ನಮ್ಮ ನಗರ ಬೆಂಗಳೂರು ಮೊದಲು ಇಷ್ಟು ಬೆಳೆದಿರಲಿಲ್ಲ. ಐ.ಟಿ. ಸಿಟಿಯಾಗಿ ಇಡೀ ದೇಶದ ಎಲ್ಲರೂ ಉದ್ಯೋಗವನ್ನರಸಿ ಇಲ್ಲಿಗೆ ಬರುವಂತಾಯಿತು. ಬಂದವರಿಗೆ ವಾಸಿಸಲು ವಸತಿ ಬೇಡವೇ? ಗಗನಚುಂಬಿ ಕಟ್ಟಡಗಳ ನಿರ್ಮಾಣವಾದ. ವಾಹನಗಳ ಸಂಖ್ಯೆ ಹೆಚ್ಚಾಯಿತು. ರಸ್ತೆಗಳ ಅಗಲೀಕರಣವಾಯಿತು. ಮೆಟ್ರೋ ಬಂದಿತು. ಪರಿಣಾಮ ಸಾಕಷ್ಟು ಮರಗಳ ಮಾರಣಹೋಮ ಆಯಿತು. ಈಗಾಗಲೇ ಬೇಸಿಗೆಯ ಆಗಮನವಾಗಿದೆ. ಆದರೆ ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣ ಭೂಮಿಯೆಲ್ಲಾ ಒಣಗಿಹೋಗಿದೆ. ನೆಟ್ಟ ಗಿಡಗಳೆಲ್ಲಾ ಮಂಕಾಗಿವೆ. ಈಗಲೇ ಹೀಗಾದರೆ ಇನ್ನು ಮುಂದಿನ ಗತಿ ಏನು? ಕುಡಿಯುವ ನೀರಿಗೂ ತತ್ವಾರ ಬರಬಹುದು. ಇದು ನಗರದ ಸ್ಥಿತಿ. ಉದ್ಯಾನ ನಗರಿಯಾದ ನಮ್ಮ ಬೆಂಗಳೂರು ಬರಡಾಗಿ ಹೋಗುತ್ತಿದೆ. ಆದ್ದರಿಂದ ಹಸಿರನ್ನು ಬೆಳೆಸುವಲ್ಲಿ ಎಲ್ಲರೂ ತಮಗೆ ಸಾಧ್ಯವಾದ ರೀತಿಯಲ್ಲಿ ಸಹಕರಿಸುವುದು ನಮ್ಮೆಲ್ಲರ ಉಳಿವಿನ ಪ್ರಶ್ನೆಯಾಗಿದೆ. ಅಂತೆಯೇ ಎಲ್ಲರೂ ಗಿಡ ಮರಗಳನ್ನು ನೆಡಲು, ಬೆಳೆಸಲು ಉತ್ಸುಕರಾಗಿದ್ದಾರೆ. ಮನೆಯ ಒಳಗೆ, ಹೊರಗೆ ಸ್ವಲ್ಪ ಸ್ಥಳವಿದ್ದರೂ ಅಲ್ಲಿಯೂ ಗಿಡಗಳನ್ನು ಬೆಳೆಸುವ ಆಸೆ. ಹಸಿರು ಜೀವನದ ಉಸಿರೂ ಹೌದು. ಜೊತೆಗೆ ನೋಡಲು ಕಣ್ಣಿಗೆ ಮುದವನ್ನೂ ನೀಡುತ್ತದೆ. ಎಷ್ಟೇ ಬಿಸಿಲಿದ್ದರೂ ಗಿಡಗಳ ನರ್ಸರಿಯಂತೂ ಎಲ್ಲೆಡೆ ಇದೆ. ಜೊತೆಗೆ ದಿನ ಬೆಳಗಾದರೆ ಪುಟ್ಟ ಪುಟ್ಟ ಹಸಿರು ಗಿಡಗಳು ಗಾಡಿಗಳಲ್ಲಿ ಮಾರಾಟಕ್ಕೆ ಲಭ್ಯ. ಹಾಗಾದರೆ ಮನಸು ಮಾಡಿದರೆ ಮನೆಯ ಮುಂದುಗಡೆ ಅಥವಾ ಪಕ್ಕವಾಗಲೀ, ಬಾಲ್ಕನಿಯಲ್ಲಾಗಲೀ ಜೊತೆಗೆ ಮನೆಯೊಳಗೆ ಪಡಸಾಲೆಯಲ್ಲೂ ಸಹ ಹಸಿರನ್ನು ಮೂಡಿಸಬಹುದು. ವಿದೇಶಗಳಲ್ಲಿ ಮನೆಯ ಮುಂದೆ ಇರುವ ಬಹಳ ಸಣ್ಣ ಜಾಗದಲ್ಲಿಯೇ ಪುಟ್ಟದೊಂದು ಉದ್ಯಾನವನವನ್ನು ನಿರ್ಮಿಸಿಬಿಡುತ್ತಾರೆ. ಒಂದು ಪುಟ್ಟ ಹಸಿರು ಹಾಸು, ಅದರ ಸುತ್ತಲೂ ಪುಟ್ಟ ಪುಟ್ಟ ಹೂವಿನ ಗಿಡಗಳು ಅಲ್ಲೊಂದು ವಾಟರ್ ಬಾಡಿ ಅರ್ಥಾತ್ ಚಿಕ್ಕದೊಂದು ಕೊಳ. ಅದರ ಜೊತೆ ಸಣ್ಣದೊಂದು ದಿಬ್ಬವನ್ನು ಕಟ್ಟಿ ಉದ್ಯಾನವನವನ್ನೇ ಮೂಡಿಸಿಬಿಡುತ್ತಾರೆ.
ಈಗ ನಮ್ಮಲ್ಲೂ ಹಸಿರನ್ನು ಕಾಣುವ ಆಸೆ ಎಲ್ಲರದು. ಅವರ ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಸ್ವಲ್ಪ ಸ್ಥಳವನ್ನು ಪುಟ್ಟದೊಂದು ತೋಟಕ್ಕಾಗಿ ಮೀಸಲಿಟ್ಟಾಗ ಕಣ್ಣಿಗೆ ತಂಪೆನಿಸುವುದಲ್ಲದೆ, ಒಂದಷ್ಟು ಆಮ್ಲಜನಕ ದೊರಕೀತು. ದೊಡ್ಡ ನಿವೇಶನಗಳಲ್ಲಿ ಹೊಸದಾಗಿ ಮನೆ ಕಟ್ಟುವವರು ಶೇ.10 ಭಾಗವನ್ನು ಹಸಿರು ಮೂಡಿಸಲು ಮೀಸಲಿಟ್ಟಾಗ ಸುಂದರವಾದ ತೋಟವನ್ನು ನಿರ್ಮಿಸಬಹುದೆನ್ನುತ್ತಾರೆ ಆರ್ಕಿಟೆಕ್ಟ್ ರುದ್ರೇಶ್.
ಒಂದು ಪುಟ್ಟ ಲಾನ್, ಸಣ್ಣ ಕೊಳ, ಸೇತುವೆ ಒಂದೆರಡು ಮರಗಳು ದಿನನಿತ್ಯ ಹೂವು ಬಿಡುವ ಗಿಡಗಳನ್ನು ಬೆಳೆಸಬಹುದು. ಸಣ್ಣದೊಂದು ವೀಳ್ಯದ ಬಳ್ಳಿಯನ್ನು ಸಹ ಹಬ್ಬಿಸಬಹುದು ಎನ್ನುವುದು ಅವರ ಅಭಿಪ್ರಾಯ.
“ನಾವು ಎಚ್.ಎಸ್.ಆರ್ ಲೇಔಟ್‌ಗೆ ಬಂದಾಗ ವೀಳ್ಯದೆಲೆಗಳನ್ನು ತರಲು ದೂರ ಹೋಗಬೇಕಾಗುತ್ತಿತ್ತು. ಆದರೆ ಈಗ ಮನೆಯಲ್ಲಿಯೇ ವೀಳ್ಯದ ಬಳ್ಳಿಯನ್ನು ಹಬ್ಬಿಸಿದ್ದೇವೆ. ಹಬ್ಬಗಳಿಗೂ ಮಾತ್ರವಲ್ಲ, ವೀಳ್ಯದ ಎಲೆ ಹಾಕಿಕೊಳ್ಳುವ ಗೆಳತಿಯರಿಗೂ ತಾಜಾ ಎಲೆಯನ್ನು ನೀಡುತ್ತೇನೆ. ಮನೆಯಲ್ಲಿಯೇ ಬೆಳೆಸಿದ ಬಳ್ಳಿಯಿಂದ ಹೋಮ್ ಮೇಡ್ ಬೀಡಾ ಅರ್ಥಾತ್ ಪಾನ್‌ನ್ನು ಊಟದ ನಂತರ ಮೆಲ್ಲಬಹುದು,” ಎನ್ನುತ್ತಾರೆ ಎಚ್.ಎಸ್.ಆರ್ ಲೇಔಟ್‌ನ ನಿವಾಸಿ ಪದ್ಮಶ್ರೀ.
ಎಲ್ಲಿ ಯಾವ ರೀತಿಯ ಲಾನ್ ಇರಬೇಕು?
ಲಾನ್‌ಗಳನ್ನು ಆರಿಸುವಾಗ ಬಗೆಬಗೆಯ ಲಾನ್‌ಗಳು ಲಭ್ಯ. ಹೆಚ್ಚು ಬಿಸಿಲು ಬೀಳುವ ಸ್ಥಳವಾಗಿದ್ದರೆ ಮೆಕ್ಸಿಕನ್, ಬರ್ಮುಡಾ ಲಾನ್. ಕಡಿಮೆ ಬಿಸಿಲು ಬೀಳುವ ಜಾಗಗಳಿಗೆ ತಕ್ಕನಾದ ಶೇಡ್ ಗ್ರಾಸ್‌ಗಳು. ಕಡಿಮೆ ಬೆಳಕು ಬೀಳುವ ಪುಟ್ಟ ಜಾಗಗಳಿಗೆ ಕಾರ್ಪೆಟ್ ಲಾನ್ ದೊರಕುತ್ತದೆ. ನಮ್ಮ ಅಗತ್ಯಕ್ಕನುಗುಣವಾಗಿ ಆರಿಸಿಕೊಳ್ಳಬಹುದು.
ಗಿಡಗಳು ಮತ್ತು ದುಂಡನೆಯ ಕಲ್ಲುಗಳು
ಗಿಡಗಳು ಮತ್ತು ಹುಲ್ಲುಹಾಸಿನ ಮಧ್ಯಭಾಗದಲ್ಲಿ ಪುಟ್ಟ ಗುಂಡನೆಯ ನುಣುಪಾದ ಕಲ್ಲುಗಳ ಕಾಲುದಾರಿಯನ್ನು ನಿರ್ಮಿಸಿದಾಗ ತೋಟದ ಅಂದ ಹೆಚ್ಚುತ್ತದೆ ಮತ್ತು ಪಾದಗಳ ರಕ್ತಚಲನೆ ಚೆನ್ನಾಗಿ ಆಗುತ್ತದೆ. ಕುಳಿತುಕೊಳ್ಳಲು ಅಲ್ಲಯೇ ಒಂದು ಕಲ್ಲು ಬೆಂಚು ಪಕ್ಕದಲ್ಲಿ ಒಂದು ಸುಂದರ ಶಿಲ್ಪ ನಿಮ್ಮ ಉದ್ಯಾನವನಕ್ಕೆ ಹೊಸದೊಂದು ನೋಟವನ್ನೇ ನೀಡಬಹುದು. ಬಾಲ್ಕನಿಯಲ್ಲಿ ಬಗೆಬಗೆಯ ಬಣ್ಣಬಣ್ಣದ ಎಲೆಗಳ ಕುಂಡಗಳನ್ನಿರಿಸಿ, ಅದರ ಸುತ್ತಲೂ ದುಂಡನೆಯ ನುಣುಪಾದ ಕಲ್ಲುಗಳನ್ನು ಜೋಡಿಸಿ. ಅಲ್ಲೊಂದು ತೂಗು ಉಯ್ಯಾಲೆಯನ್ನಿರಿಸಿದಾಗ ಹಸುರಿನ ಎದುರಿನಲ್ಲಿ ಉಯ್ಯಾಲೆಯಲ್ಲಿ ತೂಗುತ್ತಾ ಅಂದಿನ ವರ್ತಮಾನ ಪತ್ರಿಕೆಯನ್ನು ಓದುತ್ತಾ ಬೆಳಗಿನ ಕಾಫಿಯನ್ನು ಚಪ್ಪರಿಸಿದಾಗ ಕಾಫಿಗೆ ಸಿಹಿಯೇ ಬೇಕಾಗುದಿಲ್ಲವೇನೋ ಅಲ್ಲವೇ? ಇದು ಮನೆಯ ಹೊರಗಿನ ಮಾತಾಯಿತು.
ಮನೆಯ ಒಳಗೆ ಹಸಿರು ಮತ್ತು ಅಲಂಕಾರ
ಮನೆಯ ಒಳಗೂ ಹಸಿರನ್ನು ಮೂಡಿಸಿದಾಗ ಮನೆಯ ಒಳಗಿನ ಚಂದಕ್ಕೂ ಕಳಸವನ್ನಿಟ್ಟಂತಾಗುವುದು. ಮೆಟ್ಟಿಲಿನ ಕೆಳಗಡೆ ಚಂದದ ಗಿಡದ ಕುಂಡವನ್ನಿರಿಸಿ. ಅದರ ಸುತ್ತಲೂ ಬೆಳ್ಳನೆಯ ಹೊಳೆಯುವ ಕಲ್ಲುಗಳನ್ನು ಜೋಡಿಸಿ. ಅಕ್ಕಪಕ್ಕದಲ್ಲಿ ಎರಡು ಸೊಂಡಿಲ್ಲನ್ನೆತ್ತಿ ನಿಂತ ಹೊಳೆಯುವ ಹಿತ್ತಾಳೆಯ ಅಥವಾ ಮರದ ಆನೆಗಳನ್ನಿರಿಸಿದಾಗ ಪಡಸಾಲೆಯ ಚಂದ ಮತ್ತೂ ಹೆಚ್ಚಬಹುದು. ಅಡುಗೆಮನೆಯ ಕೌಂಟರ್‌ನ ತುದಿಯಲ್ಲಿ ಕೆಂಬಣ್ಣದ ಹೂವಿನ ಕುಂಡ ಅಡುಗೆಮನೆಯ ಚಂದವನ್ನು ಹೆಚ್ಚಿಸುತ್ತದೆ.
ಮನೆಯೊಳಗೆ ಪಡಸಾಲೆಯ ಒಂದು ಮೂಲೆಗೆ, ಅಡುಗೆಮನೆಯ ಪಕ್ಕಕ್ಕೆ, ಊಟದ ಮನೆಯ ಕಿಟಕಿಯ ಮೂಲಕ ಕಾಣಿಸುವಂತೆ ಹಸಿರನ್ನು ಮೂಡಿಸಿದಾಗ ಅದಕ್ಕಿಂತ ಹೆಚ್ಚಿನದೇನು ಬೇಕು? ಅಮ್ಮ ಮಾಡಿದ ಗರಿ ಗರಿ ದೋಸೆ ತಿನ್ನುವಾಗ, ಹೆಂಡತಿ ನೀಡಿದ ಬಿಸಿ ಬಿಸಿ ಪೂರಿ ತಿನ್ನುವಾಗ ಕಣ್ಣೆದುರಿಗೆ ಹಸಿರಿದ್ದಾಗ ಮತ್ತಿನ್ನೇನು ಬೇಕು ಅಲ್ಲವೇ? ಈ ಎಲ್ಲದರ ಜೊತೆಗೆ ಮನೆಯಲ್ಲಿ ತುಳಸಿ ಗಿಡವೊಂದು ಇರಲೇಬೇಕು. ಇರುವ ಕುಂಡಗಳಲ್ಲಿ ಒಂದು ಅಮೃತಬಳ್ಳಿ, ಬಸಳೆ ಸೊಪ್ಪು, ಒಂದಷ್ಟು ಮೆಂತ್ಯದ ಬೀಜಗಳನ್ನು ಉದುರಿಸಿದರೆ ಮೆಂತ್ಯದ ಸಸಿಗಳೂ ಬಂದಾವು. ಸ್ವಲ್ಪ ಮನಸ್ಸು ಮಾಡಿದರೆ ಮನೆಗೆ ಬೇಕಾದ ಸಣ್ಣಪುಟ್ಟ ತರಕಾರಿಗಳನ್ನೂ ಬೆಳೆಯಬಹುದು. ಅದು ಮನೆಯೊಡತಿ ಅಥವಾ ಮನೆಯಲ್ಲಿರುವವರ ಅಭಿರುಚಿ ಮತ್ತು ಗಿಡಗಳ ನಿರ್ವಹಣೆ ಮಾಡುವ ಸಹನೆ ಇದ್ದಾಗ ಖಂಡಿತ ಎಲ್ಲ ಸಾಧ್ಯ. ಪ್ರತಿಯೊಂದು ಮನೆಯಲ್ಲಿ ಸ್ವಲ್ಪ ಸ್ವಲ್ಪ ಹಸಿರು ಮೂಡಿದಾಗ, ಉಸಿರಾಡಲು ಶುದ್ಧ ಗಾಳಿ ದೊರಕೀತು ಮತ್ತು ಶುದ್ಧ ಸಾವಯವ ಸೊಪ್ಪಿನ ಸಾರನ್ನು ಧೈರ್ಯವಾಗಿ ತಿನ್ನಬಹುದು.
– ಮಂಜುಳಾ ರಾಜ್