- ರಾಘವೇಂದ್ರ ಅಡಿಗ ಎಚ್ಚೆನ್.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುಗ್ಧ ನಟನೆಯಿಂದ ಮನೆಮಾತಾಗಿದ್ದ ಇಡೀ ಕರುನಾಡನ್ನು ನಗಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ‘ಲಕ್ಷ್ಮೀ ಅಜ್ಜಿ’ (92) ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ ಎಂಬ ಕಹಿ ಸುದ್ದಿ ಹೊರಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿಯ ನಿವಾಸಿಯಾದ ಲಕ್ಷ್ಮೀ ಮಾಸ್ತಪ್ಪ ನಾಯ್ಕ್ (92), ದೇಶದ ಅತ್ಯಂತ ಹಿರಿಯ ‘ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸರ್’ ಎಂದೇ ಖ್ಯಾತಿ ಪಡೆದಿದ್ದರು. ಜೀ ಕನ್ನಡದ ‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ಸೂರಜ್ ಆಚಾರಿ ಅವರ ಮುತ್ತಜ್ಜಿಯಾದ ಲಕ್ಷ್ಮೀ ಅಜ್ಜಿ, ಮರಿಮೊಮ್ಮಗನ ಜೊತೆ ಸೇರಿ ಮಾಡುತ್ತಿದ್ದ ರೀಲ್ಸ್‌ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗುತ್ತಿದ್ದವು.
ಬಾಲ್ಯದಿಂದಲೂ ನಾಟಕ ಮತ್ತು ಹಾಡುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದ ಅಜ್ಜಿಗೆ, ಬಣ್ಣ ಹಚ್ಚುವ ಅವಕಾಶ ಸಿಕ್ಕಿದ್ದು ಮಾತ್ರ ತಮ್ಮ 90ನೇ ವಯಸ್ಸಿನಲ್ಲಿ! ಕಣ್ಣು ಮಂಜಾಗಿದ್ದರೂ, ಕಿವಿ ಸರಿಯಾಗಿ ಕೇಳಿಸದಿದ್ದರೂ ಮರಿಮೊಮ್ಮಗ ಸೂರಜ್ ಹೇಳಿಕೊಟ್ಟ ಡೈಲಾಗ್‌ಗಳನ್ನು ಅತ್ಯಂತ ನೈಜವಾಗಿ ಮತ್ತು ಮುಗ್ಧವಾಗಿ ನಟಿಸುತ್ತಿದ್ದರು. ಅಜ್ಜಿಯ ಅಭಿನಯ ಎಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತು ಎಂದರೆ ದೊಡ್ಡ ದೊಡ್ಡ ನಟರೇ ಅಜ್ಜಿಯ ಪ್ರತಿಭೆಗೆ ಶರಣಾಗಿದ್ದರು.

ಸೂರಜ್ ಆಚಾರಿ ಅವರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಜ್ಜಿ ಇಲ್ಲದ ವಿಡಿಯೋ ಅಪ್‌ಲೋಡ್ ಆದರೆ, ನಮ್ಮ ಅಜ್ಜಿ ಎಲ್ಲಿ? ಅಜ್ಜಿ ಯಾಕೆ ವಿಡಿಯೋದಲ್ಲಿಲ್ಲ? ಎಂದು ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆ ಮಾಡುತ್ತಿದ್ದರು. ಅಷ್ಟರಮಟ್ಟಿಗೆ ಈ ಅಜ್ಜಿ ಕನ್ನಡಿಗರ ಮನೆಯ ಹಿರಿಯ ಜೀವದಂತೆ ಆಪ್ತರಾಗಿದ್ದರು. ಇನ್ಸ್ಟ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆಯುತ್ತಿದ್ದ ಅಜ್ಜಿಯ ವಿಡಿಯೋಗಳು ಅನೇಕರಿಗೆ ಒತ್ತಡದ ಸಮಯದಲ್ಲಿ ನಗು ನೀಡುತ್ತಿದ್ದವು.
ಅಜ್ಜಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ನಮ್ಮನ್ನು ನಗಿಸುತ್ತಿದ್ದ ಮುಗ್ಧ ಜೀವ ಇನ್ನು ನೆನಪು ಮಾತ್ರ, ನಿಮ್ಮ ಜೀವನೋತ್ಸಾಹ ನಮಗೆಲ್ಲ ಸ್ಫೂರ್ತಿ ಅಜ್ಜಿ ಎಂದು ನೆಟ್ಟಿಗರು ಭಾವಪೂರ್ಣವಾಗಿ ವಿದಾಯ ಹೇಳುತ್ತಿದ್ದಾರೆ. ಅಜ್ಜಿಯ ಅಗಲಿಕೆಯಿಂದ ಸೂರಜ್ ಕುಟುಂಬ ಮತ್ತು ಅವರ ಲಕ್ಷಾಂತರ ಅಭಿಮಾನಿ ವರ್ಗ ಶೋಕ ಸಾಗರದಲ್ಲಿ ಮುಳುಗಿದೆ. ತಮ್ಮ 92ನೇ ವಯಸ್ಸಿನಲ್ಲೂ ಯುವಜನತೆಗೆ ಮಾದರಿಯಾಗಿ ಬದುಕಿದ ಲಕ್ಷ್ಮೀ ಅಜ್ಜಿ, ಕನ್ನಡಿಗರ ಮನಸ್ಸಿನಲ್ಲಿ ಎಂದೆಂದಿಗೂ ಅಮರ.





