ಸುಂದರ ತುಟಿಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಲಿಪ್‌ ಮೇಕಪ್‌ ಎಂದರೆ ಟ್ರೆಂಡ್‌ಗೆ ತಕ್ಕಂತೆ ತುಟಿಗಳಿಗೆ ಯಾವುದೋ  ಒಂದು ಲಿಪ್‌ಸ್ಟಿಕ್‌ ಹಚ್ಚಿಕೊಳ್ಳುವುದಲ್ಲ. ಬದಲಾಗಿ ಅವುಗಳ ಸೌಂದರ್ಯವರ್ಧನೆಗೆ ಕೆಲವು ಅಂಶಗಳನ್ನು ತಿಳಿದಿರುವುದು ಅವಶ್ಯಕ ಎಂದು ಸೌಂದರ್ಯ ತಜ್ಞರು ಅಭಿಪ್ರಾಯಪಡುತ್ತಾರೆ.

ಉಡುಪುಗಳ ಫ್ಯಾಷನ್‌ ಕಾಲಕಾಲಕ್ಕೆ ಬದಲಾಗುವಂತೆ ಬ್ಯೂಟಿ ಪ್ರಾಡಕ್ಟ್ ಗಳಲ್ಲಿಯೂ ಹೊಸ ಬಣ್ಣ, ಸ್ಟೈಲ್‌ ಬರುತ್ತವೆ. ಆದ್ದರಿಂದ ಫ್ಯಾಷನ್‌ಗೆ ತಕ್ಕಂತೆ ನೀವು ಅಪ್‌ಡೇಟ್‌ ಆಗಿರಲು ಬಯಸುವಿರಾದರೆ, ನ್ಯೂ ಲಿಪ್‌ಸ್ಟಿಕ್‌ ಟ್ರೆಂಡ್‌ನ್ನೇ ಅನುಸರಿಸಿ.

ಈಗ ಗ್ಲಾಸೀ ಲಿಪ್‌ಸ್ಟಿಕ್‌ಗೆ ಬದಲಾಗಿ ಮ್ಯಾಟ್‌ ಲಿಪ್‌ಸ್ಟಿಕ್‌ನ ಟ್ರೆಂಡ್‌ ಇದೆ. ಮಳೆಗಾಲದ ನಂತರ ಇರುವ ಬಿಸಿಗಾಳಿಯ ವಾತಾವರಣದ ದಿನಗಳಿಗೆ ಮ್ಯಾಟ್‌ ಫಿನಿಶ್‌ನ ಲಿಪ್‌ಸ್ಟಿಕ್‌ ಸೂಕ್ತವಾಗಿರುತ್ತದೆ. ಇದರ ವೈಶಿಷ್ಟ್ಯವೆಂದರೆ ಹ್ಯುಮಿಡಿಟಿ ಮತ್ತು ಬೆವರಿಳಿಸುವ ದಿನಗಳಲ್ಲಿ ಇದು ತುಟಿಯ ಮೇಲೆ ಹರಡಿಕೊಳ್ಳದೆ ಡೀಸೆಂಟ್‌ ಲುಕ್‌ ಒದಗಿಸುತ್ತದೆ. ಮ್ಯಾಟ್‌ ಲಿಪ್‌ಸ್ಟಿಕ್‌ನಲ್ಲಿ ಡೀಪ್‌ ರೆಡ್‌, ಚೆರಿ ರೆಡ್‌, ವೈನ್‌, ಪ್ಲಮ್, ಬರ್ಗಂಡೀ, ಕಾಪರ್‌ ರೆಡ್‌, ಡಾರ್ಕ್‌ ಬ್ರೌನ್‌, ಮೆರೂನ್‌, ಬ್ಲ್ಯಾಕಿಶ್‌ ಮೆರೂನ್‌ ಮತ್ತು ಬ್ಲ್ಯಾಕ್‌ ಕಲರ್ಸ್ ಟ್ರೆಂಡ್‌ನಲ್ಲಿವೆ.

ಮ್ಯಾಟ್‌ನ ಮೇಲ್ಮೈ

ಈ ಸೀಸನ್‌ನಲ್ಲಿ ಮ್ಯಾಟ್‌ನದೇ ಮೇಲುಗೈ ಆಗಿದೆ. ಈಚೆಗೆ ಕೆಲವು ಕಂಪನಿಗಳು ಮ್ಯಾಟ್‌ ಲಿಪ್‌ಸ್ಟಿಕ್‌ನ್ನು ಲಿಕ್ವಿಡ್‌ ಫಾರ್ಮ್ ನಲ್ಲಿಯೂ ಮಾರುಕಟ್ಟೆಗೆ ತಂದಿವೆ. ಇದು ಮ್ಯಾಟ್‌ ಲುಕ್‌ ನೀಡುವುದಲ್ಲದೆ, ತುಟಿಗಳನ್ನು ಹೈಡ್ರೇಟ್‌ ಆಗಿಸುತ್ತದೆ. ಇದರಲ್ಲಿ ನ್ಯೂಡ್‌ನಿಂದ ಡಾರ್ಕ್‌ ಟೋನ್ಸ್ ವರೆಗೆ ಲಿಪ್‌ ಕಲರ್ಸ್ ದೊರೆಯುತ್ತವೆ.

ಮ್ಯಾಕಡಾಮಿಯಾ ಆಯಿಲ್, ವಿಟಮಿನ್‌ `ಇ’ ಮತ್ತು ಆವ್ಯಾಕಾಡೊ ಬಟರ್‌ನಿಂದ ತಯಾರಾದ ಕೆಲವು ಹೈ ಕ್ವಾಲಿಟಿ ಲಿಪ್‌ಸ್ಟಿಕ್ಸ್ ನಿಮ್ಮ ತುಟಿಗಳ ಸೌಂದರ್ಯವನ್ನು ದ್ವಿಗುಣಗೊಳಿಸುತ್ತವೆ. ಇವುಗಳ ಮತ್ತೊಂದು ವಿಶೇಷತೆ ಎಂದರೆ ಇವು ಹೆಚ್ಚು ಸಮಯದವರೆಗೆ ಹಾಳಾಗುವುದಿಲ್ಲ. ಮ್ಯಾಟ್‌ ಲಿಪ್‌ಸ್ಟಿಕ್‌ ನ್ಯಾಚುರಲ್ ಆಗಿ ಕಾಣುವಂತೆ ಮಾಡುತ್ತದೆ. ತುಟಿಯ ಬಣ್ಣವೇ ಹಾಗಿರುವಂತೆ ಅದು ತೋರಿಸುತ್ತದೆ. ನೀವು ಲಿಪ್‌ಸ್ಟಿಕ್‌ ಕೊಳ್ಳುವಾಗ ಅದು ನಿಮ್ಮ ಚರ್ಮಕ್ಕೆ ಮ್ಯಾಚ್‌ ಆಗುವುದೇ ಎಂದು ನೋಡಿ ಕೊಳ್ಳಿ. ಲಿಪ್‌ಸ್ಟಿಕ್‌ನ ಬಣ್ಣ ಅಥವಾ ಲಿಪ್‌ಸ್ಟಿಕ್‌ ಚಾರ್ಟ್‌ ನೋಡಿ ಲಿಪ್‌ಸ್ಟಿಕ್‌ ಕೊಳ್ಳುವುದು ಬುದ್ಧಿವಂತಿಕೆಯಲ್ಲ. ಕೆಳ ತುಟಿಯ ಬಣ್ಣಕ್ಕಿಂತ 2 ಶೇಡ್‌ ಗಾಢ ಬಣ್ಣದ ಲಿಪ್‌ಸ್ಟಿಕ್‌ನ್ನೇ ಕೊಳ್ಳಿರಿ. ಬಣ್ಣವನ್ನು ಪರೀಕ್ಷಿಸಲು ಕೆಳತುಟಿಗೆ ಲಿಪ್‌ಸ್ಟಿಕ್‌ ಹಚ್ಚಿ ಅದನ್ನು ಮೇಲ್ತುಟಿಯೊಂದಿಗೆ ಹೋಲಿಸಿ ನೋಡಿ. ರೆಡ್‌ ಮ್ಯಾಟ್‌ ಲಿಪ್‌ಸ್ಟಿಕ್‌ ಗ್ಲಾಮರಸ್‌ ಲುಕ್‌ ನೀಡುತ್ತದೆ ನಿಜ. ಆದರೆ ಮೇಕಪ್‌ ರಹಿತವಾಗಿ ಅದನ್ನು ಹಚ್ಚಿನೋಡಿ ಅದರ ಬಣ್ಣದ ಪ್ರಭಾವವನ್ನು ಚೆಕ್‌ ಮಾಡಿ.

ನೀವು ಅಂಗಡಿಗೆ ಹೋದಾಗ ಅನೇಕ ಶೇಡ್‌ಗಳನ್ನು ಕೊಳ್ಳುವಂತಿದ್ದರೆ, ಅವುಗಳನ್ನು ಚೆಕ್‌ ಮಾಡುವಾಗ, ಒಂದು ಶೇಡ್‌ನ್ನು ಒರೆಸಿದ ನಂತರವೇ ಇನ್ನೊಂದು ಶೇಡ್‌ನ್ನು ತುಟಿಗಳಿಗೆ ಹಚ್ಚಬೇಕೆಂಬುದನ್ನು ನೆನಪಿನಲ್ಲಿಡಿ.

ಮ್ಯಾಟ್‌ ಲಿಪ್‌ಸ್ಟಿಕ್‌ ಹಚ್ಚುವ ಬಗೆ

ಮ್ಯಾಟ್‌ ಲಿಪ್‌ಸ್ಟಿಕ್‌ನಿಂದ ಒಳ್ಳೆಯ ಲುಕ್‌ ಪಡೆಯಲು ಕನ್ಸೀಲರ್‌ನ ಬಳಕೆ ಅಗತ್ಯ. ಮೊದಲು ತುಟಿಗಳಿಗೆ 1 ಅಥವಾ 2 ಕೋಟ್‌ ಕನ್ಸೀಲರ್‌ ಹಚ್ಚಿರಿ. ಇದನ್ನು ಹಚ್ಚಿದ ಮೇಲೆ ತುಟಿಗಳನ್ನು ಒಂದಕ್ಕೊಂದು ಉಜ್ಜಬೇಡಿ. ನಂತರ ಲಿಪ್‌ಲೈನರ್‌ ಹಚ್ಚಿ ತುಟಿಗಳಿಗೆ ಶೇಪ್‌ ನೀಡಿ. ಗ್ಲಾಸೀ ಲಿಪ್‌ಸ್ಟಿಕ್‌ನಂತೆ ಮ್ಯಾಟ್‌ ಲಿಪ್‌ಸ್ಟಿಕ್‌ ತುಟಿಗಳ ಮೇಲೆ ತಾನಾಗಿ ಹರಡಿಕೊಳ್ಳುವುದಿಲ್ಲ. ಆದ್ದರಿಂದ ಲಿಪ್‌ ಲೈನರ್‌ನ ಔಟ್‌ಲೈನ್‌ನಲ್ಲಿಯೇ ಇದನ್ನು ಹಚ್ಚುವುದು ಅಗತ್ಯ.

ದಪ್ಪ ತುಟಿಯುಳ್ಳವರು ಮ್ಯಾಟ್‌ ಲಿಪ್‌ಸ್ಟಿಕ್‌ ಬಳಸಿ ತಮ್ಮ ತುಟಿಗಳು ತೆಳುವಾಗಿ ಕಾಣುವಂತೆ ಮಾಡಬಹುದು. ಶ್ಯಾಮಲ ವರ್ಣದ ಮಹಿಳೆಯರಿಗೆ ಲಿಪ್‌ಸ್ಟಿಕ್‌ನ ಮ್ಯಾಟ್‌ ಶೇಡ್ಸ್ ಚೆನ್ನಾಗಿ ಕಾಣುತ್ತವೆ. ಹಗಲಿನಲ್ಲಿ ಕಾಲೇಜ್‌, ಆಫೀಸ್‌ ಅಥವಾ ಹೊರಗೆಲ್ಲಿಯಾದರೂ ಹೋಗಬೇಕಾಗಿದ್ದಲ್ಲಿ, ತಿಳಿಯಾದ ಮ್ಯಾಟ್‌ ಶೇಡ್ಸ್ ಬಳಸಿ. ಏಕೆಂದರೆ ಹಗಲಿನಲ್ಲಿ ಗಾಢ ಅಥವಾ ಹೊಳೆಯುವ ಬಣ್ಣ ಹೊಂದಿಕೆಯಾಗುವುದಿಲ್ಲ. ಮ್ಯಾಟ್‌ ಲಿಪ್‌ಸ್ಟಿಕ್‌ ಬಳಸುವಾಗ ಕೊಂಚ ಎಚ್ಚರಿಕೆ ಇರಲಿ. ಮೊದಲು ತುಟಿಗಳನ್ನು ಬೇಬಿ ಆಯಿಲ್‌ನಿಂದ ಹಗುರವಾಗಿ ಮಸಾಜ್‌ ಮಾಡಿ. ಏಕೆಂದರೆ ಮ್ಯಾಟ್‌ ಲಿಪ್‌ಸ್ಟಿಕ್‌ ತುಟಿಗಳನ್ನು ಶುಷ್ಕವಾಗಿಸುತ್ತದೆ. ಬೇಬಿ ಆಯಿಲ್‌ ಹಚ್ಚುವುದರಿಂದ ತುಟಿಗಳು ತೇವಾಂಶದಿಂದ ಕೂಡಿರುತ್ತದೆ ಮತ್ತು ಬಿರುಕುಗಳು ಕಾಣಿಸುವುದಿಲ್ಲ. ಒಡೆದ ತುಟಿಗಳಿಗೆ ಮ್ಯಾಟ್‌ ಲಿಪ್‌ಸ್ಟಿಕ್‌ ಹಚ್ಚದಿರುವುದು ಒಳ್ಳೆಯದು. ಹಾಗೇನಾದರೂ ಹಚ್ಚಬೇಕಾದರೆ ಮೊದಲು ತುಟಿಗಳನ್ನೂ ಸ್ಕ್ರಬ್‌ ಮಾಡಿ ಎಕ್ಸ್ ಫೋಲಿಯೇಟ್‌ ಮಾಡಿ ನಂತರವೇ ಹಚ್ಚಿರಿ.

– ಪಿ. ತನುಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ