- ರಾಘವೇಂದ್ರ ಅಡಿಗ ಎಚ್ಚೆನ್.
ಸ್ಯಾಂಡಲ್ವುಡ್ನ ಜನಪ್ರಿಯ ನಟ ಡಾಲಿ ಧನಂಜಯ್ ತಂದೆಯಾದ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪತ್ನಿ ಧನ್ಯಾ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ, ಮೊದಲ ಬಾರಿಗೆ ಮಗುವಿನೊಂದಿಗೆ ಇರುವ ಅಪರೂಪದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಧನಂಜಯ್ ಹಂಚಿಕೊಂಡಿರುವ ಚಿತ್ರದಲ್ಲಿ ಮುದ್ದಾದ ಮಗುವನ್ನು ಮಲಗಿಸಿ ಆಡಿಸುತ್ತಿರುವ ದೃಶ್ಯ ಅಭಿಮಾನಿಗಳ ಮನ ಗೆದ್ದಿದೆ. ಆದರೆ ಫೋಟೋಗಿಂತಲೂ ಅವರು ಧರಿಸಿರುವ ಕಪ್ಪು ಬಣ್ಣದ ಶರ್ಟ್ ಹೆಚ್ಚು ಗಮನ ಸೆಳೆದಿದೆ. ಶರ್ಟ್ ಮೇಲೆ ‘Mother Promise’ ಎಂದು ಮುದ್ರಿಸಲಾಗಿದ್ದು, ತಮ್ಮ ಬಹುನಿರೀಕ್ಷಿತ ಹೊಸ ಸಿನಿಮಾದ ಪ್ರಚಾರವನ್ನು ವಿಭಿನ್ನ ರೀತಿಯಲ್ಲಿ ಆರಂಭಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಧನಂಜಯ್ ಹಾಗೂ ಧನ್ಯಾ ಅವರ ವಿವಾಹ ಅದ್ದೂರಿಯಾಗಿ ನೆರವೇರಿತ್ತು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆದಿದ್ದ ಈ ಮದುವೆಯ ಬಳಿಕ, ಇದೀಗ ಮಗುವಿನ ಆಗಮನ ಕುಟುಂಬದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ.
ಇದೇ ವೇಳೆ ಧನಂಜಯ್ ಅಭಿನಯ ಹಾಗೂ ನಿರ್ಮಾಣದ ‘ಮದರ್ ಪ್ರಾಮಿಸ್’ ಸಿನಿಮಾ ಜುಲೈ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪೂರ್ಣಚಂದ್ರ ಮೈಸೂರು ನಿರ್ದೇಶಿಸಿರುವ ಈ ಕಾಮಿಡಿ-ಥ್ರಿಲ್ಲರ್ ಚಿತ್ರದಲ್ಲಿ ಧನಂಜಯ್ ‘ರಾಸಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗೀತಾ, ವಿನಯಾ ಪ್ರಸಾದ್, ಗುರುದತ್ ಹಾಗೂ ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.





