– ಸ್ವಾತಿ ಅನಿಲ್

ಜೀವವಿಮಾ ಪಾಲಿಸಿ ಅಸಲಿಗೆ ವಿಮಾ ಕಂಪನಿ ಮತ್ತು ವಿಮಾದಾರರ ನಡುವಿನ ಒಂದು ಅನುಬಂಧವಾಗಿದೆ. ಅದರಲ್ಲಿ ವಿಮಾದಾರ ಕಟ್ಟುವ ಪ್ರೀಮಿಯಂಗೆ ವಿಮಾ ಕಂಪನಿ ವಿಮಾದಾರರ ಸಾವಿನ ನಂತರ ಅಥವಾ ನಿಗದಿತ ಸಮಯದ ನಂತರ ಬೆನಿಫಿಟ್ಸ್ ಎಂದು ಹೇಳಲಾಗುವ ನಿಶ್ಚಿತ ಮೊಬಲಗನ್ನು ಕೊಡುವ ಭರವಸೆ ನೀಡುತ್ತದೆ.

ಜೀವವಿಮೆಯ ಅಗತ್ಯ ತಿಳಿದ ನಂತರ ಜನರಿಗೆ ಸರಿಯಾದ ಪ್ಲ್ಯಾನ್‌ ಆರಿಸಿಕೊಳ್ಳಲು ಯಾವಾಗಲೂ ತೊಂದರೆಯಾಗುತ್ತದೆ. ಇದು ಪರ್ಸನಲ್ ಫೈನಾನ್ಸ್ ನ ವಿಷಯವಾಗಿದ್ದು, ಬಹಳಷ್ಟು ಜನ ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಜೀವವಿಮಾ ಪಾಲಿಸಿ ವಿಮಾದಾರನ ಅಗತ್ಯ ಮತ್ತು ಉಳಿತಾಯದ ಸಾಮರ್ಥ್ಯದ ಆಧಾರದ ಮೇಲೆ ಖರೀದಿಸಲಾಗುತ್ತದೆ. ಜೀವವಿಮಾ ಪ್ಲ್ಯಾನ್‌ ನಿಮ್ಮ ಪ್ರೀತಿಪಾತ್ರರಿಗೆ ಆರ್ಥಿಕ ಸ್ವಾತಂತ್ರ್ಯ ಕೊಟ್ಟು ಅವರನ್ನು ಸುರಕ್ಷಿತವಾಗಿಡಲು ಪಡೆಯಲಾಗುತ್ತದೆ. ಅದನ್ನು ಖರೀದಿಸುವ ಮೊದಲು ನೀವು ಹೆಚ್ಚು ಎಚ್ಚರಿಕೆಯಿಂದಿರಬೇಕು. ನೀವು ಮುಂದಿನ ಬಾರಿ ಜೀವವಿಮೆ ಖರೀದಿಸುವಾಗ ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ಗಮನಿಸಿ.

ಏನು ಮಾಡಬೇಕು?

ತಜ್ಞರಿಂದ ಹಾಗೂ ಬೇರೆ ಬೇರೆ ಮೂಲಗಳಿಂದ ಸಲಹೆ ಪಡೆಯಿರಿ. ಪ್ರತಿ ಸಲಹೆಯ ಬಗ್ಗೆ ಚೆನ್ನಾಗಿ ವಿಚಾರ ಮಾಡಿ. ಇದನ್ನು ಆಧರಿಸಿ ನಿಮ್ಮ ಅಗತ್ಯಗಳ ಬಗ್ಗೆ ಆಲೋಚಿಸಿ. ಸಂಖ್ಯೆಗಳ ಮೂಲಕ ಇದರ ಪ್ರಮಾಣ ನಿರ್ಧರಿಸುವುದಾದರೆ ಹಾಗೇ ಮಾಡಿ. ನಿಮ್ಮ ಕುಟುಂಬದಲ್ಲಿ 4 ಸದಸ್ಯರಿದ್ದು, ನೀವಿಲ್ಲದೇ ಮನೆ ನಡೆಸಲು ಅವರಿಗೆ ಎಷ್ಟು ಹಣದ ಅಗತ್ಯವಿದೆ? ನೀವು ಕುಟುಂಬದಲ್ಲಿ ಪ್ರಮುಖವಾಗಿ ಸಂಪಾದಿಸುವವರಾಗಿದ್ದು, ನಿಮ್ಮ ನಂತರ ನಿಮ್ಮ ಮಕ್ಕಳ ಸ್ಕೂಲ್‌ಫೀಸ್‌, ಕಾಲೇಜ್‌ ಫೀಸ್‌ ಮತ್ತು ಇತರ ಖರ್ಚುಗಳನ್ನು ನಿಭಾಯಿಸಲು ಕನಿಷ್ಠ ಎಷ್ಟು ಹಣ ನಿಯಮಿತವಾಗಿ ಅಗತ್ಯವಿದೆ? ಅದರಲ್ಲಿ ನಿಮ್ಮ ಎಲ್ಲ ಸಾಲ, ಕಟ್ಟಬೇಕಾದ ಪ್ರೀಮಿಯಂಗಳು, ಕ್ರೆಡಿಟ್‌ ಕಾರ್ಡ್‌ನ ಬಾಕಿ ಇತ್ಯಾದಿ ಎಲ್ಲವನ್ನೂ ಸೇರಿಸಿ.

ಜೀವವಿಮೆ ನಿಮ್ಮ ಕುಟುಂಬಕ್ಕೆ ಆರ್ಥಿಕ ಸುರಕ್ಷತೆ ಕೊಡುವ ಮಾರ್ಗವಾಗಿದೆ. ಇದನ್ನು ಬರೀ ಟ್ಯಾಕ್ಸ್ ಉಳಿಸುವ ಮಾಧ್ಯಮವೆಂದು ತಿಳಿಯಬೇಡಿ. ನಿಮ್ಮ ಕುಟುಂಬದವರು ವಿಶೇಷವಾಗಿ ಸಂಗಾತಿ/ನಾಮಿನಿಗೆ ಪಾಲಿಸಿಯ ಬಗ್ಗೆ ಅಗತ್ಯವಾಗಿ ತಿಳಿಸಿ. ಏನಾದರೂ ದುರ್ಘಟನೆಯಾದರೆ ಕ್ಲೇಮ್ ಪಡೆಯಲು ಏನು ಮಾಡಬೇಕೆಂದು ತಿಳಿಸಿ. ನಾವೆಲ್ಲರೂ ದುರ್ಘಟನೆಯ ಬಗ್ಗೆ ಮಾತಾಡುವುದಿಲ್ಲ. ನಿಮ್ಮ ಮನೆಯವರಿಗೆ ನಿಮ್ಮ ನಂತರ ಮಾಡಿದ ಸುರಕ್ಷಾ ಕವಚದ ಬಗ್ಗೆ ತಿಳಿಯಪಡಿಸಿದಾಗ ನಿಮ್ಮ ಕಾಮನ್‌ಸೆನ್ಸ್ ಮತ್ತು ತಿಳಿವಳಿಕೆಯ ಬಗ್ಗೆ ಗೊತ್ತಾಗುತ್ತದೆ.

ನಿಮ್ಮ ಪಾಲಿಸಿಯ ಬಗ್ಗೆ ನಿಯಮಿತವಾಗಿ ಅಧ್ಯಯನ ಮಾಡಿ. ಪರಿಸ್ಥಿತಿಗಳು ಮತ್ತು ಅಗತ್ಯಗಳಲ್ಲಿ ಬದಲಾಣೆಗಳಾದರೆ ಸುಧಾರಣೆ ಮಾಡಿಕೊಳ್ಳಿ. ಉದಾಹರಣೆಗೆ ನಿಮ್ಮ ಮದುವೆಯಾದರೆ, ನಿಮ್ಮ ಮನೆಯಲ್ಲಿ ಮುದ್ದು ಮಗು ಬಂದರೆ ನಿಮ್ಮ ಖರ್ಚು ಅಥವಾ ಸಾಲದಲ್ಲಿ ಹೆಚ್ಚಳವಾಗುತ್ತದೆ ಅಥವಾ ನಿಮ್ಮ ನೌಕರಿ ಬದಲಾದರೆ ಆಗ ನಿಮ್ಮ ಪಾಲಿಸಿ ವಿವೇಚನೆಗೆ ನಿಮ್ಮ ಆರ್ಥಿಕ ಸಲಹೆಗಾರರ ಸಹಾಯ ಪಡೆಯಬಹುದು.

ಏನು ಮಾಡಬಾರದು?

ಹಣ ಉಳಿಸಲೆಂದು ಅಗತ್ಯಕ್ಕಿಂತ ಕಡಿಮೆ ಕವರ್‌ ಮಾಡಬೇಡಿ. ನಿಮ್ಮ ಪ್ರೀಮಿಯಂ ಖರ್ಚು ಹೆಚ್ಚು ಅನ್ನಿಸಿದರೆ ಕವರ್‌ ಕಡಿಮೆ ಮಾಡುವ ಬದಲು ಕಡಿಮೆ ಅವಧಿಯ ಪ್ಲ್ಯಾನ್‌ ತೆಗೆದುಕೊಳ್ಳಿ.

ಪ್ರಪೋಸ್‌ ಫಾರಂನಲ್ಲಿ ಯಾವುದೇ ಕಾಲಂ ಖಾಲಿ ಬಿಡಬೇಡಿ. ಬೇರೆ ಯಾರಿಂದಲೂ ನಿಮ್ಮ ಫಾರಂ ಭರ್ತಿ ಮಾಡಿಸಬೇಡಿ.

ನಿಮ್ಮ ಪ್ರೀಮಿಯಂ ಕಟ್ಟಲು ಮರೆಯಬೇಡಿ, ವಿಳಂಬ ಮಾಡಬೇಡಿ. ಏಕೆಂದರೆ ಲ್ಯಾಪ್ಸ್ ಅವಧಿಯಲ್ಲಿ ಪಾಲಿಸಿ ಕವರ್‌ ಆಗುವುದಿಲ್ಲ. ಕ್ಲೇಮೂ ಸಿಗುವುದಿಲ್ಲ.

ಪಾಲಿಸಿ ತೆಗೆದುಕೊಳ್ಳುವಾಗ ಯಾವುದೇ ಸತ್ಯ ಮುಚ್ಚಿಡಬೇಡಿ. ಯಾವುದೇ ತಪ್ಪು ಮಾಹಿತಿ ಕೊಡಬೇಡಿ. ಏಕೆಂದರೆ ಅದರಿಂದ ಕ್ಲೇಮ್ ಸಮಯದಲ್ಲಿ ವಿವಾದ ಉಂಟಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ