`ಮೊದ ಮೊದಲಾ ಮಾತು ಚೆಂದ…’ ಸಿನಿಮಾದ ಟೈಟಲ್ಲೇ ಚೆಂದವಾಗಿದೆ. ಪ್ರತಿಯೊಂದು ಫ್ರೇಮು, ಸೀನ್‌, ಹಾಡುಗಳು ಎಲ್ಲ ಚೆಂದವಾಗಿರಬೇಕೆಂಬುದೇ ಈ ಚಿತ್ರದ ತಂಡದಲ್ಲಿರುವ ಪ್ರತಿಯೊಬ್ಬರ ಆಸೆ. ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಹೊಸಬರನ್ನು ಅದರಲ್ಲೂ ಪ್ರತಿಭಾವಂತರನ್ನು ಒಂದಲ್ಲ ಒಂದು ರೀತಿ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಒಬ್ಬ ಸ್ಟಾರ್‌ಹುಟ್ಟಿಕೊಳ್ಳಲು ಅವನು ಸಾಕಷ್ಟು ಕಷ್ಟದ ಮೆಟ್ಟಿಲುಗಳನ್ನು ಮೆಟ್ಟಿ ಬರಬೇಕಾಗುತ್ತದೆ. ಯಾರು ಎಷ್ಟೇ ಶ್ರಮಪಡಲಿ ಅಲ್ಟಿಮೇಟ್ಲಿ ಪ್ರೇಕ್ಷಕ ಮಹಾಪ್ರಭು ಒಮ್ಮೆ ಅವರನ್ನು ಸ್ವೀಕರಿಸಿಬಿಟ್ಟರೆ ಗೆದ್ದಂತೆ. ಪ್ರತಿಭೆ ಸ್ಟಾರ್‌ ಆಗಿ ಬೆಳೆಯುತ್ತದೆ. ಇತ್ತೀಚೆಗೆ `ಮೊದ ಮೊದಲಾ ಮಾತು ಚೆಂದ…’ ಚಿತ್ರ ತಂಡ ತನ್ನ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ವಿಶೇಷವಾಗಿ ಆಚರಿಸಿಕೊಂಡಿತು. ಒಂದು ಕಾಲದಲ್ಲಿ ಬೆಂಗಳೂರಿನ ಹೀರೋ ಎಂದೇ ಮೆರೆದಿದ್ದಂಥ ಶಾಂತರಾಜ್‌ ತಮ್ಮ ಪುತ್ರ ಕುಶಾಲ್ ‌ರಾಜ್‌ನನ್ನು ಬೆಳ್ಳಿ ತೆರೆಗೆ ಪರಿಚಯಿಸುವ ಮೂಲಕ ಹೀರೋ ಆಗಿ ಮಿಂಚಿಸಿದ್ದಾರೆ. ತಂದೆಯೇ ಗಾಡ್ ಫಾದರ್‌ ಆಗಿ ನಿಂತಿದ್ದರೂ ಕುಶಾಲ್‌ರಾಜ್‌ ತನ್ನ ಎಲ್ಲ ಪ್ರಯತ್ನವನ್ನೂ ಸಿನಿಮಾಗಾಗಿ ಹಾಕಿದ್ದಾರೆ.

“ನಾನು ಹೊಸಬ. ನನ್ನ ಮೊದ ಮೊದಲ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ,” ಎಂದು ಮಾತು ಶುರು ಮಾಡಿದ ಕುಶಾಲ್ ರಾಜ್‌, “ನನ್ನ ತಂದೆ ನನ್ನನ್ನು ಒಳ್ಳೆಯ ಶಾಲೆ ಕಾಲೇಜಿಗೆ ಸೇರಿಸಿ ವಿದ್ಯಾವಂತನನ್ನಾಗಿ ಮಾಡಿ ನನ್ನ ಕಾಲ ಮೇಲೆ ನಾನು ನಿಂತುಕೊಳ್ಳುವ ಹಾಗೆ ಮಾಡಿದ್ದಾರೆ.

“ಚಿಕ್ಕ ವಯಸ್ಸಿನಿಂದಲೂ ನನಗೆ ಡಾ. ರಾಜ್‌, ವಿಷ್ಣು, ಅಂಬರೀಶ್‌ ಅಂಕಲ್, ರವಿಚಂದ್ರನ್‌, ಶಿವರಾಜ್‌ ಕುಮಾರ್‌ ಇವರ ಎಲ್ಲ ಚಿತ್ರಗಳನ್ನು ನೋಡಿಕೊಂಡೇ ಬೆಳೆದವನು. ನಾನು ಕೂಡಾ ಅವರಂತಾಗಬೇಕೆಂದು ಆಸೆ ಪಟ್ಟವನು.

“ಅದಕ್ಕೋಸ್ಕರ ಮುಂಬೈಗೆ ಹೋಗಿ ಕಿಶೋರ್‌ ನಮಿತ್‌ ಕಪೂರ್‌ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡ್ಕೊಂಡು ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಾ ಇದ್ದೀನಿ.

“ನನ್ನ ಮೊದಲ ಸಿನಿಮಾದಲ್ಲೇ ಹಿರಿಯ ಕಲಾವಿದರಾದಂಥ ಸಾಯಿಕುಮಾರ್‌ ಹಾಗೂ ಅನುಭವಿ ತಂತ್ರಜ್ಞರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. `ಮೊದ ಮೊದಲಾ ಮಾತು ಚೆಂದ…’ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ.  ಮನಾಲಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ಲವ್, ಸೆಂಟಿಮೆಂಟ್‌, ಆ್ಯಕ್ಷನ್‌, ಥ್ರಿಲ್‌, ಕಾಮಿಡಿ ಎಲ್ಲವೂ ಇದೆ,”  ಎಂದು ಹೇಳುವ ಕುಶಾಲ್ ‌ರಾಜ್‌ ತಮ್ಮ ಮೊದಲ ಚಿತ್ರದ ತಂಡದ ಹಾಡುಗಳನ್ನು ತೆರೆ ಮೇಲೆ ಹಾಕಿಸಿ ತೋರಿಸಿದರು.

ಅಭಿನಯದಲ್ಲಿ ಡ್ಯಾನ್ಸ್, ಆ್ಯಕ್ಷನ್‌ ಎಲ್ಲದರಲ್ಲೂ ಪಳಗಿದವರಂತೆ ಕಾಣುವುದು ವಿಶೇಷ. ಇದು ಇವರ ಮೊದಲ ಚಿತ್ರವೆಂದು ಅನಿಸೋದಿಲ್ಲ. ಚಿತ್ರದ ನಾಯಕಿ ಲಿಯೋನ. ಕೇರಳದ ಹುಡುಗಿ. `ಮೊದ ಮೊದ ಮಾತು ಚೆಂದ…’ ಲಿಯೋನಾಳ ಮೊದಲ ಕನ್ನಡ ಚಿತ್ರ. ಮಲೆಯಾಳಂನಲ್ಲಿ ಈಗಾಗಲೇ ಎರಡು ಚಿತ್ರಗಳಲ್ಲಿ ನಟಿಸಿದ್ದಾಳೆ. ಛಲ ಇರುವಂಥ ಪಾತ್ರ ಲಿಯೋನಾಳದು. ಈ ಫಿಲಂನಲ್ಲಿ ಬ್ಯೂಟಿಫುಲ್ ಸಾಂಗ್ಸ್ ಇವೆ. ಥ್ರಿಲ್ಲಿಂಗ್‌ ಲೋಕೇಶನ್ಸ್ ಇದೆ. ಹಾಗೆಯೇ ಮೀನಿಂಗ್‌ ಫುಲ್ ಕಥೆ ಇದೆ. ಒಟ್ಟಾರೆ ಎವೆರಿಥಿಂಗ್‌ ಈಸ್‌ ಚೆಂದ ಎನ್ನುತ್ತಾಳೆ ಲಿಯೋನಾ.

ಕನ್ನಡ ನಟಿ ತೇಜಸ್ವಿನಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಈ ಸಿನಿಮಾದಲ್ಲಿ ನಾನು ಇಬ್ಬರು ನಾಯಕಿಯರಲ್ಲಿ ಒಬ್ಬಳಾಗಿ ಪಾತ್ರ ಮಾಡಿದ್ದೀನಿ. ತುಂಬಾನೇ ಇನ್ನೋಸೆಂಟ್‌ ಕ್ಯಾರೆಕ್ಟರ್‌. ಮನಾಲಿಯಲ್ಲಿ ಚಿತ್ರೀಕರಣ ಮಾಡುವಾಗ ಸ್ನೋ ಫಾಲಿಂಗ್‌ ಇತ್ತು. ಬೆಳಗ್ಗೆ ಐದು ಗಂಟೆಗೇ ರೆಡಿಯಾಗಿ ಶೂಟಿಂಗ್‌ಗೆ ಹೋಗ್ತಿದ್ವಿ. ನಿರ್ಮಾಪಕ ಶಾಂತಣ್ಣ ಅವರಂತೂ ನಮ್ಮನ್ನೆಲ್ಲ ಹುರಿದುಂಬಿಸುತ್ತಿದ್ದರು. ಅವರ ಹುರುಪು ಕಂಡು ನಮಗೆಲ್ಲ ನಾಚಿಕೆ ಆಗ್ತಿತ್ತು. ನನಗೆ ತುಂಬಾ ಇಷ್ಟವಾದ ಪಾತ್ರವಿದು. ಹಾಗೆಯೇ ಇಡೀ ತಂಡ ಸದಾ ನೆನಪಿನಲ್ಲಿರುವಂತೆ ನಮ್ಮನ್ನು ನೋಡಿಕೊಂಡಿತ್ತು.`ಮೊದ ಮೊದಲಾ ಮಾತು ಚೆಂದ…’ ಚಿತ್ರದಲ್ಲಿ ಸಾಕಷ್ಟು ಸ್ಪೆಷಾಲಿಟೀಸ್‌ ಇವೆ. ಡೈನಾಗ್‌ ಕಿಂಗ್‌ ಸಾಯಿಕುಮಾರ್‌ ಕುರುಡನ ಪಾತ್ರ ನಿರ್ವಹಿಸಿದ್ದಾರೆ. 40 ವರ್ಷಗಳ ನಂತರ ಅಂಥದೊಂದು ಪಾತ್ರ ಮಾಡುತ್ತಿರುವುದಾಗಿ ಹೇಳಿದರು. ಇದು ಅವರ ಇನ್ನೂರನೇ ಚಿತ್ರವಂತೆ.

“ನಿರ್ಮಾಪಕ ಶಾಂತಣ್ಣ, ನನ್ನ ಬಹಳ ವರ್ಷಗಳ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಅವರ ಮಗ ಕುಶಾಲ್ ‌ರಾಜ್‌ ಹೀರೋ ಆಗಿ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಕುಶಾಲ್ ಪಳಗಿರುವ ನಟನಂತೆ ಕ್ಯಾಮೆರಾ ಎದುರಿಸುವಂಥ ಪ್ರತಿಭಾಂತ. ಅಂತಹವರ ಜೊತೆ ಕೆಲಸ ಮಾಡೋಣ ಅನಿಸಿದೆ,” ಎನ್ನುತ್ತಾರೆ ಸಾಯಿಕುಮಾರ್‌.

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಸಮಾರಂಭ ಏರ್ಪಡಿಸಿದ್ದ ಶಾಂತರಾಜ್‌, ಬಂದಿದ್ದ ಎಲ್ಲರಿಗೂ ತಿರುಪತಿ ಪ್ರಸಾದ ನೀಡುವುದರ ಮೂಲಕ ಬರಮಾಡಿಕೊಳ್ಳುತ್ತಿದ್ದರು. ಚಿತ್ರರಂಗದ ಗಣ್ಯರು, ತಾರಾಮಣಿಗಳು ಆಗಮಿಸಿ ಶುಭಕೋರಿದರು.

ನಿರ್ಮಾಪಕ ಶಾಂತರಾಜ್‌ ಸಿನಿಮಾರಂಗದಲ್ಲಿ ಎಲ್ಲರಿಗೂ ಆತ್ಮೀಯ ಸ್ನೇಹಿತರು ಎಂದೇ ಹೇಳಬಹುದು. ಕನ್ನಡ ಚಳುವಳಿಗಳಲ್ಲಿ ಭಾಗವಹಿಸಿ ಎಲ್ಲರೊಂದಿಗೆ ಒಡನಾಟ ಬೆಳೆಸಿಕೊಂಡಿದ್ದಾರೆ. ಡಾ. ರಾಜ್‌, ಅಂಬರೀಷ್‌, ಪ್ರಭಾಕರ್‌, ದೇವರಾಜ್‌ರಿಗೆ ಆತ್ಮೀಯರಾಗಿದ್ದ ಶಾಂತರಾಜ್‌, ಗೋಕಾಕ್‌ ಚಳುವಳಿಯಲ್ಲಿ ಭಾಗವಹಿಸಿದ್ದರಂತೆ.

ಸಿನಿಮಾ ನಿರ್ಮಾಪಕರಾಗಿ, ಪಾಲುದಾರರಾಗಿ, `ಮಿಡಿದ ಹೃದಯಗಳು’ ಸಿನಿಮಾ ನಿರ್ಮಿಸಿದ್ದಾರೆ. ಅಂಬರೀಷ್‌, ಸುದೀಪ್‌ ಅವರನ್ನು ಹಾಕಿ `ಬ್ರಹ್ಮ’ ಎನ್ನುವ ಚಿತ್ರ ಪ್ರಾರಂಭಿಸಿದ್ದರು. ಇದೀಗ ತಮ್ಮ ಪುತ್ರ ಕುಶಾಲ್ ರಾಜ್‌ನನ್ನು ಹೀರೋ ಆಗಿ ಮಾಡಿ ಆತನನ್ನು ಸಿನಿಮಾರಂಗದಲ್ಲಿ ಒಬ್ಬ ಒಳ್ಳೆಯ ಕಲಾವಿದನನ್ನಾಗಿ ಬೆಳೆಸುವುದಾಗಿ ಹೇಳುತ್ತಾರೆ.

`ಮೊದ ಮೊದಲಾ ಮಾತು ಚೆಂದ…’ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಜಯಂತ್‌ ಕಾಯ್ಕಿಣಿ, ಕವಿರಾಜ್‌, ಕಲ್ಯಾಣ್‌ಹಾಡುಗಳನ್ನು ರಚಿಸಿದ್ದಾರೆ. ಟಿಪ್ಪು, ಜಾವೇದ್‌ ಅಲಿ, ರಾಜೇಶ್‌ ಕೃಷ್ಣನ್‌, ಅನುರಾಧಾ ಭಟ್‌, ಶಮಿತಾ

ಮಲ್ನಾಡ್‌ ಹಾಡುಗಳನ್ನು ಹಾಡಿದ್ದಾರೆ.

ಮೊದಲ ಪ್ರಯತ್ನಕ್ಕೆ ಶುಭ ಹಾರೈಸಿದ ಗಣ್ಯರು, ಸಿನಿಮಾ ಕೂಡ ಅಷ್ಟೇ ಚೆಂದವಾಗಿ ಮೂಡಿ ಬರಲಿ ಎಂದು ಹಾರೈಸಿದರು.

ಜಾಗೀರ್ದಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ