`ಲಂಚ್‌ಬಾಕ್ಸ್’ ಹೀರೋಯಿನ್‌ ರೀತಿಯಲ್ಲಿಯೇ ನನ್ನ ಜೀವನದಲ್ಲೂ ಯಾರಾದರೂ ಹುಡುಗಿ ಪ್ರವೇಶಿಸಬಾರದೆ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಆ ರೀತಿ ಯೋಚಿಸುವುದನ್ನು ಬಿಟ್ಟು ನೀವು ಜಾಗ್ರತೆಯಿಂದಿರುವುದು ಒಳ್ಳೆಯದು. ಏಕೆಂದರೆ ವಾಸ್ತವ ಜೀವನದಲ್ಲಿ ಆ ರೀತಿಯ ಘಟನೆಗಳು ಯಾವುದಾದರೊಂದು ಮೋಸ ಅಥವಾ ಲೂಟಿಗೆ ಕಾರಣವಾಗಬಹುದು.

ಅಮೆರಿಕ ಮೂಲದ ವಕೀಲ ಹಾಗೂ ಶಸ್ತ್ರಾಸ್ತ್ರ ವ್ಯಾಪಾರಿ ಅಭಿಷೇಕ್‌ ವರ್ಮ, ವರುಣ್‌ ಗಾಂಧಿಯವರ ವಿರುದ್ಧ ಆರೋಪ ಮಾಡುತ್ತ ಹನಿ ಟ್ರ್ಯಾಪ್‌ಗೆ ಬಲಿಬಿದ್ದು ಕ್ಲಾಸಿಫೈಡ್‌ ಡಿಫೆನ್ಸ್ ಇನ್‌ಫರ್ಮೇಶನ್‌ ಲೀಕ್‌ ಮಾಡಿದ್ದಾರೆಂದು ಹೇಳಿದರು. ಇದಕ್ಕೆ ಪುರಾವೆ ಎಂಬಂತೆ ಅವರು ಕೆಲವು ಚಿತ್ರಗಳನ್ನು ಹಾಕಿದ್ದರು. ಆ ಬಳಿಕ ವರುಣ್‌ ಗಾಂಧಿ ಈ ಆರೋಪವನ್ನು ಅಪ್ಪಟ ಸುಳ್ಳು ಎಂದು ಹೇಳಿ ತಳ್ಳಿ ಹಾಕಿದರು.

ಇಂತಹದೇ ಒಂದು ಘಟನೆ ಮೀರತ್‌ನ ಒಬ್ಬ ವ್ಯಾಪಾರಿ ಮನೋಜ್‌ ಗುಪ್ತಾ ಜೀವನದಲ್ಲೂ ಘಟಿಸಿತು. ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್‌ ಆಗಿರುವವರಿಗೆ ಒಂದು ಮಿಸ್ಡ್ ಕಾಲ್ ಬರುತ್ತೆ. ಆ ಮಿಸ್ಡ್ ಕಾಲ್ ಬಂದದ್ದು ಮುಗ್ಧೆಯಂತೆ ಕಂಡುಬರುವ ಮಮತಾಳಿಂದ. ಅವಳು ಗುರುಗಾಂವ್ ‌ನ ಒಂದು ಸ್ಪಾನಲ್ಲಿ ಕೆಲಸ ಮಾಡುತ್ತಿದ್ದಳು. ಅವಳ ಮನೆಯ ಪರಿಸ್ಥಿತಿ ಅಷ್ಟಕಷ್ಟೆ. ಮಿಸ್ಡ್ ಕಾಲ್‌‌ನಿಂದ ಮಾತುಕತೆಗಳು ಶುರುವಾದವು. ಅವರ ಮಾತುಕತೆ ಬಹುಬೇಗ ಸ್ನೇಹದಲ್ಲಿ ಪರಿವರ್ತನೆಗೊಂಡಿತು.

ಮಮತಾಳ ಸೌಂದರ್ಯ ಮನೋಜ್‌ ಗುಪ್ತಾರನ್ನು ಡೆಹರಾಡೂನಿನ ಫಾರ್ಮ್ ಹೌಸಿನ ತನಕ ಬರುವಂತೆ ಮಾಡಿತು. ಅಲ್ಲಿ ರಾತ್ರಿ ಹೊತ್ತು ಮಮತಾ, ಮನೋಜ್‌ ಗುಪ್ತಾರಿಗೆ ಪ್ರಜ್ಞೆ ತಪ್ಪುವ ಇಂಜೆಕ್ಷನ್‌ ಕೊಟ್ಟಳು. ಬಳಿಕ ಅವಳ ಗ್ಯಾಂಗ್‌ ನವರು ಅವರನ್ನು ಅಪಹರಣ ಮಾಡಿದರು. ಬಳಿಕ ಅವರ ಮನೆಯವರಿಂದ 1 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿದರು. ಬಳಿಕ ಅವರ ಬೇಡಿಕೆ 20 ಲಕ್ಷ ರೂ.ಗೆ ಇಳಿಯಿತು. ಈ ಮಧ್ಯೆ ಪೊಲೀಸರು ದಾಳಿ ಮಾಡಿ ಮಮತಾ ಹಾಗೂ ಅವಳ ಇಬ್ಬರು ಸಹಚರರಾದ ವಿಕಾಸ್‌ ಕುಮಾರ್‌ ಮತ್ತು ಅಂಬುಜ್‌ ತ್ಯಾಗಿಯರನ್ನು ಬಂಧಿಸಿದರು. ಅದೇ ರೀತಿಯ ಘಟನೆಗಳು ದೆಹಲಿಯ ಅನೇಕ ವ್ಯಾಪಾರಿಗಳ ಜೊತೆಗೂ ಘಟಿಸಿವೆ.

ಹೀಗೊಂದು ಘಟನೆ ಪ್ರಾಪರ್ಟಿ ಡೀಲರ್‌ ಮನೋಜ್‌ಗೆ ಪ್ರಾಪರ್ಟಿ ಮಾರಾಟ ಹಾಗೂ ಕೊಳ್ಳುವ ಸಲುವಾಗಿ ಅನೇಕ ಜನರ ಫೋನ್‌ ಕರೆಗಳು ಬರುತ್ತಲೇ ಇರುತ್ತವೆ. ಅದೊಂದು ದಿನ ಮಹಿಳೆಯೊಬ್ಬಳ ಕರೆ ಬಂತು. ತನ್ನ ಪ್ರಾಪರ್ಟಿ ಮಾರಾಟ ಮಾಡುವ ಕುರಿತಂತೆ ಅವಳು ಮನೋಜ್‌ಗೆ ಕರೆ ಮಾಡಿದ್ದಳು. ಆದಷ್ಟು ಬೇಗ ಬೆಲೆ ಕಡಿಮೆಯಾದರೂ ಸರಿ, ತನ್ನ ಪಾಪರ್ಟಿ ಮಾರಿ ಬೇರೆ ಊರಿಗೆ ಹೋಗಬೇಕಾಗಿದೆ ಎಂದು ಬಣ್ಣದ ಮಾತುಗಳಿಂದ ಮನೋಜ್‌ಗೆ ಹೇಳಿದಳು. ಒಂದು ಒಳ್ಳೆಯ ಬೆಲೆಯಲ್ಲಿ ಆ ಆಸ್ತಿ ಖರೀದಿಸಿದರೆ ಸಾಕಷ್ಟು ಲಾಭ ಮಾಡಿಕೊಳ್ಳಬಹುದೆಂದು ಯೋಚಿಸಿ ಮನೋಜ್‌ ಅವಳು ಹೇಳಿದ ವಿಳಾಸ ಹುಡುಕಿಕೊಂಡು ಹೋಗುತ್ತಾನೆ.

ಮುಂದೆ ಏನಾಗುತ್ತದೆಂಬ ಕಲ್ಪನೆ ಆ ವ್ಯಾಪಾರಿಗೆ ಮೀರಿದ್ದು, ಫ್ಲ್ಯಾಟ್‌ ತೋರಿಸುವ ನೆಪದಲ್ಲಿ  ಮಹಿಳೆ ಆ ಡೀಲರ್‌ಗೆ ತೀರಾ ನಿಕಟವಾಗುತ್ತಾಳೆ. ಅಷ್ಟರಲ್ಲಿಯೇ ಅಲ್ಲಿಗೆ ಪೊಲೀಸರು ಪ್ರತ್ಯಕ್ಷವಾಗುತ್ತಾರೆ. ಮಹಿಳೆಯ ಜೊತೆಗೆ ಅಸಭ್ಯತನ ಹಾಗೂ ಬಲಾತ್ಕಾರದ ಆರೋಪ ಹೊರಿಸಿ ಅವನನ್ನು ಬಂಧಿಸಲು ಪ್ರಯತ್ನಿಸುತ್ತಾರೆ. ಆ ಡೀಲರ್‌ ತನ್ನನ್ನು ಕಾಪಾಡುವಂತೆ ಗೋಗರೆಯುತ್ತಾನೆ. ಬಂಧನದಿಂದ ರಕ್ಷಿಸಿಕೊಳ್ಳಲು ಅವನಿಗೆ ಒಂದು ಅವಕಾಶ ಕೊಡಲಾಗುತ್ತದೆ.

ಅದಕ್ಕಾಗಿ ಅವರ ನಡುವೆ ಒಂದು ಒಪ್ಪಂದ ಏರ್ಪಡುತ್ತದೆ. ಡೀಲರ್‌ ತನ್ನ ಮನೆಗೆ ಫೋನ್‌ ಮಾಡಿ 20 ಲಕ್ಷ ರೂ.ನಿಂದ 1 ಕೋಟಿ ರೂ.ತನಕ ವ್ಯವಸ್ಥೆ ಮಾಡಲು ಮನೆಯವರಿಗೆ ಸೂಚಿಸಬೇಕು ಎಂದು ಅಲ್ಲಿದ್ದ ಕೆಲವರು ಒತ್ತಡ ಹೇರುತ್ತಾರೆ. ಈ ಮಧ್ಯೆ ಆ ತಂಡ ಮಹಿಳೆಯ ಜೊತೆ  ಆ ವ್ಯಕ್ತಿಯ ಅಶ್ಲೀಲ ಭಂಗಿಯ ಫೋಟೋ ಶೂಟ್‌ ಕೂಡ ಮಾಡಿಕೊಂಡಿರುತ್ತದೆ. ಡೀಲರ್‌ ಈಗ ಸಂಪೂರ್ಣವಾಗಿ ಅವರ ಕೈವಶನಾಗಿದ್ದ.

ಬ್ಲ್ಯಾಕ್‌ಮೇಲ್‌ ಮಾಡಲು ಆ ವೀಡಿಯೋ ಬಳಸಿಕೊಳ್ಳಬೇಕೆಂದು ಆ ತಂಡದವರು ಮಾತನಾಡಿಕೊಂಡು ಅದನ್ನು ವೈರಲ್ ಮಾಡುವುದಾಗಿ ಹೆದರಿಸುತ್ತಾರೆ.

ಹನಿ ಟ್ರ್ಯಾಪ್‌ ಮಾಡಿ ಜನರನ್ನು ಲೂಟಿ ಮಾಡುವ ಈ ಗ್ಯಾಂಗ್‌ ಈಗಾಗಲೇ 12 ಜನ ಉದ್ಯಮಿಗಳನ್ನು ತನ್ನ ಖೆಡ್ಡಾಕ್ಕೆ ಬೀಳಿಸಿತ್ತು. ಪಶ್ಚಿಮ ದೆಹಲಿಯ ಒಬ್ಬ ವ್ಯಾಪಾರಿ ತನ್ನನ್ನು ಹನಿ ಟ್ರ್ಯಾಪ್‌ಗೆ ಬೀಳಿಸಿ ತನ್ನಿಂದ ಹಣ ವಸೂಲಿ ಮಾಡಿದ್ದ ಬಗ್ಗೆ ದೂರು ಕೊಟ್ಟಾಗಲೇ ಈ ವಿಚಾರ ಬಯಲಿಗೆ ಬಂತು. ಈ ತೆರನಾದ ಪ್ರಕರಣಗಳನ್ನು `ಹನಿ ಟ್ರ್ಯಾಪ್‌’ ಎಂದು ಹೇಳಲಾಗುತ್ತದೆ. ಅಂದಹಾಗೆ ಇದೊಂದು ಲೂಟಿ ಮಾಡುವ ವಿಧಾನ. ಇದರಲ್ಲಿ ವ್ಯಕ್ತಿಯೊಬ್ಬನಿಗೆ ಪಿಸ್ತೂಲು ತೋರಿಸಿ ಅಲ್ಲ, ಸುಂದರ ಹೆಣ್ಣೊಬ್ಬಳ ಮುಖಾಂತರ ವ್ಯಕ್ತಿಯೊಬ್ಬನನ್ನು ಬಲೆಗೆ ಬೀಳಿಸುವ ಕುತಂತ್ರ.

ಹನಿ ಟ್ರ್ಯಾಪ್‌ ಮೂಲಕ ಮಹಿಳೆಯೊಬ್ಬಳು ಸ್ನೇಹದ ಹೆಸರಿನಲ್ಲಿ ಕೇವಲ ಹಣ, ಸಂಪತ್ತನ್ನಷ್ಟೇ ಕೊಳ್ಳೆ ಹೊಡೆಯುವುದಿಲ್ಲ. ಹಲವಾರು ಮಹತ್ವದ ದಾಖಲೆಗಳನ್ನು ತನ್ನ ಕೈವಶಮಾಡಿಕೊಳ್ಳಲು ಈ ಉಪಾಯ ಮಾಡುತ್ತಾಳೆ. ಈ ತೆರನಾದ ಹನಿ ಟ್ರ್ಯಾಪ್‌ಗಳು ಕೇವಲ ಸಾಮಾನ್ಯ ಜೀವನದಲ್ಲಷ್ಟೇ ಅಲ್ಲ, ಬಿಎಸ್‌ಎಫ್‌, ಏರ್‌ಫೋರ್ಸ್‌ ಸೇನೆಯಲ್ಲೂ ಕಂಡುಬರುತ್ತವೆ. ವಾಯುಪಡೆಯಲ್ಲಿ ಲ್ಯಾಂಡಿಂಗ್‌ ಏರ್‌ಕ್ರಾಫ್ಟ್ ಹುದ್ದೆಯಲ್ಲಿರುವ ಕೆ.ಕೆ. ರಂಜಿತ್‌ನನ್ನು ದೆಹಲಿಯ ಕ್ರೈಮ್ ಬ್ರ್ಯಾಂಚ್‌ ಪೊಲೀಸರು ಪಂಜಾಬಿನ ಭಟಿಂಡಾದಲ್ಲಿ ಬಂಧಿಸಿದರು.

ಕೇರಳ ಮೂಲಕ ಈ ವ್ಯಕ್ತಿ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐಗೆ ಕೆಲಸ ಮಾಡುತ್ತಿದ್ದ ಎಂಬ ಆರೋಪವಿತ್ತು. ಅವನು `ಹನಿ ಟ್ರ್ಯಾಪ್‌’ ಮೂಲಕ ಪಾಕಿಸ್ತಾನದ ಬಲೆಗೆ ಬಿದ್ದಿದ್ದ. ಅವನ ಮೇಲೆ 4 ತಿಂಗಳಿಂದ ಕಣ್ಣಿಡಲಾಗಿತ್ತು. ರಂಜಿತ್‌, ದಾಮಿನಿ ಮ್ಯಾಕ್‌ನೆಟ್‌ ಎಂಬ ಹೆಸರಿನ ಮಹಿಳೆಯ ಜೊತೆ ಫೇಸ್‌ಬುಕ್‌ನಲ್ಲಿ ಪರಿಚಿತನಾಗಿದ್ದ. ಫೇಸ್‌ಬುಕ್‌ನಲ್ಲಿ ಆ ಮಹಿಳೆ ತನ್ನನ್ನು ತಾನು ಬ್ರಿಟಿಷ್‌ ಪತ್ರಕರ್ತೆ ಎಂದು ಹೇಳಿಕೊಂಡಿದ್ದಳು. ಅದೇ ನೆಪದಿಂದ ಅವಳು ರಂಜಿತ್‌ನಿಂದ ಬಹಳಷ್ಟು ಮಾಹಿತಿ ಪಡೆದುಕೊಂಡಿದ್ದಳು. ಆ ಬಳಿಕ ಅವರಿಬ್ಬರು ಇಂಟರ್‌ನೆಟ್‌ನಲ್ಲಿ ಸಾಕಷ್ಟು ಹೊತ್ತು ಮಾತನಾಡುತ್ತಿದ್ದರು. ರಂಜಿತ್‌ ಕೆಲವೇ ದಿನಗಳಲ್ಲಿ ವಾಯುಪಡೆಯಿಂದ ಉಚ್ಛಾಟಿಸಲ್ಪಟ್ಟ. ಸೇನೆಯಲ್ಲಿ ಇಂತಹ ಘಟನೆ ನಡೆದದ್ದು ಇದೊಂದೇ ಅಲ್ಲ, ಇಂತಹ ಹಲವು ಘಟನೆಗಳು ಬೆಳಕಿಗೆ ಬಂದಿವೆ.

ಹೇಗೆ ಮಾಡುತ್ತಾರೆ?

ನಿರ್ಜನ ರಸ್ತೆ ಪ್ರೀತಿಗೆ ಅಸ್ತು : ನೀವು ಹೆದ್ದಾರಿಯಲ್ಲಿ ಅಥವಾ ನಿರ್ಜನ ರಸ್ತೆಯಲ್ಲಿ ಏಕಾಂಗಿಯಾಗಿ ಸಾಗುತ್ತಿರುವಿರಿ. ಆಗ ಒಮ್ಮಿಂದೊಮ್ಮಿಲೆ ಮಹಿಳೆಯೊಬ್ಬಳು ಪ್ರತ್ಯಕ್ಷಳಾಗಿ ನಿಮ್ಮ ವಾಹನ ನಿಲ್ಲಿಸಲು ಪ್ರಯತ್ನಿಸಿದರೆ, ನಿಮ್ಮ ಎದೆ ಡವಗುಟ್ಟಲಾರಂಭಿಸುತ್ತದೆ. ನೀವೇನಾದರೂ ವಾಹನ ನಿಲ್ಲಿಸಿ ಆ ಮಹಿಳೆಯನ್ನು ಗಾಡಿಯಲ್ಲಿ ಕೂರಿಸಿಕೊಂಡರೆ ಅವಳು ಸ್ವಲ್ಪ ದೂರ ಹೋಗುವಷ್ಟರಲ್ಲಿ ತನ್ನ ಕಡೆಯವರು ಎಲ್ಲಿ ನಿಂತಿರುತ್ತಾರೊ ಅಲ್ಲಿ ಗಾಡಿ ನಿಲ್ಲಿಸಲು ಹೇಳುತ್ತಾಳೆ. ಅಲ್ಲಿ ನಿಲ್ಲಿಸಿದ ಬಳಿಕ ನಿಮ್ಮ ಬಳಿ ಇರುವ ಅಮೂಲ್ಯ ವಸ್ತುಗಳನ್ನೆಲ್ಲ ಲೂಟಿ ಮಾಡುತ್ತಾರೆ.

ಅನಾಮಧೇಯರಿಂದ ಸಂದೇಶ : ನಿಮಗೆ ಅಪರಿಚಿತ ಮಹಿಳೆಯಿಂದ ಯಾವುದಾದರೂ ಮೇಲ್ ಬಂದಿದ್ದರೆ ಅಥವಾ ಫ್ರೆಂಡ್‌ ರಿಕ್ವೆಸ್ಟ್ ಬಂದಿದ್ದರೆ, ನೀವು ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು. ಒಂದು ವೇಳೆ ಪ್ರೊಫೈಲ್‌ ಪಿಕ್ಚರ್‌ ನೋಡಿ ತಕ್ಷಣವೇ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದರೆ, ಚಾಟ್‌ ಮುಖಾಂತರ ನಿಮ್ಮ ಯಾವುದೇ ಖಾಸಗಿ ಮಾಹಿತಿಯನ್ನು ಆ ಮಹಿಳೆಗೆ ಹೇಳಿಬಿಟ್ಟರೆ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆಗಳಿರುತ್ತವೆ. ನಿಮ್ಮ ಫೋನ್‌ ನಂಬರ್‌ ಸಿಕ್ಕಿಬಿಟ್ಟರೆ ನಿಮ್ಮಿಂದ ಬೇರೆ ಬೇರೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಎಷ್ಟೋ ಸಲ ಈ ತೆರನಾದ ಸ್ನೇಹವನ್ನು ಹನಿ ಟ್ರ್ಯಾಪ್‌ಗೆಂದೇ ಮಾಡಲಾಗುತ್ತದೆ.

ಫೇಕ್‌ ಫೋನ್‌ ಕಾಲ್‌ : ಸಕ್ಕರೆಯಂಥ ಸಿಹಿ ಮಾತನಾಡುವ ಚೆಲುವೆ ಯಾವಾಗ ಬಂದು ಲೂಟಿ ಮಾಡಿಕೊಂಡು ಹೋಗುತ್ತಾಳೋ ಹೇಳಲಾಗದು. ಹನಿ ಟ್ರ್ಯಾಪ್‌ನ ಒಂದು ಸಾಮಾನ್ಯ ವಿಧಾನವೆಂದರೆ ಫೇಕ್‌ ಫೋನ್‌ ಕಾಲ್‌ ಮುಖಾಂತರ ನಿಮ್ಮ ಮೈಮನಸ್ಸು  ಆವರಿಸಿಕೊಳ್ಳುವಂತಹ ಮಾತುಗಳನ್ನು ಆಡುವುದು, ನಿಮ್ಮನ್ನು ತನ್ನ ಬಲೆಯಲ್ಲಿ ಸೆಳೆದುಕೊಳ್ಳುವುದು.

ಕಂಪನಿ ಕೊಡುವ ಹೆಸರಿನಲ್ಲಿ : ಕೆಲವೊಮ್ಮೆ ಕೆಲವು ಮಹಿಳೆಯರು  ಒಂದು ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ಬರುತ್ತಾರೆ. ಅವರು ಅತ್ಯಂತ ಕಡಿಮೆ ಸಮಯದಲ್ಲಿ ತೀರಾ ಹತ್ತಿರವಾಗಲು ಪ್ರಯತ್ನಿಸುತ್ತಾರೆಂದರೆ ನೀವು ನಿಮ್ಮ ಹೃದಯ ಮಿಡಿತವನ್ನು ಹಿಡಿತದಲ್ಲಿಟ್ಟುಕೊಳ್ಳಲೇಬೇಕು. ಅದು ಹನಿ ಟ್ರ್ಯಾಪ್‌ನಲ್ಲಿ ನಿಮ್ಮನ್ನು ಸಿಕ್ಕಿಸುವ ಸುಲಭ ಸುಂದರ ವಿಧಾನ ಅಲ್ಲ ತಾನೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಸಾಮಾನ್ಯವಾಗಿ `ಹನಿ ಟ್ರ್ಯಾಪ್‌’ಗೆ ಸಿಲುಕುವವರು ಎಂಥವರು? ಏಕಾಂಗಿಯಾಗಿ ಇರುವ ಶ್ರೀಮಂತ ವ್ಯಕ್ತಿಗಳು. ಯಾರಿಗೆ ಮಹಿಳಾ ಸ್ನೇಹಿತರ ಅವಶ್ಯಕತೆ ಹೆಚ್ಚಿಗೆ ಇರುತ್ತೊ ಹಾಗೂ ಅವರು ಸ್ವತಃ ಆ ನಿಟ್ಟಿನಲ್ಲಿ ಮುಂದೆ ಹೆಜ್ಜೆ ಹಾಕದವರು. ಅವರ ಮುಂದೆ ಸುಂದರ ಮಹಿಳೆಯೊಬ್ಬಳು ಮೋಡಿ ಹಾಕಿಬಿಟ್ಟರೆ ಅವರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಆಗುವುದಿಲ್ಲ. ಕೆಲವು ಪುರುಷರಂತೂ ಸುಂದರ ಮಹಿಳೆಯರನ್ನು ಕಂಡರೆ ಸಾಕು ನೋಡುತ್ತಲೇ ಇರುತ್ತಾರೆ. ಅದೇ ಅವರ ದೌರ್ಬಲ್ಯವಾಗಿರುತ್ತದೆ. ಕೆಲವು ವಿವಾಹಿತರಿಗೂ ಅಂತಹ ದೌರ್ಬಲ್ಯವಿರುತ್ತದೆ. ಅಂಥವರು ಸುಲಭವಾಗಿ ಹನಿ ಟ್ರ್ಯಾಪ್‌ಗೆ ಬೀಳುತ್ತಾರೆ. ಅವರ ಕುಟುಂಬದವರು ಇದರ ದುಪ್ಪರಿಣಾಮ ಎದುರಿಸಬೇಕಾಗಿ ಬರುತ್ತದೆ.

ಇಂತಹದರಲ್ಲಿ ನೀವು ಸಿಲುಕಬಾರದೆಂದರೆ, ನೀವು ನಿಮ್ಮ ಮೆದುಳು ಮತ್ತು ಕಣ್ಣು ಎರಡನ್ನೂ ಮುಕ್ತವಾಗಿಟ್ಟುಕೊಳ್ಳಿ. ಯಾವುದೇ ಅಪರಿಚಿತ ಮಹಿಳೆಗೆ ಅಥವಾ ಹುಡುಗಿ ನಿಮ್ಮ ಕಡೆಗೆ ಸ್ನೇಹದ ಹಸ್ತ ಚಾಚುತ್ತಿದ್ದಾಳೆಂದರೆ, ಹಿಂದೆ ಮುಂದೆ ನೋಡದೆ ಒಮ್ಮೆಲೇ ಅವಳ ಸುಳಿಗೆ ಸಿಲುಕಬೇಡಿ. ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧದ ಘಟನೆಗಳನ್ನು ಗಮನದಲ್ಲಿಟ್ಟುಕೊಳ್ಳಿ ಮತ್ತು ಯಾವುದೇ ತೀರ್ಮಾನ ಕೈಗೊಳ್ಳುವ ಮುಂಚೆ ಅವಳು ಯಾರು, ನನ್ನ ಸ್ನೇಹ ಮಾಡಲು ಏಕೆ ಉದ್ದೇಶಿಸಿದ್ದಾಳೆ ಎಂಬುದರ ಬಗ್ಗೆ ಅವಲೋಕನ ಮಾಡಿಕೊಳ್ಳಿ. ಅವಳ ಉದ್ದೇಶ ಅಪಾಯಕಾರಿ ಆಗಿದ್ದರೂ ಆಗಿರಬಹುದು.

– ಜಿ. ಪಂಕಜಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ