ಅಭಿನಯ ಎಲ್ಲರೂ ಮಾಡುವುದಕ್ಕಾಗುವುದಿಲ್ಲ. ಪ್ರತಿಯೊಂದು ಪಾತ್ರದಲ್ಲೂ ಅಭಿನಯಿಸಬೇಕಾದರೆ, ಆ ನಟನಿಗೆ ಆ ಪಾತ್ರದ ಸಂಫೂರ್ಣ ಪರಿಚಯವಿರಬೇಕು. ಆತ ತನ್ನ ಸಹನಟನ ಸರಿ ಸಮಾನಾಗಿ ಸೇರಿಗೆ ಸವ್ವಾ ಸೇರು ಎನ್ನುವಂತೆ ಕೇವಲ ಸಂಭಾಷಣೆಯಲ್ಲದೇ ಆಂಗೀಕವಾಗಿಯೂ ಅಭಿನಯಿಸ ಬೇಕಾಗುತ್ತದೆ. ಹಾಗೆ ಆಭಿನಯಿಸಲು ಪಾತ್ರದಲ್ಲಿ ತನ್ಮಯತೆ ಮತ್ತು ನಿರ್ದೇಶಕರು ಹೇಳಿಕೊಟ್ಟದ್ದನ್ನು ಅರ್ಥೈಸಿಕೊಂಡು ಅವರು ಹೇಳಿದ ರೀತಿಯಲ್ಲಿಯೇ ನಟಿಸಿ ತೋರಿಸ ಬೇಕಾಗುತ್ತದೆ. ಈ ರೀತಿಯಾಗಿ ಮಾಡಲು ಕಣ್ಣು ಕಿವಿ ಮತ್ತು ನಾಲಿಗೆ ಚುರುಕಾಗಿರ ಬೇಕು. ಆದರೆ ಕನ್ನಡ ಚಲನ ಚಿತ್ರ ಕಂಡ ಒಬ್ಬ ಮಹಾನ್ ನಟ ಸರಿ ಸುಮಾರು 500ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದವರೊಬ್ಬರಿಗೆ ಹುಟ್ಟಿನಿಂದಲೂ ಕಿವಿ ಕೇಳಿಸುತ್ತಿರಲಿಲ್ಲ ಎಂದರೆ ಆಶ್ಚರ್ಯವಾಗಿರ ಬೇಕಲ್ಲವೇ? ಹೌದು. ನಾವಿಂದು ಹೇಳಹೊರಟಿರುವುದು ಕನ್ನಡ ಚಿತ್ರ ರಂಗ ಕಂಡ ಶ್ರೇಷ್ಠ ನಟ ಬಾಲಕೃಷ್ಣರ ಬಗ್ಗೆಯೇ.

ಕನ್ನಡ ರಾಜ್ಯೋತ್ಸವದ ಸಂಭ್ರಮದ ತಿಂಗಳಿನಲ್ಲಿಯೇ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನವೆಂಬರ್ 2, 1911ರಂದು ಬಾಲಣ್ಣನವರ ಜನನವಾಗುತ್ತದೆ. ದುರಾದೃಷ್ಟವೆಂದರೆ ಬಹಳ ಚಿಕ್ಕವಯಸ್ಸಿನಲ್ಲಿಯೇ ತಂದೆ ಮತ್ತು ತಾಯಿಯರನ್ನು ಕಳೆದು ಕೊಂಡು ಅನಾಥ ಮಗುವಾಗಿ ನೆಂಟರಿಷ್ಟರು ಮತ್ತು ಅಕ್ಕ ಪಕ್ಕದವರ ಮನೆಗಳಲ್ಲಿಯೇ ಬೆಳೆದು ದೊಡ್ದವರಾಗುತ್ತಾರೆ. ಇಡೀ ಊರಿನ ಮಗನಾಗಿ ಬೆಳೆದದ್ದರಿಂದ ಅವರಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ಆದರೆ ತಮ್ಮ ಊರಿನಲ್ಲಿ ಬಂದ ನಾಟಕ ಕಂಪೆನಿ ಆಕರ್ಷಣೆಗೊಳಗಾಗಿ, ಆ ಕಂಪನಿಯಲ್ಲಿ ಗೇಟು ಕಾಯುವುದರ ಮೂಲಕ ನಾಟಕ ಲೋಕಕ್ಕೆ ಕಾಲಿಟ್ಟು,, ಬೋರ್ಡು ಬರೆಯುವುದು, ಪೋಸ್ಟರ್ ಅಂಟಿಸುವುದು, ರಂಗಸಜ್ಜಿಕೆ ಹೀಗೆ ಎಲ್ಲಾ ಕೆಲಸಗಳಲ್ಲಿ ತೊಡಗಿಸಿಕೊಂಡರು. ಅದೊಂದು ದಿನ ಕೃಷ್ಣಲೀಲಾ ನಾಟಕದಲ್ಲಿ ಆಭಿನಯಿಸಬೇಕಿದ್ದ ನಟ ಕಾರಣಾಂತರಗಳಿಂದ ಲಭ್ಯವಿಲ್ಲದಿದ್ದಾಗ, ನಾಟಕದ ತಾಲೀಮಿನ ಸಮಯದಲ್ಲಿಯೂ ಮತ್ತು ಪ್ರತೀ ದಿನ ರಂಗದ ಮೇಲೇ ಆ ಪಾತ್ರವನ್ನು ನೋಡಿದ್ದ ಅದರ ಪ್ರತಿಯೊಂದು ಸಂಭಾಷಣೆಯೂ ತಮಗರಿವಿಲ್ಲದೇ ಮಮನವಾಗಿದ್ದರಿಂದ ಬಾಲಣ್ಣನವರೇ ಬಣ್ಣ ಹಚ್ಚಲೇ ಬೇಕಾಯಿತು. ಹೀಗೆ ಅವರ ನಟನಾ ವೃತ್ತಿ ಜೀವನ ಆರಂಭವಾಗಿ ಅಲ್ಲಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಅದು ಹಾಸ್ಯ ಪಾತ್ರವೇ ಇರಲಿ, ಪೋಷಕಪಾತ್ರವೇ ಇರಲಿ ಅಥವಾ ಖಳ ನಟನೆಯೇ ಇರಲಿ, ಕಿವಿ ಕೇಳಿಸಿದಿದ್ದರೂ ಸಹ ನಟರ ತುಟಿ ಚಲನೆ ಮತ್ತು ಆಂಗಿಕ ಅಭಿನಯವನ್ನೇ ಗಮನಿಸುತ್ತಾ ಅದಕ್ಕೆ ತಮ್ಮ ತಕ್ಕಂತೆ ತಮ್ಮದೇ ಮ್ಯಾನರಿಸಂ ನಲ್ಲಿ ತೇಲುವ ಧ್ವನಿಯಲ್ಲಿ ಸಂಭಾಷಣೆ ಹೇಳುತ್ತಾ ಆಭಿನಯಿಸುತ್ತಿದ್ದ ಬಾಲಣ್ಣನವರಿಗೆ ಬಾಲಣ್ಣನವರೇ ಸಾಟಿ.

ಹಲವಾರು ನಾಟಕ ಕಂಪನಿಗಳಲ್ಲಿ ನಾನಾರೀತಿಯ ಕೆಲಸಗಳನ್ನು ಮಾಡಿ ವೃತ್ತಿ ರಂಗಭೂಮಿಯ ಕಾಶಿ ಎನಿಸಿಕೊಂಡಿದ್ದ ಗುಬ್ಬಿ ಕಂಪನಿಯಲ್ಲಿ ಅವರಿಗೆ ರಾಜ್ ಕುಮಾರ್, ನರಸಿಂಹರಾಜು ಮತ್ತು ಜಿ.ವಿ. ಅಯ್ಯರ್ ಅವರ ಪರಿಚಯವಾಗುವ ಮೂಲಕ ಬಾಲಣ್ಣನವರನ್ನು ಚಿತ್ರರಂಗಕ್ಕೂ ಪ್ರವೇಶ ಮಾಡಲು ಸಹಕಾರಿಯಾಯಿತು. 1943ರಲ್ಲಿ ರಾಧಾರಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಾಲಣ್ಣ, ಅಲ್ಲಿಂದ ಮುಂದೆ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟ, ಖಳ ನಟ, ಪೋಷಕ ನಟ ಹೀಗೆ ವಿವಿಧ ರೀತಿಯ ಪಾತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.





