ಅಂದಿನ ಕಾಲದ ಮಕ್ಕಳಿಗೆ ಇರುತ್ತಿದ್ದ ಸಾಮಾಜಿಕ ಮೌಲ್ಯಗಳು ಇಂದಿನ ಕಾಲದ ಮಕ್ಕಳಿಗೆ ಇಲ್ಲವೇ ಇಲ್ಲ ಎಂದು ಹೇಳಬಹುದುಇಂಥ ವ್ಯತ್ಯಾಸ ಸರಿಪಡಿಸುವುದು ಹೇಗೆ…….?

ಇಂದು ….

ನಿವೇದಿತಾಳ ಮನೆಯಲ್ಲಿ ಬೆಳಗ್ಗೆ ಐದೂವರೆಗೆ ದಿನ ಪ್ರಾರಂಭವಾಗುತ್ತದೆ. ಅವಳ ಮಗಳಿಗೆ ಲಂಚ್‌ ಬಾಕ್ಸ್ ತಯಾರಿ ನಡೆಯುತ್ತದೆ. ಅವಳು ಏಳೂವರೆಗೆ ಹೊರಡುವುದರಿಂದ ಅವಳ ಡಬ್ಬಿಗೆ ಊಟ, ಮಧ್ಯೆ ಸ್ನಾಕ್ಸ್, ಜೊತೆಗೆ ಹಣ್ಣಿನ ರಸ, ಸ್ವಲ್ಪ ಡ್ರೈ ಫ್ರೂಟ್ಸ್ ಎಲ್ಲ ಸಿದ್ಧವಾಗುತ್ತದೆ. ಮಗಳು ಆರೂವರೆಗೆ ಏಳುತ್ತಾಳೆ, ಅವಳಿಗೆ ಸ್ವಲ್ಪ ತಿಂಡಿ ತಿನ್ನಿಸಿ ಅವಳ ಜೊತೆಯಲ್ಲಿ ಹೋಗಿ ಶಾಲೆಗೆ ಬಿಟ್ಟು ಬರುತ್ತಾಳೆ. ಮತ್ತೆ ಮೂರು ಘಂಟೆಗೆ ಅವಳನ್ನು ಶಾಲೆಯಿಂದ ವಾಪಸ್‌ ಕರೆದುಕೊಂಡು ಬಂದು ಅವಳಿಗೆ ಊಟ ಕೊಟ್ಟು, ಹೋಂವರ್ಕ್‌ ಮಾಡಲು ಹೇಳುತ್ತಾಳೆ. ನಂತರ ರಾತ್ರಿ ಊಟ ಕೊಟ್ಟು ಬೇಗ ಮಲಗಿಸುತ್ತಾಳೆ. ಬೆಳಗ್ಗೆ ಬೇಗ ಏಳಬೇಕಲ್ಲಾ…. ಒಟ್ಟಾರೆ ಅವಳ ಪೂರ್ಣ ಗಮನ ಮಗಳ ಮೇಲೆಯೇ.

ಮೊನ್ನೆ ಮಗಳ ಜೊತೆಗೆ ಟ್ಯಾಕ್ಸಿಯಲ್ಲಿ ಹೊರಗೆ ಹೊರಟಿದ್ದಾಯಿತು. ಮೊಮ್ಮಗನೂ ಜೊತೆಯಲ್ಲಿದ್ದ. ಕಾಲೇಜಿನಲ್ಲಿ ಓದುವ ಹುಡುಗ, ರಾತ್ರಿ ಸರಿಯಾಗಿ ಅವನಿಗೆ ನಿದ್ದೆ ಆಗಿರಲಿಲ್ಲ ಎಂದು ಮಗಳು ಟ್ಯಾಕ್ಸಿಯವನು ಹಾಕಿದ್ದ ಸಂಗೀತವನ್ನು ನಿಲ್ಲಿಸಲು ಹೇಳಿದಳು. ನಾನು ಮಾತನಾಡಲು ಶುರು ಮಾಡಿದರೆ ನನಗೆ ಸುಮ್ಮನಿರಲು ಹೇಳಿದಳು. ಅವನು ಸ್ವಲ್ಪ ಹೊತ್ತು ಮಲಗಲಿ ಎನ್ನುವುದು ಅವಳ ಉದ್ದೇಶ. ಈಗಿನ ತಾಯಿ ತಂದೆಯರು ಮಕ್ಕಳಿಗೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ.

IB129900-129900120857463-SM384121

ಅಂದು….

ನನಗೆ ನಮ್ಮ ಬಾಲ್ಯ ನೆನಪಿಗೆ ಬರುತ್ತದೆ. ನಮ್ಮ ಶಾಲೆ ಇದ್ದದ್ದು ಎಂಟೂವರೆ ಘಂಟೆಗೆ, ನಾವು ಎಂಟು ಘಂಟೆಗೆ ಮನೆ ಬಿಡುತ್ತಿದ್ದೆವು. ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದೆ. ಬಹಳಷ್ಟು ಬಾರಿ ಮನೆಯಲ್ಲಿ ತಿಂಡಿ ಆಗಿರುತ್ತಿರಲಿಲ್ಲ. ಕೆಲವು ಸಲ ರಾತ್ರಿಯ ಅನ್ನ ಉಳಿದಿದ್ದರೆ ಅದಕ್ಕೆ ಒಗ್ಗರಣೆ ಹಾಕಿ ಕೊಡುತ್ತಿದ್ದರು. ನನಗೆ ನೆನಪಿರುವಂತೆ ಅನೇಕ ಸಲ ನಮಗೆ ಒಬ್ಬೊಬ್ಬರಿಗೆ ಹತ್ತು ನಯಾಪೈಸೆ ಕೊಡುತ್ತಿದ್ದರು. ಅದರಲ್ಲಿ ನಾವು ನಮ್ಮ ಮನೆಯ ಹತ್ತಿರವಿದ್ದ ವಿದ್ಯಾರ್ಥಿ ಭವನದಲ್ಲಿ ಒಂದು ಇಡ್ಲಿ, ಸಾಂಬಾರ್‌ ತಿಂದು ಶಾಲೆಗೆ ಹೋಗುತ್ತಿದ್ದೆವು.

ಇಂದು….

ನನ್ನ ಮಗಳಾಗಲೀ ಅಥವಾ ಮಗನಾಗಲೀ ಮಕ್ಕಳ ಆಸೆ ಮತ್ತು ಅನುಕೂಲಗಳನ್ನು ನೋಡಿಕೊಂಡೇ ಅವರು ಹೋಗಬೇಕಾದ ಪ್ರವಾಸದ ಸ್ಥಳ ಮತ್ತು ಸಮಯವನ್ನು ನಿರ್ಧಾರ ಮಾಡುವುದು….. ಒಂದು ಚಲನಚಿತ್ರಕ್ಕೆ ಹೋಗಬೇಕೆಂದರೂ ಮಕ್ಕಳನ್ನು ಬಿಟ್ಟು ಹೋಗಲಾರರು ಅಥವಾ ಅವರಿಗೆ ಇಷ್ಟವಾದುದ್ದನ್ನೇ ಆರಿಸಿಕೊಂಡು ಅವರನ್ನೂ ಕರೆದುಕೊಂಡು ಹೋಗುತ್ತಾರೆ.

ಅಂದು…..

ನಾವು ಪ್ರವಾಸ ಹೋಗಬೇಕೆಂದರೆ ಮಕ್ಕಳನ್ನು ನಮ್ಮ ತಾಯಿಯ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದೆವು. ಈಗಲೂ ನನ್ನ ಮಗ ಅನ್ನುವುದುಂಟು, `ನೀವು ಯಾವ ಟೂರಿಗೂ ನಮ್ಮನ್ನು ಕರೆದುಕೊಂಡು ಹೋಗಿಲ್ಲ,’ ಎಂದು. ಆದರೆ ಆಗ ಪ್ರವಾಸಕ್ಕೆ ನಮ್ಮಿಬ್ಬರಿಗೆ ಹಣ ಹೊಂದಿಸುವುದು ಕಷ್ಟವಿತ್ತು. ಇನ್ನು ಮಕ್ಕಳನ್ನು ಕರೆದುಕೊಂಡು ಹೋಗುವುದು ಹೇಗೆ? ಆಗ ನಮ್ಮವರು, `ಅವರು ದೊಡ್ಡವರಾದ ಮೇಲೆ ಹೋಗುತ್ತಾರೆ ಬಿಡು,’ ಎಂದು ನಕ್ಕು ಬಿಡುತ್ತಿದ್ದರು.

ಇಂದು….

ಈಗ ಇರುವುದು ಒಂದೋ ಅಥವಾ ಎರಡು ಮಕ್ಕಳು. ಅವರ ಆಸೆ, ಬೇಕು ಬೇಡಗಳನ್ನು ಅವರು ಹೇಳುವ ಮೊದಲೇ ತಾಯಿ ತಂದೆಯರು ತೀರಿಸಿಬಿಡುತ್ತಾರೆ. ಮನೆಯ ತುಂಬಾ ಆಟದ ಸಾಮಾನುಗಳೇ… ಇಂದಿನ ಮಕ್ಕಳಿಗೆ ಯಾವುದಾದರೂ ಗಿಫ್ಟ್ ಕೊಟ್ಟರೆ ಅವರ ಕಣ್ಣು ಅರಳುವುದೇ ಇಲ್ಲ. ಇದಾ…. ನನ್ನ ಹತ್ತಿರ ಇದೆ ಎನ್ನುತ್ತಾರೆ. ಯಾವುದಕ್ಕೂ ಅವರಿಗೆ ಬೆಲೆ ಇರುವುದಿಲ್ಲ.

ಅಂದು….

ಆದರೆ ನಮ್ಮ ಬಾಲ್ಯದಲ್ಲಿ ನಾವಾಡುತ್ತಿದ್ದದ್ದು ಒಂದೇ ಒಂದು ಚಂದನದ ಗೊಂಬೆ ಜೊತೆ, ಅದೇ ನಮಗೆ ದೊಡ್ಡ ಆಸ್ತಿ. ಅಕ್ಕಪಕ್ಕದವರೆಲ್ಲಾ ಸೇರಿ ಅದರಲ್ಲಿ ಆಡುತ್ತಿದ್ದೆವು. ಆಟಕ್ಕೆ ನಮಗೇನೂ ಹಣ ಖರ್ಚು ಮಾಡಬೇಕಿರಲಿಲ್ಲ, ಮಾಡುತ್ತಿರಲೂ ಇಲ್ಲ. ನಾವಾಡುತ್ತಿದ್ದದ್ದೇ ಕುಂಟೆ ಬಿಲ್ಲೆ, ಲಗೋರಿ, ಕಂಬದ ಆಟ, ಅಳಿಗುಳಿ ಮಣೆ, ಚೌಕಾಬಾರ ಇತ್ಯಾದಿ… ಗಂಡು ಮಕ್ಕಳಾದರೆ ಚಿನ್ನಿ ದಾಂಡು, ಮರಕೋತಿ, ಗಾಳಿಪಟ, ಕಬಡ್ಡಿ ಅಥವಾ ಒಂದು ಚೆಂಡು ಹಿಡಿದು ಆಡುತ್ತಿದ್ದರು. ಬಟ್ಟೆಗಳೂ ಅಷ್ಟೇ, ಎಲ್ಲವೂ ಮಿತಿಯಲ್ಲಿ, ಒಂದೆರಡು ಹೊಸ ಬಟ್ಟೆ ಇರುತ್ತಿತ್ತು. ಎಲ್ಲಿಗೆ ಹೋದರೂ ಅದೇ ಬಟ್ಟೆಗಳು.

ಇಂದು…..

ಈಗಿನ ಮಕ್ಕಳಿಗೆ ಮನೆಯ ತುಂಬಾ ಆಟದ ಸಾಮಾನುಗಳು. ಬೀರುವಿನ ತುಂಬಾ ದುಬಾರಿ ಬಟ್ಟೆಗಳು, ಹೀಗಾಗಿ ಯಾವುದಕ್ಕೂ ಬೆಲೆಯೇ ಇಲ್ಲ. ಏಕೆಂದರೆ ಅವರ ಹತ್ತಿರ ಇಲ್ಲ ಎನ್ನುವ ವಸ್ತುಗಳೇ ವಿರಳ. ನಮಗೆ ಸಣ್ಣ ಸಣ್ಣ ವಿಷಯಗಳು ನೀಡುತ್ತಿದ್ದ ಸಂತಸದಿಂದ ಅವರು ವಂಚಿತರು. ಮಕ್ಕಳ ಆಸೆಗಳನ್ನು ತೀರಿಸುವುದು ಪ್ರತಿಯೊಬ್ಬ ತಾಯಿ ತಂದೆಯರ ಆದ್ಯತೆಯಾಗಿರುತ್ತದೆ. ಅಂತೆಯೇ ಅವರಿಗೆ ವಸ್ತುಗಳ ಮೌಲ್ಯವನ್ನು ಅರ್ಥ ಮಾಡಿಸುವುದೂ ಬಹಳ ಮುಖ್ಯ.

ಅರಿವು ಮೂಡಿದಾಗ…..

ನನ್ನ ಮೊಮ್ಮಗಳಿಗೆ ಇತ್ತೀಚೆಗೆ ಉದ್ಯೋಗ ದೊರಕಿತು. ಅವಳು ಬೆಳಗ್ಗೆ ಎಂಟು ಘಂಟೆಗೆ ಮನೆ ಬಿಡಬೇಕು. ಮಗಳು ಹೋಗುವಷ್ಟರಲ್ಲಿ ಅವಳ ತಾಯಿ ಅವಳಿಗೆ ಬೆಳಗಿನ ತಿಂಡಿ ಮಾಡಿಕೊಟ್ಟು, ಅವಳಿಗೆ ಡಬ್ಬಿಗೂ ಸಿದ್ಧಪಡಿಸಿ ಕೊಡುತ್ತಿದ್ದಳು. ಅವಳ ಸಹೋದ್ಯೋಗಿಗಳೆಲ್ಲಾ ಬೇರೆ ಊರಿನವರು, ಪಿ.ಜಿ.ಗಳಲ್ಲಿ ಇರುವವರು, ಇವಳು ಡಬ್ಬಿಯಲ್ಲಿ ತಂದ ತಿಂಡಿ ನೋಡಿದರೆ ಅವರಿಗೆ ಬಹಳ ಆಸೆ. ಇಲ್ಲಿಯವರೆಗೂ ತಾಯಿ ಮಾಡುತ್ತಿದ್ದ ಸೇವೆ ಅವಳಿಗೆ ಅಷ್ಟು ತಲೆಗೆ ಹೋಗಿರಲಿಲ್ಲ. ಅದರ ಮೌಲ್ಯದ ಅರಿವು ಆಗಿರಲಿಲ್ಲ. ಆದರೆ ಈಗ ಅವಳಿಗೆ ಸಹೋದ್ಯೋಗಿಗಳ ಕಷ್ಟವನ್ನು ನೋಡಿದಾಗ ಅರ್ಥವಾಗಿದೆ. ಆದರೆ ಅಲ್ಲಿಯವರೆಗೂ ಕಾಯುವ ಅಗತ್ಯವಿಲ್ಲ.

ನೀವೇ ಅರ್ಥ ಮಾಡಿಸಿ

ತಾಯಿ ತಂದೆಯರು ಎಷ್ಟೇ ಸಿರಿವಂತರಾದರೂ ಮಕ್ಕಳಿಗೆ ಹಣ ಮತ್ತು ಪದಾರ್ಥಗಳ ಮೌಲ್ಯ ಅರ್ಥವಾಗುವಂತೆ ಮಾಡಬೇಕು. ನಿಜಕ್ಕೂ ಅದು ಬಹಳ ಮುಖ್ಯ. ತಾಯಿ ತಂದೆಯರಿಗೆ ಯಾವಾಗಲೂ ತಮ್ಮ ಜೀವನದಲ್ಲಿ ತಾವು ಅನುಭವಿಸದ ಸುಖ ಮತ್ತು ವೈಭವಗಳನ್ನು ಮಕ್ಕಳು ಅನುಭವಿಸಲಿ ಎನ್ನುವ ಅದಮ್ಯ ಆಸೆ, ಆದರೆ ಅವರಿಗೆ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಅದರ ಮೌಲ್ಯವನ್ನೂ ಅವರಿಗೆ ಅರ್ಥ ಮಾಡಿಸುವುದು ಬಹಳ ಮುಖ್ಯ.

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ