ಟಾಲಿವುಡ್ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಆಡಿಯೋ ಬಿಡುಗಡೆ ಕಾರ್ಯಕ್ರಮ ಮಲೇಷ್ಯಾದಲ್ಲಿ ದೊಡ್ಡ ಮಟ್ಟದಲ್ಲಿ ನಡೆದಿದೆ. ಕಾರ್ಯಕ್ರಮ ಕೇವಲ ಸಿನಿಮಾದ ಆಡಿಯೋ ಬಿಡುಗಡೆಯಷ್ಟೇ ಅಲ್ಲ, ವಿಜಯ್ ಅವರ 33 ವರ್ಷಗಳ ಸಿನಿ ಪಯಣಕ್ಕೆ ಭಾವುಕ ವಿದಾಯ ಸಲ್ಲಿಸುವ ಸಂದರ್ಭವಾಗಿತ್ತು.
ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮ ಮಲೇಷ್ಯಾದ ಬುಕಿಟ್ ಜಲಿಲ್ ನ್ಯಾಷನಲ್ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ನಡೆಯಿತು. ‘ತಲಪತಿ ತಿರುವಿಜಾ’ ಎಂದು ಹೆಸರಿಟ್ಟ ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಹಾಜರಿದ್ದರು. ಇದು ವಿಜಯ್ ಅವರ 33 ವರ್ಷಗಳ ಸಿನಿಮಾ ಜರ್ನಿಯ ಆಚರಣೆಯಾಗಿತ್ತು.
ಇದು ಮಲೇಷ್ಯಾದಲ್ಲಿ ನಡೆದ ಯಾವುದೇ ಕಾರ್ಯಕ್ರಮಕ್ಕೂ ಅತಿ ಹೆಚ್ಚು ಜನಸಮೂಹ ಸೇರಿದ ದಾಖಲೆಯಾಗಿ ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿದೆ.
ಈ ಸಂದರ್ಭ ಮಾತನಾಡಿದ ವಿಜಯ್, “ನಾನು ಸಿನಿಮಾವನ್ನು ಬಿಟ್ಟುಕೊಡುತ್ತಿದ್ದೇನೆ. ನನ್ನ ಅಭಿಮಾನಿಗಳು ನನಗಾಗಿ ಎಲ್ಲವನ್ನೂ ಬಿಟ್ಟು ನಿಂತಿದ್ದಾರೆ. ಅವರಿಗಾಗಿ ನಾನು ಮುಂದಿನ 30-33 ವರ್ಷಗಳ ಕಾಲ ನಿಂತುಕೊಳ್ಳುತ್ತೇನೆ” ಎನ್ನುವ ಮೂಲಕ ತಾವು ಸಿನಿಮಾ ಇಂಡಸ್ಟ್ರಿ ತೊರೆಯುವುದಾಗಿ ದೃಢಪಡಿಸಿದ್ದಾರೆ.
ಅಭಿಮಾನಿಗಳು ತಮಗೆ ಅರಮನೆ ಕಟ್ಟಿಕೊಟ್ಟಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದ ವಿಜಯ್, ರಾಜಕೀಯದ ಮೂಲಕ ಜನಸೇವೆ ಮಾಡುವುದೇ ತಮ್ಮ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭ ಅನಿರುದ್ಧ್ ರವಿಚಂದ್ರನ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಗಾಯಕ-ಗಾಯಕಿಯರು ವಿಜಯ್ ಅವರ ಹಿಟ್ ಹಾಡುಗಳನ್ನು ಹಾಡಿ ರಂಜಿಸಿದರು. ನಿರ್ದೇಶಕರಾದ ಅಟ್ಲಿ, ಲೋಕೇಶ್ ಕನಕರಾಜ್, ನೆಲ್ಸನ್ ದಿಲೀಪ್‌ಕುಮಾರ್ ಸೇರಿದಂತೆ ಚಿತ್ರತಂಡದ ಸದಸ್ಯರು ಭಾಗವಹಿಸಿ ವಿಜಯ್ ಅವರನ್ನ ಕೊಂಡಾಡಿದರು. ಅಭಿಮಾನಿಗಳಿಗಾಗಿ ವಿಜಯ್ ಸ್ಟೇಜ್ ಮೇಲೆ ಸ್ಟೆಪ್ ಹಾಕಿ ರಂಜಿಸಿದರು.





