ಸಣ್ಣ ವಯಸ್ಸಿನಲ್ಲೇ ದೊರಕಿದ ಹಣ, ಹೆಸರು, ಕೀರ್ತಿಗಳಿಂದ ಎಂದೂ ಸರಳತೆಯ ಮೇರೆ ಮೀರದ ಅವಿಕಾ, ಯಶಸ್ಸು ಗಳಿಸಲು ಏನೇನು ಮಾಡಿದಳು? ಬನ್ನಿ, ಅವಳಿಂದಲೇ ತಿಳಿಯೋಣ……..
ಕಿರುತೆರೆಯ ಜನಪ್ರಿಯ `ಬಾಲಿಕಾ ವಧು’ ಧಾರಾವಾಹಿಯಲ್ಲಿ ಬಾಲಕಿ ಆನಂದಿಯಾಗಿ ಕಾಣಿಸಿಕೊಂಡು, ಇಡೀ ಧಾರಾವಾಹಿಯ ಬಾಲ್ಯ ವಿವಾಹದ ಕೇಂದ್ರಬಿಂದು ಆಗುವ ಅವಿಕಾ ಗೌರವ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಆಗೆಲ್ಲ ಬಹಳಷ್ಟು ತಾಯಿ ತಂದೆಯರು ಹುಟ್ಟಿದ ತಮ್ಮ ಮಗುವಿಗೆ ಆನಂದಿ ಎಂದೇ ಹೆಸರಿಟ್ಟು ಸಂಭ್ರಮಿಸಿದರು, ಈ ಬಾಲಕಿಯ ಪಾತ್ರ ಅಷ್ಟು ಅಚ್ಚಳಿಯದೆ ಉಳಿದು ಹೋಯಿತು. ಬಾಲ್ಯ ವಿವಾಹ ನಮ್ಮ ಸಾಮಾಜಿಕ ಪಿಡುಗಾಗಿ ಎಷ್ಟು ಆಳವಾಗಿ ಬೇರೂರಿದೆ ಎಂದು ಜನಜಾಗೃತಿ ಉಂಟು ಮಾಡುವುದೇ ಈ ಧಾರಾವಾಹಿಯ ಉದ್ದೇಶವಾಗಿತ್ತು. ಈ ಪಾತ್ರವನ್ನು ಆಗ 11 ವರ್ಷದ ಬಾಲಕಿಯಾಗಿದ್ದ ಅವಿಕಾ ಗೌರವ್ ಬಹಳ ಚೆನ್ನಾಗಿ ನಿಭಾಯಿಸಿದ್ದಳು.
ನಾಯಕಿಯಾಗಿ ಇದೀಗ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಇವಳ ಈ ಪಾತ್ರ ಇನ್ನೂ ಗಾಢವಾಗಿ ಎಲ್ಲರ ಮನದಲ್ಲಿ ಉಳಿದಿದೆ. ಇದಾದ ಮೇಲೆ ಇವಳಿಗೆ `ಸಸುರಾಲ್ ಸಿಮರ್ ಕಾ’ ಧಾರಾವಾಹಿಯಲ್ಲಿ ರೋಲಿಯ ಉತ್ತಮ ಪಾತ್ರ ಸಿಕ್ಕಿತು. ತನ್ನ ಕುಟುಂಬದ ಒಬ್ಬಳೇ ಮಗಳಾದ ಅವಿಕಾಳ ಹೆತ್ತವರು ವ್ಯಾಪಾರಸ್ಥರು. ಮೊದಲಿನಿಂದಲೂ ತನ್ನಿಷ್ಟದಂತೆ ಅವಿ ಕೆಲಸ ಮಾಡಬೇಕೆಂದೇ ಅವರು ಬಯಸುತ್ತಿದ್ದರು. ಈ ಕಾರಣದಿಂದಲೇ ನಟನೆಯಲ್ಲಿ ತನ್ನದೇ ವಿಭಿನ್ನತೆ ಗುರುತಿಸಿಕೊಂಡಳು ಅವಿ. ಧಾರಾವಾಹಿಗಳಲ್ಲಿ ಬಾಲನಟಿಯಾಗಿ ನಟಿಸುತ್ತಲೇ ಅವಿ ದೊಡ್ಡವಳಾಗಿ ನಾಯಕಿಯಾಗಿ ಗುರುತಿಸಿಕೊಂಡಳು. ಗ್ಲಾಮರಸ್ ನಟಿಯಾಗಿ ತೆಲುಗು, ಹಿಂದಿ ಚಿತ್ರಗಳಲ್ಲಿ ತನ್ನದೇ ಐಡೆಂಟಿಟಿ ಪಡೆದಿದ್ದಾಳೆ. ಈಗಾಗೀ ಅವಿ ಈ ಇಂಡಸ್ಟ್ರಿಗೆ ಬಂದು 15 ವರ್ಷ ಕಳೆದಿದೆ. ಮಿಲಿಂದ್ ಜಾಂದ್ವಾನಿ ಈಕೆಯ ಬಾಯ್ ಫ್ರೆಂಡ್ ಆಗಿ ನಡೆಸುತ್ತಿದ್ದಾನೆ. ಹೈದರಾಬಾದ್ ನ ಒಂದು ವರ್ಕ್ ಶಾಪ್ ನಲ್ಲಿ ಭೇಟಿಯಾಗಿ ಗೆಳೆತನ ಬೆಳೆಸಿ, ಪ್ರೇಮಿಗಳಾದರು.
ಇತ್ತೀಚೆಗೆ ನೀನು ಯಾವ ಪ್ರಾಜೆಕ್ಟ್ ಕೈಗೊಂಡಿದ್ದಿ?
ಇದೀಗ ನಾನು ಒಂದು ಹಿಂದಿ ಚಿತ್ರದ ಶೂಟಿಂಗ್ ನಲ್ಲಿ ಬಿಝಿ. ಹೀಗಾಗಿ ಮುಂಬೈಗೆ ಹೋಗಿ ಬರುತ್ತಿರುತ್ತೀನಿ. ಕೊರೋನಾ ಕಾಲದಲ್ಲಿ ಪೂರ್ತಿ ಮನೆಯಲ್ಲೇ ಕುಳಿತು ಜಡ್ಡುಗಟ್ಟಿದಂತಾಗಿತ್ತು. ಜೊತೆಗೆ ತೆಲುಗು ಚಿತ್ರದಲ್ಲೂ ನಟಿಸುತ್ತಿದ್ದೇನೆ. ಈಗಾಗಲೇ 3 ತೆಲುಗು ಚಿತ್ರಗಳು ರಿಲೀಸ್ ಆದವು. ನನ್ನದೇ ಹೌಸ್ ಪ್ರೊಡಕ್ಷನ್ ನಲ್ಲಿ 2 ತೆಲುಗು ಚಿತ್ರಗಳು ಬಿಡುಗಡೆಯಾಗಿವೆ. `ಉಯ್ಯಾಲ ಜಂಪಾಲ’ ಚಿತ್ರದಿಂದ ದಕ್ಷಿಣದ, ಮುಖ್ಯ ತೆಲುಗು ಪ್ರೇಕ್ಷಕರಿಗೆ ಹೊಂದಿಕೊಂಡ ನಾನು ಕ್ರಮೇಣ `ಲಕ್ಷ್ಮಿ…. ರಾವೆ ಮಾ ಇಂಟಿಕಿ, ಥ್ಯಾಂಕ್ಯೂ, ರಾಜುಗಾರಿ ಗಾದಿ-3, ಎಕ್ಕಡಿಕಿ ಪೊತಾ ಚಿನ್ನಾಡಾ….’ ಮುಂತಾದವುಗಳಲ್ಲಿ ನಟಿಸಿದೆ.
`ಲಾಡೋ ವೀರ್ ಪುರ್ ಕೀ ಮರ್ದಾನಿ’ ಹಿಂದಿ ಧಾರಾವಾಹಿ ಹಾಗೂ `ಫಿಯರ್ ಫ್ಯಾಕ್ಟರ್: ಖತ್ರೋಂಕಿ ಖಿಲಾಡಿ-9′ ಶೋಗಳಲ್ಲೂ ಯಶಸ್ವಿ ಎನಿಸಿದೆ. ನನ್ನ ಹೋಮ್ ಪ್ರೊಡಕ್ಷನ್ ಹೌಸ್ ಜವಾಬ್ದಾರಿ ಪೂರ್ತಿ ನನ್ನದೇ, ನಡುನಡುವೆ ಪಪ್ಪಾ ಹೆಲ್ಪ್ ಮಾಡ್ತಿರ್ತಾರೆ. ಮುಂಬೈನಲ್ಲೇ ನನ್ನ ವಾಸ, ತೆಲುಗು ಪ್ರೇಕ್ಷಕರಿಗಾಗಿಯೇ ಹೈದರಾಬಾದಿನಲ್ಲಿ ಪ್ರೊಡಕ್ಷನ್ ಹೌಸ್ ಮಾಡಿಕೊಂಡೆ.
ನಟನೆಯ ಪ್ರೇರಣೆ ಸಿಕ್ಕಿದ್ದು ಎಲ್ಲಿ?
ನನ್ನ ಜೀವನದಲ್ಲಿ ಎಲ್ಲ ಬೇಗ ಬೇಗ ಆಯಿತೆಂದೇ ಹೇಳಬೇಕು. ಸಣ್ಣ ಪ್ರಾಯದಲ್ಲೇ `ಬಾಲಿಕಾ ವಧು’ ಧಾರಾವಾಹಿಯಂಥ ದೊಡ್ಡ ಪ್ರಾಜೆಕ್ಟ್ ಸಿಕ್ಕಿತು. ಇದಂತೂ ಪೂರ್ವ ನಿಯೋಜಿತ ಆಗಿರಲಿಲ್ಲ. ನಮ್ಮ ಕುಟುಂಬದಲ್ಲಿ ಯಾರಿಗೂ ಈ ಇಂಡಸ್ಟ್ರಿಯ ಪರಿಚಯವಿರಲಿಲ್ಲ. ಶಾಲೆ ಮುಗಿಸಿ ದಿನಾ ಶೂಟಿಂಗಿಗೆ ಓಡುವುದೇ ಒಂದು ಸಂಭ್ರಮ! ವರ್ಷಗಳು ಉರುಳುತ್ತಾ ಇದು ಅಭ್ಯಾಸವಾಗಿ ನಟನೆಯೇ ನನ್ನ ಕೆರಿಯರ್ ಆಯ್ತು!
ಮೊದಲ ಬ್ರೇಕ್ ಸಿಕ್ಕಿದ್ದು ಹೇಗೆ?
ನಾನು 7 ವರ್ಷದವಳಾಗಿದ್ದಾಗಲೇ ನಟನೆಗೆ ತೊಡಗಿದೆ. 4 ವರ್ಷದವಳಿದ್ದಾಗಲೇ ನೃತ್ಯಾಭ್ಯಾಸಕ್ಕೆ ತೊಡಗಿ ಹಲವಾರು ಶೋ ನೀಡಿದ್ದೇನೆ. ಮುಂಬೈನ ಒಂದು ಮಾಲ್ ನಲ್ಲಿ ಪರ್ಫಾರ್ಮ್ ಮಾಡುತ್ತಿದ್ದಾಗ, ಯಾರೋ ನನ್ನ ಹೆತ್ತವರನ್ನು ಸಂಪರ್ಕಿಸಿ ಸಿನಿಮಾ ನಟನೆಗಾಗಿ ಕೇಳಿದರು. ತಂದೆ ಒಪ್ಪಿದ ನಂತರ, 1-2 ವಾರಗಳಲ್ಲಿ ಅವರ ಕಡೆಯಿಂದ ಫೋನ್ ಬಂತು. ಹೀಗಾಗಿ `ಬಾಲಿಕಾ ವಧು’ ಧಾರಾವಾಹಿಯಲ್ಲಿ ನಟಿಸುವಂತಾಯಿತು.
ನಿನ್ನ ಕುಟುಂಬದವರು ಸಹಕರಿಸಿದರೆ?
ಮೊದಲಿನಿಂದಲೂ ನನ್ನ ಕುಟುಂಬದವರು ಬಹಳ ಸಹಕರಿಸಿದರು. `ಸಸುರಾಲ್…..’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ, ಸಾಕಪ್ಪ ಈ ನಟನೆಯ ಸಹವಾಸ ಅನಿಸಿದ್ದೂ ಇದೆ. ನನ್ನ ಜೀವನದಲ್ಲಿ ನಟನೆ ಬಹು ಬೇಗ ಬಂದುಬಿಟ್ಟಿತು. 12ನೇ ಕ್ಲಾಸ್ ಮುಗಿಸಿದ ನಂತರ ಡಿಗ್ರಿಗೆ ಯಾವ ಕೋರ್ಸ್ ಸೇರಲಿ ಎಂದು ಯೋಚಿಸುತ್ತಿದೆ. ನಾನು ನಟನೆಯಿಂದ ಕೆಲವು ದಿನ ಬ್ರೇಕ್ ತೆಗೆದುಕೊಳ್ಳುತ್ತೇನೆಂದು ಪೇರೆಂಟ್ಸ್ ಗೆ ತಿಳಿಸಿದೆ. ಮುಂದೆ ಕಿರುತೆರೆ ಧಾರಾವಾಹಿಗಳಿಗಿಂತ, ಫಿಲ್ಮ್ ಮೇಕಿಂಗ್ ಕಡೆ ನನ್ನ ಒಲವು ಹರಿಯಿತು. ಹೀಗಾಗಿ ನಾನು `ಲಾಡೊ, ಖಿಲಾಡಿ’ ಶೋಗಳ ನಂತರ ಆ ನಿಟ್ಟಿನಲ್ಲಿ ಮುಂದುವರಿಯಲಿಲ್ಲ.
ನೀನು ನಟನೆಯನ್ನೇ ಕೆರಿಯರ್ ಆಗಿಸಿಕೊಂಡಾಗ ಪೇರೆಂಟ್ಸ್ ಅಭಿಪ್ರಾಯವೇನಿತ್ತು?
ನನ್ನ ಆಯ್ಕೆಗೆ ತಕ್ಕಂತೆ ಕೆರಿಯರ್ ಆರಿಸಿಕೊಳ್ಳಲು ಪೇರೆಂಟ್ಸ್ ಮೊದಲಿನಿಂದಲೂ ಪ್ರೋತ್ಸಾಹಿಸುತ್ತಿದ್ದರು. ಹಿಂದೆ ಚಿಕ್ಕವಳಾಗಿದ್ದಾಗ ಕಷ್ಟ ಎನಿಸುತ್ತಿತ್ತು. ಕ್ರಮೇಣ ಎಲ್ಲಾ ಅಭ್ಯಾಸವಾಯಿತು. ಈ ರೀತಿ ನಟನೆಯೇ ನನ್ನ ಕೆರಿಯರ್ ಆಯಿತು. ಇದರಲ್ಲಿ ಹೆಚ್ಚಿನ ಪರಿಶ್ರಮ ಪಡಬೇಕಾಯಿತು. ಹೊರಗಿನ ಜನ ಇದನ್ನು ಸಂಪಾದನೆಗೆ ಸುಲಭವಾದ, ಗ್ಲಾಮರಸ್ ಮಾರ್ಗ ಎಂದುಕೊಳ್ಳುತ್ತಾರೆ. ಆದರೆ ಇಲ್ಲಿನ ಆಡಿಶನ್ಸ್, ಸೆಲ್ಫ್ ಮೇಂಟೆನೆನ್ಸ್ ಇತ್ಯಾದಿಗಳಿಗೆ ಹಲವಾರು ಕಷ್ಟಕೋಟಲೆ ಎದುರಿಸಬೇಕಾಗುತ್ತದೆ. ಹಾಗೆ ನೋಡಿದರೆ ಪ್ರತಿ ಇಂಡಸ್ಟ್ರಿಯಲ್ಲೂ ಕಷ್ಟನಷ್ಟಗಳು ತಪ್ಪಿದ್ದಲ್ಲ….. ಸಂತೃಪ್ತಿ ಇರಬೇಕು, ಎಲ್ಲಕ್ಕಿಂತ ಅದು ಮುಖ್ಯ.
ನಿಜ ಜೀವನದಲ್ಲಿ ಅವಿ ಎಂಥಾ ಹುಡುಗಿ?
ನಾನು ಒಬ್ಬ ಅತಿ ಸಾಧಾರಣ ಹುಡುಗಿ….. ಮೇಲ್ಮಧ್ಯಮ ವರ್ಗದ ಹುಡುಗಿ ಎದುರಿಸುವ ಸಂಘರ್ಷಗಳನ್ನು ಕಾಣುತ್ತಾ ಬಂದಿದ್ದೇನೆ. ನನ್ನ ಅನುಭವಗಳೇ ನನ್ನ ಗುರು. ನಾನು ಬಹಳ ದೊಡ್ಡ ಸ್ಟಾರ್ ಎಂಬ ಅಹಂ ನನ್ನನ್ನು ಮೆಟ್ಟಿಲ್ಲ. ಕಸಿನ್ಸ್, ಫ್ರೆಂಡ್ಸ್ ಜೊತೆ ಹಿಂದಿನಂತೆಯೇ ಬೆರೆಯುತ್ತೇನೆ. ಈ ಕ್ಷೇತ್ರದಲ್ಲಿ ಎಕ್ಸ್ ಪೋಶರ್ ಹೆಚ್ಚಿರುವುದರಿಂದ ಮಾಹಿತಿಯೂ ಧಾರಾಳ ಸಿಗುತ್ತದೆ. ಇಂದಿಗೂ ದೊಡ್ಡ ಐ ಫೋನ್‌ತೆಗೆದುಕೊಳ್ಳಬೇಕು ಅಂದುಕೊಂಡ್ರೆ, ಅದಕ್ಕೆ ಹಲವು ದಿನಗಳ ಟಾರ್ಗೆಟ್ ಸರಿ ಮಾಡಿಕೊಳ್ತೀನಿ.
ನಿನ್ನ ಕನಸುಗಳೇನು?
ಇದುವರೆಗೂ ನಾನು ಸಾಧಿಸಿದ್ದನ್ನೇ ನನಸಾದ ಕನಸು ಎಂದು ಭಾವಿಸುತ್ತೇನೆ. ತೆಲುಗು ಚಿತ್ರಗಳಲ್ಲಿನ ನನ್ನ ನಟನೆ ಬಹಳ ಹೋಮ್ಲಿ ಅನಿಸುತ್ತದೆ, ಅಪ್ಪಟ ದ. ಭಾರತೀಯಳೇ ಆಗಿಹೋಗಿರುವೆ! ಆರ್ಥಿಕ ಶಕ್ತಿ ಬಂದ ನಂತರ ಇದೀಗ 2 ಚಿತ್ರಗಳನ್ನೂ ತಯಾರಿಸಿರುವೆ. ನನ್ನ ಜರ್ನಿ ನನಗೆ ಬಹಳಷ್ಟು ಕಲಿಸಿದೆ. ಯಾವುದೇ ಚಿತ್ರವಿರಲಿ, ಮೊದಲು ಸಂಪೂರ್ಣ ಸ್ಕ್ರಿಪ್ಟ್ ಓದಿಕೊಳ್ಳುವೆ, ನನ್ನ ಪ್ರೇಕ್ಷಕರಿಗೆ ಎಂದಿಗೂ ನಿರಾಸೆ ಆಗಬಾರದೆಂಬುದೇ ನನ್ನ ಅಪೇಕ್ಷೆ. ಹೀಗಾಗಿಯೇ ನಾನು ಅಕ್ಷರಶಃ `ತೆಲುಗಿಂಟಿ ಅಮ್ಮಾಯಿ’ ಎನಿಸಿದ್ದೇನೆ!
ಮಿಲಿಂದ್ ಬಗ್ಗೆ ಹೇಳು…… ಎಲ್ಲಿ ಹೋಗಿ ಭೇಟಿಯಾದೆ? ಏನು ಕಥೆ?
ಕಾಮನ್ ಫ್ರೆಂಡ್ಸ್ ಮುಖಾಂತರ ಮಿಲಿಂದ್ ನನ್ನು ಹೈದರಾಬಾದಿನಲ್ಲಿ ಭೇಟಿಯಾದೆ. ನಾನು ಅವನೊಂದಿಗೆ ಉತ್ತಮ ಗೆಳೆತನ ಹೊಂದಿ, ಅನೇಕ ವಿಷಯಗಳನ್ನು ಕಲಿತಿರುವೆ. ಇಂಥ ಪಾರ್ಟ್ ನರ್ ಮಾತ್ರ ನನಗೆ ಸೂಟ್ ಆಗಬಲ್ಲ ಎಂಬ ಆತ್ಮವಿಶ್ವಾಸ ಮೂಡಿದೆ, ಹೀಗಾಗಿ ನಮ್ಮ ಪ್ರೇಮ ಗಾಢವಾಗುತ್ತಿದೆ…..! ಅವನ ಸಹಕಾರದೊಂದಿಗೆ 20 ಕಿಲೋ ತೂಕ ಕರಗಿಸಿದ್ದೇನೆ, ಈ ಫೀಲ್ಡ್ ಗೆ ಇದು ಅತ್ಯಗತ್ಯ. ಎಷ್ಟೋ ಸಲ ನನ್ನ ಕೆರಿಯರ್, ಕಾಂಪಿಟಿಷನ್ ಗಳಿಂದಾಗಿ ಉದಾಸಳಾಗುತ್ತೇನೆ. ಆಗ ಆತ ನನ್ನಲ್ಲಿ ಧೈರ್ಯ ತುಂಬಿ, ಸಾಹಸಿ ಪ್ರವೃತ್ತಿ ಬೆಳೆಸುತ್ತಾನೆ. ಇಂಥ ಸಂಗಾತಿ ಎಲ್ಲರಿಗೂ ಸಿಗಲಿ ಎಂದು ಮನಸಾರೆ ಹಾರೈಸುತ್ತೇನೆ. ಅವನಿಂದಲೇ ನಾನು ನನ್ನನ್ನು ಪ್ರೀತಿಸುವುದನ್ನೂ ಕಲಿತೆ! ಮದುವೆ ಬಗ್ಗೆ ಈಗಲೇ ಇಬ್ಬರಿಗೂ ಆತುರವಿಲ್ಲ…….
– ಪ್ರತಿನಿಧಿ