ಮದುವೆ ಎಂತಹ ಒಂದು ಕ್ಷಣವೆಂದರೆ ಬದುಕಿನ ರೀತಿ ಮಗ್ಗುಲು ಬದಲಾವಣೆಯ ಹೊಂಬಣ್ಣದ ಹೊದಿಕೆಯಲ್ಲಿ ಅಡಗಿಸಿಕೊಳ್ಳುತ್ತದೆ. ಸಾಧಾರಣವಾಗಿ ಹುಡುಗಿಯರಿಗೆ ಈ ಬದಲಾವಣೆ ಭಾವನಾತ್ಮಕ, ಶಾರೀರಿಕ ಹಾಗೂ ಮಾನಸಿಕದ ಜೊತೆ ಜೊತೆಗೆ ಭೌತಿಕ ಆಗಿರುತ್ತದೆ. ಏಕೆಂದರೆ ಅವಳು ತಾನು ಬೆಳೆದು ಬಂದ ಮನೆಯನ್ನು ತೊರೆದು ಗಂಡನ ಮನೆಯಲ್ಲಿ ನೆಲೆಸಬೇಕಾಗುತ್ತದೆ. ಹೀಗಿರುವಾಗ ಗಂಡನ ಮನೆಯ ಬಗ್ಗೆ ಎಲ್ಲ ಹುಡುಗಿಯರಿಗೂ ಕೆಲವು ಕನಸುಗಳಿರುತ್ತವೆ. ಗಂಡನ ಮನೆ ತನ್ನ ತವರು ಮನೆಯಂತೆ ಇರದಿದ್ದರೂ ಅಲ್ಲಿ ತನ್ನ ಕೋಣೆ ಹಾಗೂ ಅಡುಗೆಮನೆ ಒಂದು ಹಂತದವರೆಗಿನ ತನ್ನ ನಿರೀಕ್ಷೆಯಂತಿರಬೇಕು ಎಂದು ಯೋಚಿಸುತ್ತಾರೆ.
ಹೀಗಿರುವಾಗ ಪ್ರತಿ ಹುಡುಗನ ಜವಾಬ್ದಾರಿ ಏನೆಂದರೆ ಮನೆಗೆ ಹೆಂಡತಿಯನ್ನು ಕರೆತರುವ ಮೊದಲು ತನ್ನ ಬೆಡ್‌ರೂಮ್ ಹಾಗೂ ಅಡುಗೆಮನೆಗೆ ಬ್ಯಾಚುಲರ್ ಲುಕ್‌ನಿಂದ ನ್ಯೂಲಿ ವೆಡ್ ಲುಕ್‌ಗೆ ಬದಲಿಸಬೇಕು. ಒಂದು ವೇಳೆ ನಿಮ್ಮ ಕೋಣೆಯ ಇಂಟೀರಿಯರ್ ನಿರ್ಧರಿಸುವಲ್ಲಿ ಸಮಸ್ಯೆಯಾಗಿದ್ದರೆ ಕೆಳಗೆ ಕೊಟ್ಟಿರುವ ಟಿಪ್ಸ್ ನಿಮಗೆ ಸಹಾಯ ಮಾಡುತ್ತವೆ.
ಬೆಡ್‌ರೂಮ್ ಬಣ್ಣ : ಬೆಡ್‌ರೂಮ್ ಇಂಟೀರಿಯರ್‌ನ ಅತ್ಯಂತ ಮಹತ್ವಪೂರ್ಣ ಭಾಗ ಗೋಡೆಗಳಿಗೆ ಹೊಡೆಸಿದ ಪೇಂಟ್ ಆಗಿರುತ್ತದೆ. ಬನ್ನಿ, ಹೊಸದಾಗಿ ಮದುವೆಯಾದ ಜೋಡಿಗಳ ರೂಮಿನ ಬಣ್ಣ ಹೇಗಿರಬೇಕೆಂದು ತಿಳಿಯೋಣ.
– ಮದುವೆ ಸಂದರ್ಭದಲ್ಲಿ ಸಾಮಾನ್ಯವಾಗಿ ವೈಬ್ರೆಂಟ್ ಬಣ್ಣಗಳು ಕಂಡುಬರುತ್ತವೆ. ವಾರವಿಡೀ ವೈಬ್ರೆಂಟ್ ಬಣ್ಣಗಳನ್ನು ನೋಡೀ ನೋಡೀ ವಧುವಿನ ಮನಸ್ಸು ಅವುಗಳಲ್ಲೇ ಕಳೆದುಹೋಗುತ್ತದೆ. ಅವಳು ಆ ಬಣ್ಣಗಳೊಂದಿಗೆ ಭಾವನಾತ್ಮಕ ರೂಪದಲ್ಲಿ ಹೊಂದಿಕೊಳ್ಳುತ್ತಾಳೆ. ವಿಶೇಷವಾಗಿ ಕೆಂಪು, ಬದನೆ, ರಾಯಲ್ ಬ್ಲೂ, ಗೋಲ್ಡನ್ ಮತ್ತು ಮೆರೂನ್ ಬಣ್ಣಗಳೊಂದಿಗೆ ಅವಳಲ್ಲಿ ಒಲವು ಮೂಡುತ್ತದೆ. ಆದ್ದರಿಂದ ವಧುವಿನ ಕೋಣೆಯನ್ನು ಸಿಂಗರಿಸುವ ಸಮಯದಲ್ಲಿ ಕೋಣೆಯ ಗೋಡೆಯ ಬಣ್ಣವನ್ನು ಅದೇ ಬಣ್ಣಗಳಿಂದ ಪೇಂಟ್ ಮಾಡಿ.
– ಹೊಸ ಮದುವೆಯಲ್ಲಿ ರೊಮ್ಯಾನ್ಸ್ ಮತ್ತು ಎಲಿಗೆನ್ಸ್ ಗೆ ಬಹಳ ಮಹತ್ವ ನೀಡಲಾಗುತ್ತದೆ. ಗಾಢವಾದ ಬಣ್ಣ ಇವೆರಡರ ಪ್ರತೀಕವಾಗಿದೆ. ಈ ಬಣ್ಣಗಳ ಜೊತೆಗೆ ಗೋಲ್ಡನ್, ಬ್ರಾಂಝ್ ಮತ್ತು ಮೆಟ್ಯಾಲಿಕ್ ಕಾಂಬಿನೇಷನ್‌ನ ಡೀಪ್ ಜ್ಯೂವೆಲ್ ಬಣ್ಣಗಳು ವಧುವಿಗೆ ಇನ್ನೂ ಹೆಚ್ಚು ಸ್ಮೂದಿಂಗ್ ಫೀಲಿಂಗ್ ಕೊಡುತ್ತದೆ.
– ಯಾರಿಗೇ ಆಗಲಿ ತಮ್ಮ ಮನೆಗಿಂತ ಹೆಚ್ಚಾಗಿ ಆತ್ಮೀಯ ಭಾವನೆ ಎಲ್ಲಿ ಉಂಟಾಗುತ್ತದೆ? ಕೊಂಚ ಯೋಚಿಸಿ. ನಿಮ್ಮ ವಧು ನಿಮಗಾಗಿ ತನ್ನ ಮನೆ ಬಿಟ್ಟು ಬರುತ್ತಿದ್ದಾಳೆ. ಹೀಗಿರುವಾಗ ಅವಳಿಗೆ ಆ ಭಾವನೆ ನೀಡಲು ಈ ಡಾರ್ಕ್ ಕಲರ್ ಸಾಕಷ್ಟು ಸಹಾಯ ಮಾಡುತ್ತವೆ.
– ಒಂದು ವೇಳೆ ಕೋಣೆ ದೊಡ್ಡದಾಗಿದ್ದರೆ ಇಡೀ ಕೋಣೆಯಲ್ಲಿ ಗಾಢವಾದ ಬಣ್ಣ ಹೊಡೆಸಬಹುದು. ಒಂದುವೇಳೆ ಕೋಣೆ ಚಿಕ್ಕದಾಗಿದ್ದರೆ ಕೋಣೆಯ ಒಂದು ಗೋಡೆಯ ಮೇಲೆ ಮಾತ್ರ ಗಾಢ ಬಣ್ಣ ಹೊಡೆಸಿ. ಉಳಿದ ಗೋಡೆಗಳಲ್ಲಿ ಗಾಢ ಬಣ್ಣಕ್ಕೆ ಹೊಂದುವಂತಹ ತೆಳು ಬಣ್ಣಗಳನ್ನು ಹಾಕಿಸಬಹುದು.
ಫರ್ನೀಚರ್ : ಕೋಣೆಯಲ್ಲಿರುವ ಫರ್ನೀಚರ್‌ಗಳಿಂದ ಕೋಣೆಯ ಖಾಲಿತನ ಭರ್ತಿಯಾಗುತ್ತದೆ. ನಿಮ್ಮ ಪತ್ನಿಯೂ ನಿಮ್ಮ ಜೀವನದ ಖಾಲಿತನ ದೂರ ಮಾಡುತ್ತಾಳೆ. ಆದರೆ ಫರ್ನೀಚರ್ ಆಯ್ಕೆ ಮಾಡುವಾಗ ಕೆಲವು ವಿಷಯಗಳನ್ನು ಅಗತ್ಯವಾಗಿ ಗಮನಿಸಿ.
– ಈಗ ನೀವು ಬ್ಯಾಚಲರ್ ಅಲ್ಲ. ಆದ್ದರಿಂದ ನೀವು ಯಾವುದೇ ಫರ್ನೀಚರ್ ಆರಿಸಿಕೊಂಡರೂ ನೀವು ಒಬ್ಬರಲ್ಲ, ಇಬ್ಬರು ಎಂದು ಗಮನದಲ್ಲಿಡಿ. ವಿಶೇಷವಾಗಿ ಸೋಫಾ, ಬೆಡ್, ಆಲ್ಮೇರಾ ಆರಿಸುವಾಗ ಹೆಂಡತಿಯ ಆಯ್ಕೆ ಬಗ್ಗೆಯೂ ಗಮನಿಸಿ.
– ರೂಮಿನ ಸೈಜ್‌ಗೆ ತಕ್ಕಂತೆ ಬೆಡ್‌ನ ಸೈಜ್‌ನ್ನು ನಿರ್ಧರಿಸಿ. ಕಿಂಗ್‌ಸೈಜ್‌ನ ಬೆಡ್‌ನ್ನೇ ಕೊಳ್ಳಬೇಕೆಂದಿಲ್ಲ. ಕ್ವೀನ್‌ಸೈಜ್‌ನ ಬೆಡ್‌ನಲ್ಲೇ ನಿಮ್ಮ ಕೆಲಸ ನಡೆಯುತ್ತದೆ.
– ಹೊಸ ಮನೆಯಲ್ಲಿ ವಧುವಿನ ಒಳ್ಳೆಯ ಗೆಳತಿ ಎಂದರೆ ಕನ್ನಡಿ. ಡ್ರೆಸಿಂಗ್ ಟೇಬಲ್ ಆಯ್ಕೆ ಮಾಡುವಾಗ ಉದ್ದ ಹೆಚ್ಚಾಗಿರುವ ಕನ್ನಡಿಯ ಡ್ರೆಸಿಂಗ್ ಟೇಬಲ್ ಆರಿಸಿ. ಏಕೆಂದರೆ ಫಂಕ್ಷನ್‌ಗೆ ಸಿದ್ಧಳಾಗುವಾಗ ವಧು ತನ್ನನ್ನು ಹಲವು ಬಾರಿ ಮೇಲಿನಿಂದ ಕೆಳಕ್ಕೆ ನೋಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಉದ್ದನೆಯ ಕನ್ನಡಿ ಅಗತ್ಯವಿದೆ.
– ಕೆನೋಪಿ ಬೆಡ್ ಕೂಡ ನ್ಯೂಲಿ ವೆಡ್ಸ್ ಗೆ ಒಳ್ಳೆಯ ಆಯ್ಕೆಯಾಗಿದೆ. ಏಕೆಂದರೆ ಈ ಬೆಡ್ ಏರಿಯ ಕವರ್ ಮಾಡುತ್ತದೆ ಮತ್ತು ಬಹಳ ರೊಮ್ಯಾಂಟಿಕ್ ಅಪಿಯರೆನ್ಸ್ ಕೊಡುತ್ತದೆ.
– ಹೊಸ ವಧು ತನ್ನೊಂದಿಗೆ ಬಹಳಷ್ಟು ದುಬಾರಿ ಕಾಣಿಕೆಗಳು ಮತ್ತು ಬಟ್ಟೆಗಳನ್ನು ತರುತ್ತಾಳೆ. ಅವನ್ನು ಸೇಫ್ ಆಗಿ ಇಡಲು ಒಳ್ಳೆಯ ಸ್ಟೋರೇಜ್‌ನ ಅಗತ್ಯ ಬೀಳುತ್ತದೆ. ಆದ್ದರಿಂದ ವಾರ್ಡ್‌ರೋಬ್‌ನ ಸೈಜ್‌ನಲ್ಲಿ ಜಿಪುಣತನ ಮಾಡಬೇಡಿ. ವಧೂವರರ ಬಟ್ಟೆಗಳನ್ನು ಅಲ್ಲದೆ ಎಕ್ಸ್ ಟ್ರಾ ಸ್ಟೋರೇಜ್‌ಗೂ ಜಾಗ ಇರುವಂತಹ ವಾರ್ಡ್‌ರೋಬ್ ಇರಬೇಕು.
ಲೈಟ್ಸ್ : ಬೆಳಕು ಪಾಸಿಟಿವಿಟಿಯ ಪ್ರತೀಕವಾಗಿದೆ. ವಧುವಿನ ಕೋಣೆಯಲ್ಲಿ ಸುಂದರವಾದ ಲ್ಯಾಂಪ್ಸ್, ಝೂಮರ್ ಮತ್ತು ಸೀಲಿಂಗ್ ಲೈಟುಗಳೂ ಇರಬೇಕು.
– ಬೆಡ್ ಇರುವ ಕಡೆ ಅದರ ನೇರವಾಗಿ ಲೈಟ್ಸ್ ಇರಬಾರದು. ಲೈಟ್‌ನ ಕಣ್ಣು ಕುಕ್ಕುವ ಬೆಳಕಿನಲ್ಲಿ ಕಣ್ಣುಗಳಿಗೆ ಇರಿಟೇಶನ್ ಆಗುತ್ತದೆ. ಆದ್ದರಿಂದ ಲೈಟ್‌ನ ಸೆಟಿಂಗ್ ಯಾವಾಗಲೂ ಬೆಡ್‌ನ ಬಲಗಡೆ ಮತ್ತು ಎಡಗಡೆಯೇ ಇರಬೇಕು.
– ಈಗೀಗ ಕಲರ್‌ಫುಲ್ ಲೈಟ್ಸ್ ಟ್ರೆಂಡ್ ಆಗಿದೆ. ಒಂದುವೇಳೆ ನಿಮ್ಮ ಕೋಣೆಯ ಕಲರ್ ಮತ್ತು ಇಂಟೀರಿಯರ್‌ನ ಸೌಂದರ್ಯದಲ್ಲಿ ಕಲರ್‌ಫುಲ್ ಲೈಟ್ಸ್ ನಿಂದ ಹೆಚ್ಚಳವಾದರೆ ಅದರ ಪ್ರಯೋಗವನ್ನೂ ಮಾಡಬಹುದು.
– ಒಂದು ವೇಳೆ ನಿಮ್ಮ ಕೋಣೆ ಝೂಮರ್ ಹಾಕಿಸಲು ಉಪಯುಕ್ತವಲ್ಲದ್ದಿದರೆ ನೀವು ಕೋಣೆಯ ಸೀಲಿಂಗ್ ಮೇಲೆ ಡಿಮ್ ಲೈಟ್ಸ್ ಹಾಕಿಸಬಹುದು. ಅದರಿಂದ ರೊಮ್ಯಾಂಟಿಕ್ ಪರಿಸರ ಉಂಟಾಗುತ್ತದೆ.
ಫ್ಲೋರ್ : ಹೊಸ ವಧುವಿಗಾಗಿ ಕೋಣೆಯ ಫ್ಲೋರಿಂಗ್‌ಗೂ ವಿಶೇಷ ಗಮನ ಕೊಡಿ. ಬನ್ನಿ, ನಾವು ನಿಮಗೆ ಕೆಲವು ಟಿಪ್ಸ್ ಹೇಳುತ್ತೇವೆ.
– ಕೋಣೆಯ ಗೋಡೆಗಳು ಮತ್ತು ಛಾವಣಿ ಎಷ್ಟು ಮುಖ್ಯವೋ, ಕೋಣೆಯ ನೆಲವೂ ಅಷ್ಟೇ ಮುಖ್ಯ. ನೀವು ಗೋಡೆಗಳಿಗೆ ಡಿಸೈನರ್ ಪೇಂಟ್ ಮಾಡಿಸುತ್ತಿದ್ದರೆ, ನೆಲಕ್ಕೆ ಅಗತ್ಯವಾಗಿ ಡಿಸೈನರ್ ಕಾರ್ಪೆಟ್ ಹಾಕಿಸಿ.
– ನೆಲದ ಇಂಟೀರಿಯರ್‌ಗಾಗಿ ಮಾರುಕಟ್ಟೆಯಲ್ಲಿ ಈಗ ಡಿಸೈನರ್ ಆಯ್ಕೆ ಇದೆ. ಕೋಣೆಯಲ್ಲಿ ನೆಲದ ಬಣ್ಣವನ್ನು ಟೆಕ್ನಿಕ್ ಮೂಲಕ ಬದಲಿಸಬಹುದು. ಡಿಸೈನ್ ಟೈಲ್ಸ್ ಹಾಕಿಸುವುದಾದರೆ ಡನ್ ಫ್ಲೋರಿಂಗ್ ಟ್ರೆಂಡಿ.
ಪರದೆ : ಬೆಡ್‌ರೂಮ್ ಇಂಟೀರಿಯರ್‌ನಲ್ಲಿ ಪರದೆಗಳಿಗೆ ಒಂದು ಮಹತ್ವಪೂರ್ಣ ಸ್ಥಾನ ಇದೆ. ವಿಶೇಷವಾಗಿ ನ್ಯೂಲಿ ವೆಡ್‌ಕಪಲ್‌ನ ಬೆಡ್‌ರೂಮ್ ಆಗಿದ್ದರೆ ಅದರ ಮಹತ್ವ ಇನ್ನಷ್ಟು ಹೆಚ್ಚಾಗತ್ತದೆ. ಪರದೆಗಳ ಆಯ್ಕೆಯಲ್ಲಿ ಎಚ್ಚರ.
– ವಧುವಿನ ಕೋಣೆಯಲ್ಲಿ ಯಾವಾಗಲೂ ಪರದೆ ಗಾಢ ಬಣ್ಣದ್ದಾಗಿರಬೇಕು. ಅವು ಪಾರದರ್ಶಕವಾಗಿರಬಾರದು. ವಧುವಿಗೆ ಪ್ರೈವೆಸಿ ಅಗತ್ಯವಿದೆ. ಆದ್ದರಿಂದ ಪರದೆಗಳು ಭಾರಿ, ದಪ್ಪನಾಗಿಯೂ ಇರಬೇಕು.
– ಪರದೆಗಳ ಫ್ಯಾಬ್ರಿಕ್ ಸಿಲ್ಕ್ ಅಥವಾ ಸ್ಯಾಟಿನ್‌ದ್ದಾಗಿರಬೇಕು. ಈ ಪರದೆಗಳು ಶೈನಿ ಹಾಗೂ ಭಾರಿಯಾಗಿಯೂ ಇರುತ್ತವೆ.
– ಹೆಚ್ಚು ಬಣ್ಣ ಬಣ್ಣದ ಪರದೆಗಳು ಬೆಡ್‌ರೂಮ್ ಇಂಟೀರಿಯರ್‌ನ್ನು ಹಾಳು ಮಾಡುತ್ತವೆ.
ಅಡುಗೆಮನೆಯೂ ವಿಶೇಷವಾಗಿರಲಿ
ನೂತನ ವಧುವಿಗೆ ಅತ್ತೆಮನೆಯಲ್ಲಿ ಬೆಡ್‌ರೂಮ್ ನಂತರ ಅಡುಗೆಮನೆ ಅತ್ಯಂತ ಮಹತ್ವಪೂರ್ಣ ಸ್ಥಾನವಾಗಿದೆ. ಅಲ್ಲಿ ಅವಳು ಸ್ವಾದಿಷ್ಟ ಅಡುಗೆ ತಯಾರಿಸಿ ಗಂಡ ಹಾಗೂ ಅತ್ತೆಮನೆಯವರ ಮನಸ್ಸನ್ನು ಗೆಲ್ಲುತ್ತಾಳೆ. ಅಡುಗೆಮನೆಯನ್ನು ಸೊಸೆಗೆ ಒಪ್ಪಿಸುವ ಮೊದಲು ಅದರ ಇಂಟೀರಿಯರ್ ಬಗ್ಗೆ ಅಗತ್ಯವಾಗಿ ಕೊಂಚ ಗಮನ ಕೊಡಬೇಕು.
ನೂತನ ಸೊಸೆಯ ಅಡುಗೆಮನೆ ಹೇಗಿರಬೇಕೆಂದು ತಿಳಿಯೋಣ ಬನ್ನಿ :
– ಈಗ ಬಹಳ ದೊಡ್ಡ ಅಡುಗೆಮನೆ ಬೇಕಾಗಿಲ್ಲ. ಅಡುಗೆಮನೆ ಚಿಕ್ಕದಾಗಿದ್ದರೂ ಅದನ್ನು ಮ್ಯಾನೇಜ್ ಮಾಡಿ ಚೆನ್ನಾಗಿ ಮಾಡಬಹುದು. ಉದಾಹರಣೆಗೆ ಅಡುಗೆಮನೆ ಸ್ವಚ್ಛವಾಗಿರಲು ಗೋಡೆಗಳಿಗೆ ಹಾಗೂ ನೆಲಕ್ಕೆ ಅಗತ್ಯವಾಗಿ ಟೈಲ್ಸ್ ಹಾಕಿಸಿ.
– ಅಡುಗೆಮನೆಯನ್ನು ಮಾಡ್ಯುಲರ್ ಕೂಡ ಮಾಡಿಸಬಹುದು. ಅದರಿಂದ ವಸ್ತುಗಳು ಹರಡಿದಂತೆ ಕಾಣುವುದಿಲ್ಲ ಮತ್ತು ಹೊಸ ಸೊಸೆಗೆ ಅಡುಗೆಮನೆಯಲ್ಲಿ ವಸ್ತುಗಳನ್ನು ಹುಡುಕಲು ಶ್ರಮವಾಗುವುದಿಲ್ಲ.
– ಅಡುಗೆಮನೆಯಲ್ಲಿ ಇಟ್ಟಿರುವ ಮಸಾಲೆಗಳು ಮತ್ತು ಕಾಳುಗಳ ಡಿಸೈನರ್ ಡಬ್ಬಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವನ್ನೂ ಕೂಡ ಅಡುಗೆಮನೆಯ ಡೆಕೋರೇಷನ್‌ನ ಭಾಗವಾಗಿ ಮಾಡಬಹುದು. ಜೊತೆಗೆ ಡಬ್ಬಿಯಲ್ಲಿರುವ ವಸ್ತುವಿನ ಲೇಬಲ್‌ನ್ನು ಅಗತ್ಯವಾಗಿ ಅಂಟಿಸಬೇಕು.
– ಈಗ ಅಡುಗೆಮನೆಯಲ್ಲೂ ಹೆಚ್ಚಾಗಿ ಎಲೆಕ್ಟ್ರಾನಿಕ್ ವಸ್ತುಗಳು ಉಪಯೋಗಿಸಲಾಗುತ್ತಿವೆ. ಅದರಿಂದ ಅಡುಗೆ ಸ್ವಾದಿಷ್ಟವಾಗಿ, ಬೇಗನೆ ತಯಾರಾಗುತ್ತದೆ. ನೂತನ ವಧು ಅಡುಗೆಮನೆಯಲ್ಲಿ ಹೆಚ್ಚು ಸಮಯ ಕಳೆಯದಂತಿರಲು ಕಿಚನ್ ಗ್ಯಾಜೆಟ್ಸ್ ಅನಿವಾರ್ಯವಾಗಿದೆ. ಉದಾಹರಣೆಗೆ ಸ್ಯಾಂಡ್‌ವಿಚ್ ಮೇಕರ್, ಟೋಸ್ಟರ್, ಮಿಕ್ಸರ್ ಗ್ರೈಂಡರ್, ಮೈಕ್ರೋವೇವ್, ರೈಸ್ ಮೇಕರ್ ಇತ್ಯಾದಿ. ಇವು ಈ ಕಾಲದಲ್ಲಿ ಎಲ್ಲ ಅಡುಗೆಮನೆಯಲ್ಲೂ ಇರಬೇಕು.
– ಮಾರುಕಟ್ಟೆಯಲ್ಲಿ ಡಿಸೈನರ್ ಕುಕ್‌ವೇರ್ ಕೂಡ ಲಭ್ಯವಿದೆ. ಅದು ಆಹಾರದ ಪೌಷ್ಟಿಕತೆ ಹಾಗೂ ಸ್ವಾದವನ್ನು ಉಳಿಸಿ ಬೇಗನೆ ಅಡುಗೆ ತಯಾರಾಗಲು ಸಹಾಯ ಮಾಡುತ್ತದೆ ಮತ್ತು ಕಿಚನ್ ಇಂಟೀರಿಯರ್‌ನ ಮಹತ್ವಪೂರ್ಣ ಭಾಗವಾಗುತ್ತದೆ. ಅಡುಗೆಮನೆಯಲ್ಲಿ ಇವುಗಳಿದ್ದರೆ ನೂತನ ಸೊಸೆಗೆ ಸ್ವಾದಿಷ್ಟ ಅಡುಗೆ ತಯಾರಿಸಲು ಆತ್ಮವಿಶ್ವಾಸ ಮೂಡುತ್ತದೆ.
– ಕೆ. ರಮಾಮಣಿ