ಚಿತ್ರ : ಬಲರಾಮನ ದಿನಗಳು  
ನಿರ್ದೇಶನ :ಕೆ.ಎಂ ಚೈತನ್ಯ  
ನಿರ್ಮಾಪಕ : ಪದ್ಮಾವತಿ ಜಯರಾಮ್ , ಶ್ರೇಯಸ್  
ತಾರಾಗಣ: ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಆಶಿಶ್ ವಿದ್ಯಾರ್ಥಿ, ಅವಿನಾಶ್, ಅತುಲ್ ಕುಲಕರ್ಣಿ, ರಮೇಶ್ ಇಂದಿರಾ, ವಿನಯ್ ಗೌಡ, ಆದಿತ್ಯ ಆಶ್ರೀ, ಸಿದ್ಲಿಂಗು ಶ್ರೀಧರ್ ಮತ್ತಿತರರು  
ರೇಟಿಂಗ್ :  3.5/ 5
ರಾಘವೇಂದ್ರ ಅಡಿಗ ಎಚ್ಚೆನ್.

80ರ ದಶಕದಲ್ಲಿ ಬಲರಾಮ ಬಂದರೆ ಅಂಗಡಿಗಳೆಲ್ಲವೂ ಬಂದ್ ಆಗುತ್ತಿದ್ದವು. ಆದರೆ ಹೆಸರಿಗೆ ತಕ್ಕಂತೆ ಬಲಭೀಮನಂತಿದ್ದ ಬಲರಾಮ ಸೆಂಟ್ರಲ್ ಜೈಲಿನಲ್ಲೇ ಕೊಲೆಯಾಗುವ ಮೂಲಕ ಸುದ್ದಿಯಾಗಿದ್ದರು. ಇದೀಗ ಅದೇ ಬಲರಾಮನಾಗಿ ವಿನೋದ್ ಪ್ರಭಾಕರ್ ಅಭಿನಯದ “ಬಲರಾಮನ ದಿನಗಳು” ಚಿತ್ರ ತೆರೆಗೆ ಬಂದಿದೆ.

“ಆ ದಿನಗಳು” ಚಿತ್ರದ ಮೂಲಕ ಬೆಂಗಳೂರಿನ ಭೂಗತ ಜಗತ್ತಿನ ಒಳ-ಹೊರಗಿನ ಕಥೆಯನ್ನು ನೈಜವಾಗಿ ತೆರೆಯ ಮೇಲೆ ತಂದಿದ್ದ ನಿರ್ದೇಶಕ ಕೆ.ಎಂ. ಚೈತನ್ಯ ಮತ್ತೊಮ್ಮೆ ಅಂತಹುದೇ ಕಥೆಯನ್ನು ತೆರೆಗೆ ತಂದಿದ್ದಾರೆ. ಜಯರಾಜ್, ಕೊತ್ವಾಲ್ ರಾಮಚಂದ್ರ ಮತ್ತು ಮುತ್ತಪ್ಪ ರೈ ಘಟನೆಗಳನ್ನು ಮುಂದಿಟ್ಟುಕೊಂಡು ಬಲರಾಮನ ಜೀವನದ ಕಥೆಯನ್ನು ಪ್ರೇಕ್ಷಕರ ಮುಂದೆ ತರಲಾಗಿದೆ. ಬುದ್ಧಿಬಂದಾಗಿನಿಂದ ಮಾತಿಗಿಂತ ಹೆಚ್ಚಾಗಿ ಕೈಯಲ್ಲಿ ಮಾತನಾಡುವ ಜಾಯಮಾನದ ಬಲರಾಮ (ವಿನೋದ್ ಪ್ರಭಾಕರ್)ಗೆ ಅನ್ಯಾಯ ಕಂಡರೆ ಸಹಿಸದ, ಜನರ ಕಷ್ಟಗಳಿಗೆ ಮರುಗುವ ವ್ಯಕ್ತಿತ್ವದ ನಿವೃತ್ತ ಕರ್ನಲ್ ಪುತ್ರಿ ರೇವತಿ (ಪ್ರಿಯಾ ಆನಂದ್) ಈತನ ನಡೆ-ನುಡಿಗೆ ಮನ ಸೋಲುತ್ತಾಳೆ. ಆಚಾನಕ್ಕಾಗಿ ರೌಡಿಯೊಬ್ಬನನ್ನು ಹತ್ಯೆ ಮಾಡಿಬಿಡುತ್ತಾನೆ. ರೌಡಿಸಂ ಗಂಧ ಗಾಳಿ ಗೊತ್ತಿಲ್ಲದ ಬಲರಾಮ, ಭೂಗತ ಲೋಕದ ಒಳಹೊಕ್ಕುವ ಆತ ಆಗಿನ ಕಾಲದಲ್ಲಿ ಬೆಂಗಳೂರು ಆಳಿದ ಗ್ಯಾಂಗ್ ಅನ್ನೇ ಎದುರು ಹಾಕಿಕೊಂಡು ಯಶಸ್ಸು ಗಳಿಸಿ, ತಾನು ಬೆಳೆಸಿದ ಹುಡುಗರಿಂದಲೇ ಧಾರುಣ ಸಾವನ್ನಪ್ಪಿದ ಕಥೆ; ಅದು ಹೇಗಾಯಿತು, ಯಾರು ಮಾಡಿದರು ಎನ್ನುವುದನ್ನು ನೀವು ಚಿತ್ರ ನೋಡಿ ತಿಳಿಯಬೇಕು.

Balaram

ವಿನೋದ್ ಪ್ರಭಾಕರ್ ಬಲರಾಮನ ಪಾತ್ರಕ್ಕೆ ಜೀವ ತುಂಬಿ ನೈಜ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಕತ್ತಿ ಪಾತ್ರದಲ್ಲಿ ನಟಿಸಿರುವ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿ ಪ್ರತಿ ಪಾತ್ರವೂ ಸಹ ಗಮನ ಸೆಳೆಯುವಂತಿದೆ. ಅತುಲ್ ಕುಲಕರ್ಣಿ, ಆಶಿಷ್ ವಿದ್ಯಾರ್ಥಿ, ನಟ ಅವಿನಾಶ್ ಹಾಗೂ ರೇವತಿ ಪಾತ್ರದಲ್ಲಿ ಪ್ರಿಯಾ ಆನಂದ್ ಅವರ ಪಾತ್ರ ಇಷ್ಟವಾಗುತ್ತದೆ. ರಮೇಶ್ ಇಂದಿರಾ ಅವರ ಪಾತ್ರ ಸಹ ಮಹತ್ವದ್ದಾಗಿದೆ.

ಇನ್ನು ಸಂತೋಷ್ ನಾರಾಯಣ್ ಬಿಜಿಎಮ್ ಚಿತ್ರದ ಪ್ಲಸ್ ಪಾಯಿಂಟ್. ಆದರೆ “ಆ ದಿನಗಳು” ಚಿತ್ರದ ಇಳಯರಾಜ ಸಂಗೀತ ಮತ್ತು ಹಾಡು ಹಿನ್ನೆಲೆ ಸಂಗೀತ ಇಂದಿಗೂ ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ; ಅಂದಿನ ಆ ಸಂಗೀತ ಇಷ್ಟಪಡುವವರಿಗೆ ಇಲ್ಲಿನ ಸಂಗೀತ ತುಸು ಸಪ್ಪೆ ಎನಿಸಬಹುದು. ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿ ಮೂಡಿಬಂದಿದೆ. ಲಾ ನಿರ್ದೇಶನ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಉತ್ತಮವಾಗಿದೆ. ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು. ದ್ವಿತೀಯ ಭಾಗ ಹೆಚ್ಚು ಸೆಳೆಯುವಂತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ