ಮನೆ ನಿಮ್ಮ ವ್ಯಕ್ತಿತ್ವದ ಕನ್ನಡಿ! ಒಂದು ವೇಳೆ ನೀವು ಅದನ್ನು ಸರಿಯಾಗಿ ಅಲಂಕರಿಸಿದ್ದರೆ, ದಿನವಿಡಿಯ ದಣಿವಿನ ಬಳಿಕ ಮನೆಗೆ ಹೋದಾಗ ನಿಮಗೆ ಹೆಚ್ಚಿನ ನಿರಾಳತೆ ದೊರೆಯುತ್ತದೆ. ಹೀಗಾಗಿ ಜನರು ಇತ್ತೀಚಿನ ವರ್ಷಗಳಲ್ಲಿ ಮನೆ ಖರೀದಿಸುತ್ತಿದ್ದಂತೆ ಇಂಟೀರಿಯರ್‌ ಡಿಸೈನರ್‌ಗಳ ನೆರವಿನಿಂದ ಅದರ ಅಲಂಕಾರಕ್ಕೆ ಅಣಿಯಾಗುತ್ತಾರೆ. ಏಕೆಂದರೆ ತಮ್ಮ ಮನೆ ತಮ್ಮದೇ ಆದ ರೀತಿಯಲ್ಲಿ ಸಜ್ಜುಗೊಳ್ಳಲಿ ಎಂಬುದು ಅವರಾಸೆ. ಕೆಲವರು ತಮ್ಮ ಆಫೀಸ್‌ನ್ನು ಅಲಂಕರಿಸಲು ಕೂಡ ಡಿಸೈನರ್‌ಗಳ ನೆರವು ಪಡೆಯುತ್ತಾರೆ. ಏಕೆಂದರೆ ಅವರಿಗೆ ಅಲ್ಲಿ ತಮ್ಮ ಹೆಚ್ಚಿನ ಸಮಯ ಕಳೆಯಬೇಕಿರುತ್ತದೆ.

ಬೆಂಗಳೂರು ಮಹಾನಗರದ ಖ್ಯಾತ ಇಂಟೀರಿಯರ್‌ ಡಿಸೈನರ್‌ ಅಶ್ವಿನಿ ಈ ಕುರಿತಂತೆ ಬಹಳಷ್ಟು ಸಂಗತಿಗಳನ್ನು ತಿಳಿಸಿದ್ದಾರೆ. ಕಳೆದ 25 ವರ್ಷಗಳಿಂದ ಅವರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ದೊಡ್ಡದಾಗಿರಬಹುದು ಅಥವಾ ಚಿಕ್ಕದಾಗಿರಬಹುದು, ಅದು ವ್ಯಕ್ತಿಯೊಬ್ಬನಿಗೆ ವಿಶೇಷವಾಗಿರುತ್ತದೆ. ಮನೆಯ ಇಂಟೀರಿಯರ್‌ ಸಂಪೂರ್ಣವಾಗಿ ವ್ಯಕ್ತಿಯೊಬ್ಬನ ಖಾಸಗಿ ವಿಷಯವಾಗಿರುತ್ತದೆ.

ಆ ವ್ಯಕ್ತಿಯ ಆಸಕ್ತಿ, ಅಪೇಕ್ಷೆಗೆ ಅನುಗುಣವಾಗಿ ಅದನ್ನು ಕೈಗೊಳ್ಳಬೇಕಾಗುತ್ತದೆ. ಆ ವ್ಯಕ್ತಿ ಅದರಲ್ಲಿ ಸ್ಟೈಲ್‌ ಜೊತೆ ಜೊತೆಗೆ ಗುಣಮಟ್ಟ ಕೂಡ ಬಯಸುತ್ತಾನೆ.

ಇಂಟೀರಿಯರ್‌ನ ಖುಷಿ

ಅಶ್ವಿನಿ ಹೀಗೆ ಹೇಳುತ್ತಾರೆ, “ಯಾವ ರೀತಿ ಆಭರಣಗಳು ಮಹಿಳೆಯೊಬ್ಬಳಿಗೆ ಆಕರ್ಷಕ ರೂಪ ನೀಡುತ್ತವೆಯೋ, ಅದೇ ರೀತಿ ಇಂಟೀರಿಯರ್‌ ಒಂದು ಮನೆಗೆ ಆಕರ್ಷಕ ರೂಪ ದೊರಕಿಸಿಕೊಡುತ್ತದೆ. ಏನನ್ನೂ ಯೋಚಿಸದೆ ವಿಚಾರಿಸದೆ ಧರಿಸಿದ ಅತಿಯಾದ ಆಭರಣಗಳು ಮಹಿಳೆಯೊಬ್ಬಳಿಗೆ ಆಕರ್ಷಕ ಎನಿಸದೆ, ಅನಾಕರ್ಷಕವಾಗಿ ಗೋಚರಿಸುತ್ತವೆ. ಹಾಗೆಂದೇ ಯಾವುದೇ ಯೋಜನೆ ಮಾಡಿಕೊಳ್ಳದೆ ಮನೆಗೆಂದು ಏನನ್ನಾದರೂ ಖರೀದಿಸಿದರೆ ಮನೆಯ ಶೋಭೆಯೇ ಹೊರಟುಹೋಗುತ್ತದೆ. “ಹಾಗೆಂದೇ ಮನೆಯನ್ನು ವ್ಯಕ್ತಿತ್ವದ ಕನ್ನಡಿ ಎಂದು ಹೇಳಲಾಗುತ್ತದೆ. ಡಿಸೈನರ್‌ ಒಬ್ಬರು ಉದ್ಯಮಿಯೊಬ್ಬರ ಮನೆಯ ಇಂಟೀರಿಯರ್‌ ಮಾಡಿದ್ದರು. ಆ ಮನೆಯಲ್ಲಿ ಖುಷಿ ಪಸರಿಸಲಿ ಎನ್ನುವುದು ಡಿಸೈನರ್‌ನ ಅಪೇಕ್ಷೆಯಾಗಿತ್ತು. ಕೆಲವು ದಿನಗಳ ಬಳಿಕ ಉದ್ಯಮಿಯು ಇಂಟೀರಿಯರ್‌ಗೆ ಸಂದೇಶ ಕಳುಹಿಸಿ ಹೀಗೆ ಹೇಳಿದರು. ನಿಮ್ಮ ಇಂಟೀರಿಯರ್‌ನಿಂದಾಗಿ ನನಗೆ ಮನೆಯ ಪ್ರತಿಯೊಂದು ಭಾಗದಲ್ಲಿ ಖುಷಿಯ ಸಿಂಚನವಾದಂತೆ ಅನಿಸುತ್ತದೆ.

”ಇಂಟಿರಿಯರ್‌ನ ಅರ್ಥ ಜನರಲ್ಲಿ ತಾಜಾತನ ತುಂಬುವುದಾಗಿದೆ. ಒಂದು ವೇಳೆ ಇಂಟೀರಿಯರ್‌ ಡಿಸೈನರ್‌ ಅದರಲ್ಲಿ ಯಶಸ್ವಿಯಾದರೆ, ಅದು ಸಾರ್ಥಕತೆಯ ಭಾವನೆಯನ್ನು ಮೂಡಿಸುತ್ತದೆ.

ಕೆಲವೊಂದು ಡಿಸೈನರ್‌ಗಳು ಸೆಟ್‌ ಡಿಸೈನಿಂಗ್‌ಗೆ ಕೈ ಹಾಕಲು ಹೋಗುವುದಿಲ್ಲ. ಏಕೆಂದರೆ ಅದು ತಾತ್ಕಾಲಿಕವಾಗಿರುತ್ತದೆ. ಮಾಡುವುದು ಕೂಡ ಅಷ್ಟೇನೂ ಕಷ್ಟವಲ್ಲ. ಮನೆಯೊಂದರ ಇಂಟೀರಿಯರ್‌ ಮಾಡುವುದು ನಿಜಕ್ಕೂ ಕಠಿಣ ಕೆಲಸ. ಅಲ್ಲಿ ಲೈಟಿಂಗ್‌, ಗೋಡೆಗಳು, ಅಲ್ಲಿ ವಾಸಿಸುವ ಪ್ರತಿಯೊಬ್ಬರ ಆಸಕ್ತಿ, ಅಪೇಕ್ಷೆಯನ್ನು ಗಮನಿಸಬೇಕಾಗುತ್ತದೆ. ಇಂಟೀರಿಯರ್‌ ಮಾಡಿಸುವಾಗ ಜನರು ಕೆಳಕಂಡ ಕೆಲವು ತಪ್ಪುಗಳನ್ನು ಮಾಡುತ್ತಾರೆ.

– ಮನೆಯ ಇಂಟೀರಿಯರ್‌ ಮಾಡಿಸುವಾಗ ಬೇರೆಯವರ ಇಂಟೀರಿಯರ್‌ನ ಪ್ರೇರಣೆ ಪಡೆಯಬೇಡಿ. ನಿಮಗೆ ಯಾವುದು ಚೆನ್ನಾಗಿ  ಅನಿಸುತ್ತದೋ ಅದನ್ನೇ ಮಾಡಿ.

– ಪೀಠೋಪಕರಣಗಳನ್ನು ಸ್ಥಳಾವಕಾಶಕ್ಕೆ ಅನುಗುಣವಾಗಿಯೇ ಇಡಿ. ಕೆಲವು ಜನರು ಕಡಿಮೆ ಜಾಗದಲ್ಲಿ ಭಾರಿ ಗಾತ್ರದ ಪೀಠೋಪಕರಣಗಳನ್ನು  ಇರಿಸುತ್ತಾರೆ. ಅದರಿಂದಾಗಿ ಜಾಗದ ಕೊರತೆಯೂ ಆಗುತ್ತದೆ. ಮನೆಯ ಸೌಂದರ್ಯ ಹದಗೆಡುತ್ತದೆ.

– ನಿಮ್ಮ ಬಜೆಟ್‌ಗೆ ತಕ್ಕಂತೆಯೇ ಇಂಟೀರಿಯರ್‌ ಮಾಡಿಸಿ.

– ನಿಮ್ಮ ಸಾಮಾನು ಸಲಕರಣೆಗಳು ಹೇಗಿರಬೇಕೆಂದರೆ ಅವುಗಳ ನಿರ್ವಹಣೆ ಸುಲಭವಾಗಿರಬೇಕು. ಏಕೆಂದರೆ ಒಂದು ಸಲಕರಣೆಯನ್ನು ಖರೀದಿ ಮಾಡಿದ ಬಳಿಕ ಅದರ ನಿರ್ವಹಣೆ ಸರಿಯಾಗಿ ಮಾಡದೇ ಇದ್ದರೆ ಅದು ಕೆಲವೇ ದಿನಗಳಲ್ಲಿ ದುಃಸ್ಥಿತಿಯಲ್ಲಿರುವಂತೆ ಕಂಡುಬರುತ್ತದೆ.

ಹಬ್ಬದ ವಾತಾವರಣ ಅಥವಾ ಮದುವೆ ಮುಂತಾದ ಸಮಾರಂಭಗಳು ನಡೆಯಲಿದ್ದರೆ ಅದಕ್ಕೆ ಪಾರಂಪರಿಕತೆಯ ಮೆರುಗು ಕೊಡಿ. ಮನೆಯನ್ನು ವರ್ಣರಂಜಿತಗೊಳಿಸಬಹುದು. ಅದಕ್ಕಾಗಿ ಹೂಗಳನ್ನು ಬಳಸಬಹುದು. ಮದುವೆಯಲ್ಲಿ ಬಂಗಾರ ಹೆಚ್ಚು ಬಳಕೆಯಾಗುತ್ತದೆ. ಹಾಗಾದರೆ ಮನೆಯಲ್ಲಿ ಬಂಗಾರ ವರ್ಣದ ಆ್ಯಕ್ಸೆಸರೀಸ್‌ನಿಂದ ಮನೆಯನ್ನು ಡೆಕೋರೇಟ್‌ ಮಾಡಿ. ಕೆಂಪು ವರ್ಣದ ಹೂಗಳನ್ನು ಬಳಸಿ. ಹೊಸ ಕುಶನ್‌, ಕವರ್‌ ಮುಂತಾದಗಳನ್ನು ಹಬ್ಬಕ್ಕೆ ತಕ್ಕಂತೆ ಇಡಿ. ಅಶ್ವಿನಿ ಅವರಂತೂ ಅತ್ಯಂತ ಸಂವೇದನಾಶೀಲ ಮಹಿಳೆ. ಅವರಿಗೆ ಆಭರಣಗಳು ಅತ್ಯಂತ ಪ್ರಿಯ. ತಮ್ಮ ಬಗ್ಗೆ ಹೇಳಿಕೊಳ್ಳುತ್ತ ಅವರು, ತಮಗೆ ಮೊದಲ ಆಭರಣ ದೊರೆತದ್ದು ತಂದೆತಾಯಿಯಿಂದ, ಅದರ ಜೊತೆಗೆ ನನ್ನ ಭಾವನಾತ್ಮಕ ನೆನಪುಗಳು ತಳುಕುಹಾಕಿಕೊಂಡಿವೆ ಎನ್ನುತ್ತಾರೆ.

ಆ ಆಭರಣ ಅಮ್ಮನ ಪಾರಂಪರಿಕ ಉಂಗುರ. ಆ ಬಳಿಕ ಅವರ ಪತಿ ಅವರಿಗೆ ನೆಕ್ಲೇಸ್‌ ಮತ್ತು ಇಯರ್‌ರಿಂಗ್ಸ್ ಕೊಡಿಸಿದ್ದರು.

ಬಿಡುವಿನ ವೇಳೆಯಲ್ಲಿ ಪ್ರವಾಸ ಮಾಡುವುದು, ಪುಸ್ತಕ ಓದುವುದು ಹಾಗೂ ತೊಂದರೆಯಲ್ಲಿರುವವರಿಗೆ ಸಹಾಯ ಮಾಡಲು ಪ್ರಯತ್ನ ಮಾಡುತ್ತಾರೆ. ಅವರು ವೃದ್ಧರೇ ಆಗಿರಬಹುದು, ಮನೆಗೆಲಸದವರೇ ಇರಬಹುದು ಅಥವಾ ಅಕ್ಕಪಕ್ಕದ ನಿಸ್ಸಹಾಯಕರು. ಇದರ ಹೊರತಾಗಿ ಅವರು ತಮ್ಮ ಮನೆಯವರ ಜೊತೆ ಕಾಲ ಕಳೆಯಲು ಇಷ್ಟಪಡುತ್ತಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಅವರು, ಈ ಹಂತದವರೆಗೆ ತಲುಪಲು ಕುಟುಂಬದವರ ಪಾತ್ರ ದೊಡ್ಡದು.

ಆತ್ಮವಿಶ್ವಾಸ ಉಳಿಸಿಕೊಳ್ಳಿ

ನಿಮ್ಮ ಅರ್ಹತೆಯ ಬಗ್ಗೆ ಎಂದೂ ಕೀಳಾಗಿ ಯೋಚಿಸಬೇಡಿ. ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ ಎಂದು ಅವರು ನಮ್ಮ ಓದುಗರಿಗೆ ಸಲಹೆ ನೀಡುತ್ತಾರೆ.

– ಪಿ. ಮೃದುಲಾ 

Tags:
COMMENT