ಯಾರಿಗೆ ತಮ್ಮ ಯಾವ ಬಯಕೆ ಬೇಗ ಕೈಗೂಡುತ್ತದೋ ಅವರು ಆ ಬಗ್ಗೆ ಬೇಗ ಉದಾಸೀನರಾಗುತ್ತಾರೆ. ಏಕೆಂದರೆ ಈಗ ಅವರಿಗೆ ಹೊಸ ಹೊಸ ಆಸೆಗಳು ಬೆನ್ನಟ್ಟಬೇಕಾಗಿರುತ್ತದೆ. ಇತ್ತೀಚಿನ ವಿವಾಹಿತ ಜೋಡಿಗಳು, ಮದುವೆಯ ಮಾತುಕಥೆ ಮುಗಿದ ನಂತರ ಪರಸ್ಪರರ ಕುರಿತಾಗಿ ಬಹಳ ಕುತೂಹಲಿಗಳಾಗಿರುತ್ತಾರೆ. ಒಟ್ಟೊಟ್ಟಿಗೆ ಸುತ್ತಾಟ, ಸದಾ ಫೋನ್‌ನಲ್ಲಿ ಮಾತು, ಚಾಟಿಂಗ್‌ ನಡೆಯುತ್ತಲೇ ಇರುತ್ತದೆ. ಹೋಟೆಲ್, ಸಿನಿಮಾ, ಪಾರ್ಕ್‌, ಮಾಲ್‌ ಶಾಪಿಂಗ್‌ ಇತ್ಯಾದಿ ಮಾಮೂಲು. ಭಾವೀ ಜೀವನದ ಕುರಿತು ದಿನಗಟ್ಟಲೆ ಕನಸು ಕಾಣುತ್ತಾರೆ. ಪರಸ್ಪರರ ಮನೆಗಳಲ್ಲಿ ನಡೆಯುವ ಫಂಕ್ಷನ್‌ಗಳಲ್ಲಿ ಒಟ್ಟೊಟ್ಟಿಗೆ ಹೊಸ ಹುರುಪಿನಿಂದ ಅಲಂಕರಿಸಿಕೊಂಡು ಕಾಣಿಸಿಕೊಳ್ಳುತ್ತಾರೆ. ಪರಸ್ಪರರನ್ನು ಬಲು ಹೆಮ್ಮೆಯಿಂದ ನೆಂಟರು, ಫ್ರೆಂಡ್ಸ್ ಗೆ ಪರಿಚಯಿಸುತ್ತಾರೆ. ಈ ನಿಟ್ಟಿನಲ್ಲಿ ಪರಸ್ಪರರ ಕುರಿತ ಸಮರ್ಪಣಾ ಮನೋಭಾವ ಆಗಸವನ್ನೇ ಮುಟ್ಟಿರುತ್ತದೆ. ಇಬ್ಬರಿಗೂ ಭಾವೀ ಅತ್ತೆಮನೆಯವರ ಪ್ರತಿ ವ್ಯವಹಾರ ಬೆಲ್ಲದಚ್ಚಿನಂತೆ ಸಿಹಿಯೋ ಸಿಹಿ! ಸ್ವಲ್ಪ ವ್ಯತ್ಯಾಸ ಎನಿಸಿದರೂ ಉದಾರ ಮನೋಭಾವದಿಂದ ಅದನ್ನು ಕಡೆಗಣಿಸುತ್ತಾರೆ.

ಆದರೆ ಇದೇ ಜೋಡಿ ಮದುವೆ ಆದ 1-2 ವರ್ಷಗಳಲ್ಲೇ ಸಂಪೂರ್ಣ ಬದಲಾಗಿರುತ್ತಾರೆ. ಪರಸ್ಪರ ಉದಾಸೀನತೆ ತಾಂಡವವಾಡುತ್ತಿರುತ್ತದೆ. ಅಂದರೆ ಇವರ ಪ್ರೀತಿಪ್ರೇಮ ಕ್ರಮೇಣ ತಗ್ಗುತ್ತಿರುತ್ತದೆ. ಪರಸ್ಪರರ ಒಳ್ಳೆಯ ಕೆಟ್ಟ ಗುಣಗಳು ಎದ್ದು ತೋರಲಾರಂಭಿಸುತ್ತವೆ. ಹಿಂದೆಲ್ಲ ಯಾವ ವಿಷಯವಾಗಿ ಉದಾರವಾಗಿ ಕಡೆಗಣಿಸಲಾಗುತ್ತಿತ್ತೋ ಈಗ ಅದೇ ಕಡ್ಡಿ ಗುಡ್ಡವಾಗುತ್ತದೆ. ಮದುವೆಗೆ ಮೊದಲು ಪರಸ್ಪರರ ಗೆಟಪ್‌, ಫ್ಯಾಷನ್‌, ವೈಯಕ್ತಿಕ ವ್ಯವಹಾರಗಳು ಕಲ್ಲುಸಕ್ಕರೆಯಂತಿದ್ದದ್ದು ಈಗ ಕಹಿಹಾಗಲ ಆಗಿರುತ್ತದೆ. ಪರಸ್ಪರರ ಲೋಪದೋಷಗಳೇ ದೊಡ್ಡದಾಗಿ ಕಾಣಿಸುತ್ತವೆ. ನೋಡನೋಡುತ್ತಿದ್ದಂತೆ ಪರಸ್ಪರ ಕಾಟಾಚಾರಕ್ಕೆ ಒಟ್ಟಿಗಿರುವಂಥ ಭಾವನೆ ಬಂದರೂ ಆಶ್ಚರ್ಯವಿಲ್ಲ. ವಿಭಿನ್ನ ಆಶಯಗಳನ್ನು ಬೆಳೆಸಿಕೊಂಡು ತಮ್ಮ ದಾರಿಗಳನ್ನೇ ಬೇರೆ ಮಾಡಿಕೊಳ್ಳುತ್ತಾರೆ. ಇಬ್ಬರೂ ಕೆಲಸದಲ್ಲಿದ್ದರಂತೂ ಹೆಚ್ಚು ಹೆಚ್ಚು ಬಿಝಿ ಆಗಿರುವ ನೆಪವೊಡ್ಡಿ ಪರಸ್ಪರರ ನಡುವೆ ಹೆಚ್ಚಿನ ಅಂತರ ಮಾಡಿಕೊಳ್ಳುತ್ತಾರೆ. ಸಿನಿಮಾ ಸ್ಟಾರ್‌ಗಳು ಇವರ ಪ್ರೇರಣೆ ಆಗಿರುತ್ತಾರೆ. 10 ರಲ್ಲಿ 5 ಸ್ಟಾರ್‌ಗಳ ಕಥೆ ಇದೇ ಆಗಿರುತ್ತದೆ.

ಬಬೀತಾ ರಣಧೀರ್‌ ಕಪೂರ್‌, ಅಮೃತಾ ಸಿಂಗ್‌ ಸೈಫ್‌ ಆಲಿಖಾನ್‌, ಆಮೀರ್‌ ಖಾನ್‌, ಸಂಜಯ್‌ ದತ್‌, ಹೃತಿಕ್‌ ರೋಷನ್‌, ಕರಿಷ್ಮಾ ಮುಂತಾದವರ ಕಥೆ ಇದೇ ಆಗಿದೆ.

ಮದುವೆ ನಂತರ ಅಂತರವೇಕೆ?

ಅಸಲಿಗೆ ನಮ್ಮ ಜೀವನ ಒಂದು ಗಾಡಿ ಇದ್ದಂತೆ. ಪತಿ ಪತ್ನಿ ಇಬ್ಬರೂ ಆ ಗಾಡಿಯ 2 ಚಕ್ರಗಳು. ಇದರ ಬ್ಯಾಲೆನ್ಸ್ ತಪ್ಪಿದರೆ, ಕುಟುಂಬ ನುಚ್ಚುನೂರಾಗುವ ಪರಿಸ್ಥಿತಿ ಬಂದೀತು.

3-4 ದಶಕಗಳ ಹಿಂದೆ ವಿಚ್ಛೇದನಗಳ ಪ್ರಕರಣಗಳು ಇಷ್ಟೊಂದು ಹೆಚ್ಚಿರಲಿಲ್ಲ, ಬಹಳ ಕಡಿಮೆ ಇತ್ತು. ಅದಕ್ಕೆ ಕಾರಣ ಇಲ್ಲದಿಲ್ಲ. ಅಂದಿನ ಕಾಲದಲ್ಲಿ ಯುವಕ-ಯುವತಿಯರಿಗೆ ಲಗ್ನಪತ್ರಿಕೆ ನಂತರ ಖುಲ್ಲಂಖುಲ್ಲ ಓಡಾಡುವ ಸ್ವಾತಂತ್ರ್ಯವಿರಲಿಲ್ಲ. ಅವರಿಬ್ಬರ ನಡುವೆ ಒಂದು ನಿಶ್ಚಿತ ಸೀಮಾರೇಖೆ ಇರುತ್ತಿತ್ತು. ಫೋನಿನಲ್ಲಷ್ಟೇ ಎಲ್ಲ ಮಾತುಕಥೆ. ಕುಟುಂಬದವರೆಲ್ಲರೂ ಫಂಕ್ಷನ್‌ಗೆ ಹೋದಾಗ ಮಾತ್ರ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು. ಅವರ ಜೀವನ ಇಡೀ ಕುಟುಂಬದವರಿಗೆ ತೆರೆದ ಪುಸ್ತಕವಾಗಿತ್ತು. ಸಿಂಗಾರದ ಪ್ರೈವೆಸಿಗಾಗಿ ಕಾಯುವುದರಲ್ಲೇ ಜೀವನ ಕಳೆದುಹೋಗುತ್ತಿತ್ತು. ಹೀಗಾಗಿಯೇ ಜೀವನ ಯಾಂತ್ರಿಕ ಎನಿಸುತ್ತಿರಲಿಲ್ಲ. ಬರಲಿರುವ ನಾಳೆಗಾಗಿ ಎದುರು ನೋಡುತ್ತಲೇ ಇರುತ್ತಿದ್ದರು. ಈ ರೀತಿ ಇಡೀ ಜೀವನದ ಮರುದಿನ ಸ್ವಾಗತಿಸುವುದರಲ್ಲಿ ಉತ್ಸಾಹ ತುಂಬಿರುತ್ತಿತ್ತು, ಬದುಕು ಸರಿದದ್ದೇ ಗೊತ್ತಾಗದೆ, ಪರಿಪಕ್ವತೆ ತುಂಬಿಕೊಳ್ಳುತ್ತಿತ್ತು. ಪರಸ್ಪರರ ಮನೆತನದ ವಿಚಾರಗಳು, ಶಿಕ್ಷಣ, ಕಲಿಕೆಯ ದಿನಗಳು, ಆಸೆ ಅಭಿಲಾಷೆ, ಫ್ರೆಂಡ್ಸ್ ಸರ್ಕಲ್ ಇತ್ಯಾದಿಗಳನ್ನೆಲ್ಲ ತಿಳಿದುಕೊಳ್ಳುವಷ್ಟರಲ್ಲಿ ಮದುವೆಯ ಅಡಿಪಾಯ ಎಷ್ಟು ಭದ್ರವಾಗುತ್ತಿತ್ತು ಎಂದರೆ ಅದು ಮುರಿದುಬೀಳುವ ಸಂಭವವೇ ಇರಲಿಲ್ಲ. ಆದರೆ ಇತ್ತೀಚೆಗೆ, ಅತಿ ಆಧುನಿಕತೆಯ ಹಿಂದೆ ಓಡುವ ಇಂದಿನ ಯುವಜನತೆ, ಮದುವೆ ಫಿಕ್ಸ್ ಆದ ಮರುದಿನದಿಂದಲೇ ಪರಸ್ಪರ ತೆರೆದ ಪುಸ್ತಕ ಆಗುತ್ತಾರೆ. ಮದುವೆ ಆಗುವ ಹೊತ್ತಿಗೆ ಪರಸ್ಪರರ ಕುರಿತು – ಎಲ್ಲವನ್ನೂ ಬಲ್ಲವರಾಗಿರುತ್ತಾರೆ. ಹೀಗಾಗಿ ಮದುವೆ ಆಗಿ ದಿನಗಳು ಸರಿದಂತೆ ಪರಸ್ಪರರ ಕುರಿತು ಕುತೂಹಲ ಎಂಬುದು ಎಳ್ಳಂಶ ಉಳಿಯದೆ, ಕ್ರಮೇಣ ಬೇಸರ, ಅಸಹನೆ ಹೆಚ್ಚುತ್ತಾ ಹೋಗುತ್ತದೆ.

ನೀರಸವಾಗುವ ನಾಳೆಗಳು

ಮೃದುಲಾಳ ಉದಾಹರಣೆ ಗಮನಿಸಿ. ಆಕೆ ಮೇಧಾವಿ ವಿದ್ಯಾರ್ಥಿನಿ. ತಂದೆ ಮಿಲಿಟರಿಯಲ್ಲಿ ಇದ್ದುದರಿಂದ ಬಹುತೇಕ ಉ.ಭಾರತ, ಗುಜರಾತ್‌, ಕೋಲ್ಕತಾದಲ್ಲೇ ಓದಿ ಬೆಳೆದಳು. ಕಾಲೇಜಿನ ದಿನಗಳಲ್ಲಿ ಸ್ವಚಂದದ ಜೀವನ ಕಂಡಿದ್ದಳು. ಆಧುನಿಕ ಜೀವನಶೈಲಿಗೆ ಮಾರುಹೋಗಿದ್ದಳು.

ಅಂತೂ ಮೈಸೂರಿನ ಸಂಪ್ರದಾಯಸ್ಥ ಸುಧೀರನ ಮನೆಗೆ ಅವಳು ಸೊಸೆಯಾಗಿ ಬಂದಳು. ಮದುವೆಯ ಮೊದಲಲ್ಲಿ ಪ್ರೇಮದ ಪ್ರವಾಹದಲ್ಲಿ ದಿನಗಳು ಕೊಚ್ಚಿಹೋದದ್ದೇ ತಿಳಿಯಲಿಲ್ಲ. ಒಂದು ಮಗುವಾಗುವಷ್ಟರಲ್ಲಿ ಎಲ್ಲ ಮಂಕಾಗಿತ್ತು. ಸುಧೀರ್‌ ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಇಡೀ ದಿನ ಹೊರಗೆ ಇದ್ದುಬಿಡುತ್ತಿದ್ದ. ಅತ್ತೆಮನೆಯ ಅವಿಭಕ್ತ ಕುಟುಂಬದ ಕರ್ತವ್ಯ ಅವಳಿಗೆ ನುಂಗಲಾರದ ಬಿಸಿ ತುಪ್ಪವಾಯಿತು. ಅವಳು ತಾವಿಬ್ಬರೇ ಬೇರೆ ಮನೆ ಮಾಡೋಣವೆಂದು ಹೇಳಿದರೆ ಅವನು ಒಪ್ಪುತ್ತಿರಲಿಲ್ಲ. ಸ್ವಚ್ಛಂದ ಹಕ್ಕಿಯಾಗಿ ಉ.ಭಾರತದ ನಗರಗಳಲ್ಲಿ ಹಾರಾಡುತ್ತಿದ್ದವಳಿಗೆ ದಕ್ಷಿಣದ ಸಾಂಪ್ರದಾಯಿಕ ವಾತಾರಣ ಉಸಿರುಗಟ್ಟಿಸುವ ಸೆರೆಮನೆಯಾಗಿತ್ತು. ಕೆಲಸಕ್ಕೆ ಸೇರಬೇಕೆನ್ನುವ ಅವಳ ಮಹತ್ವಾಕಾಂಕ್ಷೆಯೂ ಈಡೇರಲಿಲ್ಲ. ಇದೇ ಕೊರಗಿನಲ್ಲಿ ಸೌಂದರ್ಯದ ಖನಿಯಾಗಿದ್ದ ಅವಳು ಬಾಡಿ ಬಡಕಲಾದಳು.

ಕೊನೆಗೊಮ್ಮೆ ಅವಳ ಬೆಸ್ಟ್ ಫ್ರೆಂಡ್‌ ಕೋಲ್ಕತಾದಿಂದ ಮೈಸೂರಿಗೆ ಭೇಟಿಗೆಂದು ಬಂದಾಗ, ಸಂಪೂರ್ಣ ಬದಲಾದ ಇವಳ ವ್ಯಕ್ತಿತ್ವ ಗಮನಿಸಿ ಕಂಗಲಾದಳು. 4 ದಿನ ಅವಳು ಇಲ್ಲಿದ್ದು ಹೊರಟ ನಂತರ, ಮೃದುಲಾ ಒಂದು ದಿಟ್ಟ ನಿರ್ಧಾರಕ್ಕೆ ಬಂದಳು. ಗಂಡನೊಂದಿಗೆ ಇನ್ನು ಬದುಕಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ವಿಚ್ಛೇದನ ಪಡೆದು ಮಗುವಿನ ಸಮೇತ ಬೇರೆಯಾದಳು. ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿ ಹೊಸ ಜೀವನ ಆರಂಭಿಸಿದಳು. ಅಷ್ಟು ಪ್ರೀತಿಯಿಂದಿದ್ದ ದಂಪತಿಗಳು ಹೀಗೆ ಅಗಲಬೇಕಾಯಿತೇ?

ಹೆಚ್ಚುತ್ತಿರುವ ಅಂತರ

ಹಣಕಾಸು ತಜ್ಞರ ಪ್ರಕಾರ ಯಾವುದೇ ವಸ್ತುವಿನ ದರ ಮಾರುಕಟ್ಟೆಯಲ್ಲಿ ಅದರ ಸಪ್ಲೈ ಪ್ರಮಾಣ ಹಾಗೂ ಬೇಡಿಕೆಯ ಸಿದ್ಧಾಂತದ ಮೇಲೆ ನಿಂತಿದೆ. ಅಂದರೆ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಬೇಳೆಕಾಳು ಅಥವಾ ಇನ್ನಿತರ ಸಾಮಗ್ರಿಗಳ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿದೆಯೇ? ಬೇಡಿಕೆ ಕಡಿಮೆ ಇದ್ದಾಗ ಅದರ ದರ ಬಿದ್ದುಹೋಗುತ್ತದೆ, ಬದಲಿಗೆ ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆ ಆದಾಗ ಸಹಜವಾಗಿಯೇ ಬೆಲೆ ಹೆಚ್ಚುತ್ತದೆ.

ಹಣಕಾಸು ತಜ್ಞರ ಬೇಡಿಕೆ ಪೂರೈಕೆ ತತ್ವದ ಮೇಲೆಯೇ ವೈವಾಹಿಕ ಜೀವನ ನಿಂತಿದೆ. ಮದುವೆಗೆ ಮೊದಲೇ ಪರಸ್ಪರರ ಅಗತ್ಯ ಪೂರೈಕೆ ಹೆಚ್ಚಾಗಿದ್ದರೆ, ಅಂದರೆ ಹೆಚ್ಚಾಗಿ ಬೆರೆಯುವಿಕೆ, ಹೊರಗಿನ ಓಡಾಟ ಇತ್ಯಾದಿ, ಮದುವೆ ನಂತರ ಪರಸ್ಪರರಿಗಾಗಿ ಬೇಡಿಕೆಯೇ ಕಡಿಮೆ ಆಗಿಹೋಗುತ್ತದೆ, ಅಷ್ಟೇ ತಾನೇ ಎಂಬ ಉದಾಸೀನತೆ ತಲೆದೋರುತ್ತದೆ. ಹಿಂದೆಲ್ಲ ಇಬ್ಬರೂ ಸಣ್ಣಪುಟ್ಟ ವಿಷಯಗಳನ್ನು ಬಿಡದೆ ಶೇರ್‌ ಮಾಡಿಕೊಳ್ಳುತ್ತಿದ್ದರು, ಯಾವುದೇ ವಿಷಯವಾಗಿ ಮುಚ್ಚುಮರೆ ಇಲ್ಲದೆ ಚರ್ಚಿಸುತ್ತಿದ್ದರು, ಮದುವೆಯ ನಂತರ ಯಾವ ಇಷಯ ಮಾತನಾಡಲಿಕ್ಕೂ ಆಸಕ್ತಿ ಇಲ್ಲ ಎಂಬಂತೆ ತಂತಮ್ಮ ಗ್ಯಾಜೆಟ್ಸ್ ಗಳಲ್ಲಿ ಮುಳುಗಿ ಹೋಗುವುದೇಕೆ? ಜೀವನದಲ್ಲಿ ಇಂಥ ನೀರಸತೆ ಇಣುಕುವುದೇಕೆ? ಹೀಗೆ ಕ್ರಮೇಣ ಅಂತರ ಹೆಚ್ಚುತ್ತಾ ಹೋಗುತ್ತದೆ…. ಮುಂದೆ ಇದು ಅಗಲಿಕೆಗೆ ದಾರಿ ಆಗಬಾರದು. ಮತ್ತೊಂದು ಕಡೆ ಒಂದು ಸಮತೋಲಿತ  ವಿಧಾನದಲ್ಲಿ ಬೆರೆಯುವುದರಿಂದ ಆಕರ್ಷಣೆ ಹಾಗೆ ಉಳಿಯುತ್ತದೆ. ಮದುವೆ ನಂತರ ಪರಸ್ಪರರನ್ನು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳುವ ಉತ್ಸಾಹ ಹಾಗೇ ಇರುತ್ತದೆ. ಮದುವೆ ನಂತರ ಇಬ್ಬರೂ ಪರಸ್ಪರರಿಂದ ವಿಷಯ ಸಂಗ್ರಹಿಸಲು ಯತ್ನಿಸುತ್ತಾರೆ, ಆಗ ಜೀವನದಲ್ಲಿ ಸರಸದ ಸ್ವಾರಸ್ಯ ಇರುತ್ತದೆ. ಹೀಗೆ ಜೀವನವಿಡೀ ಒಬ್ಬರನ್ನೊಬ್ಬರು ಅರಿಯುವ ಯತ್ನದಲ್ಲೇ ಜೀವನ ಕಳೆದುಹೋಗುತ್ತದೆ.

ಸಮಯದ ಬೇಡಿಕೆ

ಈಗ ಸಮಯದ ಬೇಡಿಕೆ ಎಂದರೆ ಮದುವೆಗೆ ಮೊದಲೇ ಹುಡುಗ ಹುಡುಗಿ ಪರಸ್ಪರರನ್ನು ನೋಡಿ ಮಾತಾಡಿ ಚೆನ್ನಾಗಿ ಅರಿತುಕೊಳ್ಳಬೇಕೆಂಬುದು ಆಗ ಮದುವೆ ನಂತರ ಜೀವನ ಸರಾಗವಾಗಿ ನಡೆಯುತ್ತದೆ. ಆದರೆ ಇಂದಿನ ಯುವಜನತೆ ಈ ನಿಟ್ಟಿನಲ್ಲಿ ಯಾವಾಗಲೂ ಅನುಚಿತ ವರ್ತನೆ ಕೈಗೊಳ್ಳುತ್ತದೆ. ಪರಸ್ಪರರು ಹೆಚ್ಚು ಹೆಚ್ಚು ಇಂಪ್ರೆಸ್‌ ಮಾಡಬೇಕೆಂದು ತಂತಮ್ಮ  ಆದಾಯ, ಕುಟುಂಬ, ಆಸ್ತಿ, ಸ್ಟೇಟಸ್‌ ಇತ್ಯಾದಿ ಎಲ್ಲವನ್ನೂ  ಹೆಚ್ಚಾಗಿಯೇ ಹೇಳಿಕೊಳ್ಳುತ್ತಾರೆ. ಇಬ್ಬರೂ ಸದಾ ತಮ್ಮಲ್ಲಿನ ಅತಿ ಒಳ್ಳೆಯತನವನ್ನೇ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಭವಿಷ್ಯದಲ್ಲಿ ತೊಂದರೆ ಒಡ್ಡಬಹುದು.

ತಪ್ಪು ತಿಳಿವಳಿಕೆ ಬೇಡ

ನಮ್ಮಲ್ಲಿ ನೆಂಟರೊಬ್ಬರ ಪೈಕಿ ಮದುವೆ ನಿಶ್ಚಯವಾಗಿತ್ತು. ಹುಡುಗ ಹುಡುಗಿ ಇಬ್ಬರೂ ತಂತಮ್ಮ ಸ್ವಭಾವ, ಅಭ್ಯಾಸಗಳು ಇತ್ಯಾದಿಗಳನ್ನು ಅರಿಯುವ ಪ್ರಯತ್ನ ಮಾಡದೆ ಪರಸ್ಪರರನ್ನು ಹೆಚ್ಚು ಇಂಪ್ರೆಸ್‌ಗೊಳಿಸಲು ಬರಿದೇ ಹೆಚ್ಚುಗಾರಿಕೆ ಹೇಳಿಕೊಳ್ಳಲು ಆರಂಭಿಸಿದರು. ನಮ್ಮ ಬಳಿ ಅಷ್ಟು ಹಣವಿದೆ, ಇಷ್ಟು ಆಸ್ತಿ ಇದೆ, ಬೆಳ್ಳಿಬಂಗಾರ ಬೇಕಾದಷ್ಟಿದೆ ಎಂದು ಗಾಳಿಗೋಪುರ ಕಟ್ಟಿಕೊಂಡರು. ಆದರೆ ಮದುವೆ ಆಗಿ ವಾರ ಕಳೆಯುವಷ್ಟರಲ್ಲಿ ಇಬ್ಬರೂ ಸಾಧಾರಣ ಮಧ್ಯಮ ಕುಟುಂಬಕ್ಕೆ ಸೇರಿದವರು ಎಂಬುದು ಗೊತ್ತಾಯಿತು. ಅತಿ ಮಹತ್ವಾಕಾಂಕ್ಷಿಯಾಗಿದ್ದ ಆ ಹೆಣ್ಣು, ತಾನು ಅತಿ ಸಾಧಾರಣ ಮನೆ ಸೇರಿದ್ದೇನೆ ಎಂದು ತಿಳಿಯುತ್ತಲೇ ಇನ್ನಿಲ್ಲದ ರಾದ್ಧಾಂತ ಆರಂಭಿಸಿದಳು. ಹುಡುಗ ಹಿಂದೆ ಹೇಳಿದ್ದೆಲ್ಲ ಬೊಗಳೆ ಎಂದು ಗೊತ್ತಾಯ್ತು. ಹೀಗೆ ನಿಜಾಂಶ ತಿಳಿದಾಗ ದೊಡ್ಡ ಜಗಳ ನಡೆಯಿತು. ತನ್ನಂಥ ಹುಡುಗಿಗೆ ಬರೀ ಬುರುಡೆ ಬಿಟ್ಟು ಮೋಸ ಮಾಡಿದ ಗಂಡನನ್ನು ತರಾಟೆಗೆ ತೆಗೆದುಕೊಂಡಳು. ತನ್ನೆಲ್ಲ ನಂಬಿಕೆಗಳನ್ನು ಬುಡಮೇಲು ಮಾಡಿದ ಈ ಸಂಸಾರದ ಸಹವಾಸವೇ ಬೇಡವೆಂದು ಅವಳು ತನ್ನ ಪಾಡಿಗೆ ಕೆಲಸ ಹುಡುಕಿಕೊಂಡು ಬೇರೆ ಹೊರಟುಹೋದಳು.

ನಿಮ್ಮ ಭಾವಿ ಸಂಗಾತಿಯನ್ನು ಯಾವ ಸಂದೇಹದ ಸುಳಿಗೂ ಸಿಲುಕಿಸಬೇಡಿ. ಇದರಿಂದ ಇಬ್ಬರಿಗೂ ಲಾಭವಿದೆ. ಏಕೆಂದರೆ ಬರಿದೇ ಗಾಳಿಗೋಪುರದಿಂದ ಲಾಭವೇನಿಲ್ಲ.

– ಸಿ. ನಿರ್ಮಲಾ ದೇಸಾಯಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ