ಇಂದಿನ ಆಧುನಿಕ ಯುಗದಲ್ಲಿ ಹೆಣ್ಣುಮಕ್ಕಳು ಅವಿವಾಹಿತರಾಗೇ ಉಳಿದುಬಿಡುವುದು ಮಾಮೂಲಿ ವಿಷಯ ಆಗಿಹೋಗಿದೆ. ಹಾಗೆಯೇ ವಿಚ್ಛೇದನಗಳೂ ಸಹ. ಹೀಗಾಗಿ ಆಧುನಿಕ ದಿನಗಳಲ್ಲಿ ಹೆಣ್ಣು ಒಬ್ಬಂಟಿಯಾಗಿ ಜೀವನ ನಡೆಸುವುದು, ನಗರ ಪ್ರದೇಶಗಳಲ್ಲಂತೂ ಹೆಚ್ಚುತ್ತಲೇ ಇದೆ.
ಪ್ರೌಢ ವಯಸ್ಸು ಸಮೀಪಿಸಿದಂತೆ ಅವಿವಾಹಿತೆ ಒಂದು ಮಗುವನ್ನು ದತ್ತು ಪಡೆಯಬಹುದು ಅಥವಾ ವಿಧವೆ/ವಿಚ್ಛೇದಿತೆ ಬಳಿ ಮಗುವಿದ್ದರೆ, ಸಿಂಗಲ್ ಪೇರೆಂಟ್ ಆಗಿ ಮಗುವಿನ ಸರ್ವತೋಮುಖ ಅಭಿವೃದ್ಧಿಯತ್ತ ಗಮನಹರಿಸ ಬೇಕಾಗುತ್ತದೆ. ಮಗುವಿನ ಎಷ್ಟೋ ಮುಗ್ಧ ಪ್ರಶ್ನೆಗಳಿಗೆ ಉತ್ತರಿಸಲು ತಬ್ಬಿಬ್ಬಾಗುತ್ತದೆ. ಮಗುವಿಗೆ ತಿಳಿಯದ ಇಂತಹ ಎಷ್ಟೋ ಪ್ರಶ್ನೆಗಳಿಗೆ, ಇತರರು ವ್ಯಂಗ್ಯವಾಗಿ ಉತ್ತರಿಸುವ ಮುನ್ನ ನೀವೇ ಅದಕ್ಕೆ ಸೂಕ್ತವಾಗಿ ತಿಳಿಹೇಳುವುದು ಉತ್ತಮ. ಇದರಿಂದ ನಿಮ್ಮ ಬಗ್ಗೆ ಮಗುವಿಗೆ ಹೆಚ್ಚಿನ ಗೌರವಾದರ ಬೆಳೆಯುತ್ತದೆ.
ಹೀಗಾಗಿ ಮಗುವಿನತ್ತ ನಿಮ್ಮ ಸಂಬಂಧ ಹೆಚ್ಚು ಮುಕ್ತ, ಪ್ರಾಮಾಣಿಕ ಹಾಗೂ ದೃಢವಾಗಿರಬೇಕು. ಇಬ್ಬರಲ್ಲೂ ಪರಸ್ಪರ ಉತ್ತಮ ಸಂಭಾಷಣೆ ನಡೆಯುತ್ತಾ, ಮಗುವಿಗೆ ಮನೆಯ ವಾತಾವರಣ ನೆಮ್ಮದಿದಾಯಕ ಆಗಿರಬೇಕೇ ಹೊರತು, ಟೆನ್ಶನ್ ನಿಂದ ಕೂಡಿರಬಾರದು. ಮಗು ಮುಕ್ತವಾಗಿ ನಿಮ್ಮಿಂದ ಉತ್ತರ ಪಡೆಯುವಂತಿರಬೇಕು.
ಮಗುವಿನ ಪ್ರಶ್ನೆಗಳಿಗೆ ಮೊದಲೇ ಮಾನಸಿಕವಾಗಿ ಸಿದ್ಧರಾಗಿರಿ : ನೀವು ಸಿಂಗಲ್ ಮದರ್ ಆಗಿದ್ದರೆ, ಕೆಲವೊಂದು ಸಾಮಾನ್ಯ ಪ್ರಶ್ನೆಗಳನ್ನು, ಮಗು ನಿಮ್ಮನ್ನು ಯಾವಾಗ ಬೇಕಾದರೂ ಕೇಳಬಹುದು. ಇದಕ್ಕಾಗಿ ನೀವು ಮೊದಲೇ ಮಾನಸಿಕವಾಗಿ ಸಿದ್ಧರಿರಬೇಕಾಗುತ್ತದೆ. `ನನ್ನ ಅಪ್ಪ ನಮ್ಮ ಜೊತೆ ಏಕಿಲ್ಲ? ಎಲ್ಲರಿಗೂ ಇರುವಂತೆ ಅಪ್ಪ ಏಕೆ ನನ್ನನ್ನು ಶಾಲೆಗೆ ಕರೆದೊಯ್ಯುವುದಿಲ್ಲ? ಪೇರೆಂಟ್ ಟೀಚರ್ ಮೀಟಿಂಗ್ ಗೆ ಏಕೆ ಎಂದೂ ಬರುವುದಿಲ್ಲ? ಫ್ರೆಂಡ್ಸ್ ಅಪ್ಪನ ಬಗ್ಗೆ ಕೇಳಿದಾಗ ನಾನು ಏನು ಹೇಳಲಿ....?'
ಇಂಥ ನೂರಾರು ಮುಗ್ಧ ಪ್ರಶ್ನೆಗಳನ್ನು ಮಗು ನಿಮ್ಮನ್ನು ಕೇಳಬಹುದು. ಸದಾ ಅದನ್ನು ಸುಮ್ಮನಾಗಿಸುವ ಬದಲು ಒಂದಲ್ಲ ಒಂದು ಸಲ ಉತ್ತರಿಸಲೇ ಬೇಕಾಗುತ್ತದೆ. ಹೀಗಾಗಿ ಇಂಥ ಎಲ್ಲಾ ಪ್ರಶ್ನೆಗಳಿಗೂ ಮೊದಲೇ ಉತ್ತರಗಳನ್ನು ರೆಡಿ ಮಾಡಿಕೊಂಡಿರಿ.
ಸಿಡುಕದೆ ಪ್ರೀತಿ ವಾತ್ಸಲ್ಯದಿಂದ ಸಂಭಾಳಿಸಿ : ಮಗುವಿನ ಮನಸ್ಸು ಬಲು ಕೋಮಲ. ಅವರ ಬಾಲ್ಯದ ಮುಗ್ಧ ಪ್ರಶ್ನೆಗಳಿಗೆ ಸಿಡುಕುವ ಬದಲು, ಪ್ರೀತಿ ವಾತ್ಸಲ್ಯಗಳಿಂದ ನಿಧಾನವಾಗಿ, ಅದಕ್ಕೆ ಅರ್ಥವಾಗುವಂತೆ ಸರಳ ಮಾತುಗಳಲ್ಲಿ ತಿಳಿಸಿಕೊಡಿ. ಎಂದೂ ಮಗುವನ್ನು ಕಠೋರ ಮಾತುಗಳಿಂದ ಗದರಬೇಡಿ. ನಿಮ್ಮ ಇರಿಟೇಶನ್, ಅಸಹಾಯಕತೆಯನ್ನು ಅದರ ಮೇಲೆ ಪ್ರದರ್ಶಿಸಬೇಡಿ. ಮನೆಯಲ್ಲಿ ಸದಾ ಉಲ್ಲಾಸದ ವಾತಾವರಣ ಇರಲಿ. ಅದಕ್ಕೆ ಇಷ್ಟವಾಗುವಂಥ ಜೋಕ್ಸ್, ಕಥೆ ಹೇಳುತ್ತಾ ಇರಿ. ಆಗ ಮಗು ಮನಸ್ಸಿನಲ್ಲೇ ಹಿಂಜರಿಯದೆ, ಮುಕ್ತವಾಗಿ ತನ್ನ ಸಂದೇಹಗಳನ್ನು ನಿವಾರಿಸಿಕೊಳ್ಳಬಲ್ಲದು. ಮಗುವಿಗೆ ಫ್ರಸ್ಟ್ರೇಶನ್ ಹೆಚ್ಚಾದಾಗ, ತನ್ನ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗದಿದ್ದಾಗ, ಅದನ್ನೇ ಯೋಚಿಸುತ್ತಾ ಮಗು ಹಠಮಾರಿತನ, ಬೆರಳು ಚೀಪುವಿಕೆ, ಬೆಡ್ ವೆಟ್ಟಿಂಗ್ ಇತ್ಯಾದಿಗಳಿಗೆ ಮೊರೆ ಹೋಗುವಂತೆ ಆಗಬಾರದು.
ಇಂದಿನ ಕಾಲದ ಮಕ್ಕಳು ಬಲು ಸೂಕ್ಷ್ಮ, ಜಾಣರು, ಸ್ಮಾರ್ಟ್ ಸಹ! ಈ ತರಹ ಸಮಾಧಾನದ ಉತ್ತರ ಸಿಕ್ಕಿದ ಬಳಿಕ ತಮ್ಮನ್ನು ತಾವು, ಮನೆಯ ವಾತಾವರಣಕ್ಕೆ ಹೊಂದಿಸಿಕೊಳ್ಳಬಲ್ಲರು.





