– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಸಿಟ್ಟಿಗೆದ್ದಿದ್ದಾರೆ. ಒಳ್ಳೆಯ ಸಿನಿಮಾಗಳು ಬರುತ್ತಿದ್ದರೂ ಪ್ರೇಕ್ಷಕರು ಥಿಯೇಟರ್‌ಗೆ ಬರದೇ, ಮೊಬೈಲ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ ಎಂಬ ಬೇಸರವನ್ನು ಅವರು ವ್ಯಕ್ತಪಡಿಸಿದ್ದಾರೆ.
“ಒಬ್ಬ ಪ್ರೇಕ್ಷಕ 100 ರೂಪಾಯಿ ಕೊಟ್ಟು ಸಿನಿಮಾ ನೋಡೋಕೆ ಆಗೋದಿಲ್ವಾ? ಒಂದು ನೂರು ರೂಪಾಯಿ ಸಿನಿಮಾಗೋಸ್ಕರ ಕಳೆಯೋಕೆ ಆಗೋದಿಲ್ವಾ? ಚೆನ್ನಾಗಿಲ್ಲ ಅಂದ್ರೆ ಏನೂ ಹೋಗೋದಿಲ್ಲ. 100 ರೂಪಾಯಿ ಮಾತ್ರ ಹೋಗುತ್ತದೆ. ಅದರಿಂದ ನಿಮ್ದೇನೂ ಗಂಟು ಹೋಗೋದಿಲ್ಲ” ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.

ಈ ಮಾತುಗಳನ್ನು ಅವರು ದಿ ರೈಸ್ ಆಫ್ ಅಶೋಕ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ನೀನಾಸಂ ಸತೀಶ್ ಉಪಸ್ಥಿತರಿದ್ದರು.
“ಎಲ್ಲರೂ ಮೊಬೈಲ್‌ನಲ್ಲಿ ಲೈಕ್ಸ್, ಕಾಮೆಂಟ್ಸ್ ಅಂತಲೇ ಕಳೆಯುತ್ತೀರಿ. ಅದನ್ನು ಬಿಟ್ಟು ಹೊರಗೆ ಬನ್ನಿ. ಥಿಯೇಟರ್‌ಗೆ ಬಂದು ಸಿನಿಮಾ ನೋಡಿ. ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡುತ್ತಾರೆ. ಒಂದು ಸಿನಿಮಾನ ಗೆಲ್ಲಿಸಿ” ಎಂದು ತಮ್ಮದೇ ಶೈಲಿಯಲ್ಲಿ ರವಿಚಂದ್ರನ್ ಮನವಿ ಮಾಡಿದ್ದಾರೆ.
ಫೆಬ್ರವರಿ 27ರಂದು ‘ದಿ ರೈಸ್ ಆಫ್ ಅಶೋಕ’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸತೀಶ್ ನೀನಾಸಂ ನಾಯಕನಾಗಿ ನಟಿಸಿದ್ದಾರೆ. ಚಿತ್ರಕ್ಕೆ ಅವರು ಹೂಡಿಕೆಯೂ ಮಾಡಿದ್ದಾರೆ. ವಿನೋದ್ ವಿ ಧೊಂಡಾಲೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ರವಿಚಂದ್ರನ್ ಅವರ ಈ ಖಡಕ್ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ.





