಳೇ ತಾಯಿಯಾಗಿದ್ದಳು. ಅದಕ್ಕಾಗಿ ಮೂರು ಮನೆಗಳಲ್ಲಿ, “ರವಷ್ಟು ದಿನ ಬೇರೆ ಯಾರನ್ನಾದ್ರೂ ನೋಡ್ಕಳಿ. ನಾನೇ ಬತ್ತೀನಿ ಆಮ್ಯಾಕೆ,” ಅಂದಿದ್ದಳು. ಎಲೆಕ್ಟ್ರಾನ್ ಯುಗ, ಪರಮಾಣು ಯುಗ ಅಂತ ಸುಮ್ಮನೆ ಬೀಗುತ್ತೇವೆ. ಅಬ್ಬಾ! ಅದೆಂಥ ಮೌಢ್ಯ ನಮ್ಮದು! ಅವಿವಾಹಿತರು, ವಿವಾಹಿತರಾಗಿಯೂ ಮಕ್ಕಳಿಲ್ಲದವರು ಮಗುವನ್ನು ತೊಡೆಯ ಮೇಲಿರಿಸಿಕೊಳ್ಳಬಾರದಂತೆ…. ಇದರಿಂದ ಮಗುವಿಗೆ ಶ್ರೇಯಸ್ಸಾಗದಂತೆ! ಅಕ್ಕಪಕ್ಕದವರು, ನೆಂಟರಿಷ್ಟರು ನಿಮ್ಮನೇನೆ ಒಂದು ಸಿಂಗಲ್ ಬೇಬಿ ಸಿಟಿಂಗ್ ಅಂತ ತಿಳೀತು. ಆ ಯಮ್ಮ ಬೇಗ ಮದುವೆಯಾಗಿ ಒಂದು ಮಗುವಿನ ತಾಯಿಯಾಗಲು ಅಂತ ಹಾರೈಸಿದ್ದರು. ಎಂತಹ ಕಠೋರ ಶುಭ ಕಾಮನೆಯದು?
ಒಂದೂವರೆ ವರ್ಷದಿಂದ ಒಂದು ದಿನ ಕೂಡ ತಪ್ಪಿಸಿಕೊಳ್ಳದಿದ್ದವಳು, “ಅವ್ವ, ನಾಳಿಕಿಂದ ವಾರ ಬರಾಕಿಲ್ಲ,” ಅಂದಾಗ ವೀಣಾಗೆ ಅಚ್ಚರಿ, ಕೈ ಕಾಲು ಬಿದ್ದುಹೋದಂತಾಗಿತ್ತು.
“ಇದೇನಮ್ಮ ಹೀಗೆ ಅಂತಿ? ಇವನಿಗೆ ನಾಳಿದ್ದು ಇಂಜೆಕ್ಷನ್ ಬೇರೆ. ಇವನ ಅಳು ಸುಧಾರಿಸೋಕೆ ನೀನೇ ಸರಿ,” ಎಂದಿದ್ದಳು.
ಮಾದೇವಿ ಕಾರಣ ಹೇಳಿದ ಮೇಲೆ ವೀಣಾ ತಾನಿಂಥ ತಪ್ಪು ಮಾಡಬಹುದೇ? ಇದಕ್ಕೆ ಕ್ಷಮೆಯುಂಟೆ ಅನ್ನಿಸಿ ಪಾಪಪ್ರಜ್ಞೆಯಿಂದ ಅದೆಷ್ಟು ಕೊರಗಿ ಸೊರಗಿದಳೋ…..
“ಅವ್ವ, ಹುಡುಗ ಒಪ್ಪಿದ್ನ. ನಂಗೆ…. ನಂ… ನಾಚ್ಕೆ ಆತದ್ರ್ವ ಹೇಳಾಕೆ,” ಅಂದಿದ್ದಳು.
ವೀಣಾಳ ಕಣ್ಣಾಲಿಗಳು ತೇವವಾದವು. ವರಾಂಡಾದಲ್ಲಿ ಪತ್ರಿಕೆ ಓದುತ್ತಿದ್ದ ಅರವಿಂದ ಗಹನ ಸುದ್ದಿಯನ್ನು ಆಗಲೇ ಗ್ರಹಿಸಿದ್ದ.
“ಅಲ್ಲಮ್ಮ, ಮದ್ವೆಯಾದ ಹೊಸದು. ನೀವಿಬ್ರು ನಂದಿಬೆಟ್ಟ, ಶ್ರೀರಂಗಪಟ್ಣ ಇಲ್ಲ ಕೋಲಾರದ ಅಂತರಗಂಗೆ ನೋಡಿ ಬರಬಾರ್ದೆ?” ಎಂದ.
ಅದಕ್ಕೆ ಮಾದೇವಿ, “ಈವಾಗ ಬ್ಯಾರೇನೆ ಇರ್ಬೇಕು,” ಅಂತ ಒಂದು ದೇವರ ಜಾತ್ರೆಯ ಹೆಸರು ಹೇಳಿದ್ದಳು. ಅರವಿಂದ ತನ್ನ ಬೆನ್ನು ತಿವಿದು, “ಮಾರಾಯ್ತಿ ಅವಳು ಹನಿಮೂನಿಗೆ ಹೋದರೆ ತೇಜಸ್‌ನ ಪಾಡು ಯೋಚ್ನೆ ಮಾಡಿದಿಯಾ? ಪಾಪ ಅವಳನ್ನ ಬೆಳಗ್ಗೆ ಆರೂವರೆಗೆಲ್ಲ ರಾಜು ಬಿಟ್ಟು ಹೋಗ್ತಾನೆ. ಇನ್ನೂ ಐದಾರು ತಿಂಗಳು ಅವಳು ಯೆಳೆ ಮಗ ಹತ್ತಿರವೇ ಇರ್ಲಿ ಬುಡಿ ಸಾರ್. ಅಮ್ಮಾವರು ನಮ್ಮೂರ ದೇವರ ಬ್ಯಾರೆ ಬ್ಯಾರೇನ ಅಂತಾನಲ್ಲ ರಾಜು. ಅವನೇ ನಮ್ಮ ಆಪದ್ಬಾಂಧವ ಅಲ್ಲ ಹೇಳು?”
“ಥೂ ನಿಮ್ಮ!” ಅಂದಳು ಪತಿಯ ಮೇಲೆ ಸಿಟ್ಟಾಗಿ, “ನಿಮಗೆ ಸಮಯ, ಸಂದರ್ಭ ಒಂದೂ ತಿಳಿಯದು. ನವವಿವಾಹಿತರು ಹೋಗಿ ಬರಲಿ ಎಲ್ಲಿಗಾದರೂ ಅಂತ ಬಾಯ್ಲಾದ್ರು ಬಂತ ನಿಮಗೆ? ಹನಿಮೂನು, ಪಿಕ್‌ನಿಕ್ಕು, ಬರ್ತ್‌ಡೇ ಎಂತಹವರಿಗೂ ಇರುತ್ತೆ ಅನ್ನೋದೇ ಮರೀತಿಲ್ಲ ನಾ….. ಮಾದೇವಿ ಬಹಳ ಸ್ವಾಭಿಮಾನಿ. ತೇಜೂಗೆ ಆಗ್ಲೇ ನಾನೊಂದು ಪ್ಲೇಹೋಮ್ ನೋಡಿದ್ದೀನಿ. ಅವನು ಇನ್ನೆಷ್ಟು ದಿನ ಮಗು ಹೇಳಿ,” ಅಂತ ವೀಣಾ ಹೇಳಿದಾಗ ಅರವಿಂದ ಮಂಕಾದ.
“ಮೊದ್ಲು ಮದುವೆ ಯಾವಾಗ ಅನ್ನುತ್ತಿದ್ದರು ಅದಕ್ಕುತ್ತರ ಸಿಕ್ಕಾಗ ಮುಂದೆ ಇನ್ನೂ ಮಾವಿನ ಕಾಯಿ, ಕೆಮ್ಮಣ್ಣು ತಿನ್ನಲಿಲ್ವ ಎಂದನ್ನುತ್ತಾರೆ. ಜನರೇ ಹಾಗೇ ರೀ.”
ವೀಣಾ ಗೊಣಗುತ್ತಿದ್ದುದು ಅರವಿಂದನಿಗೆ ಕೇಳಿಸಿತು. “ಗಂಡ ಹೆಂಡತಿ ಮೂರು ವರ್ಷ ಹಾಯಾಗಿದ್ರೆ ಅವರಿಗೇನು ಹೊಟ್ಟೆ ಉರಿ?” ಅಂದ.
“ಹಾಗಲ್ಲ ರೀ, ಮಾದೇವಿದು ಬೇರೇನೇ ಪ್ರಾಬ್ಲಂ. ಅವೆಲ್ಲ ನಿಮ್ಗೆ ಆಮೇಲೆ ನಿಧಾನವಾಗಿ ಹೇಳ್ತೀನಿ,” ಎಂದಳು ವೀಣಾ.
“ಹೌದೆ? ಹಾಗಾದರೆ ನಮ್ಮ ಆಫೀಸಿನ ಸಹೋದ್ಯೋಗಿ ಒಬ್ಬರಿದ್ದಾರೆ. ಅವರ ಅಣ್ಣನ ಮಗ ನವೀನ್ ಒಳ್ಳೆ ಫರ್ಟಿಲಿಟಿ ತಜ್ಞ,” ಎಂದ.
“ಅಷ್ಟು ಉಪಕಾರವಾಗ್ಲಿ. ಮಾದೇವಿ, ರಾಜುವನ್ನು ಒಮ್ಮೆ ಅವರ ಹತ್ತಿರ ಕರೆದೊಯ್ಯೋಣ,” ಎಂದಳು ವೀಣಾ.
ಮುಂದಿನ ಶನಿವಾರ ಒಂದು ಅಪಾಯಿಂಟ್‌ಮೆಂಟ್ ಸಿಕ್ಕಿತು. ಬ್ರಿಗೇಡ್ ರಸ್ತೆಯ ಒಂದು ಸಂದಿನಲ್ಲಿ ಅವರ ಕ್ಲಿನಿಕ್. ಬೆಳಗ್ಗೆ ಹತ್ತಕ್ಕೆ ಭೇಟಿ ನಿಗದಿಯಾದರೂ ಅರ್ಧ ತಾಸು ಕಾಯುವುದು ತಪ್ಪಲಿಲ್ಲ. ಮೂರ್ನಾಲ್ಕು ಪರೀಕ್ಷೆಗಳಾದವು. ಅರವಿಂದ, ವೀಣಾ ಅಗತ್ಯ ಶುಲ್ಕ ಕಟ್ಟಿದರು. ಎರಡು ದಿನದ ಬಳಿಕ ರಿಪೋರ್ಟ್ ಬಂತು. ಮಾದೇವಿ ಮಾತೆಯಾಗಲು ಒಂದೇ ದಾರಿ. ಬಾಡಿಗೆ ತಾಯಿಯ ಅವಲಂಬನೆ.ರಾಜು,
“ಅಯ್ಯೋ ಅಂಥವೆಲ್ಲ ನಮ್ಮಂಥೋರಿಗೆ ಯಾಕೆ ಬುಡಿ,” ಎಂದ.
ಮಾದೇವಿಗೆ ಮನಸ್ಸಿನಲ್ಲಿ ಯಾಕಾಗಬಾರದು ಅನ್ನಿಸಿದರೂ ಪತಿಯ ಉಪೇಕ್ಷೆ ಎದುರಿಸಲಾಗಲಿಲ್ಲ. “ಮೂದೇವಿ ಹೋಗು…. ನಿಂಗೆ ಬಾಡಿಗೆ ತಾಯಿ ಯಾರು ಸಿಗ್ತಾರೇಳು ಮಗ ಹೆತ್ತು ಕೊಡಾಕೆ…. ಹೋಗೋಗು ಸುಮ್ನೆ,” ಎಂದಾಗ ಅವಳಿಗೆ ಅಸಹಾಯಕತೆ, ಹತಾಶೆಯ ಕಟ್ಟೆ ಒಡೆದಿತ್ತು. ವೀಣಾಗೆ ಒಂದಾದ ಮೇಲೊಂದರಂತೆ ಡಜನ್ ಫೋನುಗಳು. ಮಾದೇವಿ ಬಂದು ಹೋದಳ, ನಿಮ್ಮನೆ ಕೆಲಸ ಮುಗೀತಾ, ಈವತ್ತು ಬರ್ತಾಳೆ ತಾನೆ, ಬಂದ್ರೆ ಬೇಗ ಕಳಿಸಿ ಮುಂತಾಗಿ. ಬರುವುದಿಲ್ಲವೆಂದಾದರೆ ಅವಳೇ ಫೋನು ಮಾಡುತ್ತಿದ್ದಳು. ಇದೇಕೆ ಹೀಗೆ? ರಾಜುವಾದರೂ ಒಬ್ಬರಿಗೆ ಮೆಸೇಜ್ ಕೊಟ್ಟಿದ್ದರೆ ಆಗುತ್ತಿತ್ತು. ಕ್ಷಣಾರ್ಧದಲ್ಲಿ ಎಲ್ಲರಿಗೂ ತಿಳಿಯುತ್ತಿತ್ತು.
ರಂಗೋಲಿ…. ರಂಗೋಲಿಯಮ್ಮ ಎನ್ನುತ್ತ ಬರುವ ಸಾಕಮ್ಮನೇ ವಿಷಯವೇನೆಂದು ಹೇಳಬೇಕಾಯಿತು. “ಮಾದೇವಿ ಇನ್ನು ತಿಂಗಳಗಂಟ ಬರೋಕ್ಕಾಯ್ತದೋ ಇಲ್ವೋ ಕಾಣೆ. ಬೋ ಜರ, ಕೈ ಕಾಲು ಬ್ಯಾನೆ. ಅವಳಿಗಿರೊ ಕೊರಗು ಬ್ಯಾರೇನೆಯ ನಂಗೊತ್ತಾಗಿಲ್ವ…. ನಾನೂ ಒಂದು ಹೆಣ್ಣು. ಗಣೇಸ ನರ್ಸಿಂಗ್ ಓಂಗೆ ಸೇರಸ್ವನೆ ರಾಜು. ಅವನತ್ರ ಕಾಸಿರ್ಲಿಲ್ಲ. ಸೊಪ್ಪಿನಂಗಡಿ ರಂಗಮ್ಮ, ಲಾಂಡ್ರಿ ಶೀಲ, ಕಾಯಂಗಡಿ ಬಸಪ್ಪ ಎಲ್ಲ ವಸಿ ವಸಿ ಆಕಿದ್ವಿ. ಪಾಪ ಮಗ ಜಿಂಕೆ ಹಂಗೆ ಓಡಾಡೋದು. ವಸಿ ಬಿರ್ನೆ ಗುಣ ಮಾಡೇ ತೀರ್ತಾನೆ.”
“ನಾನೇ ಒಂದಷ್ಟು ಉಪ್ಪಿಟ್ಟು ಮಾಡ್ತೀನಿ. ತೇಜೂಗೆ ಹೇಗೂ ಬ್ರೆಡ್ಡು ಜಾಮೂ ಇದೆ. ನೀನು ಪಾತ್ರೆ ತೊಳೆದರಾಯ್ತು,” ಎಂದ ಅರವಿಂದ.
“ಸರಿ, ನಾನಿವತ್ತು ಆಫೀಸಿಗೆ ರಜೆನೂ ಹಾಕ್ಬೇಕಿಲ್ಲ. ಮುಂದೆ ಸಮಯಕ್ಕೆ ಬೇಕಾಗುತ್ತೆ,” ಎಂದವಳೆ ಓದಿ ಹಿಂದಿರುಗಿಸಬೇಕಿದ್ದ ಆಫೀಸಿನ `ವಿಮನ್ಸ್ ಎರಾ’ ಪತ್ರಿಕೆಯ ಒಳಗಿರಿಸಿದ್ದ ಅರ್ಜಿಯನ್ನು ಹರಿದಳು. ಈಚೆಗಂತೂ ವೀಣಾ ಒಂದು ವಾರ ಆ ಮ್ಯಾಗಝೀನ್ ಮಿಸ್ ಮಾಡಿಕೊಂಡವಳಲ್ಲ. ಆಫೀಸಿಗೆ ಬರುತ್ತಲೇ ಅದನ್ನು ತಾನು ತನಗೆ ಅನ್ನುತ್ತ ಹಟ ಹೂಡಿ ತನ್ನ ಸರದಿಯನ್ನು ಮೊದಲನೆಯದಾಗಿ ಮಾಡಿಕೊಳ್ಳುತ್ತಿದ್ದಳು. ಬಹು ಇಷ್ಟವಾಗುತ್ತಿದ್ದದು ಜಾಹೀರಾತಿನ ಪುಟಗಳು. ಅದರಲ್ಲೂ ವಿಶೇಷವಾಗಿ ಸರೋಗೇಟ್ ಮದರ್ ಕುರಿತು. ಅಂದು ವೀಣಾ ಮಗನನ್ನು ಚಿಕ್ಕಮ್ಮನ ಮನೆಯಲ್ಲಿ ಬಿಟ್ಟು ಆಫೀಸಿಗೆ ಹೋದಳು. ಸಂಜೆ ಬರುವಾಗ ತೇಜೂವನ್ನು ಕರೆದುಕೊಂಡು ಬಂದಳು. ಅರವಿಂದ ಕೂಡ ಆಗಲೇ ಬಂದಿದ್ದ.
“ರೀ ಒಂದು ವಾರ ರಜೆ ಹಾಕಿ ಬಂದೆ. ಯಾಕೋ ರೆಸ್ಟ್ ತಗೋಳ್ಳೋಣ ಅನ್ನಿಸ್ತು.”
“ಸರಿ ಹಾಗೆ ಮಾಡು. ಅಷ್ಟು ಹೊತ್ತಿಗೆ ಮಾದೇವಿನೂ ಹುಷಾರಾಗ್ತಾಳೆ,” ಅಂದ ಅರವಿಂದ.
ಮೇಜಿನ ಮೇಲೆ ಹಳೆಯ `ವಿಮನ್ಸ್ ಎರಾ’ ಸಂಚಿಕೆ ಕಾಣಿಸಿತು, “ಇದೇನೇ ಇದು? ವಾಪಸ್ ಕೊಡೋದು ಮರೆತ್ಹೋಯ್ತಾ?”
“ಇಲ್ಲ ಇಲ್ಲ…. ನಾನಿನ್ನೂ ಓದುವುದಿತ್ತು ರೀ. ಅದಕ್ಕೇ ಹಾಗೇ ತಂದೆ,” ಎಂದಳು.
ವೀಣಾ ಹಾಗೇ ತರುವವಳಲ್ಲ….. ಸದಾ ಹೊಸದು ತಂದು ಕಣ್ಣಾಡಿಸದಿದ್ದರೆ ಅವಳಿಗೆ ನಿದ್ದೆಯೇ ಬರದು. ಸಣ್ಣದೊಂದು ಅಚ್ಚರಿ ಅರವಿಂದನ ಮುಖದಲ್ಲಿ ಮೂಡಿತು. ಕುತೂಹಲ ಅವನನ್ನು ಅವಳ ಕಣ್ಣು ತಪ್ಪಿಸಿ ಅದರ ಪುಟಗಳನ್ನು ತೆರೆಯುವಂತೆ ಮಾಡಿತ್ತು. `ಸರೋಗೇಸಿ ಅಂಡ್ ಇಟ್ಸ್ ಲೀಗೆಸಿ’ ಇದೆ ಇರಬೇಕು ವೀಣಾಳನ್ನು ಹಿಡಿದಿಟ್ಟ ಲೇಖನ.
ಅವನು ಲ್ಯಾಪ್‌ಟ್ಯಾಪ್ ತೆರೆಯುತ್ತಲೇ ಅದರ ಕುರಿತ ವಿಕಿಪೀಡಿಯಾ ಮೂಡಿ ಇರಬೇಕನ್ನುವುದು ಇದೆಯಾಗಿಸಿತ್ತು. ಇವಳು ಮಾದೇವಿಯ ಸಲುವಾಗಿ ಯಾವುದಾದರೂ ವೈದ್ಯಕೀಯ ಸಂಸ್ಥೆಯ ವಿವರ ಕಲೆಹಾಕುತ್ತಿರಬಹುದೆನ್ನಿಸಿತು. ಪತ್ನಿಯ ಈ ಪರಿಯ ಪರೋಪಕಾರ ಗುಣವನ್ನು ಅವನು ಮನಸ್ಸಿನಲ್ಲೇ ಮೆಚ್ಚಿದ. ಭಾರತದಲ್ಲಿ, ವಿದೇಶಗಳಲ್ಲಿ ಆ ಬಗೆಗಿನ ನೀತಿ, ನಿಯಮಗಳೇನು? ರಹಸ್ಯ ಕಾಪಾಡುವಿಕೆ, ಹಕ್ಕುಂಟಾದರೂ ಜನಿಸುವ ಮಗುವಿನ ಲಿಂಗ ಆಯ್ಕೆ ಇವರದು ಮುಂತಾದ ವಿವರಗಳು ಅವುಗಳಲ್ಲಿದ್ದವು. ವೀಣಾ ಸಂಶೋಧನೆ ಕೈಗೊಂಡು ಮಹಾ ಪ್ರಬಂಧವನ್ನೇ ರಚಿಸಲು ಮುಂದಾಗುತ್ತಿದ್ದಾಳೆಯೇ ಎಂಬ ಅನುಮಾನವಾಯಿತು ಅರವಿಂದನಿಗೆ.
ಮರುದಿನ ದಂಪತಿ ತಾಸು ಮೊದಲೇ ಆಫೀಸಿನಿಂದ ಮನೆಗೆ ಬಂದು ತೇಜುವಿನೊಡನೆ ಕಾರಿನಲ್ಲಿ ಆಸ್ಪತ್ರೆಗೆ ಹೊರಟರು. ಅರವಿಂದ ಕಾರು ಕೊಂಡರೂ ಟ್ರ್ಯಾಫಿಕ್ ಜಾಮ್ ಗೆ ಹೆದರಿ ಬಳಸುವುದು ವಿರಳ. ಮಾದೇವಿಯ ವೆಂಟಿಲೇಟರ್ ತೆಗೆದಿದ್ದು ಕಂಡು ಬಹಳ ಸಮಾಧಾನವಾಯಿತು. ಅಲ್ಲಿದ್ದ ನರ್ಸ್, `ಆವಾಗವಾಗ ಬಹಳ ಸುಸ್ತಾಗ್ತಾರೆ. ಎಷ್ಟಾದ್ರೂನೂ ಮಾನಸಿಕ ಚಿಂತೆ ನೋಡಿ, ಸೊರಗಿಸಿಬಿಡುತ್ತೆ. ವೆಂಟಿಲೇಟರ್ ಯಾವಾಗಂದ್ರೆ ಆವಾಗ ಬೇಕಾಗುತ್ತೆ,’ ಎಂದರು.
ಮಾದೇವಿ ತೇಜುವನ್ನು ಕಂಡು ಪ್ರಯಾಸ ಲೆಕ್ಕಿಸದೆ ತೇಜುವಿನ ಕೆನ್ನೆ ಚಿವುಟಿದಳು. ಅರವಿಂದ ಕಿತ್ತಳೆ, ಸೇಬಿನ ಹಣ್ಣುಗಳಿದ್ದ ಕಿರುಬುಟ್ಟಿಯನ್ನು ಆಕೆಯ ಕೈಗಿತ್ತು, “ಬೇಗ ಚೇತರಿಸಿಕೊಂಡು ಬಾಮ್ಮ,” ಅಂದ,
“ರಾಜು ಎಲ್ಲಿ?”
“ಇಲ್ಲೇ ದೊಡ್ಡಾಕ್ಟರ್ ಕಾಣಾಕೆ ಈಗ ಓದ್ರು….. ಅಮ್ಮಾವ್ಕೇ. ನಿಮ್ನ ಒಂದು ಕೇಳ್ತೀನಿ…. ನೀವೇ ಯೋಳ್ಲೇ ಬೇಕು,” ಅಂದ ಮಾದೇವಿ ವೀಣಾಳ ಕೈಗಳನ್ನು ಬೊಗಸೆಯಲ್ಲಿ ಬಂಧಿಸಿದಳು.
“ಪರವಾಗಿಲ್ಲ, ಏಳ್ಬೇಡ. ಅದೇನು ಹೇಳು.”
“ಅದೇ ಈ ಬಾಡಿಗೆ ತಾಯಿ ಅಂತಾರಲ್ಲ. ಹಂಗಂದ್ರೇನು ವಸಿ ಬಿಡಿಸಿ ಯೋಳ್ರಕ್ಕ.”
“ಓ ಅದಾ? ನೋಡಮ್ಮ ಅದು ಹೀಗೆ…. ಗಂಡ, ಹೆಂಡತಿ ಇರ್ತಾರೆ. ಹೆಂಡತಿ ಗರ್ಭಿಣಿಯಾಗಿ ಮಗು ಹೆರೋಕೆ ಆಗದಷ್ಟು ವೀಕು ಅನ್ನು. ಆಗ ಅವಳ ಅಂಡಾಣುಗಳನ್ನು ತಗೋತಾರೆ. ಗಂಡನ ವೀರ್ಯಾಣು ತೆಗೆದುಕೊಂಡು ಅದರಿಂದ ಅಂಡಾಣುವಿನ ಫಲವತ್ತಾಗಿಸ್ತಾರೆ. ಇದಕ್ಕೆ ಭ್ರೂಣಾಂಕುರ ಅಂತಾರೆ. ಮಗುವಿನ ಮೊದಲ ಅವಸ್ಥೆಯಿದು. ಸರಿ ಈ ಭ್ರೂಣಾಂಕುರ ಬೆಳೆದು ಪೂರ್ತಿ ಮಗುವಾಗಲು ಒಂದು ಮನೆ ಬೇಕೇ ಬೇಕಲ್ಲ. ಅದೇ ನಾವು ಯಾರನ್ನು ಬಾಡಿಗೆ ತಾಯಿ ಅಂತೀವಲ್ಲ ಅವರ ಗರ್ಭಕೋಶ. ಅವರೇ ಮಗು ಹೆರುವುದಾದರೂ ನಿಜವಾದ ತಾಯಿ ಅಂಡಾಣು ಯಾರದೋ ಅವರೇ. ನಿಜವಾದ ತಂದೆ ವೀರ್ಯಾಣು ಯಾರದೋ ಅವರೇ. ಗೊತ್ತಾಯ್ತಾ? `ಬಾಡಿಗೆ ತಾಯ್ತನ ಅಥವಾ ಸರೋಗೆಸಿ’ ಒಂದು ವಿಶಿಷ್ಟ ಸಮಾಜ ಸೇವೆ. ಅದು ವ್ಯಾಪಾರವಾಗಬಾರದು,” ಎಂದಳು.
ಅರವಿಂದ ಮುಗೀತಲ್ಲ ನಿನ್ನ ಭಾಷಣ ಅನ್ನಲು ಹೊರಟ ಭಾವುಕನಾದ. ವೀಣಾಳ ಕೈಗಳನ್ನು ಮಾದೇವಿ ಮತ್ತೂ ಬಿಗಿಗೊಳಿಸಿ, “ನಂಪಾಲಿಗೆ ಯಾರಂಥ ದೇವತೆ ಸಿಗ್ತಾರೇಳಿ,” ಎಂದು ಬಿಕ್ಕಿದಳು. ತೇಜು ಹೊರಡೋಣ ಅಂತ ಹಟ ಮಾಡಿದ. ರಾಜು ಬರೋತನಕ ಕಾಯೋದು ಸರಿಯೆನ್ನಿಸಿತು. ಐದೇ ನಿಮಿಷದಲ್ಲಿ ಅವನು ಕಾಫಿ ಟ್ರೇ ಹಿಡಿದು ಬಂದ, “ಕ್ಯಾಂಟಿನ್‌ನಲ್ಲಿದ್ದಾಗಲೇ ನೀವು ಬಂದಿರೋದು ಗೊತ್ತಾಯ್ತು…. ಇಗೋಳಿ,” ಅಂದ. ತಮ್ಮನ್ನೇ ಉಪಚರಿಸಿದ್ದಕ್ಕೆ ಏನು ಹೇಳಬೇಕೊ ತಿಳಿಯದಾಯಿತು. ವೀಣಾ ಮಾದೇವಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು, “ಸರೀಪ್ಪ ಚೆನ್ನಾಗಿ ನೋಡ್ಕೊ….. ದೇವರಿದ್ದಾನೆ,” ಎಂದು ಹೊರಬಂದರು.
ಕಾರು ಮನೆಯತ್ತ ಹೊರಟಿತು. ರಾತ್ರಿ ಎಂಟೂವರೆ ದಾಟಿತ್ತು. ಕೆಲವೆಡೆ ಬೀದಿ ದೀಪಗಳು ಉರಿಯದೆ ಬೆಳಕಿನ ಕಿಮ್ಮತ್ತನ್ನು ಎತ್ತಿಹಿಡಿದಿದ್ದವು. ತಿರುವಿನಲ್ಲಿ ನಿಂತ ವಾಹನಗಳು…. “ಜೋಪಾನ, ನಿಧಾನ ರೀ,” ಅನ್ನುತ್ತಿದ್ದಳು ತೇಜೂವನ್ನು ಹೆಗಲ ಮೇಲೆ ಮಲಗಿಸಿಕೊಂಡಿದ್ದ ವೀಣಾ, ಮನೆ ಸಮೀಪಿಸಲು ಎರಡು ಕಿ.ಮೀ. ಬಾಕಿಯಿತ್ತು. “ಇದು ಕೊನೆ ತಿರುವು,” ಅಂದ ಅರವಿಂದ.
“ಇಲ್ಲ ಇಲ್ಲ….. ಇನ್ನೂ ಒಂದು ಸಾಧ್ಯ!”
“ನೀನು ಏನು ಹೇಳುತ್ತಿರುವೆ?”
“ರೀ, ಮಾದೇವಿಯಂಥವರು ಉಳೀಬೇಕಾದ್ರೆ ಒಂದು ಆದರ್ಶ ಸಾಕಾದರೂ ಇಲ್ವೇ ಇಲ್ಲ ಅನ್ನುವಷ್ಟು ಅಪರೂಪವಾಗ್ಬೇಕು….”
ಅರವಿಂದ ಹೇಳಿದ ತಿರುವು ಬಂತು. ಅಲ್ಲೊದೆಡೆ ಪಾಳು ಗೋಡೆಯ ಮೇಲೆ `ಈ ಚಲನಚಿತ್ರದ ಕೊನೆ ನಿಮ್ಮ ತೀರ್ಮಾನಕ್ಕೆ ಬಿಟ್ಟಿದೆ’ ಸಿನಿಮಾದ ಹಳೆಯ ಜಾಹೀರಾತೊಂದನ್ನು ಕಾರಿನ ಹೆಡ್‌ಲೈಟ್‌ಗಳು ಪ್ರಕಾಶಿಸಿದ್ದವು. ವೀಣಾಳ ಪ್ರಶ್ನೆಗೆ ಉತ್ತರಿಸಬೇಕಾದ್ದಿಲ್ಲ ಅನ್ನಿಸಿತು ಅವನಿಗೆ.