ಚಳಿಗಾಲ ಪ್ರಾರಂಭವಾಯಿತೆಂದರೆ ಅದರ ದುಷ್ಪ್ರಭಾವ ಕೂದಲಿನ ಮೇಲಾಗುತ್ತದೆ. ಹೆದರಬೇಡಿ, ಚಳಿಗಾಲದಲ್ಲಿ ನಿಮ್ಮ ಕೂದಲಿನ ರಕ್ಷಣೆಗೆ ನಾವು ಕೆಲವು ಸುಲಭ ವಿಧಾನಗಳನ್ನು ಪ್ರಸ್ತುತಪಡಿಸುತ್ತೇವೆ.

ಮನೆ ಮದ್ದು

ಹೆಚ್ಚು ಹೆಚ್ಚು ನೀರು ಕುಡಿಯಿರಿ. ನೀವು ಎಷ್ಟು ಹೆಚ್ಚಾಗಿ ನೀರನ್ನು ಕುಡಿಯುವಿರೋ, ನಿಮ್ಮ ಶರೀರ ಅಷ್ಟು ಹೈಡ್ರೇಟ್‌ ಆಗಿರುವುದು.

ಒಂದು ಪಾತ್ರೆಯಲ್ಲಿ ನೀರಿಗೆ 2 ನಿಂಬೆಹಣ್ಣಿನ ರಸವನ್ನು ಸೇರಿಸಿ. ಈ ಮಿಶ್ರಣವನ್ನು ಬುರುಡುಗೆ ಹಚ್ಚಿ ಬೆರಳುಗಳಿಂದ ಮೆಲ್ಲನೆ ಮಸಾಜ್‌ ಮಾಡಿ. ಸ್ವಲ್ಪ ಹೊತ್ತಾದ ಮೇಲೆ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಇದರಿಂದ ಕೂದಲಿನ ತೇವಾಂಶ ಉಳಿದಿರುತ್ತದೆ.

ಮೊಟ್ಟೆಯ ಕೂದಲಿಗೆ ನ್ಯಾಚುರಲ್ ಕಂಡೀಶನರ್‌ನಂತಿರುತ್ತದೆ. ಆದ್ದರಿಂದ ಒಂದು ಪಾತ್ರೆಯಲ್ಲಿ 2 ಮೊಟ್ಟೆಗಳನ್ನು ಒಡೆದು ಅದಕ್ಕೆ ನಿಂಬೆರಸ ಮತ್ತು ಕೊಂಚ ಆಲಿವ್ ಆಯಿಲ್ ಸೇರಿಸಿ. ಈ ಮಿಶ್ರಣವನ್ನು ಬುರುಡೆಗೆ ಹಚ್ಚಿ. ಅದು ಒಣಗಿದ ನಂತರ ಮೈಲ್ಡ್ ಶ್ಯಾಂಪೂನಿಂದ ತೊಳೆಯಿರಿ.

ಆ್ಯಲೋವೆರಾ ಜ್ಯೂಸ್‌ ಮತ್ತು ಮೊಸರನ್ನು ಸಮಪ್ರಮಾಣದಲ್ಲಿ ಸೇರಿಸಿ ಬುರುಡೆಗೆ ಹಚ್ಚಿ. 30-40 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ 2 ಬಾರಿ ಹೀಗೆ ಮಾಡುವುದರಿಂದ ಕೂದಲಿನ ಶುಷ್ಕತೆ ಶಾಶ್ವತವಾಗಿ ನಿವಾರಣೆಯಾಗುವುದು.

ಜೊಜೋಬಾ ಆಯಿಲ್, ಆಲಿವ್‌ ಆಯಿಲ್ ಅಥವಾ ಕೊಬ್ಬರಿ ಎಣ್ಣೆಯು ಶುಷ್ಕ ಕೂದಲಿಗೆ ಒಳ್ಳೆಯದು. ಆದ್ದರಿಂದ ವಾರದಲ್ಲಿ 2 ಸಲ ಇವುಗಳಲ್ಲಿ ಯಾವುದಾದರೊಂದು ಎಣ್ಣೆಯನ್ನು ರಾತ್ರಿ ಕೂದಲಿಗೆ ಮಸಾಜ್‌ ಮಾಡಿ. ಕೂದಲಿಗೆ ಬಟ್ಟೆ ಕಟ್ಟಿ ಮಲಗಿ. ಬೆಳಗ್ಗೆ ಮೈಲ್ಡ್ ಶ್ಯಾಂಪೂನಿಂದ ತೊಳೆಯಿರಿ.

ತಜ್ಞರ ಅಭಿಪ್ರಾಯ : ಪ್ರಸಿದ್ಧ ಡರ್ಮಟಾಲಜಿಸ್ಟ್ ಡಾ. ಮಹೇಶ್‌ರ ಪ್ರಕಾರ, ವಾರದಲ್ಲಿ 2-3 ಸಲ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಬಾದಾಮಿ ಎಣ್ಣೆ ಮತ್ತು ಅವಕ್ಯಾಡೊ ಆಯಿಲ್‌ನ್ನು ಸಮ ಪ್ರಮಾಣದಲ್ಲಿ ಸೇರಿಸಿ ರಾತ್ರಿ ತಲೆಗೆ ಹಚ್ಚಿ ಹಗುರವಾಗಿ ಮಸಾಜ್‌ ಮಾಡಿ. ಬೆಳಗ್ಗೆ ಮೈಲ್ಡ್ ಶ್ಯಾಂಪೂನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲಿಗೆ ಎಲ್ಲ ಬಗೆಯ ಪೋಷಣೆಯೂ ಒಟ್ಟಿಗೆ ದೊರೆಯುತ್ತದೆ, ಎಂದು ಹೇಳುತ್ತಾರೆ.

ಡಯೆಟ್‌ನಲ್ಲಿ ಬದಲಾವಣೆ

ಕೇವಲ ಆರೈಕೆಯೇ ಅಲ್ಲದೆ, ಆಹಾರದಲ್ಲಿ ಬದಲಾವಣೆ ಮಾಡುವುದರಿಂದಲೂ ಕೂದಲಿಗೆ ಕಾಂತಿಯನ್ನು ತರಬಹುದು. ಆದ್ದರಿಂದ ನಿಮ್ಮ ಆಹಾರದಲ್ಲಿ ಈ ಅಂಶಗಳನ್ನು ಸೇರಿಸಿಕೊಳ್ಳಿ.

ಕಬ್ಬಿಣಾಂಶದ ಕೊರತೆಯಿಂದ ಶರೀರಕ್ಕೆ ಆಕ್ಸಿಜನ್‌ ಸರಬರಾಜು ಮಾಡುವ ರೆಡ್‌ ಸೆಲ್ಸ್ ಸರಿಯಾಗಿ ಕೆಲಸ ಮಾಡಲಾರವು. ಆಕ್ಸಿಜನ್‌ ಕಡಿಮೆಯಾದರೆ ಕೂದಲಿನ ಬೆಳವಣಿಗೆ ನಿಂತು ಹೋಗುವುದು. ಆದ್ದರಿಂದ ಕಬ್ಬಿಣಾಂಶದಿಂದ ಕೂಡಿದ ಆಹಾರ ಪದಾರ್ಥಗಳು ಪಾಲಕ್‌, ಬೀನ್ಸ್, ಬ್ರೋಕ್ಲಿ, ಟೊಮೇಟೊ, ಸೀಫುಡ್‌, ರೆಡ್‌ಮೀಟ್‌ ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಜಂಕ್‌ನಿಂದ ಸ್ಕಾಲ್ಪ್ನಲ್ಲಿನ ಹಾರ್ಮೋನ್‌ ಮಟ್ಟ ಸಮತೋಲನವಾಗಿದ್ದು, ಕೂದಲು ಉದುರುವಿಕೆಯು ಕಡಿಮೆಯಾಗುತ್ತದೆ. ಜಂಕ್‌ ಕೂದಲಿನ ಟಿಶ್ಶುಗಳನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿರುತ್ತದೆ. ನಿಮಗೆ ಉದ್ದ ಮತ್ತು ದಟ್ಟವಾದ ಕೂದಲು ಬೇಕಿದ್ದರೆ, ಆಹಾರದಲ್ಲಿ ಬೀನ್ಸ್, ನಟ್ಸ್, ಗೆಣಸು, ಅವಕ್ಯಾಡೊ ಮತ್ತು ಮೊಟ್ಟೆಗಳನ್ನು ಸೇರಿಸಿಕೊಳ್ಳಿ.

ಮೆಗ್ನೀಶೀಯಮ್ ಕೂದಲು ಬೆಳೆಯಲು ಸಹಾಯಕಾರಿಯಾಗಿರುತ್ತದೆ. ಅದರ ಕೊರತೆಯಾದಾಗ ಬುರುಡೆಯಲ್ಲಿ ಕ್ಯಾಲ್ಶಿಯಂ ಸಂಗ್ರಹಗೊಳ್ಳುತ್ತದೆ. ಇದರಿಂದ ತಲೆಬುರುಡೆಯ ಚರ್ಮದಲ್ಲಿ ಗಾಳಿಯಾಡಲು ಅವಕಾಶವಾಗದೆ ಕೂದಲು ಉದುರತೊಡಗುತ್ತದೆ. ಇದನ್ನು ತಡೆಯಲು ಹಸಿರು ತರಕಾರಿ, ಬಾಳೆಹಣ್ಣು, ಮೊಸರು, ನಟ್ಸ್, ಡ್ರೈ ಫ್ರೂಟ್ಸ್, ಬೇಳೆಕಾಳುಗಳು, ಮೀನು ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಪ್ರೋಟೀನ್‌ ಫೈಬರ್‌ನಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ಅದಕ್ಕಾಗಿ ಹಾಲು, ತುಪ್ಪ, ಪನೀರ್‌, ಡೇಟ್ಸ್, ಸ್ಪ್ರೌಟ್ಸ್, ಮೀನು, ಮೊಟ್ಟೆ, ಚಿಕನ್‌ ಇತ್ಯಾದಿ ಆಹಾರ ಪದಾರ್ಥಗಳನ್ನು ಸೇವಿಸಿ.

ಕೂದಲಿಗೆ ವಿಟಮಿನ್‌ಗಳು ಅತ್ಯವಶ್ಯಕ. ವಿಶೇಷವಾಗಿ ವಿಟಮಿನ್‌ ಎ ಮತ್ತು ಇ ಡ್ಯಾಮೇಜ್‌ ಹೇರ್‌ ಟಿಶ್ಶುಗಳನ್ನು ರಿಪೇರ್‌ ಮಾಡಿ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಿಂದ ಬ್ಲಡ್‌ ಸರ್ಕ್ಯುಲೇಶನ್‌ ಸರಿಯಾಗಿರುತ್ತದೆ. ಹಾಲು, ಬೆಣ್ಣೆ, ಪಾಲಕ್‌, ಗೆಣಸು, ಕ್ಯಾರೆಟ್‌, ಬ್ರೋಕ್ಲಿ, ಮೊಟ್ಟೆ ಹಳದಿ ಭಾಗ, ಇವುಗಳಿಂದ ವಿಟಮಿನ್‌ ಎ ದೊರೆಯುತ್ತದೆ. ವಿಟಮಿನ್‌ ಇಗಾಗಿ ಪಾಲಕ್‌, ಬ್ರೋಕ್ಲಿ, ಟೊಮೇಟೊ, ಪರಂಗಿ, ಅವಕ್ಯಾಡೊ, ಬಾದಾಮಿ, ಪಿಸ್ತಾ, ಮೀನು ಮುಂತಾದವನ್ನು ಸೇವಿಸಬೇಕು.

ತಜ್ಞರ ಸಲಹೆ : ಡಾ. ಮಹೇಶ್‌ರ ಪ್ರಕಾರ, ಈ ಆಹಾರ ಪದಾರ್ಥಗಳಲ್ಲದೆ ನೀವು ಬಯೋಟಿನ್‌ಯುಕ್ತ ಟ್ಯಾಬ್ಲೆಟ್ಸ್ ಸಹ ಸೇವಿಸುತ್ತಿರಬೇಕು, ಇದು ಕೂದಲಿನ ಆಂತರಿಕ ಬೆಳವಣಿಗೆಗೆ ಸಹಾಯಕ. ಇದರ ಜೊತೆಗೆ ನೀವು ಸಪ್ಲಿಮೆಂಟ್ಸ್ ಆಗಿ ಮಲ್ಟಿವಿಟಮಿನ್‌ ಟ್ಯಾಬ್ಲೆಟ್‌, ಸಹ ಸೇವಿಸಬೇಕು. ಕೂದಲಿನ ಬೆಳವಣಿಗೆಗಾಗಿ, ದೇಹದಲ್ಲಿ ಹಿಮೋಗ್ಲೋಬಿನ್‌ ಸರಿಯಾದ ಪ್ರಮಾಣದಲ್ಲಿ ಇರಬೇಕಾದುದು ಅತ್ಯಗತ್ಯ. ಹೀಗಾಗಿ ಕಬ್ಬಿಣಾಂಶ ಇರುವ ಟ್ಯಾಬ್ಲೆಟ್‌ ಸಹ ಸೇವಿಸಿ. ಇದು ದೇಹದಲ್ಲಿ ಹಿಮೋಗ್ಲೋಬಿನ್‌ ಅಂಶವನ್ನು ಹೆಚ್ಚಿಸುತ್ತದೆ.

ಡಾ. ರೀಮಾ ಹೇಳುತ್ತಾರೆ, ಒಮೇಗಾ ಮತ್ತು ಫ್ಯಾಟಿ ಆ್ಯಸಿಡ್ಸ್ ಯುಕ್ತ ಆಹಾರ ಸೇವಿಸಬೇಕು. ನಾನ್‌ವೆಜ್‌ ಬಯಸುವರು ಓಶನ್‌ ಫಿಶ್‌, ರೆಡ್‌ಮೀಟ್‌, ಮೊಟ್ಟೆ ಸೇವಿಸಬೇಕು. ಸಸ್ಯಾಹಾರಿಗಳು ಹೆಚ್ಚಾಗಿ ಅವಕ್ಯಾಡೋ, ಫ್ಲ್ಯಾಕ್ಸ್ ಸೀಡ್ಸ್, ಓಟ್ಸ್, ಹಾಲಿನ ಉತ್ಪನ್ನ ಇತ್ಯಾದಿ ಸೇವಿಸಬೇಕು. ಜೊತೆಗೆ ಗಾಢ ಬಣ್ಣಗಳಲ್ಲಿ ಲಭ್ಯವಿರುವ ಕ್ಯಾರೆಟ್‌, ಬೀಟ್‌ರೂಟ್‌, ಸೊಪ್ಪು, ಸೇಬು ಇತ್ಯಾದಿ ಪದಾರ್ಥ ಸೇವಿಸಿ.

ಪ್ರೊಫೆಶನಲ್ ಟ್ರೀಟ್‌ಮೆಂಟ್ಸ್

ಪ್ರೊಫೆಶನಲ್ ಹೇರ್‌ ಸ್ಟೈಲಿಸ್ಟ್ ಗಳ ಪ್ರಕಾರ, ಮಹಿಳೆಯರ ಕೂದಲು ಕ್ರಮೇಣ ಎಷ್ಟು ಒರಟಾಗುತ್ತದೆಂದರೆ, ಅದಕ್ಕೆ ಪ್ರೊಫೆಶನಲ್ ಟ್ರೀಟ್‌ಮೆಂಟ್ಸ್ ನೀಡಬೇಕಾಗುತ್ತದೆ. ಇದನ್ನು ಡರ್ಮಟಾಲಜಿಸ್ಟ್ ಯಾ ಪ್ರೊಫೆಶನಲ್ ಸೆಲೂನ್‌ಗಳಲ್ಲೇ ಮಾಡಿಸಬೇಕು.

ಕೆರೋಟಿನ್‌ ಟ್ರೀಟ್‌ಮೆಂಟ್‌ : ಇದು ಒಂದು ತರಹ ಪ್ರೋಟೀನ್‌ ಟ್ರೀಟ್‌ಮೆಂಟ್‌, ಇದರಲ್ಲಿ ಕೂದಲಿನ ಒಳಪದರ ಕೋಟೆಕ್ಸ್ ನ್ನು ರಿಪೇರಿ ಮಾಡಲಾಗುತ್ತದೆ. ಈ ಟ್ರೀಟ್‌ಮೆಂಟ್‌ನಿಂದ ಡ್ರೈ ಮತ್ತು ನಿರ್ಜೀವವಾದ, ಮುರಿದು ತುಂಡಾಗಿ ಉದುರುವ ಕೂದಲನ್ನು ಸರಿಪಡಿಸುತ್ತಾರೆ. ಇದರಿಂದ ಕೂದಲು ಸಶಕ್ತ ಆಗುವುದರ ಜೊತೆ ದಟ್ಟ, ಹೊಳಪನ್ನೂ ಗಳಿಸುತ್ತದೆ.

ಸಲ್ಫೇಟ್ ಟ್ರೀಟ್‌ಮೆಂಟ್‌ : ಇದೂ ಸಹ ಮೇಲಿನ ತರಹವೇ ಪ್ರೋಟೀನ್‌ ಟ್ರೀಟ್‌ಮೆಂಟ್‌ ಆಗಿದ್ದು, ಸಿಕ್ಕು ಸಿಕ್ಕಾದ ಕೂದಲನ್ನು ಬಿಡಿಸಿ ಸರಿಪಡಿಸಲು ಹೆಚ್ಚು ಉಪಯುಕ್ತ. ಯಾರಿಗೆ ದಟ್ಟ ಗುಂಗುರು ಕೂದಲಿದ್ದು, ಅದು ಡ್ರೈ ಆಗಿದೆಯೋ ಅವರಿಗೆ ಇದು ಹೆಚ್ಚು ಸೂಕ್ತ.

ತಜ್ಞರ ಅಭಿಪ್ರಾಯ : ಶುಷ್ಕ ಕೂದಲಿಗೆ 2 ಬಗೆಯ ಟ್ರೀಟ್‌ಮೆಂಟ್‌ ಲಭ್ಯವಿದೆ ಎಂದು ಡಾ. ಮಹೇಶ್‌ ಹೇಳುತ್ತಾರೆ. ಮೊದಲನೆಯದು ಲೇಸರ್‌ ಟ್ರೀಟ್‌ಮೆಂಟ್‌. ಇದರಲ್ಲಿ ಲೇಸರ್‌ ಕೋಂಬ್‌ನ ಸಹಾಯದಿಂದ ಕೂದಲಿನ ಒಳಪದರವನ್ನು ರಿಪೇರ್‌ ಮಾಡಲಾಗುತ್ತದೆ. ಎರಡನೆಯದು ಮಿಜೊ ಥೆರಪಿ. ಇದರಲ್ಲಿ ಒಂದು ರೀತಿಯ ಕ್ಯಾಡಿಕೇಟೆಡ್‌ ಮಿಶ್ರಣವನ್ನು ಸ್ಕಾಲ್ಪ್ ಗೆ ಹಚ್ಚಿ ಕೂದಲಿನ ಬುಡಕ್ಕೆ ಪ್ರೋಟೀನ್‌ನ್ನು ಒದಗಿಸಲಾಗುತ್ತದೆ. ಈ ಎರಡೂ ಟ್ರೀಟ್‌ಮೆಂಟ್‌ಗಳು ಬಹು ಉಪಯುಕ್ತವಾಗಿರುತ್ತವೆ.

ಡಾ. ರೀಮಾ ಪ್ರಕಾರ, ಶುಷ್ಕ ಮತ್ತು ನಿರ್ಜೀವ ಕೂದಲಿಗೆ 6-8 ಥೆರಪಿಯ 8-10 ಸಿಟಿಂಗ್‌ಗಳು ಬೇಕಾಗುತ್ತದೆ. ಪಿಪಿ ಥೆರಪಿಗೆ ಅಥವಾ ವ್ಯಾಂಪೈರ್‌ ಥೆರಪಿಯೂ ಸಹ ಬಹಳ ಉಪಯುಕ್ತವಾಗಿದ್ದು, ಇದರಲ್ಲಿ ಶರೀರದಿಂದ ರಕ್ತವನ್ನು ತೆಗೆದು ಅದನ್ನು ಸ್ಕಾಲ್ಪ್ ಗೆ ಇಂಜೆಕ್ಟ್ ಮಾಡಲಾಗುತ್ತದೆ.

ಅಗತ್ಯವಾದ ಪ್ರಾಡಕ್ಟ್ಸ್ : ಹೇರ್‌ ಸ್ಟೈಲಿಸ್ಟ್ ರಶ್ಮಿಕಾ ಹೀಗೆ ಹೇಳುತ್ತಾರೆ, ಕೆಲವು ಮಹಿಳೆಯರು ತಪ್ಪು ಪ್ರಾಡಕ್ಟ್ಸ್ ಬಳಸಿ ತಮ್ಮ ಸ್ಕಾಲ್ಪ್ ಡ್ಯಾಮೇಜ್‌ ಮಾಡಿಕೊಳ್ಳುತ್ತಾರೆ. ಆದ್ದರಿಂದ ಕೂದಲು ಹಾಳಾಗದಂತಹ ಪ್ರಾಡಕ್ಟ್ಸ್ ನ್ನೇ ಬಳಸಬೇಕು.

ಬೋರ್‌ ಬ್ರಿಸ್ಟ್‌ ಬ್ರಶ್‌ : ಇದು ಕೂದಲಿನಿಂದ ಹೊರಬಿದ್ದ ನ್ಯಾಚುರಲ್ ಆಯಿಲ್‌ನ್ನು ಸ್ಕಾಲ್ಪ್ ನಲ್ಲಿ ಚೆನ್ನಾಗಿ ಹರಡುವಂತೆ ಮಾಡುತ್ತದೆ. ಇದರಿಂದ ಕೂದಲಿನ ಫ್ರಿಂಜ್‌ನೆಸ್‌ ಕಡಿಮೆಯಾಗಿ ಸ್ಕಾಲ್ಪ್ ನಲ್ಲಿನ ಬ್ಲಡ್‌ ಸರ್ಕ್ಯುಲೇಶನ್‌ ಹೆಚ್ಚುತ್ತದೆ.

ಹೀಟ್‌ ಪ್ರೊಟೆಕ್ಟಿಂಗ್‌ ಸ್ಪ್ರೇ : ಸ್ಟೈಲಿಂಗ್‌ ಟ್ಸೂಲ್ಸ್ ‌ನ್ನು ನೀವು ಹೆಚ್ಚಾಗಿ ಬಳಸುವಿರಾದರೆ, ನಿಮಗೆ ಈ ಪ್ರಾಡಕ್ಟ್ ನ ಅಗತ್ಯ ಇರುತ್ತದೆ. ಹೇರ್‌ ಸ್ಟ್ರೇಟನರ್‌ ಅಥವಾ ಡ್ರೈಯರ್‌ ಬಳಸುವ ಮೊದಲು ನೀವು ಹೀಟ್‌ ಪ್ರೊಟೆಕ್ಟಿಂಗ್‌ ಸ್ಪ್ರೇ ಹಚ್ಚಬೇಕು. ಕೂದಲಿನ ಮೇಲೆ ಇದರ ಒಂದು ಕೋಟ್‌ ಇರುವುದರಿಂದ ಕೂದಲು ಡ್ಯಾಮೇಜ್‌ ಆಗುವುದಿಲ್ಲ.

ಲಿವ್‌ ಇನ್‌ ಕಂಡೀಶನರ್‌ : ಇದರ ಬಳಕೆಯಿಂದ ಕೂದಲು ದೀರ್ಘಕಾಲ ಕೋಮಲವಾಗಿ ಉಳಿದಿರುತ್ತದೆ ಮತ್ತು ಅದನ್ನು ಮ್ಯಾನೇಜ್‌ ಮಾಡುವುದು ಸಹ ಸುಲಭವಾಗುತ್ತದೆ. ಕೂದಲನ್ನು ತೊಳೆದ ನಂತರ ಇದನ್ನು ಕೂದಲಿಗೆ ಅದರ ಬುಡದವರೆಗೂ ಹಚ್ಚಿರಿ ಮತ್ತು ಅದನ್ನು ಹಾಗೇ ಬಿಡಿ. ಏಕೆಂದರೆ ಅದನ್ನು ತೊಳೆಯುವ ಅವಶ್ಯಕತೆ ಇಲ್ಲ.

ತಜ್ಞರ ಅಭಿಪ್ರಾಯ : ಡಾ. ಮಹೇಶ್‌ ಪ್ರಕಾರ, ಕೂದಲಿಗೆ ಕಡಿಮೆ ಇನ್‌ಗ್ರೀಡಿಯಂಟ್ಸ್ ಉಳ್ಳ ಶ್ಯಾಂಪೂ ಬಳಸಬೇಕು. ಅದು ಅತ್ಯಂತ ಮೈಲ್ಡ್ ಆಗಿದ್ದು, ಸೋಪ್‌ ಫ್ರೀ ಆಗಿದ್ದರೆ ಕೂದಲಿಗೆ ಉತ್ತಮವಾಗಿರುತ್ತದೆ. ಕೂದಲಿನಲ್ಲಿ ಹೊಟ್ಟು ಇದ್ದರೆ, ಸೋಪ್‌ನಿಂದ ಕೂಡಿದ ಶ್ಯಾಂಪೂ ಒಳ್ಳೆಯದು.

ಡಾ. ರಶ್ಮಿಕಾ ಹೇಳುತ್ತಾರೆ, “ಉದ್ಯೋಗಕ್ಕಾಗಿ ಹೊರಗೆ ಹೋಗುವ ಮಹಿಳೆಯರು ನಿತ್ಯ ಶ್ಯಾಂಪೂ ಬಳಸಬೇಕಾಗುತ್ತದೆ. ಕೂದಲು ಹಾಳಾಗದಿರಬೇಕೆಂದರೆ ಸಲ್ಫೇಟ್‌ ಫ್ರೀ ಮೆಡಿಕೇಟೆಡ್‌ ಶ್ಯಾಂಪೂ ಬಳಸಬೇಕು.

– ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ