– ರಾಘವೇಂದ್ರ ಅಡಿಗ ಎಚ್ಚೆನ್.
ಸಾಹಸಸಿಂಹ, ದಿವಂಗತ ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಹುಟ್ಟುಹಬ್ಬದಂದು (ಸೆಪ್ಟೆಂಬರ್ 18) ನಟ ಕಿಚ್ಚ ಸುದೀಪ್ (Kichcha Sudeepa) ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದೆ ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ ನಿರ್ಮಿಸುವುದಾಗಿ ಘೋಷಿಸಿದ್ದ ಅವರು ಅದರ ಮಾಡೆಲ್ ರಿಲೀಸ್ ಮಾಡಿದ್ದಾರೆ. ವಿಷ್ಣುವರ್ಧನ್ ಹೆಸರಿನಲ್ಲಿ ಮಾದರಿ ಸ್ಮಾರಕ ನಿರ್ಮಿಸಲು ಅವರ ಅಭಿಮಾನಿಗಳಾದ ಸುದೀಪ್, ವೀರಕಪುತ್ರ ಶ್ರೀನಿವಾಸ್, ಅಶೋಕ್ ಖೇಣಿ, ಡಾ. ವಿಷ್ಣು ಸೇನಾ ಸಮಿತಿ ಮತ್ತಿತರರು ಮುಂದಾಗಿದ್ದು, ಅದರ ಝಲಕ್ ಇದೀಗ ಹೊರಬಿದ್ದಿದೆ.
ಈ ರೀತಿಯ ಪ್ರಯತ್ನ ದೇಶದಲ್ಲೇ ಮೊದಲು ಎನ್ನಲಾಗಿದ್ದು, ʼʼಅಭಿಮಾನದ ಕಲಾವಿದನಿಗೆ ಅಭಿಮಾನಿಗಳೇ ಅಭಿಮಾನದಿಂದ ನಿರ್ಮಿಸುತ್ತಿರುವ ಮೊಟ್ಟ ಮೊದಲ ಕ್ಷೇತ್ರʼʼ ಎಂದು ಬಣ್ಣಿಸಲಾಗಿದೆ. ಇದಕ್ಕೆ ಡಾ. ವಿಷ್ಣುವರ್ಧನ ಅಭಿಮಾನ ಕ್ಷೇತ್ರ ಎಂದು ಹೆಸರಿಡಲಾಗಿದೆ.
ಸದ್ಯ ರಿಲೀಸ್ ಆಗಿರುವ ಈ ಸ್ಮಾರಕದ ತ್ರೀಡಿ ಮಾಡೆಲ್ ಗಮನ ಸೆಳೆದಿದೆ. ಈ ಸ್ಮಾರಕದಲ್ಲಿ ಡಾ. ವಿಷ್ಣುವರ್ಧನ್ ಅವರ ವಿಶೇಷ ಭಾವಚಿತ್ರಗಳನ್ನು ಒಳಗೊಂಡ ಫೋಟೊ ಗ್ಯಾಲರಿ, ಪ್ರತಿಮೆ, ಲೈಬ್ರರಿ, ಧ್ಯಾನ ಕೇಂದ್ರ ಇರಲಿದೆ. ವಿಶಾಲ ಸ್ಥಳದಲ್ಲಿ, ಹಚ್ಚ ಹಸುರಿನ ನಡುವೆ ಇದು ತಲೆ ಎತ್ತಲಿದೆ. ಇಷ್ಟೇ ಅಲ್ಲದೆ ಇನ್ನಷ್ಟು ವೈಶಿಷ್ಟ್ಯ ಇದರಲ್ಲಿ ಇರಲಿದೆ ಎಂದು ಸುದೀಪ್ ತಿಳಿಸಿದ್ದಾರೆ.