ಮಾಟಮಂತ್ರ, ದುರಾಸೆ ಹಾಗೂ ಮೂಢನಂಬಿಕೆಗೆ ಸಿಲುಕುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೊರಟಿದೆ. ಹೀಗಾಗಿ ಅವರನ್ನು ತಮ್ಮ ಜಾಲದಲ್ಲಿ ಸಿಲುಕಿಸಿಕೊಳ್ಳುತ್ತಿರು ವ ಮಂತ್ರವಾದಿಗಳ ಸಂಖ್ಯೆ ಕೂಡ ಹೆಚ್ಚಿದೆ. ಮಹಿಳೆಯರ ಮುಗ್ಧತೆ ಹಾಗೂ ಭಾವುಕತೆಯೇ ಅವರು ಇಂತಹ ಜಾಲದಲ್ಲಿ ಸಿಲುಕಲು ಕಾರಣವಾಗಿದೆ. ಧಾವಂತದ ಜೀವನದಲ್ಲಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುವುದು ಸಾಮಾನ್ಯ ಸಂಗತಿ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಖುಷಿಯ ಕಲ್ಪನೆ ಮಾಡಿಕೊಳ್ಳುತ್ತಾರೆ. ಅದು ತಪ್ಪೇನೂ ಅಲ್ಲ. ಅವರಿಗೆ ಸಂಕಷ್ಟ ಯಾವಾಗ ಎದುರಾಗುತ್ತದೆಂದರೆ, ಮೂಢನಂಬಿಕೆಗಳು ತಲೆ ತುಂಬಿಕೊಂಡಾಗ. ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾರ್ಟ್‌ಕಟ್ ದಾರಿ ಅಂದರೆ ಮಂತ್ರವಾದಿಗಳ ಬಳಿ ಹೋಗುತ್ತಾರೆ. ಇದರ ಒಂದು ಕಟು ಸತ್ಯವೆಂದರೆ, ಜೀವನ ಸರಾಗವಾಗುವ ಬದಲು ಇನ್ನಷ್ಟು ಗೊಂದಲದ ಗೂಡಾಗುತ್ತದೆ. ಆಗ ಅವರು ಮತ್ತಷ್ಟು ಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.
ಚಾಮು, ಮಂತ್ರವಾದಿ ಲೋಕೇಶನ ಆಕರ್ಷಕ ಜಾಹೀರಾತನ್ನು ಗಮನಿಸಿದ. ಅದರಿಂದ ಪ್ರಭಾವಿತನಾದ ಅವನು ಮಂತ್ರವಾದಿಯ ಬಳಿ ಹೋದ. ಅವನ ತಂದೆ ಕಳೆದ ಅನೇಕ ತಿಂಗಳುಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ತಂದೆಯ ಅನಾರೋಗ್ಯ ಹೋಗಲಾಡಿಸಲು ಮಂತ್ರವಾದಿಯ ಬಳಿ ಕರೆದು ಕೊಂಡುಹೋದ. ಅನಾರೋಗ್ಯಕ್ಕೆ ವೈದ್ಯರ ಬಳಿ ಚಿಕಿತ್ಸೆ ದೊರೆಯುತ್ತದೆ. ಆದರೆ ಅವನು ಮೂಢನಂಬಿಕೆಗೆ ತುತ್ತಾಗಿ, ತಂದೆಯನ್ನು ಮಂತ್ರವಾದಿಯ ಬಳಿ ಕರೆದುಕೊಂಡು ಹೋದ. ಆರಂಭದಲ್ಲಿಯೇ ತಂತ್ರ ಪೂಜೆಯ ಹೆಸರಿನಲ್ಲಿ ಮಂತ್ರವಾದಿ 1 ಲಕ್ಷ ರೂ. ಮೊತ್ತವನ್ನು ವಸೂಲಿ ಮಾಡಿದ. ಆದಾಗ್ಯೂ ಯಾವುದೇ ಗುಣ ಕಾಣಲಿಲ್ಲ. ಚಾಮು, ಪುನಃ ಮಂತ್ರವಾದಿಯ ಬಳಿ ಹೋಗಿ ವಿಷಯ ತಿಳಿಸಿದಾಗ, ತೊಂದರೆ ಬಹಳ ದೊಡ್ಡದಿದೆ. ಹಾಗಾಗಿ ಅದಕ್ಕೆ ದೊಡ್ಡ ಪೂಜೆಯನ್ನೇ ಮಾಡಬೇಕು. ಅದಕ್ಕೆ ಖರ್ಚು ಕೂಡ ಸ್ವಲ್ಪ ಹೆಚ್ಚಾಗುತ್ತದೆ ಎಂದ ಮಂತ್ರವಾದಿ. ಈ ಸಲ ಕೇಳಿದ್ದು 2 ಲಕ್ಷ ರೂ. ತಂದೆಯ ಕಾಯಿಲೆ ಗುಣವಾದರೇ ಸಾಕೆಂದು ಅಷ್ಟೂ ಮೊತ್ತವನ್ನು ಮಂತ್ರವಾದಿಯ ಖಾತೆಗೆ ಜಮೆ ಮಾಡಿದ. ಆದಾಗ್ಯೂ ತಂದೆಯ ರೋಗ ವಾಸಿಯಾಗಲೇ ಇಲ್ಲ. ಈ ಮಧ್ಯೆ ಆ ಮಂತ್ರವಾದಿ ರಾತ್ರೋರಾತ್ರಿ ಅಲ್ಲಿಂದ ಕಣ್ಮರೆಯಾಗಿ ಬಿಟ್ಟ. ದೂರು ಸಲ್ಲಿಕೆಯಾದಾಗ ಪೊಲೀಸರು ಆ ಮಂತ್ರವಾದಿಯನ್ನು ಬಂಧಿಸಿದರು. ಮಂತ್ರವಾದಿ ತಾನು ಚಾಮುಗಷ್ಟೇ ಮೋಸ ಮಾಡಿಲ್ಲ. ಅಂತಹ ಅನೇಕರನ್ನು ತಾನು ನಂಬಿಸಿ ಮೋಸಗೊಳಿಸಿದ್ದಾಗಿ ಹೇಳಿದ. ಅದರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿತ್ತು.
ಮಹಾರಾಷ್ಟ್ರದ ಸುಶೀಲಾಬಾಯಿ ದಿಢೀರ್ ಶ್ರೀಮಂತಳಾಗಬೇಕೆಂದು ಕನಸು ಕಾಣುತ್ತಿದ್ದಳು. ಮೂಢನಂಬಿಕೆಗೆ ತುತ್ತಾಗಿದ್ದ ಆಕೆ ಮಂತ್ರವಾದಿಯೊಬ್ಬನ ಬಳಿ ಹೋದಳು. ಆಕೆಯ ಮುಗ್ಧ ಸ್ವಭಾವವನ್ನು ಮನಗಂಡ ಮಂತ್ರವಾದಿ ನಿನ್ನ ಮನೆಯ ನೆಲದಡಿ ದೊಡ್ಡ ಖಜಾನೆಯೊಂದು ಇದೆ. ಅದನ್ನು ಹೊರತೆಗೆಯಬೇಕು. ಅದನ್ನು ಹಾಗೆಯೇ ತೆಗೆಯಲು ಆಗದು. ಅದಕ್ಕಾಗಿ ವಿಶೇಷ ಪೂಜೆ ಮಾಡಿಸಬೇಕು ಎಂದು ಆಕೆಗೆ ಸಬೂಬು ಹೇಳಿದ.
ಮುಳುಗಿಸಿದ ಶ್ರೀಮಂತಿಕೆ ಕನಸು
ದುರಾಸೆ ಹಾಗೂ ಮೂಢನಂಬಿಕೆ ಆಕೆಯನ್ನು ಯಾವ ರೀತಿ ದುಸ್ಥಿತಿಗೆ ತಳ್ಳಿತೆಂದರೆ, ಸುಶೀಲಾಬಾಯಿ ಮಂತ್ರವಾದಿಯ ಕಪಿಮುಷ್ಟಿಗೆ ಸಿಲುಕಿದಳು. ಆಕೆಯ ಪತಿ ಸೈನ್ಯದಲ್ಲಿದ್ದರು. ಸುಶೀಲಾಬಾಯಿ ಮಕ್ಕಳಿಗೂ ತನ್ನ ಯೋಜನೆಯ ಬಗ್ಗೆ ತಿಳಿಸಿ ಅವರ ವಿಶ್ವಾಸವನ್ನೂ ಗಳಿಸಿದಳು. ತಂತ್ರಮಂತ್ರದ ಹೆಸರಿನಲ್ಲಿ 1 ಲಕ್ಷ ರೂ.ನಿಂದ ಶುರುವಾದ ಖರ್ಚಿನ ಈ ಪ್ರಕ್ರಿಯೆ 10 ಲಕ್ಷ ರೂ. ತನಕ ತಲುಪಿತು. ಮಂತ್ರವಾದಿ ಕೇವಲ ತಾನೊಬ್ಬನೇ ಅಲ್ಲ ತನ್ನ ಚೇಲಾಗಳನ್ನೂ ಕರೆತಂದಿದ್ದ. ಒಂದು ದಿನ ಆ ಮಂತ್ರವಾದಿ ಸುಶೀಲಾಬಾಯಿಯ ಮನೆಯಲ್ಲಿ ನೆಲ ಅಗೆಯಲು ಆರಂಭಿಸಿದ. ಮಧ್ಯರಾತ್ರಿಯ ಹೊತ್ತಿಗೆ ಬಹಳ ಜಾಣ್ಮೆಯಿಂದ ಅಗೆದಿದ್ದ ಜಾಗದಲ್ಲಿ 2 ಗಡಿಗೆಗಳು ಹಾಗೂ 2 ಹೆಡೆ ಎತ್ತಿದ ಸರ್ಪಗಳನ್ನು ತಂದಿಟ್ಟ. ಗಡಿಗೆಯನ್ನು ಕೆಂಪು ಬಟ್ಟೆಯಿಂದ ಮುಚ್ಚಲಾಗಿತ್ತು. ನಂತರ ಮಂತ್ರವಾದಿ ಆ ಗಡಿಗೆ ಹಾಗೂ ಸರ್ಪಗಳನ್ನು ತನ್ನ ವಶಕ್ಕೆ ತೆಗೆದುಕೊಂಡ. ಈ ಗಡಿಗೆಯಲ್ಲಿ ಕೋಟ್ಯಂತರ ಮೌಲ್ಯದ ವಜ್ರವೈಢೂರ್ಯಗಳಿರಬಹುದು. ಅವನ್ನು ಈ ಸರ್ಪಗಳು ಕಾವಲು ಕಾಯುತ್ತಿವೆ. ವಿಶೇಷ ಪೂಜೆಯ ಬಳಿಕವೇ ಗಡಿಗೆಯ ಮೇಲಿನ ಬಟ್ಟೆಯನ್ನು ತೆಗೆಯಲಾಗುವುದು. ಇಲ್ಲದಿದ್ದರೆ ಗಡಿಗೆಯಲ್ಲಿರುವ ಚಿನ್ನಾಭರಣಗಳು ಮಾಯವಾಗಿಬಿಡುತ್ತವೆ ಎಂದ.