- ರಾಘವೇಂದ್ರ ಅಡಿಗ ಎಚ್ಚೆನ್,
ಹೊಸ ಚಲನಚಿತ್ರದ ನಿರ್ದೇಶಕನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ಹಣ ದೋಚಿದ್ದ ಪ್ರಕರಣದಲ್ಲಿ ಆಡುಗೋಡಿ ಪೊಲೀಸರು ನಟಿ ಐಶ್ವರ್ಯಾ ಸೇರಿ ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ.
ಅನೀಶ್ ಎಂಬ ನಿರ್ದೇಶಕ ಇತ್ತೀಚೆಗೆ “ಜೀವನದ ಭಾಷೆ” ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದರು. ಈ ಹಿಂದೆ “ಭರವಸೆಯ ಜೀವನ” ಎಂಬ ಶಾರ್ಟ್ ಮೂವಿ ನಿರ್ಮಿಸಿದ್ದರು. ಕೆಲವು ಕಾರಣಗಳಿಂದ ಸಿನಿಮಾ ನಿಲ್ಲಿಸಿ ಮುಂಬೈಗೆ ಸ್ಥಳಾಂತರವಾಗಿದ್ದರು.
ನಿರ್ದೇಶಕ ತನ್ನ ಕಾರು ಮಾರಾಟದ ಕುರಿತು ಐಶ್ವರ್ಯಾ ಎಂಬ ನಟಿಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿಯನ್ನು ಆಧರಿಸಿ ಆರೋಪಿಗಳು ಕಾರು ಖರೀದಿಸುವುದಾಗಿ ಹೇಳಿ ನಟಿಯ ಮೂಲಕ ಸಂಪರ್ಕ ಸಾಧಿಸಿದ್ದಾರೆ. ನಂತರ ಕಾರು ಖರೀದಿ ಮಾಡುವ ನೆಪದಲ್ಲಿ ನಿರ್ದೇಶಕನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.
ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ದೇಶಕನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ, ಬಳಿಕ ಬ್ಯಾಡರಹಳ್ಳಿಯ ಮನೆಯೊಂದರಲ್ಲಿ ಇರಿಸಿ ಕ್ರಿಕೆಟ್ ಸ್ಟಂಪ್ ಮತ್ತು ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಬಳಿ ಇದ್ದ ಚಿನ್ನಾಭರಣ ಮತ್ತು ಹಣವನ್ನು ಕಿತ್ತುಕೊಂಡಿದ್ದಾರೆ.
ನಂತರ ತುಮಕೂರು ಜಿಲ್ಲೆಯ ಮಧುಗಿರಿ ಬಳಿ ಅವರನ್ನು ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನಟಿ ಐಶ್ವರ್ಯಾ ಸೇರಿ ಹನ್ನೊಂದು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಆಶೀರ್ವಾದ್ ಎಂಬಾತ ಈ ಕೃತ್ಯದ ಸಂಚು ರೂಪಿಸಿದ್ದಾನೆ ಎಂದು ತಿಳಿದುಬಂದಿದೆ.
ನಿರ್ದೇಶಕನೊಂದಿಗೆ ಐದು ಲಕ್ಷ ರೂಪಾಯಿ ಹಣದ ವಿಚಾರವಾಗಿ ಉಂಟಾದ ಜಗಳವೇ ಕಿಡ್ನ್ಯಾಪ್‌ಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸದ್ಯ ಬಂಧಿತರನ್ನು ವಿಚಾರಣೆಗೊಳಪಡಿಸಲಾಗಿದ್ದು, ಆಡುಗೋಡಿ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.





