ಸದಾ ಸಹನೆ, ತಾಳ್ಮೆ, ತ್ಯಾಗಗಳಿಗೆ ಗುರಿಯಾದ ಗೃಹಿಣಿ, ಮನೆಮಂದಿಯ ಆರೋಗ್ಯದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾಳೆಯೇ ಹೊರತು ತನ್ನ ಆರೋಗ್ಯದ ಬಗ್ಗೆ ಎಂದೂ ಗಮನಿಸುವವಳಲ್ಲ. ಇದಕ್ಕೆ ಕೊನೆ ಎಂದು.......?
ಎರಡು ವರ್ಷಗಳಿಂದ ಸತತ ಹದಿನೈದು, ಇಪ್ಪತ್ತು ದಿನಗಳ ಮಾಸಿಕ ಸ್ರಾವದಿಂದ ಕಂಗಾಲಾದ ಗೆಳತಿ, ಕೊನೆಗೆ ವೈದ್ಯರ ಹತ್ತಿರ ಹೋಗಿದ್ದು ಇನ್ನೇನು ನಿಶ್ಶಕ್ತಿಯಿಂದ ಬಸವಳಿದಾಗಲೇ. ಶಸ್ತ್ರಚಿಕಿತ್ಸೆ ಮೂಲಕ ಗರ್ಭಕೋಶವನ್ನೇ ತೆಗೆದು ಹಾಕಬೇಕೆಂದು ವೈದ್ಯರು ಹೇಳಿದಾಗ ಅವಳಿಗೆ ತನ್ನ ಆರೋಗ್ಯದ ಸಮಸ್ಯೆಗಿಂತ ಹೆಚ್ಚು ಚಿಂತೆಗೀಡಾಗಿದ್ದು ತನ್ನ ಸಂಸಾರದ ಬಗ್ಗೆಯೇ. ಪಿಯುಸಿ ಓದುತ್ತಿರುವ ಮಗಳಿಗೆ ತೊಂದರೆಯಾಗುತ್ತದೆ. ಗಂಡನಿಗೆ ಒಂದು ಲೋಟ ಟೀ ಮಾಡಿಯೂ ಗೊತ್ತಿಲ್ಲ, ನಾನೇ ತಿಂಗಳುಗಟ್ಟಲೆ ಹಾಸಿಗೆ ಹಿಡಿದರೆ, ಹಾಸಿಗೆ ಹಿಡಿದ ಅತ್ತೆಯನ್ನು ನೋಡಿಕೊಳ್ಳುವವರಾರು? ಇಂತಹ ಆಲೋಚನೆಗಳಿಂದಲೇ ಶಸ್ತ್ರಚಿಕಿತ್ಸೆಯನ್ನು ಮುಂದೂಡಿಕೊಂಡು ಬರುತ್ತಿದ್ದಳು. ಕೊನೆಯಲ್ಲಿ ಪರಿಸ್ಥಿತಿ ಕೈಮೀರಿದಾಗ ಸರ್ಜರಿಗೆ ಒಳಗಾಗಲೇಬೇಕಾಯ್ತು.
ಮತ್ತೊಬ್ಬಾಕೆಯದೂ ಇನ್ನೂ ವಿಚಿತ್ರ. ಎರಡು ಮೂರು ವರ್ಷಗಳಿಂದ ಮಾಸಿಕ ಮುಟ್ಟು ಏರುಪೇರಾಗುತ್ತಲೇ ಇತ್ತು. ಸ್ತನದಲ್ಲಿರುವ ಪುಟ್ಟ ಗಂಟೂ ಸಹ ಗಮನಕ್ಕೆ ಬಂದಿತ್ತು. ಅದರ ಕಡೆ ಸ್ವಲ್ಪ ಲಕ್ಷ್ಯಕೊಡದೆ ಗಂಡ, ಮಕ್ಕಳು, ಸಂಸಾರ ಎಂದು ಗೇಯುವುದರಲ್ಲಿಯೇ ಮುಳುಗಿ ಹೋಗಿದ್ದಳು. ಸ್ತನದ ಗಂಟು ದೊಡ್ಡದಾಗಿ ಕೈಗೆ ಅಡ್ಡ ಬರುವಂತಾದಾಗಲೇ ವೈದ್ಯರ ಬಳಿ ಹೋಗಿದ್ದು. ಕ್ಯಾನ್ಸರ್ ಮೂರನೆಯ ಸ್ಟೇಜ್ ಮುಗಿದು ನಾಲ್ಕನೇ ಹಂತಕ್ಕೆ ಕಾಲಿಟ್ಟು ಕೂತಿತ್ತು. ಈಗ ಕೀಮೋ, ಸರ್ಜರಿ, ರೇಡಿಯೇಶನ್ ಎಂದು ವರ್ಷಾನುಗಟ್ಟಲೇ ಆಸ್ಪತ್ರೆಯ ಅಲೆದಾಟ, ಅನುಭವಿಸುತ್ತಿರುವ ನರಕ ದೇವರಿಗೇ ಪ್ರೀತಿ. ಪ್ರತಿಯೊಂದು ಕೆಲಸಗಳಿಗೂ ಅವಳ ಮೇಲೆಯೇ ಅವಲಂಬಿತರಾಗಿದ್ದ ಗಂಡ, ಪುಟ್ಟ ಮಕ್ಕಳು ಈಗ ತಮ್ಮ ತಮ್ಮ ಕೆಲಸಗಳನ್ನು ತೋಚಿದ ಹಾಗೆ ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆ. ಆಗುಹೋಗುಗಳನ್ನು ಸುಮ್ಮನೆ ನೋಡಿಕೊಂಡು ಕಣ್ಣೀರಿಡುವ ಅಸಹಾಯಕತೆ ಅವಳದ್ದು. ಇದು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವ ಹೆಂಗಸರ ಕಥೆಯಾದರೆ, ಕಾಳಜಿ ವಹಿಸುವವರದ್ದು ಮತ್ತೊಂದು ರೀತಿ. ಅಸಿಡಿಟಿಯಿಂದ ನರಳುತ್ತಿರುವ ಮಹಿಳೆಯೊಬ್ಬಳು ತಾನಿದ್ದ ಪುಟ್ಟ ಊರಿನಲ್ಲಿದ್ದ ಎಲ್ಲ ವೈದ್ಯರನ್ನು ಕಂಡರೂ ಗುಣವಾಗಲಿಲ್ಲ. ಬೆಂಗಳೂರಿಗೆ ಹೋಗಿ ತೋರಿಸಿಕೊಂಡು ಬರೋಣ ಎಂದು ಪತಿಗೆ ಗಂಟುಬಿದ್ದರೆ, `ನಿನಗೇನೂ ಆಗಿಲ್ಲ, ಬರೀ ಭ್ರಮೆ. ಮೊದಲು ಅದನ್ನು ನಿನ್ನ ತಲೆಯಿಂದ ಕಿತ್ತು ಹಾಕು, ಎಲ್ಲವೂ ಸರಿಹೋಗುತ್ತದೆ,' ಎನ್ನುವ ಉಡಾಫೆ. ಕೊನೆಗೆ ಅದು ಅಬ್ಡಾಮೆನ್ ಕ್ಯಾನ್ಸರ್ ಎಂದು ರಿಪೋರ್ಟ್ ಬಂದಾಗ ಹೊತ್ತು ಮೀರಿತ್ತು.
ಇನ್ನು ಶಸ್ತ್ರಚಿಕಿತ್ಸೆ ಮಾಡಿಕೊಂಡ ನಂತರ ವೈದ್ಯರು ಹೇಳಿದಷ್ಟು ದಿವಸ ವಿಶ್ರಾಂತಿ ತೆಗೆದುಕೊಳ್ಳುವಷ್ಟು ಸಹನೆ ಇಲ್ಲದೆ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮನೆಗೆಲಸಕ್ಕೆ ಮರಳಿ, ಮತ್ತಷ್ಟು ಆರೋಗ್ಯವನ್ನು ಹದಗೆಡಿಸಿಕೊಳ್ಳುವವರೂ ಇದ್ದಾರೆ. ಈಗಲೂ ಮನೆಯಲ್ಲಿರುವ ಹಿರಿಯ ಹೆಂಗಸರ ಭಯದಿಂದಲೋ ಅಥವಾ ಸರಿಯಾಗಿ ಆಚರಿಸದಿದ್ದರೆ ತಮಗೇ ಉಂಟಾಗುವ ಕೀಳರಿಮೆಯಿಂದಲೋ ಗೊತ್ತಿಲ್ಲ.... ಹಬ್ಬ, ಹುಣ್ಣಿಮೆ, ಪೂಜೆ ಎಂದು ಅದೆಷ್ಟೋ ಹೆಣ್ಣುಮಕ್ಕಳು ವರ್ಷಕ್ಕೆ ಏಳೆಂಟು ಸಲ ಮುಟ್ಟು ಮುಂದೂಡುವ ಮಾತ್ರೆಗಳನ್ನು ಯಾವುದೇ ವೈದ್ಯರ ಸಲಹೆಯಿಲ್ಲದೆ ದೀರ್ಘಕಾಲ ತೆಗೆದುಕೊಂಡು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆಯೂ ಕಡಿಮೆಯಿಲ್ಲ.