ಚಳಿಗಾಲದಲ್ಲಿ ನಿಮ್ಮ ಚರ್ಮ ಡ್ರೈ ಆಗಿ, ಕೂದಲು ನಿರ್ಜೀವ ಎನಿಸತೊಡಗಿದರೆ, ನೀವು ಎಷ್ಟೇ ದುಬಾರಿ ಹಾಗೂ ಆಧುನಿಕ ಉಡುಗೆ ಧರಿಸಿದ್ದರೂ, ನೋಡುರಿಗೆ ಆಕರ್ಷಣೆ ಎನಿಸದು, ಕನ್ನಡಿಯಲ್ಲಿ ನಿಮ್ಮನ್ನು ನೀವು ಕಂಡಾಗ ಬೆಟರ್‌ ಎನಿಸುವುದಿಲ್ಲ. ಹೀಗಾದಾಗ ಈ ಕೆಳಗಿನ ವಿಂಟರ್‌ ಬ್ಯೂಟಿ ಟಿಪ್ಸ್ ನಿಮಗೆ ಹೆಚ್ಚು ಸಹಕಾರಿ.

ಅಗತ್ಯ ಮಾಯಿಶ್ಚರೈಸ್‌ಗೊಳಿಸಿ : ಚಳಿಗಾಲದಲ್ಲಿ ಚರ್ಮದ ಆರ್ದ್ರತೆ ಉಳಿಸಿಕೊಳ್ಳಲು ವಾಟರ್‌ ಬೇಸ್ಡ್ ಮಾಯಿಶ್ಚರೈಸರ್‌ಗೆ ಬದಲಾಗಿ ಆಯಿಲ್ ‌ಬೇಸ್ಡ್ ಮಾಯಿಶ್ಚರೈಸರ್‌ ಬಳಸಿಕೊಳ್ಳಿ. ಇದರಿಂದ ತ್ವಚೆಯ ಆರ್ದ್ರತೆ ಉಳಿಯುತ್ತದೆ, ಅದು ಸಾಫ್ಟ್ ಟಚ್

ನೀಡುತ್ತದೆ. ಆದರೆ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ನಿಮ್ಮ ಸ್ಕಿನ್‌ ಟೈಪ್‌ಗೆ ತಕ್ಕಂತೆಯೇ ಪ್ರಾಡಕ್ಟ್ಸ್ ಖರೀದಿಸಬೇಕು. ಪ್ರಾಡಕ್ಟ್ ಸರಿಯಿದ್ದಾಗ ಮಾತ್ರ ಅದರ ಪರಿಣಾಮ ಸರಿ ಹೋದೀತು. ದಿನವಿಡೀ ಸಾಫ್ಟ್ ಟಚ್‌ ಹೊಂದಿರಲು 2-3 ಸಲ ಮಾಯಿಶ್ಚರೈಸರ್‌ ಅಪ್ಲೈ ಮಾಡಿ.

ಸನ್‌ಸ್ಕ್ರೀನ್‌ ಹಚ್ಚಲು ಮರೆಯದಿರಿ : ಸಾಮಾನ್ಯವಾಗಿ ಹೆಂಗಸರು ಬೇಸಿಗೆಯಲ್ಲಿ ಮಾತ್ರ ತೀವ್ರ ಬಿಸಿಲು ಹಾನಿಕಾರಕ ಎಂದು ಭಾವಿಸುತ್ತಾರೆ. ಏಕೆಂದರೆ ಚಳಿಗಾಲದಲ್ಲೂ ನಾವು ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿಗೆ ಸಿಲುಕುತ್ತೇವೆ. ಇದರಿಂದ ಸ್ಕಿನ್‌ ಟ್ಯಾನ್‌ ಆಗುವ ಅಪಾಯ ಹೆಚ್ಚುತ್ತದೆ. ಆದ್ದರಿಂದ ಹೊರಗೆ ಹೋಗುವಾಗೆಲ್ಲ ಸನ್‌ಸ್ಕ್ರೀನ್‌ ಹಚ್ಚಲು ಮರೆಯದಿರಿ. ಇದರಿಂದ ಚರ್ಮಕ್ಕೆ ಸೂಕ್ತ ಪೋಷಣೆ ದೊರಕುತ್ತದೆ.

ಧಾರಾಳ ನೀರು ಕುಡಿಯಿರಿ : ನಿಮಗೆ ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆ ಆಗದಿದ್ದರೂ ಸಹ, ಆಗಾಗ ನೀರು ಕುಡಿಯುತ್ತಿರಿ. ದಿನಕ್ಕೆ ಕನಿಷ್ಠ 8-10 ಗ್ಲಾಸ್‌ ಆದರೂ ಸರಿ. ನೀರಿನ ಕೊರತೆಯ ಕಾರಣ ನೀವು ಡೀಹೈಡ್ರೇಶನ್‌ ಸಮಸ್ಯೆಗೆ ಸಿಲುಕುವುದು ಮಾತ್ರವಲ್ಲದೆ, ಮುಖದ ಕಾಂತಿಯನ್ನೂ ಕಳೆದುಕೊಳ್ಳುವಿರಿ.

ಸ್ಕ್ರಬಿಂಗ್‌ ಅತ್ಯಗತ್ಯ : ಎಲ್ಲಾ ಕಾಲಗಳಲ್ಲಿಯೂ ಸ್ಕ್ರಬಿಂಗ್‌ ಬೇಕು. ಇದರಿಂದಾಗಿ ಚರ್ಮದ ಮೇಲ್ಪದರದ ಡೆಡ್‌ ಸೆಲ್ಸ್, ಬ್ಲ್ಯಾಕ್‌ ಹೆಡ್ಸ್ ತಾನಾಗಿ ಹೋಗುತ್ತದೆ. ಇದರಿಂದಾಗಿ ಚರ್ಮ ಶುಭ್ರಗೊಂಡು ಕಳೆಗಟ್ಟುತ್ತದೆ. ಚಳಿಗಾಲದಲ್ಲಿ ವಾರದಲ್ಲಿ 1 ಸಲ ಸ್ಕ್ರಬಿಂಗ್‌ ಮಾಡಿದರೆ ಸಾಕು, ಇಲ್ಲದಿದ್ದರೆ ಡ್ರೈನೆಸ್‌ ಬರುತ್ತದೆ.

ಟೋನಿಂಗ್‌ನಿಂದ ಚರ್ಮದಲ್ಲಿ ಕಾಂತಿ : ಸ್ಕಿನ್‌ ಟೋನಿಂಗ್‌ ಬಲು ಮುಖ್ಯ. ನಾವು ದಿನವಿಡೀ ಧೂಳು ಮಣ್ಣಿನ ಸಂಪರ್ಕ ಹೊಂದುತ್ತೇವೆ. ಹೀಗಾಗಿ ಚರ್ಮದ ಮೇಲೆ ಸಂಗ್ರಹಗೊಂಡ ಈ ಧೂಳನ್ನು ತೊಲಗಿಸಬೇಕಾದುದು ಅನಿವಾರ್ಯ. ಇದು ಚರ್ಮಕ್ಕೆ ಗ್ಲೋ ನೀಡುವುದು ಮಾತ್ರವಲ್ಲದೆ, ಮಾಯಿಶ್ಚರ್‌ ಸಹ ಒದಗಿಸುತ್ತದೆ. ಹೀಗಾಗಿ ಚರ್ಮ ನಳನಳಿಸುತ್ತದೆ.

ಫೇಸ್‌ ಪ್ಯಾಕ್‌ ಚಮತ್ಕಾರ : ಮನೆಯಲ್ಲೇ ನಿಮಗೆ ಅನೇಕ ವಸ್ತುಗಳು ಲಭ್ಯವಿದ್ದು, ಅದರಿಂದಲೇ ನೀವು ಮುಖಕ್ಕೆ ಫೇಸ್‌ ಪ್ಯಾಕ್‌ಹಚ್ಚಿ ಅದರ ಹೆಚ್ಚುವರಿ ಆರೈಕೆ ಮಾಡಬಹುದು. ತುಸು ಮಸೆದ ಮಾಗಿದ ಬಾಳೆಹಣ್ಣಿಗೆ ಜೇನು ಬೆರೆಸಿ ಮುಖಕ್ಕೆ ತೀಡಿ 10 ನಿಮಿಷ ಮಸಾಜ್‌ ಮಾಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಆಮೇಲೆ ಶ್ರೀಗಂಧ ಹಚ್ಚಿ ಮಸಾಜ್‌ ಮಾಡಿ, ಮತ್ತೆ ಮುಖ ತೊಳೆಯಿರಿ.

ಇದೇ ತರಹ ಅರ್ಧ ಕಪ್‌ ತಂಪಾದ ಕೆನೆ ಹಾಲಿಗೆ 2 ಚಿಟಕಿ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚುತ್ತಾ 10 ನಿಮಿಷ ಮಸಾಜ್‌ ಮಾಡಿ. ಆಮೇಲೆ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಆ್ಯಲೋವೆರಾಗೆ ಚರ್ಮವನ್ನು ಮಾಯಿಶ್ಚರೈಸ್‌ಗೊಳಿಸುವ ಗುಣವಿದೆ. ಆದ್ದರಿಂದ ಈ ಜೆಲ್‌ನಿಂದ ಮುಖವನ್ನು ಮಸಾಜ್‌ ಮಾಡಿ. ಆಗ ಮುಖ ಹೊಳೆಯತೊಡಗುತ್ತದೆ.

ಕೈಕಾಲುಗಳತ್ತಲೂ ಗಮನವಿರಲಿ : ಚಳಿಗಾಲದಲ್ಲಿ ಕೇವಲ ಮುಖ ಮಾತ್ರವಲ್ಲದೆ, ಕೈಕಾಲುಗಳತ್ತಲೂ ಹೆಚ್ಚಿನ ಕಾಳಜಿ ವಹಿಸಬೇಕು. ಹೀಗಾಗಿ ಬಾದಾಮಿ ಎಣ್ಣೆ ಅಥವಾ ಜೋಜೋಬಾ ಆಯಿಲ್ ಇವೆರಡೂ ಬೆರೆಸಿಕೊಂಡು ಕೈಕಾಲುಗಳ ಮಸಾಜ್‌ಮಾಡಬೇಕು. ಇದರಿಂದ ಅವು ಸಹಜವಾಗಿ ಸಾಫ್ಟ್ ಆಗುತ್ತವೆ. ಇಲ್ಲದಿದ್ದರೆ ಒಡೆದ ಹಿಮ್ಮಡಿಗಳು ನಿಮ್ಮ ಆತ್ಮವಿಶ್ವಾಸ ಕುಂದಿಸಬಹುದು.

ಕುದಿವ ನೀರು ಬಳಸದಿರಿ : ಬಹಳ ಚಳಿ ಇದೆ ಅಂತ ಹೇಳಿ ಕುದಿ ಕುದಿವ ನೀರಲ್ಲಿ ಸ್ನಾನ ಮಾಡಬೇಡಿ. ಇದರಿಂದ ಚರ್ಮದಲ್ಲಿನ ಮಾಯಿಶ್ಚರ್‌ ಹಾಳಾಗುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದೇ ಸರಿ. ಸ್ನಾನ ಮಾಡಿ ಮೈ ಒರೆಸಿಕೊಂಡ ತಕ್ಷಣ ದೇಹಕ್ಕೆ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.

ಹೇರ್‌ ಕೇರ್‌ ಅತ್ಯಗತ್ಯ : ಫ್ರಿಝಿಡ್‌ ಹೇರ್‌ನಿಂದ ಬಚಾವಾಗಲು ಆದರ ಮೇಲೆ ಎಂದೂ ಬಿಸಿ ನೀರು ಹಾಕಬಾರದು. ಜೊತೆಗೆ ಚಳಿಗಾಲದಲ್ಲಿ ಡ್ಯಾಂಡ್ರಫ್‌ ಸಮಸ್ಯೆ ಹೆಚ್ಚುವುದರಿಂದ, ನಿಯಮಿತವಾಗಿ ತಲೆಗೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಬೇಕು. ವಾರದಲ್ಲಿ 1-2 ಸಲ ಕೊಬ್ಬರಿ ಎಣ್ಣೆಗೆ ನಿಂಬೆಹಣ್ಣು ಹಿಂಡಿಕೊಂಡು ಆ ಮಿಶ್ರಣವನ್ನು ತಲೆಗೆ ಒತ್ತಿ ಮಸಾಜ್‌ ಮಾಡಿ.

ತುಟಿಗಳನ್ನು ಮೃದುವಾಗಿರಿಸಿ : ಚಳಿಗಾಲದಲ್ಲೂ ನಿಮ್ಮ ತುಟಿಗಳು ಅಂದವಾಗಿ ಕಂಗೊಳಿಸಬೇಕೆಂದು ಬಯಸಿದರೆ, ಅದನ್ನು ಮಾಯಿಶ್ಚರೈಸರ್‌ಗೊಳಿಸುವವ ಗ್ಲಾಸ್‌, ಲಿಪ್‌ ಬಾಮ್ ತೀಡಿರಿ. ಇದು ತುಟಿಗಳಿಗೆ ಶೈನಿಂಗ್‌ ಲುಕ್ಸ್ ನೀಡುವುದಲ್ಲದೆ, ತುಟಿಗಳು ಅತಿ ಮೃದುವಾಗುವಂತೆ ಮಾಡುತ್ತವೆ. ಗ್ಲಾಸ್‌ವುಳ್ಳ ಲಿಪ್‌ಸ್ಟಿಕ್‌ ಮಾತ್ರ ಬಳಸಿ.

ಕಂಗಳ ಕೆಳಗಿನ ಶುಷ್ಕತೆ ತೊಲಗಿಸಿ : ಚಳಿಗಾಲದಲ್ಲಿ ಚರ್ಮ ಬೇಗ ಶುಷ್ಕತೆಗೆ ಈಡಾಗುವುದರಿಂದ, ಕಂಗಳ ಕೆಳಭಾಗ ಪದರ ಪದರವಾಗಿ ಉದುರತೊಡಗುತ್ತದೆ. ಇದು ನೋಡಲಿಕ್ಕೂ ಚೆನ್ನಾಗಿಲ್ಲ, ಮುಟ್ಟಲಿಕ್ಕೂ ಅಷ್ಟೇ ಒರಟು ಎನಿಸುತ್ತದೆ. ಹೀಗಾದಾಗ ಆಯ್ಲಿ ಕ್ರೀಂ ಹಚ್ಚಿರಿ ಅದರಿಂದ ಶುಷ್ಕತೆ ದೂರಾಗುತ್ತದೆ.

ಚಳಿಗಾಲದ ಡಯೆಟ್‌ : ಚಳಿಗಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ವಿಟಮಿನ್‌, ಮಿನರಲ್ಸ್ ಸೇವಿಸಬೇಕು. ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯಬೇಕು. ರಸಭರಿತ ಹುಳಿಸಿಹಿ ಹಣ್ಣುಗಳಾದ ಮೂಸಂಬಿ, ಕಿತ್ತಳೆ, ದ್ರಾಕ್ಷಿ ಸೇವಿಸಿ. ಇದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಗಳಿಸುತ್ತದೆ.

ವಾರ್ಡ್‌ರೋಬ್‌ ಪರ್ಫೆಕ್ಟ್ ಆಗಿರಲಿ : ನಿಮ್ಮ ವಾರ್ಡ್‌ರೋಬ್‌ನಲ್ಲಿ ವಿಂಟರ್‌ ವೇರ್‌ಗೆಂದೇ ಒಂದು ರಾಕ್‌ ಮೀಸಲಿಡಿ. ಇದರಲ್ಲಿ ವುಲ್ಲನ್‌ ಸ್ಟೋಲ್, ಸ್ವೆಟರ್‌, ವೆದರ್‌ ಜ್ಯಾಕೆಟ್ಸ್, ಶ್ರಗ್‌, ಕೋಟ್‌, ವುಲ್ಲನ್‌ ಕುರ್ತಿ, ಲೆಗ್ಗಿಂಗ್ಸ್  ಇರಿಸಿಕೊಂಡು ನಿಮ್ಮ ಸ್ಮಾರ್ಟ್‌ನೆಸ್‌ಹೆಚ್ಚಿಸಿಕೊಳ್ಳಿ. ವಿಂಟರ್‌ ಬೂಟ್ಸ್ ಗಾಗಿ ಪ್ರತ್ಯೇಕ ಶೂ ರಾಕ್‌ ಇರಲಿ.

– ಬಿ. ಪರಿಮಳಾ        

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ