ನಾವು ಸಾಧಾರಣವಾಗಿ ತಿಂಗಳಿಗೊಮ್ಮೆ ಒಂದಲ್ಲ ಒಂದು ಹಬ್ಬವನ್ನು ಆಚರಿಸುತ್ತಲೇ ಇರುತ್ತೇವೆ. ಆದರೆ ದೀಪಾವಳಿ ಒಂದು ವಿಶೇಷವಾದ ಹಬ್ಬ. ಈ ಹಬ್ಬದಲ್ಲಿ ನಮ್ಮ ಬಂಧುಮಿತ್ರರೊಡನೆ ಸೇರುವ ಸುಸಂದರ್ಭ ಒದಗುವುದಲ್ಲದೆ, ಅವರಿಗೆ ಉಡುಗೊರೆ ನೀಡುವ ಅವಕಾಶ ದೊರೆಯುತ್ತದೆ. ಈ ಸಂಭ್ರಮದ ಸಮಯದಲ್ಲಿ ನಮ್ಮ ಆಪ್ತರ ಮನೆಗೆ ಭೇಟಿ ನೀಡುವಾಗ ಅಥವಾ ಅವರು ನಮ್ಮ ಮನೆಗೆ ಬಂದಾಗ ಒಂದು ಪ್ರೀತಿಯ ಉಡುಗೊರೆ ನೀಡಿ ನಮ್ಮ ಸ್ನೇಹ ಸಂಬಂಧವನ್ನು ಮತ್ತಷ್ಟು ಬೆಸೆಯಬಹುದಲ್ಲವೇ?
ಡ್ರೈಫ್ರೂಟ್ಸ್ : ನಿಮ್ಮ ಆಪ್ತರಿಗೆ ರುಚಿಕರ ಮತ್ತು ಆರೋಗ್ಯಕರ ಉಡುಗೊರೆ ನೀಡಬೇಕೆಂಬ ಮನಸ್ಸಾದರೆ ಡ್ರೈಫ್ರೂಟ್ಸ್ ಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಆರೋಗ್ಯಕರವಾಗಿರುವುದರ ಜೊತೆಗೆ ಕೆಲಕಾಲ ಉಳಿಯಬಲ್ಲಂತಹುದು. ಅಂಗಡಿಯ ಮಿಠಾಯಿಯಂತೆ ಕೆಡುವ ಪದಾರ್ಥವಲ್ಲ. ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಖರ್ಜೂರ, ಅಕ್ರೋಟ್ ಮುಂತಾದ ಮಿಕ್ಸ್ಡ್ ಡ್ರೈಫ್ರೂಟ್ಸ್ ಪ್ಯಾಕ್ ಕೊಳ್ಳಿರಿ.
ಚಾಕೋಲೇಟ್ : ನಿಮ್ಮ ಮನೆಯಲ್ಲಿ ಒಬ್ಬ ಪುಟ್ಟ ಅತಿಥಿಯ ಆಗಮನವಾಗಿದ್ದರೆ ಅಥವಾ ನೀವು ಭೇಟಿ ನೀಡಲಿರುವ ಮನೆಯಲ್ಲೊಂದು ಮಗು ಇರುವುದಾದರೆ, ಬೇರೇನೂ ಯೋಚಿಸದೆ ಚಾಕೋಲೇಟ್ ಬಾಕ್ಸ್ ಉಡುಗೊರೆಯನ್ನು ಸಿದ್ಧಪಡಿಸಿಕೊಳ್ಳಿ. ಮಕ್ಕಳಿಗೆ ಕೊಡಲು ಇದಕ್ಕಿಂತ ಒಳ್ಳೆಯ ಉಡುಗೊರೆ ಬೇರೊಂದಿಲ್ಲ.
ಮಿಠಾಯಿ : ಸಿಹಿ ತಿಂಡಿಯಲ್ಲದೆ, ಲಂಚ್ ಅಥವಾ ಡಿನ್ನರ್ ಪಾರ್ಟಿ ಪೂರ್ಣಗೊಳ್ಳುವುದಿಲ್ಲ. ಹಾಗೆಯೇ ಸಿಹಿಯಿಲ್ಲದೆ ಹಬ್ಬ ಪೂರ್ಣವಾಗಲಾರದು. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆಪ್ತರಿಗೆ ಮಿಠಾಯಿಯ ಉಡುಗೊರೆ ನೀಡಿ ಸಂಬಂಧ ಹೆಚ್ಚು ಬೆಸೆಯುವಂತೆ ಮಾಡಿ. ಗುಲಾಬ್ ಜಾಮೂನ್, ಸೋನ್‌ಪಪಡೀ, ರಸಗುಲ್ಲಾ, ಕಾಜೂಬರ್ಫಿ ಮುಂತಾದವನ್ನು ಉಡುಗೊರೆಯಾಗಿ ಕೊಡಬಹುದು. ಸ್ವೀಟ್ ಬಾಕ್ಸ್ ಎಲ್ಲರಿಗೂ ಮೆಚ್ಚಿಗೆಯಾಗಬಲ್ಲ ಉಡುಗೊರೆ.
ಕಾಯಿನ್ : ನಿಮ್ಮ ಅತ್ಯಂತ ಆಪ್ತರಾದವರಿಗೆ ಕೇವಲ ನೆನಪಿನಲ್ಲಿ ಉಳಿಯುವುದಲ್ಲದೆ, ಜೀವನ ಪರ್ಯಂತ ಜೊತೆಯಾಗಿರುವಂತಹ ಉಡುಗೊರೆ ನೀಡಬೇಕೆಂದು ಬಯಸುವಿರಾದರೆ, ಅವರಿಗೆ ಬೆಳ್ಳಿ ಅಥವಾ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ಕೊಡಬಹುದು. ಇದು ನಿಮ್ಮ ಸಂಬಂಧವನ್ನು ಸದಾ ಹಸಿರಾಗಿರಿಸುತ್ತದೆ. ಕಾಯಿನ್‌ಗಳನ್ನು ಆಕರ್ಷಕಗೊಳಿಸಲು ಅವುಗಳ ಮೇಲೆ ದೇವ-ದೇವಿಯರ ಚಿತ್ರ ಅಥವಾ `ಶುಭ ದೀಪಾವಳಿ' ಎಂಬ ಸಂದೇಶವನ್ನು ಅಚ್ಚು ಮಾಡಿಸಲಾಗುತ್ತದೆ. ನಿಮ್ಮ ಈ ಉಡುಗೊರೆಯನ್ನು ಪಡೆದವರ ಮನಸ್ಸು ಮುದಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಪಟಾಕಿ : ದೀಪಾವಳಿ ಎಂದೊಡನೆ ಮಕ್ಕಳಿಗೆ ಪಟಾಕಿಯೇ ಕಣ್ಮುಂದೆ ಬರುತ್ತದೆ. ಪುಟ್ಟ ಅತಿಥಿಗಳಿಗೆ ಪಟಾಕಿಗಿಂತ ಉತ್ತಮ ಉಡುಗೊರೆ ಬೇರೊಂದಿಲ್ಲ. ಆದರೆ ಪರಿಸರ ಮತ್ತು ಮಕ್ಕಳ ಸುರಕ್ಷೆಯನ್ನು ಗಮನದಲ್ಲಿರಿಸಿಕೊಂಡು ಸಾಧಾರಣವಾದ ಮತ್ತು ಇಕೋ ಫ್ರೆಂಡ್ಲಿ ಪಟಾಕಿಗಳನ್ನೇ ಆರಿಸಿಕೊಳ್ಳಿ.
ಔಟ್‌ಫಿಟ್ಸ್ : ನಿಮ್ಮ ಆಪ್ತರ ಇಷ್ಟಾನಿಷ್ಟಗಳನ್ನು ಗಮನದಲ್ಲಿರಿಸಿಕೊಂಡು ಉಡುಗೊರೆಗಾಗಿ ನೀವು ಡ್ರೆಸ್‌ಗಳನ್ನೂ ಕೊಳ್ಳಬಹುದು. ಬಟ್ಟೆ ಕೊಳ್ಳುವಾಗ ಅವರ ವಯಸ್ಸು, ಬಣ್ಣ, ಪರ್ಸನಾಲಿಟಿ, ಪ್ರೊಫೆಶನ್‌ಗಳನ್ನು ಗಮನದಲ್ಲಿರಿಸಿಕೊಂಡಿರಿ. ಅಂತಹ ಉಡುಗೊರೆ ಪಡೆದವರ ಮನಸ್ಸು ಸೂರೆಗೊಳ್ಳುವುದು.
ಹೋಮ್ ಅಪ್ಲೈಯನ್ಸೆಸ್ : ಹೋಮ್ ಮೇಕರ್ಸ್ ಗೆ ಕೊಡಬಹುದಾದ ಉತ್ತಮ ಉಡುಗೊರೆಯೆಂದರೆ, ಹೋಮ್ ಅಪ್ಲೈಯನ್ಸೆಸ್. ಇದರಿಂದ ಅವರ ಕೆಲಸ ಹಗುರವಾಗುವುದರಿಂದ ಇದನ್ನು ಬಳಸುವಾಗ ನಿಮ್ಮನ್ನು ನೆನೆಯುವರು.