ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಕ್ ತಿರುಗೋ ಲಕ್ಷಣ ಕಾಣ್ತಿದೆ. ಯಾಕಂದ್ರೆ, ಭಾನುವಾರವಷ್ಟೇ ತಮ್ಮ 48ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟ ದರ್ಶನ್ ಬಾಳಲ್ಲಿ ತಂಗಾಳಿ ಬೀಸುತ್ತಿದೆ. ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ತೂಗುದೀಪ ಜೊತೆ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ವಾಪಸ್ಸಾಗಿರುವ ದರ್ಶನ್ ತುಂಬಾ ಖುಷಿ ಪಟ್ಟ ದಿನ ಜನ್ಮದಿನ ಅಂತಾ ಎಲ್ಲರೂ ಹೇಳ್ತಿದ್ದಾರೆ.
ಪತ್ನಿ ವಿಜಯಲಕ್ಷ್ಮೀ ಕೂಡ ಎಲ್ಲಾ ದೇವರಗಳಿಗೆ ಕೈ ಮುಗಿದು ಹರಕೆ ಹೊತ್ತುಕೊಂಡು ತಮ್ಮ ಪತಿಗೆ ಜಾಮೀನು ಸಿಗ್ಲಿ.. ಕಳಂಕ ಮುಕ್ತಿ ಆಗಲಿ ಅಂತಾ ಬೇಡಿಕೊಂಡಿದ್ದರು. ಅದರಂತೆ ದರ್ಶನ್ ಕೂಡ ಜೈಲಿಂದ ರಿಲೀಸ್ ಆಗಿದ್ದು, ಪತ್ನಿ ಜೊತೆಗೇ ಕಾಲ ಕಳೆಯುತ್ತಿದ್ದಾರೆ. ಇದೇ ಖುಷಿಯಲ್ಲಿ ಪತ್ನಿ ವಿಜಯಲಕ್ಷ್ಮೀ ಪತಿ ಜೊತೆಗಿರುವ ಫೋಟೋಗಳನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೂರ್ಕಾಲ ನಿ ನನ್ನ ಜೊತೆಗೇ ಇರು ಅನ್ನೋ ಸಂದೇಶ ರವಾನಿಸಿದ್ದಾರೆ.
ತಮ್ಮ ವಿಶೇಷವಾದ ಪ್ರೀತಿಯನ್ನು ಹಂಚಿಕೊಂಡಿರುವ ವಿಜಯಲಕ್ಷ್ಮೀ ಅವರೇ ದರ್ಶನ್ ಅವರ ಕಾಮನ್ ಡಿಪಿ ರಿಲೀಸ್ ಮಾಡಿದ್ದರು. ಪುತ್ರ ವಿನೀಶ್ ಕೂಡ ವಿಶ್ ಮಾಡಿದ್ದಾರೆ. ಇನ್ನು ಅತ್ಯಾಪ್ತರೂ ಆಗಿರುವ ನಟಿ ರಕ್ಷಿತಾ ಪ್ರೇಮ್ ಕೂಡ ದರ್ಶನ್‌ಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಇದರಿಂದ ಹಲವು ತಿಂಗಳ ಬಳಿಕ ದರ್ಶನ್ ಮೊಗದಲ್ಲಿ ನಗು ಕಾಣಿಸಿಕೊಂಡಿದೆ.
ಸಾಮಾನ್ಯವಾಗಿ ದರ್ಶನ್ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳಿಗೆ ಸಡಗರ, ಅಂದು ಅನೇಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಿದ್ದರು. ಮನೆಯ ಮುಂದೆ ಹಬ್ಬದ ವಾತಾವರಣ ಇರುತ್ತಿತ್ತು. ಆದರೆ ಈ ಬಾರಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಇತ್ತೀಚೆಗಷ್ಟೇ ವಿಡಿಯೋ ಮಾಡಿ ತಮ್ಮ ಅಭಿಮಾನಿಗಳಿಗೆ ದರ್ಶನ್ ವಿನಂತಿ ಮಾಡಿಕೊಂಡಿದ್ದರು.
ದರ್ಶನ್ ಹುಟ್ಟುಹಬ್ಬದ ಸರಳ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅತ್ಯಾಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಆತ್ಮೀಯರಿಗಷ್ಟೇ ಆಹ್ವಾನ ನೀಡಿದ್ದರು. ರಾತ್ರಿ ದರ್ಶನ್ ನಿವಾಸದಲ್ಲೇ ನಡೆದ ಹುಟ್ಟುಹಬ್ಬದ ಸರಳ ಸಂಭ್ರಮದಲ್ಲಿ ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟಿ ರಕ್ಷಿತಾ ಪ್ರೇಮ್, ನಟ ಧನ್ವಿರ್, ದರ್ಶನ್ ಸಹೋದರ ದಿನಕರ್ ತೂಗುದೀಪ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕೇಕ್ ಕತ್ತರಿಸಿ, ದರ್ಶನ್‌ಗೆ ಶುಭ ಹಾರೈಸಿದರು.
ತಮ್ಮ ಹುಟ್ಟುಹಬ್ಬದ ದಿನದಂದೇ ಅಭಿಮಾನಿಗಳಿಗೆ ನಟ ದರ್ಶನ್ ಬಿಗ್ ಗಿಫ್ಟ್ ಕೊಟ್ಟಿದ್ದಾರೆ. ‘ದಿ ಡೆವಿಲ್’ ಟೀಸರ್ ರಿಲೀಸ್ ಮಾಡೋ ಮೂಲಕ ಈ ಬಾರಿ ಬರ್ತ್ಡೇಗೆ ವಿಶ್ ಮಾಡೋಕೆ ಆಗ್ಲಿಲ್ಲ ಅನ್ನೋ ಅಭಿಮಾನಿಗಳ ನೋವನ್ನ ಮರೆಸಿದ್ದಾರೆ. ‘ಡೆವಿಲ್’ ಟೀಸರ್ ಮೂಲಕ ಮತ್ತಷ್ಟು ಕ್ರೇಜ್ ಹೆಚ್ಚಿಸಿರುವ ದರ್ಶನ್, ತಮ್ಮ ಜಬರ್ದಸ್ತ್ ಌಕ್ಷನ್ ಅಬ್ಬರದ ದರ್ಶನ ಮಾಡಿಸಿದ್ದಾರೆ. ‘ಡೆವಿಲ್’ ಟೀಸರ್ ನೋಡಿದ ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಪಟ್ಟಿದ್ದು, ಈ ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿಕೊಂಡಿದ್ದಾರೆ. ಈ ಸಿನಿಮಾ ತುಂಬಾ ಅದ್ಧೂರಿಯಾಗಿ ನಿರ್ಮಾಣವಾಗ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಸಖತ್ ಸೌಂಡ್ ಮಾಡ್ತಿದೆ. ಹಲವು ತಿಂಗಳ ಬಳಿಕ ಮತ್ತೆ ಶುರುವಾಗಿರುವ ‘ಡೆವಿಲ್’ ಚಿತ್ರದ ಕೆಲಸ ಈಗ ಎಲ್ಲರಿಗೂ ಖುಷಿ ಕೊಡ್ತಿದೆ.