– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ, ಕನ್ನಡ ಹೋರಾಟಗಾರರ ಕೋಪಕ್ಕೆ ತುತ್ತಾಗಿದ್ದ ಗಾಯಕ ಸೋನು ನಿಗಮ್‌ಗೆ ಇಂದು ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಕನ್ನಡಿಗರನ್ನು ಪಹಲ್ಗಾಮ್ ದಾಳಿಗೆ ಹೋಲಿಕೆ ಮಾಡಿದ ಹಿನ್ನೆಲೆಯಲ್ಲಿ ಸೋನು ನಿಗಮ್‌ ವಿರುದ್ಧ ಬೆಂಗಳೂರು ಪೊಲೀಸರು FIR ದಾಖಲಿಸಿದ್ದರು.
ಪಹಲ್ಗಾಮ್ ದಾಳಿಗೆ ಹೋಲಿಕೆ ಪ್ರಕರಣವನ್ನ ರದ್ದು ಕೋರಿ ಸೋನು ನಿಗಮ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಸೋನು ನಿಗಮ್ ಪರ ವಕೀಲ ಧನಂಜಯ್ ವಿದ್ಯಾಪತಿ ಅವರು ವಾದ ಮಂಡಿಸಿದರು. ಸರ್ಕಾರದ ಪರ ವಕೀಲ ಬಿ.ಎನ್ ಜಗದೀಶ್ ಆಕ್ಷೇಪವನ್ನು ವ್ಯಕ್ತಪಡಿಸಿದರು.
ಸೋನು ನಿಗಮ್ ಪರ ವಕೀಲರ ವಾದ
ಸೋನು ನಿಗಮ್ ಅವರು ಕನ್ನಡಕ್ಕೆ ಅವಮಾನ ಮಾಡುವ ಕೃತ್ಯ ಎಸಗಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಯಾರೋ ಮೂರನೇ ವ್ಯಕ್ತಿ ಕೊಟ್ಟ ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ. ಸೋನು ನಿಗಮ್ ಅವರು ಈಗಾಗಲೇ ಕನ್ನಡಿಗರಿಗೆ ಕ್ಷಮೆ ಕೂಡ ಕೇಳಿದ್ದಾರೆ ಎಂದರು.
ಸರ್ಕಾರದ ಪರ ವಕೀಲ ಬಿ.ಎನ್ ಜಗದೀಶ್
ಬೆಂಗಳೂರಲ್ಲಿ ನಡೆದ ಸೋನು ನಿಗಮ್ ಅವರ ಇಡೀ ಕಾರ್ಯಕ್ರಮ ನೇರಪ್ರಸಾರ ಆಗಿತ್ತು. ಕಾರ್ಯಕ್ರಮದಲ್ಲಿ ನಡೆದ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಅವರು ಕ್ಷಮೆ ಕೇಳುವ ಮೂಲಕ ತಪ್ಪು ಮಾಡಿದ್ದನ್ನ ಒಪ್ಪಿಕೊಂಡಿದ್ದಾರೆ. ಕ್ಷಮೆ ಕೇಳಿದ ಬಳಿಕ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಎಫ್ಐಆರ್ ದಾಖಲಿಸಿ ನೋಟಿಸ್ ಕೂಡ ನೀಡಲಾಗಿದೆ. ವಿಚಾರಣೆಗೆ ಹಾಜರಾಗಿಲ್ಲ ಹೀಗಾಗಿ ಅವರಿಗೆ ಕಾನೂನಿನ ರಕ್ಷಣೆ ನೀಡಬಾರದು.
ಹೈಕೋರ್ಟ್‌ನಿಂದ ಬಿಗ್ ರಿಲೀಫ್‌!
ಈ ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್‌, ಸೋನು ನಿಗಮ್ ಅವರಿಗೆ ಬಿಗ್ ರಿಲೀಫ್ ನೀಡಿದೆ. ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಲಾಗಿದೆ. ಅಲ್ಲದೇ ವಿಚಾರಣೆಗೆ ಸಹಕರಿಸುವಂತೆ ಸೋನು ನಿಗಮ್‌ಗೂ ಸೂಚನೆ ನೀಡಿದೆ.
ವಾದದ ಮಧ್ಯೆ ಸೋನು ನಿಗಮ್ ಪರ ವಕೀಲ ಧನಂಜಯ್ ವಿದ್ಯಾಪತಿ ಅವರು ಪೋಸ್ಟ್ ಮೂಲಕ ಹೇಳಿಕೆಯನ್ನ ಕಳಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಜಗದೀಶ್ ಅವರು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದರು. ಸೋನು ನಿಗಮ್ ಪರ ವಕೀಲರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುತ್ತಾರೆ ಎಂದು ಹೇಳಿದರು. ಮತ್ತೆ ಎಸ್‌ಪಿಪಿ ಅವರು ಸ್ಥಳ ಮಹಜರು ಮಾಡಬೇಕಿದೆ ಹೀಗಾಗಿ ಖುದ್ದು ಹಾಜರಾಗಬೇಕು ಎಂದು ಪಟ್ಟು ಹಿಡಿದರು.
download
ಸೋನುಗೆ ವಿನಾಯಿತಿ ನೀಡಿದ ಹೈಕೋರ್ಟ್
ಅಂತಿಮವಾಗಿ ಸೋನು ನಿಗಮ್ ಪರ ವಕೀಲರು ಹೈಕೋರ್ಟ್‌ಗೆ ಪೊಲೀಸ್ ಠಾಣೆಗೆ ಹಾಜರಾಗಲು ವಿನಾಯಿತಿ ಕೋರಿ ಮನವಿ ಮಾಡಿದರು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ದಾಖಲಿಸಲು ಹೈಕೋರ್ಟ್ ಅಸ್ತು ಎಂದಿದೆ.
ವಿಡಿಯೋ ಕಾನ್ಫರೆನ್ಸ್ ಬಳಿಕ ಆರೋಪಿ ಹೇಳಿಕೆ ದಾಖಲು ಅನಿವಾರ್ಯ ಅನ್ನಿಸಿದ್ರೆ ತನಿಖಾಧಿಕಾರಿಯು ಗಾಯಕ ಸೋನು ನಿಗಮ್ ನಿವಾಸಕ್ಕೆ ತೆರಳಲು ಅವಕಾಶ ಇದೆ. ಅವರ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲು ಮಾಡಲು ಅವಕಾಶ ಇದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಸೋನು ನಿಗಮ್ ನಿವಾಸಕ್ಕೆ ತೆರಳುವ ಸಂಪೂರ್ಣ ಖರ್ಚು, ವೆಚ್ಚ ಭರಿಸಲು ನ್ಯಾಯಾಲಯ ಸೋನು ನಿಗಮ್‌ಗೆ ಸೂಚನೆ ನೀಡಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ