ನಮ್ಮದು ಪ್ರಾಚೀನ ಕಾಲದಿಂದಲೂ ಪುರುಷ ಪ್ರಧಾನ ಸಮಾಜ. ಇದಕ್ಕೆ ಸಮಾಜ ಮಾತ್ರವೇ ಕಾರಣವಲ್ಲ. ಪ್ರಕೃತಿಯೇ ಅವಳನ್ನು ಪುರುಷನಿಗಿಂತ ಶಾರೀರಿಕವಾಗಿ ದುರ್ಬಲಳನ್ನಾಗಿ ಸೃಷ್ಟಿಸಿದೆ. ಹೀಗಾಗಿ ಮಹಿಳೆಯ ರಕ್ಷಣೆಗೆ ಪುರುಷನ ಆಸರೆಯ ಅವಶ್ಯಕತೆ ಇರುತ್ತದೆ.

ಆದ್ದರಿಂದ ಒಂದು ಹೆಣ್ಣು, ಹುಟ್ಟಿದ ನಂತರ ತಂದೆಯ ಆಸರೆ, ಆಮೇಲೆ ಸೋದರನ ಆಸರೆ, ನಂತರ ಪತಿಯ ಆಸರೆ, ವೃದ್ಧಾಪ್ಯದಲ್ಲಿ ಮಗನ ಆಸರೆಯಲ್ಲಿದ್ದುಕೊಂಡು ರಕ್ಷಣೆ ಪಡೆಯುತ್ತಾಳೆ. ರಕ್ಷಕನು ಉತ್ತಮನಾಗಿದ್ದಾಗ ಮಾತ್ರ ಸರಿಯಾಗಿ ರಕ್ಷಣೆ ನೀಡಲು ಸಾಧ್ಯ. ಆದ್ದರಿಂದ ಪುರುಷನು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಗಿಂತ ಉತ್ತಮನಾಗಿರಬೇಕಾಗುತ್ತದೆ.

ಪುರುಷನ ಅವಲಂಬನೆ ಏಕೆ?

ಕೇವಲ ಶಾರೀರಿಕ ರಕ್ಷಣೆಗಾಗಿ ಮಹಿಳೆಯು ಪುರುಷನನ್ನು ಅವಲಂಬಿಸುತ್ತಾಳೆಯೇ ಎಂಬ ಪ್ರಶ್ನೆ ಏಳುತ್ತದೆ. ಇಲ್ಲ, ಅವಳಿಗೆ ಆರ್ಥಿಕ ಮತ್ತು ಸಾಮಾಜಿಕ ರಕ್ಷಣೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹ ಪದ್ಧತಿ ಇತ್ತು. ಇದರಿಂದ ಹುಡುಗಿಯರು ಅತ್ತೆ ಮನೆಯ ಹೊಸ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲವರಾಗಿದ್ದರು. ಅವರಿಗೆ ವಿದ್ಯೆ ಕಲಿಯುವ ಅವಕಾಶವಿರಲಿಲ್ಲ. ಹೀಗಾಗಿ ಅವರು ಆರ್ಥಿಕ ದೃಷ್ಟಿಯಿಂದ ಸಂಪೂರ್ಣವಾಗಿ ಪುರುಷರ ಮೇಲೆ ಅವಲಂಬಿತರಾಗುತ್ತಿದ್ದರು. ಸಮಾಜದಲ್ಲಿ ಮಹಿಳೆಯನ್ನು ಮದುವೆಗೆ ಮೊದಲು ತಂದೆಯ ಹೆಸರಿನಿಂದ ಮತ್ತು ಮದುವೆಯ ನಂತರ ಪತಿಯ ಹೆಸರಿನಿಂದ ಗುರುತಿಸಲಾಗುತ್ತಿತ್ತು. ಅವಳಿಗೆ ತನ್ನದೇ ಆದ ವ್ಯಕ್ತಿತ್ವವಿರುತ್ತಿರಲಿಲ್ಲ.

ಒಂದು ಹೆಣ್ಣು ಮಗುವಿಗೆ ತಂದೆ ಅಥವಾ ಅಣ್ಣನಿಲ್ಲದಿದ್ದರೆ ಆಕೆಗೆ ಅಸುರಕ್ಷತಾ ಭಾವನೆ ಕಾಣುತ್ತಿತ್ತು. ಅವಳಿಗೆ ಆರ್ಥಿಕ ಕೊರತೆಯೂ ಉಂಟಾಗಿ ವಿವಾಹಕ್ಕೂ ತೊಂದರೆಯಾಗುತ್ತಿತ್ತು. ವಿವಾಹದ ನಂತರ ಕಾರಣಾಂತರದಿಂದ ಅವಳ ಪತಿ ಮೃತ್ಯುವಶನಾದ ಅಥವಾ ಅವಳನ್ನು ದೂರೀಕರಿಸಿದರೆ ಅವಳನ್ನು ಸಮಾಜ ಅಪರಾಧಿ ಭಾವದಿಂದ ನೋಡುತ್ತಿತ್ತು. ಅವಳಿಗೆ ಪುನರ್ವಿವಾಹಕ್ಕೂ ಅನುಮತಿ ಇರುತ್ತಿರಲಿಲ್ಲ, ಯಾವುದೇ ಶುಭಕಾರ್ಯಗಳಲ್ಲಿ ಪಾಲ್ಗೊಳ್ಳುವಂತಿರಲಿಲ್ಲ. ಅವಳ ದಿನಚರಿಗೊಂದು ಸೀಮಾರೇಖೆಯನ್ನು ರಚಿಸಿ, ಸ್ವಾತಂತ್ರ್ಯಹರಣ ಮಾಡಲ್ಪಡುತ್ತಿತ್ತು.

ಅವಳು ಪುರುಷರ ಕಾಮುಕ ದೃಷ್ಟಿಗೆ ಬಲಿಯಾಗಿ ಅವಳ ಜೀವನ ದುರ್ಭರವಾಗುತ್ತಿತ್ತು. ಹೀಗೆ ಪತಿಯಿಲ್ಲದ ಮಹಿಳೆಯ ಜೀವನ ಚುಕ್ಕಾಣಿ ಇಲ್ಲದ ನಾವೆಯಂತೆ ಹೊಯ್ಡಾಡುತ್ತಿತ್ತು. ಆರ್ಥಿಕ ಬೆಂಬಲ ಇಲ್ಲದ ಕಾರಣ ಅವಳು  ಕುಟುಂಬದರ ದಯೆಗೆ ಪಾತ್ರಳಾಗಿ ಜೀವನ ನಡೆಸಬೇಕಿತ್ತು. ಪುರುಷನೇ ಮಹಿಳೆಗೆ ಶಾರೀರಿಕ, ಸಾಮಾಜಿಕ, ಆರ್ಥಿಕ ಮತ್ತು ಕೆಲವೊಮ್ಮೆ ಮಾನಸಿಕ ರಕ್ಷಣೆಗೂ ವಿಮಾ ಪಾಲಿಸಿಯಾಗಿದ್ದನು.

ರಕ್ಷಣೆ ನೀಡಲು ಪುರುಷನು ಸಮರ್ಥನೇ?

ಹಿಂದೆ ಮಹಿಳೆ ಸಂಪೂರ್ಣವಾಗಿ ಅಬಲೆಯಾಗಿದ್ದಳು. ಆದ್ದರಿಂದ ಅವಳಿಗೆ ಜೀವನದ ಪ್ರತಿಯೊಂದು ಹಂತದಲ್ಲಿಯೂ ಪುರುಷನ ರಕ್ಷಣೆಯ ಅಗತ್ಯವಿತ್ತು. ಅವಳ ವಿವಾಹ ಕಾಲದಲ್ಲಿ ಶ್ರೇಷ್ಠ ವರನನ್ನೇ ಹುಡುಕಲಾಗುತ್ತಿತ್ತು. ವಿದ್ಯೆ, ವಯಸ್ಸು, ಮೈಕಟ್ಟು, ಹಣಕಾಸು ಎಲ್ಲ ವಿಷಯಗಳಲ್ಲೂ ಹುಡುಗಿಗಿಂತ ಉತ್ತಮನಾಗಿದ್ದು, ಪತ್ನಿಗೆ ಪೂರ್ಣ ರಕ್ಷಣೆ ನೀಡಬಲ್ಲವನಾಗಿರಲಿ ಎಂಬ ಉದ್ದೇಶ ಇರುತ್ತಿತ್ತು. ಇಷ್ಟೆಲ್ಲ ಗಮನಿಸಿ ಆರಿಸಿದರೂ ಪತಿಯಿಂದ ಅವಳಿಗೆ  ರಕ್ಷಣೆ ಸಿಗುತ್ತಿತ್ತೇ? ಇಲ್ಲ, ಅವಳು ಮಕ್ಕಳನ್ನು ಹೆರುವ ಮತ್ತು ಮನೆಗೆಲಸ ಮಾಡುವ ಯಂತ್ರವಾಗುತ್ತಿದ್ದಳಷ್ಟೇ. ಮನೆಯವರಿಂದ ಅವಳು ಹಿಂಸೆಗೊಳಗಾಗುತ್ತಿದ್ದರೂ, ಅವಳ ಪತಿಯು ವಿಧೇಯ ಪುತ್ರನಂತೆ ಮೌನದಿಂದಿರುತ್ತಿದ್ದ. ಹಿಂದೆ ಆರ್ಥಿಕ ಸ್ವಾತಂತ್ರ್ಯವಿಲ್ಲದ ಕಾರಣ, ಅವನು ತನಗೆ ಬೇಕಾದಂತೆ ಮಾಡಲು ಅಸಮರ್ಥನಾಗಿರುತ್ತಿದ್ದ. ಇನ್ನು ಪತ್ನಿಗೆ ಏನು ರಕ್ಷಣೆ ನೀಡಬಲ್ಲ? ಶಾರೀರಿಕ ರಕ್ಷಣೆಯ ಬಗ್ಗೆ ಹೇಳುವುದಾದರೆ, ತನ್ನ ಬಯಕೆಯನ್ನು ಪೂರೈಸಿಕೊಳ್ಳಲು ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಅವಳನ್ನು ಬಲಾತ್ಕಾರ ಮಾಡಿ, ರಕ್ಷಕನಾಗಬೇಕಿದ್ದವನು ಭಕ್ಷಕನಾಗುತ್ತಿದ್ದ. ಅಂಥವನಿಂದ ರಕ್ಷಣೆಯ ಭರವಸೆ ಹೇಗಾದೀತು?

ಕಾಲ ಬದಲಾಗಿದೆ

ಈಗ ಕಾಲ ಬದಲಾಗಿದೆ. ಮಹಿಳೆಯರು ಓದು, ಬರಹ ಕಲಿತು ನಿರಾವಲಂಬಿಗಳೂ ಮತ್ತು ತಮ್ಮ ಹಕ್ಕು ಅಧಿಕಾರಗಳ ಬಗ್ಗೆ ಜಾಗರೂಕರೂ ಆಗಿದ್ದಾರೆ. ಈಗ ಅವರಿಗೆ ತಮ್ಮನ್ನು ಗುರುತಿಸಿಕೊಳ್ಳಲು ಯಾರ ಅಗತ್ಯ ಇಲ್ಲ. ಅವರು ಇಂದು ಎಲ್ಲ ಕಾರ್ಯಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮಾನವಾಗಿ ನಿಂತಿದ್ದಾರೆ ಮತ್ತು ಸಮಾಜದಲ್ಲಿ ಗೌರವವನ್ನು ಗಳಿಸುತ್ತಿದ್ದಾರೆ. ಅವರು ಆರ್ಥಿಕವಾಗಿ ಸ್ವತಂತ್ರರಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಹುಟ್ಟಿದೆ ಮತ್ತು ಯಾವುದೇ ವಿಷಯದ ಬಗ್ಗೆ ಸ್ವತಃ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಪಡೆದಿದ್ದಾರೆ. ಅವರೀಗ ತಮ್ಮ ವಿವಾಹಪೂರ್ವ ಸರ್‌ನೇಮ್ ನೊಂದಿಗೇ ಪತಿಯ ಸರ್‌ನೇಮ್ ನ್ನು ಜೋಡಿಸಿಕೊಳ್ಳತೊಡಗಿದ್ದಾರೆ. ಪಿತ್ರಾರ್ಜಿತ ಸಂಪತ್ತಿನಲ್ಲಿ ಮಗಳಿಗೂ ಮಗನ ಸರಿಸಮನಾದ ಹಕ್ಕು ದೊರೆಯುತ್ತಿದೆ. ವಿಧವೆಯರ ಮತ್ತು ವಿಚ್ಛೇದಿತೆಯ ಸ್ಥಿತಿಯೂ ಈಗ ಆರ್ಥಿಕ ಮತ್ತು ಸಾಮಾಜಿಕವಾಗಿ ಉತ್ತಮಗೊಂಡಿದೆ. ಅವರಿಗೆ ಆಸ್ತಿಯಲ್ಲಿ ಭಾಗ ಸಿಗುತ್ತಿರುವುದರಿಂದ ಅವರು ಯಾರದೇ ದಯಾಭಿಕ್ಷೆಯಲ್ಲಿ ಬಾಳದೆ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಅವರಿಗೀಗ ಮರು ಮದುವೆಗೂ ಅವಕಾಶವಿದ್ದು, ಸಮಾಜದ ಕುಹಕ ರೀತಿ ನೀತಿಗಳನ್ನು ಎದುರಿಸಿ ನಿಲ್ಲಬಲ್ಲವರಾಗಿದ್ದಾರೆ.

ಸಾಮಾಜಿಕ ಮಾನದಂಡ

ಇಂದು ಮಹಿಳೆಯು ಆರ್ಥಿಕವಾಗಿ ಸ್ವಾವಲಂಬಿಯೂ ಮತ್ತು ಜಾಗೃತಳೂ ಆಗಿರುವಾಗ ತನ್ನ ರಕ್ಷಣೆಗಾಗಿ ಅವಳು ಪತಿಯನ್ನು ಆಶ್ರಯಿಸಬೇಕಿದೆಯೇ ಎಂದರೆ ಹೌದು ಎನ್ನಬೇಕಾಗಿದೆ. ಏಕೆಂದರೆ ಸಮಾಜದ ನಿಯಮಗಳಿಗೆ ವಿರುದ್ಧವಾಗಿ ನಡೆದು ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ. ಜೊತೆಗೆ ಪತಿಯ ಅಹಂ ಕೂಡ ಅವಳ ಎದುರು ನಿಲ್ಲುತ್ತದೆ. ಪತ್ನಿ ಯಾವುದೇ ರೀತಿಯಲ್ಲಿಯೂ ತನಗಿಂತ ಮುಂದಾಗುವುದನ್ನು ಪತಿ ಅಡ್ಡಿಪಡಿಸುತ್ತಾನೆ.

ಮದುವೆ ಮಾಡುವಾಗ ಹುಡುಗ ಹುಡುಗಿಗಿಂತ ವಯಸ್ಸಿನಲ್ಲಿ ದೊಡ್ಡನಾಗಿರಬೇಕು, ನೋಡಲು ಸಹ ದೊಡ್ಡವನಂತೆ ಕಾಣಬೇಕು, ಹೆಚ್ಚು ಎತ್ತರವಿರಬೇಕು, ಹುಡುಗಿಗಿಂತ ಹೆಚ್ಚು ವಿದ್ಯಾವಂತನಾಗಿರಬೇಕು, ಹೆಚ್ಚು ಸಂಪಾದಿಸಬೇಕು, ಎಂದೆಲ್ಲ ಪಟ್ಟಿ ಮಾಡುವುದರ ಹಿಂದೆ ಇರುವ ಉದ್ದೇಶವೆಂದರೆ ಮಾನಸಿಕವಾಗಿ ಹುಡುಗಿಯನ್ನು ತನ್ನ ಪತಿಗೆ ವಿಧೇಯಳನ್ನಾಗಿ ಮಾಡುವುದೇ ಆಗಿರುತ್ತದೆ. ಹೆಣ್ಣುಮಕ್ಕಳನ್ನು ಇಂತಹ ಮನೋಭಾವನೆಯಿಂದ ಬೆಳೆಸುವುದರಿಂದ ಅವಳು ಮುಂದೆ ತನ್ನ ಪತಿಯೊಂದಿಗೆ ಸುಲಭವಾಗಿ ಹೊಂದಿಕೊಂಡು ಬಾಳುತ್ತಾಳೆ. ವೈವಾಹಿಕ ಜೀವನದ ಸಫಲತೆಗೆ ಇದು ಅವಶ್ಯಕ ಹೌದು.

ಹೆಣ್ಣುಮಕ್ಕಳು ಇಂದಿಗೂ ಸಹ ಹೆಚ್ಚಾಗಿ ತಮಗಿಂತ ಉತ್ತಮನಾಗಿರುವ ಪತಿಗಾಗಿ ಆಸೆಪಡುತ್ತಾರೆ. ಅಂತಹ ಪತಿಯೊಡನೆ ತಾವು ಸುರಕ್ಷಿತವೆಂದು ಭಾವಿಸುತ್ತಾರೆ. ಅವರ ಹೆಸರಿನೊಂದಿಗೆ ತಮ್ಮನ್ನು ಗುರುತಿಸಿಕೊಂಡು ಗೌರವಾನ್ವಿತರಾದೆವೆಂದು ತಿಳಿಯುತ್ತಾರೆ.

ಒಂದು ಸಮಾಧಾನದ ವಿಷಯವೆಂದರೆ, ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತಮ್ಮ ಸ್ಥಾನ ಗಳಿಸಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಅವರು ಪುರುಷರಿಗೆ ಸರಿಸಮಾನರಾಗಿದ್ದಾರೆ. ಮಹಿಳೆಯ ಯಶಸ್ಸಿನ ಹಿಂದೆ ಪುರುಷನ ರಕ್ಷಣಾಹಸ್ತ ಇರುವುದಾದರೂ, ಅವಳ ಬಗೆಗಿನ ಸಾಮಾಜಿಕ ಮಾನದಂಡ ಬಾಗುತ್ತಿದೆ. ಪತಿ-ಪತ್ನಿಯರು ಪರಸ್ಪರ ಅರಿತು ಬಾಳುವರೆಂದರೆ ಯಾವುದೇ ಸಾಮಾಜಿಕ ನಿಯಮಗಳಿಗೆ ತಲೆ ಬಾಗ ಬೇಕಾಗುವುದಿಲ್ಲ.

– ಪಿ. ವೈಷ್ಣವಿ  

Tags:
COMMENT