ಮಾಟಮಂತ್ರ, ದುರಾಸೆ ಹಾಗೂ ಮೂಢನಂಬಿಕೆಗೆ ಸಿಲುಕುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೊರಟಿದೆ. ಹೀಗಾಗಿ ಅವರನ್ನು ತಮ್ಮ ಜಾಲದಲ್ಲಿ ಸಿಲುಕಿಸಿಕೊಳ್ಳುತ್ತಿರು ವ ಮಂತ್ರವಾದಿಗಳ ಸಂಖ್ಯೆ ಕೂಡ ಹೆಚ್ಚಿದೆ. ಮಹಿಳೆಯರ ಮುಗ್ಧತೆ ಹಾಗೂ ಭಾವುಕತೆಯೇ ಅವರು ಇಂತಹ ಜಾಲದಲ್ಲಿ ಸಿಲುಕಲು ಕಾರಣವಾಗಿದೆ. ಧಾವಂತದ ಜೀವನದಲ್ಲಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುವುದು ಸಾಮಾನ್ಯ ಸಂಗತಿ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಖುಷಿಯ ಕಲ್ಪನೆ ಮಾಡಿಕೊಳ್ಳುತ್ತಾರೆ. ಅದು ತಪ್ಪೇನೂ ಅಲ್ಲ. ಅವರಿಗೆ ಸಂಕಷ್ಟ ಯಾವಾಗ ಎದುರಾಗುತ್ತದೆಂದರೆ, ಮೂಢನಂಬಿಕೆಗಳು ತಲೆ ತುಂಬಿಕೊಂಡಾಗ. ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾರ್ಟ್ಕಟ್ ದಾರಿ ಅಂದರೆ ಮಂತ್ರವಾದಿಗಳ ಬಳಿ ಹೋಗುತ್ತಾರೆ. ಇದರ ಒಂದು ಕಟು ಸತ್ಯವೆಂದರೆ, ಜೀವನ ಸರಾಗವಾಗುವ ಬದಲು ಇನ್ನಷ್ಟು ಗೊಂದಲದ ಗೂಡಾಗುತ್ತದೆ. ಆಗ ಅವರು ಮತ್ತಷ್ಟು ಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.
ಚಾಮು, ಮಂತ್ರವಾದಿ ಲೋಕೇಶನ ಆಕರ್ಷಕ ಜಾಹೀರಾತನ್ನು ಗಮನಿಸಿದ. ಅದರಿಂದ ಪ್ರಭಾವಿತನಾದ ಅವನು ಮಂತ್ರವಾದಿಯ ಬಳಿ ಹೋದ. ಅವನ ತಂದೆ ಕಳೆದ ಅನೇಕ ತಿಂಗಳುಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ತಂದೆಯ ಅನಾರೋಗ್ಯ ಹೋಗಲಾಡಿಸಲು ಮಂತ್ರವಾದಿಯ ಬಳಿ ಕರೆದು ಕೊಂಡುಹೋದ. ಅನಾರೋಗ್ಯಕ್ಕೆ ವೈದ್ಯರ ಬಳಿ ಚಿಕಿತ್ಸೆ ದೊರೆಯುತ್ತದೆ. ಆದರೆ ಅವನು ಮೂಢನಂಬಿಕೆಗೆ ತುತ್ತಾಗಿ, ತಂದೆಯನ್ನು ಮಂತ್ರವಾದಿಯ ಬಳಿ ಕರೆದುಕೊಂಡು ಹೋದ. ಆರಂಭದಲ್ಲಿಯೇ ತಂತ್ರ ಪೂಜೆಯ ಹೆಸರಿನಲ್ಲಿ ಮಂತ್ರವಾದಿ 1 ಲಕ್ಷ ರೂ. ಮೊತ್ತವನ್ನು ವಸೂಲಿ ಮಾಡಿದ. ಆದಾಗ್ಯೂ ಯಾವುದೇ ಗುಣ ಕಾಣಲಿಲ್ಲ. ಚಾಮು, ಪುನಃ ಮಂತ್ರವಾದಿಯ ಬಳಿ ಹೋಗಿ ವಿಷಯ ತಿಳಿಸಿದಾಗ, ತೊಂದರೆ ಬಹಳ ದೊಡ್ಡದಿದೆ. ಹಾಗಾಗಿ ಅದಕ್ಕೆ ದೊಡ್ಡ ಪೂಜೆಯನ್ನೇ ಮಾಡಬೇಕು. ಅದಕ್ಕೆ ಖರ್ಚು ಕೂಡ ಸ್ವಲ್ಪ ಹೆಚ್ಚಾಗುತ್ತದೆ ಎಂದ ಮಂತ್ರವಾದಿ. ಈ ಸಲ ಕೇಳಿದ್ದು 2 ಲಕ್ಷ ರೂ. ತಂದೆಯ ಕಾಯಿಲೆ ಗುಣವಾದರೇ ಸಾಕೆಂದು ಅಷ್ಟೂ ಮೊತ್ತವನ್ನು ಮಂತ್ರವಾದಿಯ ಖಾತೆಗೆ ಜಮೆ ಮಾಡಿದ. ಆದಾಗ್ಯೂ ತಂದೆಯ ರೋಗ ವಾಸಿಯಾಗಲೇ ಇಲ್ಲ. ಈ ಮಧ್ಯೆ ಆ ಮಂತ್ರವಾದಿ ರಾತ್ರೋರಾತ್ರಿ ಅಲ್ಲಿಂದ ಕಣ್ಮರೆಯಾಗಿ ಬಿಟ್ಟ. ದೂರು ಸಲ್ಲಿಕೆಯಾದಾಗ ಪೊಲೀಸರು ಆ ಮಂತ್ರವಾದಿಯನ್ನು ಬಂಧಿಸಿದರು. ಮಂತ್ರವಾದಿ ತಾನು ಚಾಮುಗಷ್ಟೇ ಮೋಸ ಮಾಡಿಲ್ಲ. ಅಂತಹ ಅನೇಕರನ್ನು ತಾನು ನಂಬಿಸಿ ಮೋಸಗೊಳಿಸಿದ್ದಾಗಿ ಹೇಳಿದ. ಅದರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿತ್ತು.
ಮಹಾರಾಷ್ಟ್ರದ ಸುಶೀಲಾಬಾಯಿ ದಿಢೀರ್ ಶ್ರೀಮಂತಳಾಗಬೇಕೆಂದು ಕನಸು ಕಾಣುತ್ತಿದ್ದಳು. ಮೂಢನಂಬಿಕೆಗೆ ತುತ್ತಾಗಿದ್ದ ಆಕೆ ಮಂತ್ರವಾದಿಯೊಬ್ಬನ ಬಳಿ ಹೋದಳು. ಆಕೆಯ ಮುಗ್ಧ ಸ್ವಭಾವವನ್ನು ಮನಗಂಡ ಮಂತ್ರವಾದಿ ನಿನ್ನ ಮನೆಯ ನೆಲದಡಿ ದೊಡ್ಡ ಖಜಾನೆಯೊಂದು ಇದೆ. ಅದನ್ನು ಹೊರತೆಗೆಯಬೇಕು. ಅದನ್ನು ಹಾಗೆಯೇ ತೆಗೆಯಲು ಆಗದು. ಅದಕ್ಕಾಗಿ ವಿಶೇಷ ಪೂಜೆ ಮಾಡಿಸಬೇಕು ಎಂದು ಆಕೆಗೆ ಸಬೂಬು ಹೇಳಿದ.
ಮುಳುಗಿಸಿದ ಶ್ರೀಮಂತಿಕೆ ಕನಸು
ದುರಾಸೆ ಹಾಗೂ ಮೂಢನಂಬಿಕೆ ಆಕೆಯನ್ನು ಯಾವ ರೀತಿ ದುಸ್ಥಿತಿಗೆ ತಳ್ಳಿತೆಂದರೆ, ಸುಶೀಲಾಬಾಯಿ ಮಂತ್ರವಾದಿಯ ಕಪಿಮುಷ್ಟಿಗೆ ಸಿಲುಕಿದಳು. ಆಕೆಯ ಪತಿ ಸೈನ್ಯದಲ್ಲಿದ್ದರು. ಸುಶೀಲಾಬಾಯಿ ಮಕ್ಕಳಿಗೂ ತನ್ನ ಯೋಜನೆಯ ಬಗ್ಗೆ ತಿಳಿಸಿ ಅವರ ವಿಶ್ವಾಸವನ್ನೂ ಗಳಿಸಿದಳು. ತಂತ್ರಮಂತ್ರದ ಹೆಸರಿನಲ್ಲಿ 1 ಲಕ್ಷ ರೂ.ನಿಂದ ಶುರುವಾದ ಖರ್ಚಿನ ಈ ಪ್ರಕ್ರಿಯೆ 10 ಲಕ್ಷ ರೂ. ತನಕ ತಲುಪಿತು. ಮಂತ್ರವಾದಿ ಕೇವಲ ತಾನೊಬ್ಬನೇ ಅಲ್ಲ ತನ್ನ ಚೇಲಾಗಳನ್ನೂ ಕರೆತಂದಿದ್ದ. ಒಂದು ದಿನ ಆ ಮಂತ್ರವಾದಿ ಸುಶೀಲಾಬಾಯಿಯ ಮನೆಯಲ್ಲಿ ನೆಲ ಅಗೆಯಲು ಆರಂಭಿಸಿದ. ಮಧ್ಯರಾತ್ರಿಯ ಹೊತ್ತಿಗೆ ಬಹಳ ಜಾಣ್ಮೆಯಿಂದ ಅಗೆದಿದ್ದ ಜಾಗದಲ್ಲಿ 2 ಗಡಿಗೆಗಳು ಹಾಗೂ 2 ಹೆಡೆ ಎತ್ತಿದ ಸರ್ಪಗಳನ್ನು ತಂದಿಟ್ಟ. ಗಡಿಗೆಯನ್ನು ಕೆಂಪು ಬಟ್ಟೆಯಿಂದ ಮುಚ್ಚಲಾಗಿತ್ತು. ನಂತರ ಮಂತ್ರವಾದಿ ಆ ಗಡಿಗೆ ಹಾಗೂ ಸರ್ಪಗಳನ್ನು ತನ್ನ ವಶಕ್ಕೆ ತೆಗೆದುಕೊಂಡ. ಈ ಗಡಿಗೆಯಲ್ಲಿ ಕೋಟ್ಯಂತರ ಮೌಲ್ಯದ ವಜ್ರವೈಢೂರ್ಯಗಳಿರಬಹುದು. ಅವನ್ನು ಈ ಸರ್ಪಗಳು ಕಾವಲು ಕಾಯುತ್ತಿವೆ. ವಿಶೇಷ ಪೂಜೆಯ ಬಳಿಕವೇ ಗಡಿಗೆಯ ಮೇಲಿನ ಬಟ್ಟೆಯನ್ನು ತೆಗೆಯಲಾಗುವುದು. ಇಲ್ಲದಿದ್ದರೆ ಗಡಿಗೆಯಲ್ಲಿರುವ ಚಿನ್ನಾಭರಣಗಳು ಮಾಯವಾಗಿಬಿಡುತ್ತವೆ ಎಂದ.
ಸುಶೀಲಾಬಾಯಿಗೆ ಬಹುಬೇಗ ಶ್ರೀಮಂತಳಾಗುವ ಆತುರ ಇತ್ತು. ಆಕೆ ಮಾಂತ್ರಿಕನಿಗೆ ಹಣ ಕೊಡುತ್ತಲೇ ಇದ್ದಳು. ಹೀಗಾಗಿ ಅವಳು ಉಳಿಸಿಟ್ಟಿದ್ದ ಹಣವೆಲ್ಲ ಖಾಲಿಯಾಗಿಹೋಯಿತು. ಆಗ ಆಕೆ ಬೇರೆಯವರಿಂದ ಸಾಲ ಪಡೆದು ಮಾಂತ್ರಿಕನಿಗೆ ಹಣ ಕೊಟ್ಟಳು. ನಿಧಿಯ ರಹಸ್ಯ ಯಾರಿಗೂ ಗೊತ್ತಾಗಬಾರದೆಂದು ತನ್ನ ಪತಿಗಾಗಲಿ, ಸಂಬಂಧಿಕರಿಗಾಗಲಿ ಈ ವಿಷಯ ತಿಳಿಸಲೇ ಇಲ್ಲ. ಸಾಲ ಕೊಟ್ಟವರು ಆಕೆಗೆ ವಾಪಸ್ ಕೊಡಬೇಕೆಂದು ಆಗ್ರಹಿಸಿದಾಗ ತನ್ನ ಗೌರವ ಉಳಿಸಿಕೊಳ್ಳಲು ಮನೆಯನ್ನು ಅಡವಿಟ್ಟು ಸಾಲ ತೀರಿಸಿದಳು. ತಾನು ಮೋಸಹೋಗಿದ್ದೇನೆಂದು ಅರಿವಾಗುವ ಹೊತ್ತಿಗೆ ಆಕೆ 29 ಲಕ್ಷ ರೂ. ಕಳೆದುಕೊಂಡಿದ್ದಳು. ಆ ಬಳಿಕವೇ ಆಕೆ ಆ ಮಾಂತ್ರಿಕನ ವಿರುದ್ಧ ದೂರು ದಾಖಲಿಸಿದಳು.
ಮೂಢನಂಬಿಕೆಯ ಪರಾಕಾಷ್ಠೆ
ಡೆಹರಾಡೂನಿನ ಪಟೇಲ್ ನಗರದ ಯುವತಿಯೊಬ್ಬಳು ಒಬ್ಬ ಯುವಕನೊಂದಿಗೆ ಸ್ನೇಹ ಬೆಳೆಸಿದಳು. ಆ ಸ್ನೇಹ ಬಳಿಕ ಪ್ರೀತಿಗೆ ತಿರುಗಿತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ ಯುವತಿಯ ಕುಟುಂಬದವರು ಒಪ್ಪಿಗೆ ಕೊಡಲಿಲ್ಲ. ಆದರೂ ಆ ಯುವತಿ ಸೋಲೊಪ್ಪಿಕೊಳ್ಳಲಿಲ್ಲ. ತಂತ್ರಮಂತ್ರದ ಸಹಾಯದಿಂದ ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ನಿರ್ಧರಿಸಿದಳು. ಬಾಯ್ಫ್ರೆಂಡ್ನ ನೆರವಿನಿಂದ ಮೂಢನಂಬಿಕೆಯ ಕನ್ನಡಕ ಹಾಕಿಕೊಂಡು ಇಬ್ಬರೂ ಮಂತ್ರವಾದಿಗಳ ಬಳಿ ಹೋದರು. ನಿಮ್ಮ ಪ್ರೀತಿಯನ್ನು ನಾವು ಖಂಡಿತಾಗಿಯೂ ವಾಪಸ್ ಕೊಡಿಸುತ್ತೇವೆ, ಎಂದು ಮಂತ್ರಾದಿಗಳು ಆಕೆಗೆ ಭರವಸೆ ಕೊಟ್ಟರು.
ಯುವತಿಯ ತಾಯಿ ಸರ್ಕಾರಿ ನೌಕರಿಯಲ್ಲಿದ್ದರು. ಎಟಿಎಂ ಕಾರ್ಡ್ ಮನೆಯಲ್ಲಿಯೇ ಇರುತ್ತಿತ್ತು. ಹಲವು ಕಂತುಗಳಲ್ಲಿ ಅವಳು ಒಟ್ಟಾರೆ 8 ಲಕ್ಷ ರೂ.ಗಳಷ್ಟು ಮೊತ್ತವನ್ನು ಮಂತ್ರವಾದಿಗೆ ಕೊಟ್ಟಿದ್ದಳು. ಅವಳ ತಾಯಿಗೆ ವಿಷಯ ಗೊತ್ತಾದಾಗ ಅಲ್ಲೋಲಕಲ್ಲೋಲವೇ ಆಯಿತು. ಬಳಿಕ ದೂರು ದಾಖಲಾಯಿತು.
ಸುಳ್ಳು ಪ್ರತಿಷ್ಠೆ
ತಂತ್ರಮಂತ್ರ ಹಾಗೂ ಧರ್ಮದ ಹೆಸರಿನಲ್ಲಿ ಜನರನ್ನು ಸೆಳೆಯುನ ಅಂಗಡಿ ತೆರೆಯಲು ಯಾವುದೇ ಲೈಸೆನ್ಸ್ ನ ಅಗತ್ಯವಿಲ್ಲ. ಚಿಕ್ಕಪುಟ್ಟ ನಗರಗಳಲ್ಲಿ ಇವರದ್ದು ಒಂದು ದೊಡ್ಡ ಜಾಲವೇ ಇರುತ್ತದೆ. ಬೇರೆಬೇರೆ ವಿಧಾನಗಳಲ್ಲಿ ಇಂತಹ ಜನರು ಮಹಿಳೆಯರನ್ನು ಮೋಸಗೊಳಿಸುತ್ತಲೇ ಇರುತ್ತಾರೆ. ಅವರು ಪ್ರೇಮ ವಿವಾಹ, ವಶೀಕರಣ, ತುರ್ತು ವಿವಾಹ, ಸರ್ಕಾರಿ ನೌಕರಿ, ಸವತಿಯಿಂದ ಮುಕ್ತಿ, ಗೃಹ ಕಲಹದಿಂದ ಮುಕ್ತಿ, ಭೂತಪ್ರೇತಗಳನ್ನು ಓಡಿಸುವುದು, ಇಷ್ಟಪಟ್ಟ ಸಂತಾನ ಪ್ರಾಪ್ತಿ, ಗಂಡನನ್ನು ತಮ್ಮ ವಶದಲ್ಲಿಟ್ಟುಕೊಳ್ಳುವುದು… ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಪರಿಹಾರ ದೊರಕಿಸಿಕೊಡುವುದಾಗಿ ನಿಮ್ಮನ್ನು ನಂಬಿಸುತ್ತಾರೆ.
ಜಾಹೀರಾತುಗಳಿಗಾಗಿ ಅವರು ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆ ಜಾಹೀರಾತುಗಳಲ್ಲಿ ಅವರು ಎಲ್ಲ ಬಗೆಯ ಸಮಸ್ಯೆಗಳಿಗೆ ಗ್ಯಾರಂಟಿ ಪರಿಹಾರ ದೊರಕಿಸಿಕೊಡುವುದಾಗಿ ಡಂಗೂರ ಹೊಡೆದು ಕೊಂಡಿರುತ್ತಾರೆ. ಯಾವ ಮಹಿಳೆಯರು ಅವರ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೋ, ಅವರನ್ನು ಅವರು ಮಂತ್ರತಂತ್ರ, ಭೂತಪ್ರೇತದ ಮುಖಾಂತರ ಹಾಳುಗೆಡಹುವ ಬೆದರಿಕೆ ಹಾಕುತ್ತಾರೆ.
ಜಮ್ಮುನಲ್ಲಿರುವ ನಕಲಿ ಬಾಬಾನ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು ಬಾಬಾನನ್ನು ಬಂಧಿಸಿದರು. ಅವನ ನಿಜವಾದ ಹೆಸರು ಇರ್ಷಾನ್ ಮಲಿಕ್. ಆದರೆ ಜಮ್ಮುವಿನಲ್ಲಿ ಎಲ್ಲರಿಗೂ ಸೂಫಿ ಅಲ್ಲಾವುದೀನ್ ಅಜಮೇರುಲ್ಲಾ ಎಂದೇ ಚಿರಪರಿಚಿತನಾಗಿದ್ದ. 2 ವರ್ಷಗಳಿಂದ ಆ ವಂಚಕ ಅದೆಷ್ಟು ಮಹಿಳೆಯರಿಗೆ ವಂಚಿಸಿದ್ದನೋ, ಸ್ವತಃ ಆ ವ್ಯಕ್ತಿಗೆ ನೆನಪಿರಲಿಲ್ಲ. ಆ ವಂಚಕ ವ್ಯಕ್ತಿ ತನ್ನ ಆಫೀಸ್ನಲ್ಲಿ 5-6 ಸಾವಿರ ರೂ.ಗಳ ಸಂಬಳ ಕೊಟ್ಟು ಅನೇಕ ಮಹಿಳೆಯರನ್ನು ಹಾಗೂ ಚೇಲಾಗಳನ್ನು ನೇಮಿಸಿಕೊಂಡಿದ್ದ. ಅವರು ಅಲ್ಲಿಗೆ ಬರುವ ಮಹಿಳೆಯರಿಗೆ ತಮ್ಮ ಅನುಭವಗಳನ್ನು ಹೇಳಿ ಬಾಬಾ ಹೇಗೆ ತಮ್ಮನ್ನು ಕಷ್ಟದಿಂದ ಪಾರು ಮಾಡಿದರೆಂದು ಕಥೆ ಕಟ್ಟಿ ಹೇಳುತ್ತಿದ್ದರು. ಆ ವ್ಯಕ್ತಿ ಮಹಿಳೆಯರನ್ನು ಮೂರ್ಖರನ್ನಾಗಿಸಿ ಸಾವಿರಾರು ರೂ.ಗಳನ್ನು ತನ್ನ ಜೇಬಿಗಿಳಿಸುತ್ತಿದ್ದ. ಕೆಲವು ಮಹಿಳೆಯರು ಅವನ ವಿರುದ್ಧ ದೂರು ಸಲ್ಲಿಸದೇ ಇದ್ದಿದ್ದರೆ ಅವನ ದಂಧೆ ಹೀಗೆಯೇ ಮುಂದುವರಿಯುತ್ತಿತ್ತು.
– ನಿತಿನ್ ಶರ್ಮ
ಮೂಢನಂಬಿಕೆ ಮತ್ತು ತರ್ಕ
ಸಮಾಜದಲ್ಲಿ ಹತ್ತೆಂಟು ಬಗೆಯ ಮೂಢನಂಬಿಕೆಗಳು ಪಸರಿಸಿವೆ. ಅವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ, ಅವುಗಳ ಪರಿಣಾಮ ಬೇರೆಯ ರೀತಿಯಲ್ಲಿಯೇ ಇರುತ್ತದೆ.
ಬಾಗಿಲ ಮೇಲೆ ಮೆಣಸಿನಕಾಯಿ ನಿಂಬೆ ಕಟ್ಟುವುದು : ಕೆಟ್ಟ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡುವುದಾಗಿ ಜನ ಹೇಳಿಕೊಳ್ಳುತ್ತಾರೆ. ಇದರ ಹಿಂದಿನ ತರ್ಕ ಏನೆಂದರೆ ಅವುಗಳಲ್ಲಿನ ಸಿಟ್ರಿಕ್ ಆ್ಯಸಿಡ್ ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗುವಂಥದ್ದು. ಅದು ನಮ್ಮನ್ನು ಆರೋಗ್ಯದಿಂದಿಡುತ್ತದೆ. ಮೆಣಸಿನಕಾಯಿ, ನಿಂಬೆ ಇರುವುದು ತಿನ್ನಲು…. ಹೀಗೆ ಕಟ್ಟಲು ಅಲ್ಲ.
ಸೂರ್ಯಗ್ರಹಣದ ಸಮಯದಲ್ಲಿ ಹೊರ ಬಂದರೆ ರಾಹು ಪರಿಣಾಮ : ಅಂದಹಾಗೆ, ಸೂರ್ಯಗ್ರಹಣದ ಸಂದರ್ಭದಲ್ಲಿ ನಾವು ಏಕೆ ಹೊರಗೆ ಬರಬಾರದೆಂದರೆ, ನಮ್ಮ ಗಮನ ಸೂರ್ಯನತ್ತ ಹೋಗಬಾರದು ಎಂದು. ಬರಿಗಣ್ಣಿನಿಂದ ಸೂರ್ಯನನ್ನು ನೋಡುವುದರಿಂದ ಕಣ್ಣಿನ ರೆಟಿನಾಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಸೂರ್ಯನಿಂದ ಹೊರಹೊಮ್ಮುವ ಕಿರಣಗಳು ಗರ್ಭಸ್ಥ ಶಿಶುವಿಗೂ ಕೂಡ ಹಾನಿಯುಂಟು ಮಾಡುತ್ತವೆ.
ಎಲ್ಲಿಯಾದರೂ ಹೊರಡುವ ಮುಂಚೆ ಮೊಸರು ಸೇವನೆ : ಹೀಗೆ ಮಾಡುವುದು ಶುಭ ಎಂದು ಭಾವಿಸಲಾಗುತ್ತದೆ. ಆದರೆ ಹಿಂದಿರುವ ತರ್ಕವೇ ಬೇರೆ. ಮೊಸರಿನಲ್ಲಿ ಸಕ್ಕರೆ ಬೆರೆಸಿ ಸೇವನೆ ಮಾಡುವುದರಿಂದ ದೇಹದಲ್ಲಿರುವ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ. ಅದರಿಂದ ಮನಸ್ಸು ಶಾಂತವಾಗಿರುತ್ತದೆ. ದೇಹದಲ್ಲಿ ಎನರ್ಜಿಯೂ ಇರುತ್ತದೆ. ಹಾಗೊಮ್ಮೆ ಮೊಸರು ಸೇವನೆಯಿಂದ ಎಲ್ಲ ಒಳ್ಳೆಯದಾಗಿರುತ್ತಿದ್ದರೆ, ಯಾವುದೇ ಸಮಸ್ಯೆಯೇ ಇರುತ್ತಿರಲಿಲ್ಲ.
ಬೆಕ್ಕು ರಸ್ತೆ ದಾಟಿದಾಗ : ರಸ್ತೆ ದಾಟುವಾಗ ಬೆಕ್ಕು ಅಡ್ಡ ಬಂದರೆ ಅಶುಭ ಎಂದೇ ಹೇಳುತ್ತಾರೆ. ಅಂಥದ್ದೇನೂ ಇಲ್ಲ. ಸಹಜವಾಗಿ ಬೆಕ್ಕು ತನ್ನ ಕೆಲಸದ ಸಲುವಾಗಿ ಎಲ್ಲಿಂದ ಎಲ್ಲಿಗೋ ಹೋಗುತ್ತಿರುತ್ತದೆ. ಅಕಸ್ಮಾತ್ ಅದು ನಮಗೆ ಎದುರಾಗುವುದು ಕಾಕತಾಳೀಯವಷ್ಟೇ. ಇದು ನಿಜ ಎಂದುಕೊಂಡರೆ, ಆಡಳಿತ ಪಕ್ಷ ಏನೇ ಮಾಡಿದರೂ ವಿರೋಧ ಪಕ್ಷದವರು ಮಧ್ಯೆ ಬೆಕ್ಕು ಬಿಟ್ಟು ಅದನ್ನು ಕೆಡಿಸುತ್ತಿದ್ದರು.
ಸೀನುವಿಕೆ : ಸೀನಿನ ಕುರಿತಾಗಿ ಹಲವು ಮೂಢನಂಬಿಕೆಗಳಿವೆ. ಇದರಿಂದ ನಾವಂದುಕೊಂಡ ಕೆಲಸ ನಡೆಯದು ಎಂಬುದೇ ಮುಖ್ಯ. ಹಾಗೇನೂ ಇಲ್ಲ. ಇದಂತೂ ಒಂದು ಸಹಜ ನೈಸರ್ಗಿಕ ಕ್ರಿಯೆ. ಇದು ಯಾವುದೇ ಕಾರಣದಿಂದ ಬರಬಹುದು. ಕೆಲವೊಮ್ಮೆ ಆಕಸ್ಮಿಕವಾಗಿ ಬಂದರೆ, ಕೆಲವೊಮ್ಮೆ ನೆಗಡಿಯ ಕಾರಣದಿಂದ. ಸೀನುವಿಕೆ ಆರೋಗ್ಯಕ್ಕೆ ಪೂರಕ. ಸೀನುವಿಕೆಯಿಂದ ಕೆಟ್ಟದಾಗುವುದೇ ನಿಜವಾಗಿದ್ದಲ್ಲಿ ಅತ್ತೆ-ಸೊಸೆ, ಅತ್ತಿಗೆ-ನಾದಿನಿ, ಓರಗಿತ್ತಿಯರು ಪರಸ್ಪರರ ಕೆಲಸ ಹಾಳು ಮಾಡಲು ಸೀನದೇ ಇರುತ್ತಿದ್ದರೆ?
ಮರಗಳಲ್ಲಿ ದೆವ್ವಗಳು : ಮರಗಳಿರುವುದೇ ಪರಿಸರದಲ್ಲಿ ಉತ್ತಮ ಆಮ್ಲಜನಕ ಒದಗಿಸಲು. ಹಲವು ಬಗೆಯ ಮರಗಳು ಎಷ್ಟೋ ಪಶುಪಕ್ಷಿಗಳಿಗೆ ಆಶ್ರಯ ನೀಡುತ್ತವೆ, ಅದರಲ್ಲಿ ನಮ್ಮ ಕಾಲ್ಪನಿಕ ದೆವ್ವಗಳು ನೆಲೆಸಿರುತ್ತವೆ ಎಂಬುದು ಮೂರ್ಖತನ.
ನದಿನಾಲೆಗೆ ನಾಣ್ಯ ಎಸೆಯುವುದು : ನಮ್ಮ ಭಾಗ್ಯ ಬೆಳಗಲಿ ಎಂದು ಜನ ನದಿ, ಕೊಳ ಕಂಡಾಗ ಅದಕ್ಕೆ ನಾಣ್ಯ ಎಸೆಯುತ್ತಾರೆ. ಹಿಂದೆಲ್ಲ ನಾಣ್ಯಗಳು ತಾಮ್ರದ್ದೇ ಆಗಿರುತ್ತಿದ್ದವು. ತಾಮ್ರ ನೀರಿಗೆ ಬಿದ್ದಾಗ ಅಲ್ಲಿನ ಬ್ಯಾಕ್ಟೀರಿಯಾ ನಿವಾರಣೆ ಆಗುತ್ತದೆ ಎಂಬುದು ನಿಜ. ಹಾಗಾಗಿ ಅವರು ಹಾಗೆ ಮಾಡುತ್ತಿದ್ದರು. ಕಾಲ ಬದಲಾದಂತೆ ನಾಣ್ಯ ಸ್ಟೀಲ್, ಅಲ್ಯುಮಿನಿಯಂ ಆಗಿರುವಾಗ ಈಗಲೂ ಹಳೆಯದನ್ನೇ ಅನುಸರಿಸುವುದು ಸರಿಯಲ್ಲ.