ಫ್ಯಾಷನ್‌ ಕುರಿತಾಗಿ ಹೇಳುವುದಾದರೆ, ಅದು 6-7 ತಿಂಗಳಿಗೆ ಬದಲಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಫ್ಯಾಷನ್ನಿನ ಗ್ಲಾಮರಸ್‌ ಲೋಕದಲ್ಲಿ ಕ್ರಾಂತಿಯೇ ಆಗಿದೆ ಎನ್ನಬಹುದು. ಕಳೆದ ಕೆಲವು ವರ್ಷಗಳಿಂದ ವಿಶ್ವದೆಲ್ಲೆಡೆ 0 ಸೈಝ್ ದರ್ಬಾರ್ ಜೋರಾಗಿ ನಡೆಯುತ್ತಿತ್ತು. ಅಂದರೆ ಮಾಡೆಲ್‌ ಎಷ್ಟು ತೆಳುಕಾಯಳೋ ಅಷ್ಟೇ ಸಕ್ಸಸ್‌ ಫುಲ್ ಅಂತ! ಇದೆಷ್ಟು ಆಳವಾಗಿ ಬೇರುಬಿಟ್ಟಿತ್ತು ಎಂದರೆ, ಗ್ಲಾಮರ್‌ ಫ್ಯಾಷನ್‌ ಉದ್ಯಮ 0 ಸೈಝ್ ಭ್ರಮೆಯಿಂದ ಹೊರಬಂದು ಮೈಕೈ ತುಂಬಿಕೊಂಡವರಿಗೆ ಇಷ್ಟು ಬೇಗ ಸ್ವಾಗತ ಕೋರಲಿದೆ ಎಂದು ಯಾರೂ ಕನಸಿನಲ್ಲೂ ಊಹಿಸಿರಲಿಲ್ಲ.

0 ಸೈಝ್ ಇದೀಗ ಫ್ಯಾಷನ್‌ ಅಲ್ಲವೆಂದೇ ಆಗಿಹೋಗಿದೆ! ಇದೀಗ ಬೆಡಗಿಯರು ತಮ್ಮ ದೇಹದ ಉಬ್ಬು ತಗ್ಗುಗಳ ಕುರಿತಾಗಿ ಸಂಕೋಚ ಪಡುವುದು ಬಿಟ್ಟು ಸಂಭ್ರಮಿಸುವಂತೆ ಆಗಿದೆ.

ಇತ್ತೀಚೆಗಷ್ಟೆ ಅಂತಾರಾಷ್ಟ್ರೀಯ ಫ್ಯಾಷನ್‌ ಲೋಕದಲ್ಲಿ ಗ್ಲಾಮರೇಟ್‌ ಕೇರಿಂಗ್‌ ಒಂದು ಚಾರ್ಟರ್‌ ಜಾರಿಗೊಳಿಸಿದೆ. ಇದರ ಮೂಲಕ ಅವರು ವಿಶ್ವದ ಯಾವುದೇ ಮೂಲೆಯಲ್ಲಿನ ಮಾಡೆಲ್ ಅತಿ ತೆಳುವಾಗಿದ್ದು, 0 ಸೈಝ್ ಮೇಂಟೇನ್‌ ಮಾಡುತ್ತಿದ್ದೇನೆ ಎಂದು ತೋರ್ಪಡಿಸಿಕೊಂಡರೆ, ಅಂಥವಳನ್ನು ಬ್ಯಾನ್‌ ಮಾಡಬಹುದಾಗಿದೆ! ಅವರ ಈ ಚಾರ್ಟರ್‌ ಪ್ರಕಾರ ಅವರ ಎಲ್ಲಾ ಬ್ರ್ಯಾಂಡ್‌ ಆದ ಮಾಡೆಲ್‌ಗಳು ಫ್ರೆಂಚ್‌ ಸೈಝ್ 34ಕ್ಕಿಂತ ಕಡಿಮೆ ಇದ್ದರೆ, ಅಂಥವರಿಗೆ ಬಹಿಷ್ಕಾರ ಹಾಕುತ್ತಾರೆ. ಇಲ್ಲಿ ಉಲ್ಲೇಖಿಸಬೇಕಾದ ಮುಖ್ಯ ಅಂಶವೆಂದರೆ ಫ್ರೆಂಚ್‌ ಸೈಝ್ 32, ಅಮೆರಿಕಾದ ಸೈಝ್ 0 ಎರಡೂ ಒಂದೇ! ಇಸ್ರೇಲ್‌ ಅಂತೂ 2013ರಿಂದಲೇ ಕಡ್ಡಿ ಮಾಡೆಲ್‌‌ಗಳನ್ನು ಬ್ಯಾನ್‌ ಮಾಡಿತ್ತು.

ದೊಡ್ಡ ತೀರ್ಪು ಫ್ಯಾಷನ್‌ ಲೋಕದಲ್ಲಿ ಫ್ರಾನ್ಸ್ ಇಡೀ ವಿಶ್ವಕ್ಕೇ ಲೀಡರ್‌ ಎನ್ನಬಹುದು. ಆದರೆ ಫ್ರೆಂಚ್‌ ಸರ್ಕಾರ ಕೆಲವು ವರ್ಷದ ಹಿಂದೆ ತೆಗೆದುಕೊಂಡ ತೀರ್ಮಾನ ಎಂದರೆ, ಆ ಕಾರಣ ಈಗ ಇಷ್ಟರಲ್ಲಿ ಫ್ಯಾಷನ್‌ ಲೋಕದಲ್ಲಿ ಸೌಂದರ್ಯದ ಅಳತೆಗೋಲು ಬದಲಾಗಲಿದೆ. ಅಸಲಿಗೆ, ಫ್ರಾನ್ಸ್ ನಲ್ಲಿ ಸೈಝ್ 0 ಮಾಡೆಲ್‌ ಮಾಡೆಲಿಂಗ್‌ನ್ನು ಸಂಪೂರ್ಣ ಬ್ಯಾನ್‌ ಮಾಡಲಾಗಿದೆ. ಫ್ಯಾಷನ್ ಬ್ಯೂಟಿಯನ್ನು ಕೇಂದ್ರವಾಗಿರಿಸಿಕೊಂಡು, ವಿಶ್ವದಲ್ಲಿ ನಡೆಯುವ ಉದ್ಯಮಗಳಿಗೆ ನಿಜಕ್ಕೂ ಇದೊಂದು ದೊಡ್ಡ ತೀರ್ಮಾನವೇ ಸರಿ. ಇದಕ್ಕೂ ಮೊದಲೇ 2006ರಲ್ಲಿ ಇಟಲಿ ಸ್ಪೇನ್‌ನಲ್ಲಿ  ಸೈಝ್ 0 ಮೇಲೆ ಪ್ರತಿಬಂಧ ಹೇರಲಾಗಿತ್ತು.

ಇದೀಗ ಫ್ರಾನ್ಸ್ ಕೂಡ ಇದೇ ತೀರ್ಮಾನ ಕೈಗೊಂಡಿರುವುದು, ಈ ವಿಷಯ ಈಗ ಎಲ್ಲೆಲ್ಲೂ ಜನಜನಿತ. ಇದಕ್ಕೆ ಮತ್ತೊಂದು ಕಾರಣ ಎಂದರೆ ಫ್ರಾನ್ಸ್ ಯಾ ಪ್ಯಾರಿಸ್‌ ಫ್ಯಾಷನ್ನಿನ ಹಣೆಬರಹ ನಿರ್ಧರಿಸುತ್ತದೆ. ಹಾಗಾಗಿಯೇ ಫ್ರಾನ್ಸ್ ನ ಈ ನಿರ್ಧಾರ ವಿಶ್ವವನ್ನೇ ಬೆರಗಾಗಿಸಿದೆ.

ಸರಕಾರದ ವತಿಯಿಂದ ಆರೋಗ್ಯ ಪರೀಕ್ಷೆ

ಈ ರೀತಿ ಪ್ರತಿಬಂಧ ಹೇರುವಾಗ ಫ್ರಾನ್ಸ್ ಸರ್ಕಾರ, ಈ ಕುರಿತಾಗಿ ಪಾರ್ಲಿಮೆಂಟ್‌ನಲ್ಲಿ ಒಂದು ಕಾನೂನನ್ನೂ ರೂಪಿಸಿತು. ಯಾವ ಮಾಡೆಲ್‌‌ನ ‌ಒಂದು ನಿಶ್ಚಿತ ಪ್ರಮಾಣಕ್ಕಿಂತ ಕಡಿಮೆ ಇರುತ್ತದೋ, ಅಂಥವರ ಕಡೆಯಿಂದ ಯಾವುದೇ ಕಂಪನಿಯೂ ತನ್ನ ಉತ್ಪನ್ನದ ಪ್ರಚಾರ ಮಾಡಿಸಕೂಡದೆಂಬುದು. ಜೊತೆಗೆ ಅಂಥವರನ್ನು ಯಾವ ಫ್ಯಾಷನ್‌ ಶೋಗೂ ಸೇರಿಸಿಕೊಳ್ಳಬಾರದು ಎಂಬುದು. ಈ ಕಾನೂನಿನ ಉಲ್ಲಂಘನೆಯಾದಲ್ಲಿ 6 ತಿಂಗಳ ಸೆರೆವಾಸ ಎಂದು ಎಚ್ಚರಿಸಿದೆ. ಜೊತೆಗೆ ಲಕ್ಷಾಂತರ ರೂ. ದಂಡ ಸಹ ಕಟ್ಟಬೇಕು.

ಸರ್ಕಾರದ ವತಿಯಿಂದ ಮಾಡೆಲ್‌‌ಗಳಿಗೆ ಸ್ಪಷ್ಟವಾಗಿ ತಿಳಿಸಿರುವುದೆಂದರೆ, ಮಾಡೆಲಿಂಗ್‌ ಕೆರಿಯರ್‌ ಶುರು ಮಾಡುವ ಮೊದಲೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಪರೀಕ್ಷೆ ಮಾಡಿಸಬೇಕು. ಈ ಪರೀಕ್ಷೆಯಿಂದ ಮಾಡೆಲ್‌‌ಳ ಉದ್ದಳತೆ, ಅದಕ್ಕೆ ತಕ್ಕಂತೆ ಅವಳ ತೂಕ, ಎದೆ, ಸೊಂಟದ ಸುತ್ತಳತೆ, ಮುಖದ ರೂಪುರೇಷೆ ಇತ್ಯಾದಿಗಳನ್ನು ಖಾತ್ರಿಪಡಿಸಿಕೊಂಡು ಒಂದು ಸರ್ಟಿಫಿಕೇಟ್‌ನೀಡುತ್ತಾರೆ. ಇದಿಲ್ಲದಿದ್ದರೆ ಮಾಡೆಲ್‌ ಕೆರಿಯರ್‌ ಶುರು ಮಾಡಲಾಗದು. ಇದನ್ನೇ ವಿಶ್ವದ ಹಲವು ಖ್ಯಾತ ಫ್ಯಾಷನ್‌ ಹೌಸಸ್ ಮಾಡುತ್ತಿವೆ.

ಭಾರತೀಯರಿಗೆ ವಿಭಿನ್ನ ಮಾನದಂಡ

ಕ್ರಿಶ್ಚಿಯನ್‌ ಡಿಯೋರ್‌, ದಿವೇಚಿ, ಸೇಂಟ್‌ ಲೂರೆಂಟ್‌, ಗುಕ್ಕಿ ಇತ್ಯಾದಿಗಳಿಗೆ ಯಾವುದೇ ಪ್ರತಿಬಂಧ ಇಲ್ಲ. ಬದಲಿಗೆ ಮಾಡೆಲ್‌ಗಳಿಗೆ ಆರೋಗ್ಯದ ಗ್ಯಾರಂಟಿ ಸಹ ನೀಡಲಾಯಿತು. 16 ವರ್ಷಕ್ಕೂ ಕಡಿಮೆ ವಯಸ್ಸಿನ ಹುಡುಗಿಯರು ಪ್ರಾಪ್ತ ವಯಸ್ಕರಂತೆ ಪೋಸ್‌ ನೀಡುವ ಹಾಗಿಲ್ಲ. ಅಸಲಿಗೆ, ಎಷ್ಟೋ ವರ್ಷಗಳಿಂದ ಫ್ಯಾಷನ್‌ ಉದ್ಯಮ ನಮ್ಮ ಆಹಾರ ಪದ್ಧತಿಯಲ್ಲಿ ಡಿಸ್‌ ಆರ್ಡರ್‌ಹೆಚ್ಚಿಸುತ್ತಿದೆ ಎಂಬ ಆರೋಪವಿದೆ.

ಅಂತಾರಾಷ್ಟ್ರೀಯ ಕಂಪನಿಗಳ ಈ ತೀರ್ಮಾನ ಭಾರತದಲ್ಲಿ ಅನುಕೂಲಕರ ಎನಿಸಿದೆ. ಅವರು ಅದನ್ನು ಸಮರ್ಥಿಸಿಕೊಳ್ಳುತ್ತಾ ಹೇಳುತ್ತಾರೆ, “ವಿಶ್ವವಿಡೀ 0 ಸೈಝ್ ನ್ನು ಫ್ಯಾಷನೆಬಲ್ ಎಂದುಕೊಳ್ಳಲಿ, ಆದರೆ ನಮ್ಮ ದೇಶದ ಮಾಡೆಲ್ಸ್ ಮಾತ್ರ ಸದಾ ಮೈಕೈ ತುಂಬಿಕೊಂಡಿರುತ್ತಾರೆ. ಇದರರ್ಥ ಸುಸ್ಪಷ್ಟ, ಭಾರತೀಯರ ಸೌಂದರ್ಯ ಪ್ರಜ್ಞೆ ಫ್ಯಾಷನ್‌ ಉದ್ಯಮದಿಂದ ಪ್ರಭಾವಿತಗೊಂಡಿಲ್ಲ ಎಂಬುದು. ಬದಲಿಗೆ ಚಿತ್ರೋದ್ಯಮದಿಂದ ಪ್ರಭಾವಕ್ಕೆ ಒಳಗಾಗುತ್ತದೆ. ಬಾಲಿವುಡ್‌ ನಮ್ಮ ಜನರ ಮೇಲೆ ನೇರ ಪರಿಣಾಮ ಬೀರಬಲ್ಲದು. “ಅನೇಕ ದಶಕಗಳಿಂದ ನಮ್ಮ ಮಾಡೆಲ್ಸ್, ನಟಿಯರು ತುಂಬಿದ ಮೈಕಟ್ಟಿನವರು. ಕಳೆದ ಕೆಲವು ವರ್ಷಗಳಿಂದೀಚೆಗೆ ಮಾತ್ರ ತೆಳುಕಾಯದ ನಟಿಯರು ಶೈನ್‌ ಆಗಿದ್ದಾರೆ. ಅದೂ ಏಕೆಂದರೆ ನಟಿಯರಾದ ಆ ಮಾಡೆಲ್ಸ್ ಫ್ಯಾಷನ್ ಉದ್ಯಮದಿಂದ ಬಂದವರಾಗಿರುತ್ತಾರೆ.”

ತುಂಬಿದ ಮೈಕಟ್ಟಿನ ಮಾಡೆಲ್ಸ್ ಐಡೆಂಟಿಟಿ

ಭಾರತೀಯ ಮಾಡೆಲ್ ಸಾನಿಯಾ ಶೇಖ್‌ ಹೇಳುತ್ತಾರೆ, “ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಬದಲಾವಣೆ ನಿಜಕ್ಕೂ ಮಹತ್ವಪೂರ್ಣವಾದುದು. ನನ್ನ ಪ್ರಕಾರ ಸೈಝ್ ಝೀರೋ ಸೈದ್ಧಾಂತಿಕ ಮಟ್ಟದಲ್ಲಿ ಮಾತ್ರ ನಡೆಯುವಂಥದ್ದು! ನಮ್ಮ ದೇಶದಲ್ಲಿ 0 ಸೈಝ್ ಗೆ ಮಹತ್ವ ಬಂದದ್ದೇ ಇಲ್ಲ. ತುಂಬಿದ ಮೈಕಟ್ಟಿನ ಮಾಡೆಲ್‌ಗಳನ್ನೇ ಮೆಚ್ಚುತ್ತಾರೆ. ನಮ್ಮ ಉದ್ಯಮಗಳಲ್ಲೂ ಸಹ ತುಂಬಿದ ಮೈಕಟ್ಟಿನ ಮಾಡೆಲ್‌ಗಳನ್ನೇ ಆರಿಸುತ್ತಾರೆ. ಏಕೆಂದರೆ ನಮ್ಮಲ್ಲಿ ಬಾಡಿ ಟೈಪ್‌ ಆ್ಯಂಗ್ಯುಲರ್‌ ಅಲ್ಲ, ಉಬ್ಬುತಗ್ಗುಗಳಿಂದ ಕೂಡಿದೆ. ಇಲ್ಲಿ ರನ್‌ ವೇಯಲ್ಲಿ  ಕೆಲವರು ಭಾರೀ ಭುಜ, ಭಾರಿ ನಿತಂಬ, ಭಾರಿ ಸೊಂಟವುಳ್ಳವರೂ ಇರುತ್ತಾರೆ. ಉದ್ಯಮಗಳಿಂದ ಇವರ ಮೇಲೆ ಯಾವುದೇ ಭಾರೀ ಒತ್ತಡವಿಲ್ಲ! ಮತ್ತೆ ನಮ್ಮ ಭಾರತೀಯ ಉಡುಗೆಗಳೂ ಸಹ ತುಂಬಿದ ಮೈಕಟ್ಟಿನವರ ಮೇಲೆಯೇ ಚೆನ್ನಾಗಿ ಕಾಣಿಸುವುದು.”

ಪ್ಲಸ್‌ ಸೈಝ್ ಈಗ ಎಲ್ಲೆಡೆ ಮಾನ್ಯ

ಮುಂಬೈನ ಪ್ರಸಿದ್ಧ ಡಿಸೈನರ್‌ ಫಾಲ್ಗುಣಿ ಹೇಳುತ್ತಾರೆ, “ನಮ್ಮ ದೇಶದಲ್ಲಿ 50%ಗಿಂತ ಅಧಿಕ ಮಹಿಳೆಯರ ಸೈಝ್ 12 ಯಾ ಅಧಿಕ ಇರುತ್ತದೆ. ಉದ್ಯಮ ಈ ಕಡೆ ಗಮನಹರಿಸುತ್ತಿದೆ. ಇಂದು ರನ್‌ವೇಯಿಂದ ಹಿಡಿದು ಫ್ಯಾಷನ್‌ ಸ್ಟೋರ್ಸ್‌ ಮತ್ತು ಪತ್ರಿಕೆಗಳ ಮುಖಪುಟದಲ್ಲೂ ಪ್ಲಸ್‌ ಸೈಝ್ ಮಹಿಳೆಯರ ರಾಜ್ಯಭಾರ ನಡೆದಿದೆ. ವಿಶ್ವಮಟ್ಟದ ಉದ್ಯಮ ತುಂಬಿದ ಮೈಕಟ್ಟಿನ ಮಾಡೆಲ್ಸ್ ಇರಲಿ ಎಂದು ಪರಿಗಣಿಸಿದ್ದಕ್ಕಾಗಿ ಇದು ಹೀಗಾಗಿಲ್ಲ…. ಬದಲಿಗೆ ಉದ್ಯಮದ ದೃಷ್ಟಿಯಿಂದಲೂ ಇವರನ್ನು ಕಡೆಗಣಿಸುವಂತಿಲ್ಲ ಎಂಬ ಕಾರಣಕ್ಕಾಗಿ!

“ಒಂದು ಸಮುದಾಯದ ತರಹ ಫ್ಯಾಷನ್‌ ಉದ್ಯಮ ಬಾಡಿ ಇಮೇಜ್‌ ಕುರಿತಾಗಿ ಸಕಾರಾತ್ಮಕ ಭಾವ ತಳೆಯುತ್ತಿದೆ, ಇದು ನಿಜಕ್ಕೂ ಪ್ರಶಂಸನೀಯ! ಮಹಿಳೆಯರು ಹೇಗಿದ್ದಾರೋ ಹಾಗೇ ಅವರನ್ನು ಸ್ವೀಕಾರ್ಯರೆಂದು ಒಪ್ಪಿಕೊಳ್ಳುವ ನಿರ್ಣಾಯಕ ಘಟ್ಟ ಈಗ ಬಂದಿದೆ. ಅದು ಬಿಟ್ಟು ಫ್ಯಾಷನ್‌ ಪತ್ರಿಕೆಗಳಿಗಾಗಿ ಫೋಟೋ ಶಾಪ್‌ ಮೂಲಕ ಬೇಕೆಂದೇ ತಮ್ಮನ್ನು ತಾವು ಮೋಸ್ಟ್ ಬ್ಯೂಟಿಫುಲ್ ಎಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ತೆಳುಕಾಯದ ಮಾಡೆಲ್‌ಗಳಾದ ಅಡೇಲ್‌, ಆ್ಯಮಿ ಶೂಮನರ್‌, ಆ್ಯಶ್ಲೆ ಗ್ರಾಹಮ್, ಸ್ಟಿಫ್ನಿಯಾ ಫರೇರಿ ಮುಂತಾದವರಂತೆ ನಮ್ಮ ಬಾಲಿವುಡ್‌ ತಾರೆಯರಾದ ವಿದ್ಯಾ ಬಾಲನ್‌, ಹುಮಾ ಕುರೇಶಿ ಮುಂತಾದವರು ತಮ್ಮ ಉಬ್ಬು ತಗ್ಗುಗಳ ದೇಹಸಿರಿಯೊಂದಿಗೆ ಯಶಸ್ವೀ ಎನಿಸಿದ್ದಾರೆ. ಇವರನ್ನು ನೋಡಿಯೇ ಇತರ ಸಾಮಾನ್ಯ ಮಹಿಳೆಯರು ಆತ್ಮವಿಶ್ವಾಸದಿಂದ ತಮ್ಮ ಪ್ಲಸ್‌ ಸೈಝ್ ನ್ನು ಖುಷಿಯಾಗಿ ಪ್ರಸ್ತುತಪಡಿಸುತ್ತಿದ್ದಾರೆ.”

ಕಾಲ ಬದಲಾಗಿದೆ

ಡಿಸೈನರ್‌ ಮೋನಿಷಾ ಹೇಳುತ್ತಾರೆ, “ಫ್ಯಾಷನ್‌ ಉದ್ಯಮ ಈಗ ಪ್ಲಸ್‌ ಸೈಝ್ ನ ಗ್ರಾಹಕರತ್ತ ಗಮನಹರಿಸಿದೆ. ಈ ಗುಂಪನ್ನು ಬಹುಕಾಲ ನಿರ್ಲಕ್ಷಿಸಿದ್ದರು. ಪ್ಲಸ್‌ ಸೈಝ್ ಫ್ಯಾಷನ್‌ ಬ್ಲಾಗರ್ಸ್‌ ಸಹ ಈ ನಿಟ್ಟಿನಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ವಿಶ್ವವಿಡೀ ಹರಡಿರುವ ಪ್ಲಸ್‌ ಸೈಝ್ ಮಾಡೆಲ್ಸ್ ಮತ್ತು ಫ್ಯಾಷನ್‌ ಬ್ಲಾಗರ್ಸ್‌, ಭವಿಷ್ಯದ ಫ್ಯಾಷನ್ನಿನ ಹೊಸ ಮುಖವಾಣಿ ಎನ್ನಬಹುದು.”

ಇದೀಗ ಮುಂಬೈನಲ್ಲಿ ನೆಲೆಸಿರುವ ಅಮೆರಿಕನ್‌ ಮಾಡೆಲ್ ‌ಲೀಸಾ ಭೋಜ್ವಾನಿ ಹೇಳುವುದೆಂದರೆ, “ಇದೀಗ ಕಾಲ ಬದಲಾಗಿದೆ ಎಂದು ಹೇಳಬಹುದು. ಈಗ ಮಾಡೆಲ್ ‌ಅಥವಾ ನಟಿ ಪ್ಲಸ್‌ ಸೈಝ್ ನವರಾಗಿದ್ದರೆ, ಅದನ್ನು ತಪ್ಪೆಂದು ಯಾರೂ ಭಾವಿಸುವುದಿಲ್ಲ.”

ಸ್ಪೇನ್‌, ಇಟಲಿ, ಇಸ್ರೇಲ್ ‌ನಂತರ ಇದೀಗ ಫ್ರಾನ್ಸ್ ಸಹ ಸೈಝ್ ಝೀರೋ ಮೇಲೆ ಪ್ರತಿಬಂಧ ಹೇರಿ ಒಳ್ಳೆಯದನ್ನೇ ಮಾಡಿದೆ ಎಂದು ಇಡೀ ಪಾಶ್ಚಿಮಾತ್ಯ ದೇಶಗಳು ಸಾರುತ್ತಿವೆ. ಇದರಿಂದ ನಮ್ಮ ಮಾಡೆಲ್ಸ್ ಗೆ ಝೀರೋ ಫಿಗರ್‌ ಹೊಂದುವ ವ್ಯಾಮೋಹ ತಗ್ಗಿದೆ ಎನ್ನಬಹುದು.

– ಯಮುನಾ ಸತೀಶ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ