ವಿವಾದದ ಮುಖ್ಯ ವಿಷಯ `ಮನೆ ಖರ್ಚು' ಆಗಿದ್ದು, ಅದರಿಂದ ಸಂಬಂಧಕ್ಕೆ ಧಕ್ಕೆ ಬರುವ ಸಾಧ್ಯತೆ ಇದ್ದರೆ, `ಹಾವೂ ಸಾಯಬಾರದು, ಕೋಲೂ ಮುರಿಯಬಾರದು' ಎಂಬ ತತ್ವ ಅನುಸರಿಸಿ......!
ಮಧ್ಯಮ ವರ್ಗದ ಒಂದು ಕುಟುಂಬದಲ್ಲಿ ಗಂಡಹೆಂಡತಿ ನಡುವೆ ಹೆಚ್ಚು ಚರ್ಚೆಯ ವಿಷಯವೆಂದರೆ, ಅದು ಮನೆ ಖರ್ಚಿನ ಬಗೆಗೆ ಇರುತ್ತದೆ. ಪ್ರತಿಯೊಂದು ಮನೆಯಲ್ಲೂ ನಡೆಯುವ ವಿವಾದದ ಚಿತ್ರಕಥೆ ಒಂದೇ ರೀತಿಯದ್ದಾಗಿರುತ್ತದೆ. ಅದನ್ನು ಬಹುಮತದ ಚಿತ್ರಕಥೆ ಎಂದೂ ಹೇಳಬಹುದು. ಅದರಲ್ಲಿ ಪತಿ ಹೇಳುತ್ತಾನೆ, ``ಇತ್ತೀಚೆಗೆ ಮನೆ ಖರ್ಚು ಹೆಚ್ಚಾಗುತ್ತಿದೆ. ಸ್ವಲ್ಪ ಎಚ್ಚರಿಕೆಯಿಂದ ಮನೆ ನಡೆಸು. ಹಣ ಏನೂ ಮರದಿಂದ ಉದುರೋದಿಲ್ಲ.''
ಆ ಮಾತಿಗೆ ಹೆಂಡತಿ ಸುಮ್ಮನಿರೋದಿಲ್ಲ. ಅವಳು ಹೇಳುತ್ತಾಳೆ, ``ಖರ್ಚು ಆಗೋದು ಎಲ್ಲ ನಿಮಗಾಗಿಯೇ.... ನಾನಂತೂ ಉಪ್ಪಿನಕಾಯಿ ಜೊತೆಗೇ ರೊಟ್ಟಿ ತಿನ್ನಬಲ್ಲೇ.''
ಆ ಮಾತಿಗೆ ಗಂಡ ಹೇಳುತ್ತಾನೆ, ``ಉಪ್ಪಿನಕಾಯಿ ಜೊತೆಗೆ ರೊಟ್ಟಿ ತಿಂದು ಖುಷಿಯಾಗಿರು. ಆದರೆ ಎ.ಸಿ ಹಾಕಿಕೊಂಡು ಟಿವಿ ನೋಡ್ತಾ ಇರ್ತೀಯಾ..... ಅದರಿಂದ ವಿದ್ಯುತ್ ಬಿಲ್ ಹೆಚ್ಚಿಗೆ ಬರುತ್ತೆ. ಅದಕ್ಕೇನಂತಿಯಾ?''
``ನಾನು ಟಿ.ವಿ ನೋಡೋದು ನಿಮಗೆ ಕಾಣುತ್ತೆ. ನೀವು ಉರಿಬಿಸಿಲಲ್ಲೂ ನೀರು ಕಾಯಿಸೋಕೆ ವಿದ್ಯುತ್ ಖರ್ಚು ಮಾಡ್ತೀರಾ, 8-10 ಸಲ ಚಹಾಕ್ಕೆ ಸಕ್ಕರೆ ಚಹಾಪುಡಿ ಬೇಕು. ಗ್ಯಾಸ್ ಖರ್ಚು ಆಗುತ್ತೆ. ಅದರ ಬಗ್ಗೆ ನೀವು ಮರೆತೇ ಬಿಡ್ತೀರಾ?''
ಮನೆಯ ಜೊತೆಗೆ `ಖರ್ಚು' ಶಬ್ದ ಸೇರಿಕೊಂಡಿದೆ. ಅದರ ಬಗ್ಗೆ ಮನೆಯ ಬೇರೆ ಸದಸ್ಯರ ಅಭಿಪ್ರಾಯದ ವ್ಯಾಖ್ಯೆ ಕೂಡ ಬೇರೆಬೇರೆಯೇ ಆಗಿರುತ್ತದೆ. ಉದಾಹರಣೆಗೆ, ಒಂದು ಕುಟುಂಬದಲ್ಲಿ ಅತ್ತೆ ಮಾವ, ಗಂಡಹೆಂಡತಿ ಹಾಗೂ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಹೊರಗೆ ಊಟ ಮಾಡಲೆಂದು ಹೋಟೆಲೊಂದಕ್ಕೆ ಹೋದಾಗ 1500 ರೂ. ಖರ್ಚು ಆಯಿತು. ಅತ್ತೆಗೆ ಹೊರಗೆ ಊಟ ಮಾಡುವುದರ ಅರ್ಥ ಮೈಗಳ್ಳತನ ಹಾಗೂ ಮೋಜಿನ ಪ್ರತೀಕವಾಗಿತ್ತು. ಅವರ ಪ್ರಕಾರ 1,500 ರೂ.ಗಳ ವ್ಯರ್ಥ ಖರ್ಚು ಆಗಿತ್ತು. ಊಟ ಮಾಡುತ್ತ ಅವರು ಮೇಲಿಂದ ಮೇಲೆ ಇದನ್ನೇ ಹೇಳುತ್ತಿದ್ದರು, ``ಹೋಟೆಲ್ ನಲ್ಲಿ ಊಟ ಮಾಡುವ ಬದಲು ಮನೆಯಲ್ಲಿಯೇ ಮಾಡಿ ತಿನ್ನಬಹುದಿತ್ತು. ಇಂದಿನ ಜನರು ಹೊರಗೆ ತಿಂದು ತಮ್ಮ ಹಾಗೂ ಮನೆಯ ಆರ್ಥಿಕ ಆರೋಗ್ಯವನ್ನು ಹದಗೆಡಿಸುತ್ತಿದ್ದಾರೆ.''
ಮಾವನ ದೃಷ್ಟಿಯಲ್ಲಿ ಈ ಖರ್ಚು ಸಂಬಂಧದಲ್ಲಿ ಸುಧಾರಣೆಯ ಹೂಡಿಕೆಯಾಗಿತ್ತು. ಮನೆಯವರೆಲ್ಲರೂ ಬಹಳ ದಿನಗಳ ನಂತರ ಒಟ್ಟಾಗಿ ಊಟಕ್ಕಾಗಿ ಸೇರಿರುವುದು ಅವರಿಗೆ ಬಹಳ ಖುಷಿ ನೀಡಿತ್ತು. ಇಂತಹ ಔಟಿಂಗ್ ಸಂಬಂಧಕ್ಕೆ ಅತ್ಯವಶ್ಯ. ಸೊಸೆಗೂ ಕೂಡ ಈ ಲಂಚ್ ಅವಶ್ಯಕತೆ ಇತ್ತು. ಏಕೆಂದರೆ ಆಕೆಯ ಸೊಂಟದಲ್ಲಿ ನೋವಿತ್ತು. ಹೊರಗೆ ಬಂದು ತಿಂದಿದ್ದರಿಂದ ಆಕೆಗೆ ಹತ್ತೆಂಟು ಕೆಲಸಗಳಿಂದ ಮುಕ್ತಿ ದೊರಕಿತ್ತು. ಮಕ್ಕಳು ಕೂಡ ಬರಲಿರುವ 1-2 ತಿಂಗಳು ಹೊರಗೆ ಊಟಕ್ಕೆ ಕರೆದುಕೊಂಡು ಹೋಗಪ್ಪ ಎಂದು ಕೇಳುವುದು ತಪ್ಪಿತು ಎನ್ನುವ ಚಿಂತೆ ಪತಿಯನ್ನು ಮುಕ್ತಗೊಳಿಸಿತು.
ನೋಡಿದಿರಾ? ಬೇರೆ ಬೇರೆ ದೃಷ್ಟಿಕೋನದ ಕಾರಣದಿಂದ ಒಂದೇ ಖರ್ಚು ಎಷ್ಟೊಂದು ಅರ್ಥಗಳನ್ನು ಕೊಟ್ಟಿತು ಎಂದು. ಒಬ್ಬರಿಗೆ ಒಂದು ಖರ್ಚು ವ್ಯರ್ಥ ಅನ್ನಿಸಿದರೆ, ಇನ್ನೊಬ್ಬರಿಗೆ ಅದು ಹೂಡಿಕೆ, ಮತ್ತೊಬ್ಬರಿಗೆ ಅದು ಅಗತ್ಯ, ಇನ್ನೊಬ್ಬರಿಗೆ ಅದು ನಿರಾಳತೆ.





