ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ ಬದಲಾಗಿರುವಂತೆ ರಂಗೋಲಿಯನ್ನು ಬಿಡಿಸುವ ವಿಧಾನಗಳೂ ಸಾಕಷ್ಟು ಬದಲಾಗುತ್ತಿವೆ. ಸಾಮಾನ್ಯವಾಗಿ ರಂಗೋಲಿಯನ್ನು ನೆಲದ ಮೇಲೆ ಬಿಡಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅದನ್ನು ಕಾಗದ, ಪ್ಲೈವುಡ್, ಹಾರ್ಡ್‌ಬೋರ್ಡ್, ಸನ್‌ಮೈಕ್, ಕ್ಯಾನ್‌ವಾಸ್ ಮುಂತಾದವುಗಳ ಮೇಲೆಯೂ ಮೂಡಿಸಲಾಗುತ್ತಿದೆ. ಹಿಂದೆ ಹಬ್ಬದ ದಿನಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸುವ ತಯಾರಿಯಲ್ಲಿ ತೊಡಗುತ್ತಿದ್ದರು. ಆದರೆ ಇಂದು, ಹಬ್ಬದ ಸಂದರ್ಭದಲ್ಲಿ ಕಾಗದ ಮತ್ತು ಪ್ಲಾಸ್ಟಿಕ್ ಪೇಪರ್ ಮೇಲೆ ಅಚ್ಚಾಗಿರುವ ರಂಗೋಲಿಗಳು ಮಾರಾಟಕ್ಕೆ ಇರುತ್ತವೆ. ರಂಗೋಲಿ ಬಿಡಿಸಲು ಬಾರದಿರುವವರು ಸ್ಟಿಕರ್‌ನ್ನು ಅಂಟಿಸಿ ಹಬ್ಬದ ವಾತಾವರಣಕ್ಕೆ ಮೆರುಗು ನೀಡುತ್ತಾರೆ.
ಅದ್ಭುತ ಕಲೆ
ದಕ್ಷಿಣದಂತೆಯೇ ಉತ್ತರ ಭಾರತದಲ್ಲೂ ರಂಗೋಲಿ ಸ್ಟಿಕರ್‌ಗಳಿಗೆ ಅಪಾರ ಬೇಡಿಕೆ ಇರುತ್ತದೆ. ಈ ಸ್ಟಿಕರ್ ವ್ಯಾಪಾರದಲ್ಲಿ ತೊಡಗಿರುವ ಉಪೇಂದ್ರ ಸಿಂಗ್ ಹೀಗೆ ಹೇಳುತ್ತಾರೆ, ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಸುಮಾರು 3 ಕೋಟಿ ರೂ. ಬೆಲೆಯ ರಂಗೋಲಿಯ ಸ್ಟಿಕರ್‌ಗಳು ಬಿಹಾರ್, ಜಾರ್ಖಂಡ್, ಉತ್ತರಪ್ರದೇಶ, ಮಧ್ಯಪ್ರದೇಶ್ ಮೊದಲಾದ ರಾಜ್ಯಗಳಲ್ಲಿ ಮಾರಾಟವಾಗುತ್ತವೆ. ಈ ಸ್ಟಿಕರ್‌ಗಳು ಅಳತೆಯ ಮೇರೆಗೆ ಒಂದಕ್ಕೆ 20 ರೂ.ನಿಂದ 250ರೂ.ಗಳಂತೆ ಮಾರಲ್ಪಡುತ್ತವೆ. ಸಾಮಾನ್ಯವಾಗಿ ರಂಗೋಲಿಯ ಚಿತ್ರ ಬಿಡಿಸಲು ಬಣ್ಣ, ಗುಲಾಲು, ಹೂ, ಅಂಟು ಮುಂತಾದವುಗಳನ್ನು ಬಳಸಲಾಗುತ್ತದೆ. ಈ ಕಲೆಗೆ ತನ್ನದೇ ಆದ ಆಕರ್ಷಣೆ, ಲಕ್ಷಣ ಮತ್ತು ಸೌಂದರ್ಯವಿರುತ್ತದೆ.
ನವೋತ್ಸಾಹ ರಂಗೋಲಿ ಒಂದು ವಿಶೇಷ ಕಲೆ. ಆದರೆ ನಮ್ಮ ದೇಶದಲ್ಲಿ ಅದು ಸಾಂಪ್ರದಾಯಿಕ ಮಹತ್ವದಿಂದ ಕೂಡಿದೆಯೇ ಹೊರತು ಅದನ್ನು ಕಲೆಯೆಂದು ಪರಿಗಣಿಸಲಾಗುವುದಿಲ್ಲ. ಪ್ರತಿಯೊಂದು ಹಬ್ಬ ಮತ್ತು ಉತ್ಸವದ ಸಂದರ್ಭದಲ್ಲಿ ಈ ಸುಂದರ ಕಲೆಯ ಮೂಲಕ ವಾತಾವರಣದಲ್ಲಿ ಸಂಭ್ರಮ ತುಂಬಿಸಿ ನವೋತ್ಸಾಹದಿಂದ ನಲಿಯುತ್ತಾರೆ.
ಹಿಂದೆಲ್ಲ ರಂಗೋಲಿ ಪುಡಿ ಅಥವಾ ಅಕ್ಕಿಹಿಟ್ಟನ್ನು ಬಳಸಿ ರಂಗೋಲಿಯನ್ನು ಬಿಡಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅದಕ್ಕಾಗಿ ಸೂರ್ಯಕಾಂತಿ, ಗುಲಾಬಿ ಮತ್ತು ತಾವರೆ ಹೂಗಳು, ದೀಪ, ಶಂಖ, ಸೂರ್ಯ, ನಕ್ಷತ್ರ, ಪಕ್ಷಿ, ಮೀನು ಮುಂತಾದ ಚಿತ್ರಗಳನ್ನು ಬಿಡಿಸಿ ಅವುಗಳಲ್ಲಿ ಬಣ್ಣದ ಪುಡಿಯನ್ನು ತುಂಬಿಸುತ್ತಾರೆ. ರಂಗೋಲಿಯ ಬಿಳಿ ಬಣ್ಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ. ಏಕೆಂದರೆ ಬಿಳಿ ಬಣ್ಣ ಶಾಂತಿಯ ಸಂಕೇತ. ಶಾಂತಿ ಇರುವ ಕಡೆ ಅಭಿವೃದ್ಧಿ ಆಗುತ್ತದೆ. ಭಾರತದ ಪುರಾತನ ಕಾಲದ ಪರಂಪರೆಯಲ್ಲಿ ರಂಗೋಲಿಯೂ ಸೇರಿದೆ.
ರಂಗೋಲಿಯ ವೈಶಿಷ್ಟ್ಯ
ದಕ್ಷಿಣ ಭಾರತದಲ್ಲಿ ರಂಗೋಲಿಯ ಸಾಂಪ್ರದಾಯಿಕತೆಯು ಸಾಕಷ್ಟು ಮಹತ್ವಪೂರ್ಣವಾಗಿದೆ. ಇದರ ಸೌಂದರ್ಯ ಮತ್ತು ಮೋಹ ಇಂದಿನ ಚಟುವಟಿಕೆಯ ಜೀವನದಲ್ಲಿಯೂ ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಕೆಲವರು ಸ್ವತಃ ರಂಗೋಲಿ ಬಿಡಿಸಲಾಗದಿದ್ದರೂ ಸಹ ಅಂಗಡಿಯಲ್ಲಿ ದೊರೆಯುವ ರಂಗೋಲಿ ಸ್ಟಿಕರ್‌ಗಳನ್ನು ಅಂಟಿಸಿ ತಮ್ಮ ಸಾಂಪ್ರದಾಯಿಕ ಸಂಸ್ಕೃತಿಯ ಸಾಮೀಪ್ಯವನ್ನು ಅನುಭವಿಸುತ್ತಾರೆ.
ಉತ್ತರ ಭಾರತದಲ್ಲಿ ರಂಗೋಲಿಯ ಬಗೆಬಗೆಯ ನಮೂನೆಗಳು ಪ್ರಸಿದ್ಧವಾಗಿವೆ. ಕಲಾವಿದ ಅನಿಲ್ ಕುಮಾರ್ ಹೇಳುತ್ತಾರೆ, ಬಿಹಾರದ ದರ್‌ಭಂಗಾ ಜಿಲ್ಲೆಯಲ್ಲಿ `ಥೂಲಿಚಿತ್ರ' ಎಂಬ ಹೆಸರಿನಲ್ಲಿ ಬಿಡಿಸುವ ರಂಗೋಲಿಯನ್ನು ಅಕ್ಕಿಹಿಟ್ಟಿನ ಮಿಶ್ರಣದಿಂದ ಮಾಡಲಾಗುತ್ತದೆ.
ಮಧ್ಯಪ್ರದೇಶದಲ್ಲಿ ಮಳೆಗಾಲ ಮುಗಿದ ನಂತರ ಮನೆ ಬಾಗಿಲುಗಳಲ್ಲಿ ಹೂ ಮತ್ತು ಎಲೆಗಳನ್ನು ಬಳಸಿ ರಂಗೋಲಿಯನ್ನು ಚಿತ್ರಿಸುತ್ತಾರೆ. ರಾಜಾಸ್ಥಾನದ ರಂಗೋಲಿಯ ವಿಶೇಷವೆಂದರೆ, ಅಲ್ಲಿ ರಂಗೋಲಿಗೆ ಹೊಳೆಯುವ ಬಣ್ಣಗಳನ್ನು ಯಥೇಚ್ಛವಾಗಿ ಬಳಸಲಾಗುತ್ತದೆ.