ಪ್ರತಿಭೆಯ ವಾತಾರಣದ ನಡುವೆ ಹುಟ್ಟಿ ಬೆಳೆದ ಕನ್ನಡದ ಅಪ್ಪಟ ಹೊಸ ಪ್ರತಿಭೆ ನಟಿ ರಾಗಿಣಿ ಪ್ರಜ್ವಲ್ ಬಾಲ್ಯದಿಂದಲೇ ತುಸು ವಿಭಿನ್ನವಾದ, ಛಾಲೆಂಜಿಂಗ್ ಕೆಲಸ ಮಾಡಿ ತೋರಿಸಬೇಕೆನ್ನುವ ಹುಮ್ಮಸ್ಸು ಬಹಳ ಇತ್ತು. ಇದಕ್ಕೆ ಅವಳ ತಾಯಿತಂದೆ ಮೊದಲಿನಿಂದ ಪ್ರೋತ್ಸಾಹದ ಶ್ರೀರಕ್ಷೆ ಇತ್ತರು.
ಮದುವೆಯಾದ ಬಳಿಕ ಪತಿ ಪ್ರಜ್ವಲ್ ದೇವರಾಜ್ ಸಹ ಅಷ್ಟೇ ಸಹಕಾರ ನೀಡುತ್ತಿದ್ದಾರೆ. ಪ್ರಜ್ವಲ್ ತಂದೆ ದಶಕಗಳಾಚೆಯ ಪಳಗಿದ ಅನುಭವೀ ರಂಗನಟ, ಕನ್ನಡ ಚಿತ್ರರಂಗದ ಅಪೂರ್ವ ವಿಲನ್, ನಂತರ ಹೀರೋ ಆದರು. ತಾಯಿ ಚಂದ್ರಲೇಖಾ, ಪ್ರಜ್ವಲ್ ತಮ್ಮ ಪ್ರಣವ್ ಸಹ ಸಿನಿಮಾ ನಟರು.
ವಿನಮ್ರ ಸ್ವಭಾವದ ರಾಗಿಣಿ, ಮೃದುಭಾಷಿ ಹಾಗೂ ಸ್ಪಷ್ಟ ಕನ್ನಡ ಉಚ್ಚಾರಣೆಗೆ ಹೆಸರಾದವಳು. ರಾಗಿಣಿ ಶಾಸ್ತ್ರೀಯ ಕಥಕ್ ಡ್ಯಾನ್ಸರ್ ಮಾಡೆಲ್. ಕಳೆದ ಜುಲೈ ಕೊನೆಯಲ್ಲಿ ಈಕೆಯ ಮೊದಲ `ಲಾ' ಕನ್ನಡ ಚಿತ್ರ, ಓಟಿಟಿ ಮುಖಾಂತರ ಅಮೆಝಾನ್ ಪ್ರೈಮ್ನಲ್ಲಿ ಬಿಡುಗಡೆಗೊಂಡು ಅಪಾರ ಮೆಚ್ಚುಗೆ ಗಳಿಸಿದೆ. ನೇರ ಬೆಳ್ಳಿತೆರೆಯಲ್ಲಿ ಮೊದಲ ಚಿತ್ರ ರಿಲೀಸ್ ಆಗಲಿಲ್ಲವಲ್ಲ ಎಂಬ ಸಣ್ಣ ಕೊರಗು ಅವಳಿಗೆ ಇದ್ದೇ ಇದೆ. ಆದರೆ ಈ ಪ್ಲಾಟ್‌ಫಾರ್ಮ್ ಮೂಲಕ ಆಕೆ ಅತಿ ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಾಧ್ಯ ಎಂಬುದಂತೂ ನಿಜ, ಈ ಖುಷಿ ಅವಳಿಗಿದ್ದೇ ಇದೆ. ಆಕೆ ಜೊತೆ ನಡೆಸಲಾದ ಸಂದರ್ಶನದ ಆಯ್ದ ಭಾಗ :
ಈ ಚಿತ್ರ ಒಪ್ಪಿಕೊಳ್ಳಲು ಮುಖ್ಯ ಕಾರಣವೇನು? ಇಷ್ಟು ಉತ್ಸಾಹದಿಂದ ಏನೇನು ತಯಾರಿ ನಡೆಸಿದಿ?
ಮೊದಲಿನಿಂದಲೂ ನಟನೆ ನನ್ನ ಮೊದಲ ಆಯ್ಕೆ ಆಗಿರಲಿಲ್ಲ. ಶಾಸ್ತ್ರೀಯ ನೃತ್ಯಕ್ಕೆ ನನ್ನ ಮೊದಲ ಆದ್ಯತೆ! ಬೆಂಗಳೂರಿನಲ್ಲಿ ನಾನು ಒಂದು ಡ್ಯಾನ್ಸ್ ಫಿಟ್‌ನೆಸ್ ಸ್ಟುಡಿಯೋ ನಡೆಸುತ್ತಿದ್ದೇನೆ. ನನಗೆ ಅದೇ ಮೊದಲ ಪ್ರಯಾರಿಟಿ, ಏಕೆಂದರೆ ನಾನೊಬ್ಬ ಕ್ಲಾಸಿಕ್ ಡ್ಯಾನ್ಸರ್. ಈ ಚಿತ್ರಕ್ಕಾಗಿ ನಿರ್ದೇಶಕ ರಘು ಸಮರ್ಥ್ ನಮ್ಮ ಮನೆಗೆ ಬಂದು ನನ್ನ ಪತಿ ಪ್ರಜ್ವಲ್ ಜೊತೆ ಸ್ಕ್ರಿಪ್ಟ್ ಕುರಿತು ಚರ್ಚಿಸಿದರು. ಅವರಿಗೆ ಅದು ಬಹಳ ಇಷ್ಟವಾಗಿ ನಾನು ಅದರಲ್ಲಿ ನಟಿಸಬೇಕೆಂದು ಪ್ರೋತ್ಸಾಹಿಸಿದರು. ನಾನೂ ಆ ಸ್ಕ್ರಿಪ್ಟ್ ಓದಿ ಇಷ್ಟಪಟ್ಟೇ ಈ ಪಾತ್ರ ಒಪ್ಪಿಕೊಂಡೆ. ಇದು ನನ್ನ ಮೊದಲ ಚಿತ್ರ. ಇಲ್ಲಿ ಹಿರಿಯ ಕಲಾವಿದರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ! ಇದಕ್ಕಾಗಿ ನಾನು ಬಹಳ ಪರಿಶ್ರಮಪಟ್ಟು ತಯಾರಿ ನಡೆಸಿದ್ದೇನೆ. ಹಲವು ವರ್ಕ್‌ಶಾಪ್ ಅಟೆಂಡ್ ಮಾಡಿ, ಕೋರ್ಟ್‌ಗೆ ಹೋಗಿಬಂದು, ನಂತರ ಆ ದೃಶ್ಯಗಳಲ್ಲಿ ನಟಿಸಿದೆ. ಆನಂತರ ಎಲ್ಲಾ ಬಹಳ ಚೆನ್ನಾಗಿ ಮೂಡಿಬಂತು.
ಇದರಲ್ಲಿ ನಿನ್ನ ಪಾತ್ರವೇನು? ಇದನ್ನು ನಿನಗೆ ಹೇಗೆ ರಿಲೇಟ್ ಮಾಡಿಕೊಳ್ಳುವೆ?
ನಾನು ಈ ಚಿತ್ರದಲ್ಲಿ ನಂದಿನಿಯ ಪಾತ್ರ ವಹಿಸಿದ್ದೇನೆ. ಅವಳು ಲಾ ಗ್ರಾಜುಯೇಟ್ ಹಾಗೂ ಸಶಕ್ತ ಮನೋಬಲದ ಹುಡುಗಿ. ಅವಳು ಸತ್ಯ ಹೇಳಲು ಹೆದರುವುದಿಲ್ಲ. ಅವಳು ಸಮಾಜ ಯಾವ ಅಕ್ಕಪಕ್ಕದವರೊಂದಿಗೆ ದಿಟ್ಟವಾಗಿ ವ್ಯವಹರಿಸಲು ಎಂದೂ ಹಿಂಜರಿಯುವಳಲ್ಲ. ಅವಳಿಗೆ ದುರಾಸೆ ಇಲ್ಲ. ಈ ಪಾತ್ರಕ್ಕೂ ನನ್ನ ಸ್ವಭಾಕ್ಕೂ ಬಹಳ ನಿಕಟತೆ ಇದೆ. ಏಕೆಂದರೆ ನಿಜ ಜೀವನದಲ್ಲಿ ನಾನು ಡಿಪ್ಲೊಮ್ಯಾಟಿಕ್ ಅಲ್ಲ ಖಂಡಿತವಾದಿ! ಹಾಗಾಗಿ ಲೋಕವಿರೋಧಿ ಎಂದೂ ಆಗ್ತೀನಿ, ಏಕೆಂದರೆ ಕಂಡದ್ದನ್ನು ಕಂಡಂತೆ ಹೇಳಿಬಿಡುವುದೇ ನನ್ನ ಗುಣ. ಈ ಚಿತ್ರದಲ್ಲಿ ನಂದಿನಿ ಸಹ ಅದೇ ರೀತಿ ಸತ್ಯದ ಸಂಗತಿ ಹೊರಗೆಳೆದು ಅಪರಾಧಿಗೆ ಶಿಕ್ಷೆ ಕೊಡಿಸುತ್ತಾಳೆ, ಹೀಗಾಗಿ ನನ್ನನ್ನೇ ಹೋಲುವ ಆ ಪಾತ್ರದಲ್ಲಿ ಸಹಜವಾಗಿ ಪರಕಾಯ ಪ್ರವೇಶ ಮಾಡಿದೆ!