ಚಿರಂಜೀವಿ ಎಂದರೆ ಸಾವಿಲ್ಲದವ ಎಂದರ್ಥ. ಆದರೆ ಜಾತಸ್ಯ ಮರಣಂ ಧೃವಂ ಎಂದರೆ ಹುಟ್ಟಿದವರು ಸಾಯಲೇ ಬೇಕೆಂಬುದು ಈ ಜಗದ ನಿಯಮವೂ ಹೌದು. ಹಾಗಾಗಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬುದು ಎಲ್ಲರಿಗೂ ಅರಿವಿದ್ದರೂ, ಸಾವನ್ನೇ ಜಯಿಸಿ ಚಿರಂಜೀವಿಯಾಗುವ ಹಪಾಹಪಿಯಲ್ಲಿವವರಿಗೇನೂ ಕಡಿಮೆ ಇಲ್ಲ. ಆದರೆ ನಿಷ್ಕಲ್ಮಮಶವಾಗಿ ತಮ್ಮ ಮಗನಿಗೆ ಆ ಭಗವಂತ ದೀರ್ಘಾಯಸ್ಸು ನೀಡಲಿ ಎಂದು ತುಂಬು ಹೃದಯದಿಂದ ಚಿರಂಜೀವಿ ಎಂದು ಹೆಸರಿಸಿದ ಆ ಪೋಷಕರಿಗೂ ಭಗವಂತ ಈ ರೀತಿಯಾಗಿ ಮೋಸ ಮಾಡುತ್ತಾನೆ ಎಂಬ ನಂಬಿಕೆ ಇರಲಿಲ್ಲ. ಹೌದು ನಿಮಗೆ ಈಗಾಗಲೇ ನಾನು ಯಾರ ಬಗ್ಗೆ ಹೇಳುತ್ತಿದ್ದೇನೆ ಎಂದು ತಿಳಿದಿದೆ. ಕನ್ನಡ ಚಿತ್ರರಂಗದಲ್ಲಿ ಸ್ವಸಾಮರ್ಥ್ಯದಿಂದ ತಮ್ಮ ಪ್ರತಿಭೆಯ ಮೂಲಕ ಮತ್ತು ಸಜ್ಜನಿಕೆಯ ಮೂಲಕ ಮೇಲೆ ಬಂದ ಶಕ್ತಿಪ್ರಸಾದ್ ಅವರ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಸಾಯುವ ವಯಸ್ಸಲ್ಲದ ವಯಸ್ಸಿನಲ್ಲಿ ಕೇವಲ 39 ವರ್ಷಕ್ಕೇ ಅಕಾಲಿಕವಾಗಿ ಮತ್ತೆ ಬಾರದ ಲೋಕಕ್ಕೆ ಶಾಶ್ವತವಾಗಿ ಪಯಣಿಸಿರುವುದು ನಿಜಕ್ಕೂ ದುಃಖಕರವಾದ ವಿಷಯವಾದರೂ ಚಿರಂಜೀವಿ ಸರ್ಜಾನ ಅಕಾಲಿಕ ಮರಣ ಅನೇಕ ಚಿತ್ರನಟರಿಗೆ ಹಾಗು ಅವರಂತೆ ಆಗಬೇಕು ಎಂದು ಹಪಾಹಪಿಸುವ ಅನೇಕ ಯುವಕರಿಗೆ ಜೀವನದ ಪಾಠವನ್ನು ಕಲಿಸುವಂತಿದೆ ಎಂದರೆ ತಪ್ಪಾಗಲಾರದು.

ಚಿತ್ರರಂಗ ಚಿರಂಜೀವಿ ಸರ್ಜಾಗೆ ಹೊಸದೇನಲ್ಲ. ಅವರ ಇಡೀ ಕುಟುಂಬವೇ ಕನ್ನಡ ಚಿತ್ರರಂಗವೇಕೆ? ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರುವಾಸಿಯಾದ ದೊಡ್ಡ ಮನೆತನ. ಅವರ ಅಜ್ಜ ಶಕ್ತಿ ಪ್ರಸಾದ್ ರಾಜಕುಮಾರ್ ಅವರ ಬ್ಯಾನರಿನ್ನ ಖಾಯಂ ಖಳನಟ. ಮಾವ ಅರ್ಜುನ್ ಸರ್ಜಾ ಬಾಲನಟರಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ ತಮ್ಮ ನಟನೆ ಮತ್ತು ದೇಹದಾಢ್ಯದಿಂದ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹೆಸರುವಾಸಿಯಾದ ನಟ, ನಿರ್ದೇಶಕ ಮತ್ತು ನಿರ್ಮಾಕಪರೂ ಹೌದು. ಆವರ ಧರ್ಮಪತ್ನಿ ಆಶಾರಾಣಿಯೂ ಸಹಾ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಿದ್ದಲ್ಲದೆ, ಹಿರಿಯ ನಟ ರಾಜೇಶ್ ಅವರ ಮಗಳೂ ಕೂಡಾ. ಅವರ ಮತ್ತೊಬ್ಬ ಸೋದರ ಮಾವ ದಿ. ಕಿಶೋರ್ ಸರ್ಜಾ ಒಳ್ಳೆಯ ನಿರ್ದೇಶಕ ಎಂದು ಹೆಸರು ಮಾಡಿದ್ದರು. ಇನ್ನು ತಮ್ಮ ಧೃವ ಸರ್ಜಾ ಖ್ಯಾತ ನಟನಾದರೆ, ಪ್ರೀತಿಸಿ ಮದುವೆಯಾಗಿದ್ದ ಮಡದಿ ಮೇಘನಾ ರಾಜ್ ಸಹಾ ಬಹುಭಾಷಾ ಚಿತ್ರನಟಿ ಮತ್ತು ಆಕೆಯ ಪೋಷಕರಾದ ಶ್ರೀಮತಿ ಪ್ರಮೀಳಾ ಜೋಷಾಯ್ ಮತ್ತು ಸುಂದರ್ ರಾಜ್ ಸಹಾ ಚಿತ್ರರಂಗದಲ್ಲಿ ಖ್ಯಾತರಾದವರೇ.

ಹೀಗೆ ಚಲನಚಿತ್ರರಂಗದ ಕುಟುಂಬದಲ್ಲೇ 17 ಅಕ್ಟೋಬರ್ 1984ರಂದು ಬೆಂಗಳೂರಿನಲ್ಲಿಯೇ ಜನಿಸಿ, ತಮ್ಮ ಇಡೀ ವಿದ್ಯಾಭ್ಯಾಸವನ್ನು ಇಲ್ಲಿಯೇ ಮುಗಿಸಿ ಒಂದು ರೀತಿಯ ಪಕ್ಕಾ ಬೆಂಗಳೂರಿನ ಲೋಕಲ್ ಬಾಯ್ ಎಂದರೂ ತಪ್ಪಾಗಲಾರದು. ಚಿತ್ರರಂಗದ ನಂಟಿನಿಂದಾಗಿ ನಟನಾಗುವ ಮೊದಲು ತಮ್ಮ ಮಾವಂದಿರೊಂದಿಗೆ ಸಹ ನಿರ್ದೇಶಕರರಾಗಿ ತೆರೆಯ ಹಿಂದಿನಿಂದಲೇ ಚಿತ್ರರಂಗದ ಆ, ಆ, ಇ, ಈ… ಕಲಿತು ಮಾವ ಕಿಶೋರ್ ಸರ್ಜಾ ನಿರ್ದೇಶನದ ವಾಯುಪುತ್ರ ಸಿನಿಮಾದ ಮೂಲಕವೇ ಕನ್ನಡ ಚಲನಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಗಂಡೆದೆ, ಚಿರು, ವರದನಾಯಕ, ಚಂದ್ರಲೇಖ, ಆಟಗಾರ, ರುದ್ರತಾಂಡವ, ರಾಮಲೀಲಾ ಹೀಗೆ 22ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಲ್ಲದೇ ಇನ್ನೂ ಮೂರ್ನಾಲ್ಕು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಹು ಬೇಡಿಕೆಯ ನಟನಾಗಿದ್ದರು. ಅವರ ಇಡೀ ಕುಟುಂಬವೇ ಹನುಮಂತನ ಭಕ್ತರಾಗಿದ್ದು ಅವರ ಸಿನಿಮಾಗಳ ಒಂದಾದರೂ ದೃಶ್ಯಗಳಲ್ಲಿ ಅಥವಾ ಹಾಡುಗಳಲ್ಲಿ ಆಂಜನೇಯನನ್ನು ನೆನೆಪಿಸಿಕೊಳ್ಳುವಂತಹ ಆಸ್ತಿಕ ಮತ್ತು ಅಜಾತು ಶತ್ರುವಾಗಿದ್ದರು.





