ಸಿನಿಮಾ ಮನರಂಜನೆಯ ಒಂದು ಅದ್ಭುತ ಮಾಧ್ಯಮ. ಕಲೆಯೇ ಇಲ್ಲಿ ಪ್ರಧಾನ, ಭಾಷೆ ಹಿಂದುಳಿದು ಪ್ರತಿಭೆ ಗೆಲ್ಲುತ್ತದೆ. ಸಿನಿಪ್ರೇಮಿಗಳು ಭಾಷೆಯ ನೆಪದಿಂದ ಉತ್ತಮ ಚಿತ್ರ ನೋಡದೆ ಇರಲಾರರು. ಬದಲಿಗೆ ವೈವಿಧ್ಯತೆಗಳ ನಡುವೆ ಮನರಂಜನೆಯ ಸಂಪೂರ್ಣ ಲಾಭ ಪಡೆಯುತ್ತಾರೆ. ಹೀಗಾಗಿಯೇ `ಪ್ಯಾನ್ ಇಂಡಿಯಾ' ಚಿತ್ರಗಳು ನಮ್ಮ ದೇಶದುದ್ದಕ್ಕೂ ಹೆಸರು ಗಳಿಸುತ್ತಿವೆ. ಹೀಗಾಗಿ ಭಾರತೀಯರೆಲ್ಲರೂ ಎಲ್ಲಾ ಭಾಷೆಗಳ (ಅಕ್ಷರಶಃ ಅರ್ಥವಾಗದಿದ್ದರೂ) ಚಿತ್ರ ನೋಡಲು ಮುಂದಾಗಿದ್ದಾರೆ. ಇದು ನಮ್ಮ ದೇಶದ ಅದ್ಭುತ ಸಂಸ್ಕೃತಿ, ವೈವಿಧ್ಯತೆಯಲ್ಲಿ ಏಕತೆಯೇ ನಮ್ಮ ಒಗ್ಗಟ್ಟಿನ ಗುಟ್ಟು! ಮುಖ್ಯವಾಗಿ ಪ್ರಾಂತೀಯ ಭಾಷೆಗಳ ಚಿತ್ರಗಳು ವಿಭಿನ್ನ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯತೆ ಪ್ರದರ್ಶಿಸುತ್ತಾ, ಭಾಷಾ ಪ್ರಯೋಗದಲ್ಲಿ ಮಾತ್ರವಲ್ಲದೆ, ಆಹಾರ ವಿಹಾರ, ರೀತಿರಿವಾಜು, ಉಡುಗೆ ತೊಡುಗೆ, ಹಬ್ಬಗಳ ಆಚರಣೆ, ವ್ಯಹಾರದಲ್ಲೂ ಅಖಂಡ ವಿಭಿನ್ನತೆ ಕಂಡುಬರುತ್ತದೆ.
ಇವನ್ನೆಲ್ಲ ಬೆಳ್ಳಿ ತೆರೆಯ ಮೇಲೆ ವಿಭಿನ್ನ ದೃಷ್ಟಿಕೋನದಿಂದ ವೀಕ್ಷಕರು ಗಮನಿಸಿದಾಗ ಭಾರತೀಯ ಪ್ರೇಕ್ಷಕರಿಗೆ ಒಂದು ಸಾಭೌಮಿಕ ಅನುಭೂತಿ ಉಂಟಾಗುತ್ತದೆ. ಹೀಗಾಗಿಯೇ ವೈವಿಧ್ಯತೆಗಳ ನಡುವೆ ಮನರಂಜನೆಯನ್ನು ಅದೇ ನಿಲುವಿನಲ್ಲಿ ಉಳಿಸಿಕೊಳ್ಳಲು, ಇಲ್ಲಿ ಗೃಹಶೋಭಾ ಮತ್ತೊಂದು ಹೊಸ ಹೆಜ್ಜೆ ಮುಂದಿಟ್ಟಿದ್ದಾಳೆ! ಇತ್ತೀಚೆಗೆ ನಮ್ಮ ವಿಭಿನ್ನ ಪ್ರಾಂತೀಯ ಭಾಷೆಗಳಲ್ಲಿ ಬಿಡುಗಡೆಗೊಂಡ ಜನಪ್ರಿಯ ಚಿತ್ರಗಳ ವಿಸ್ತೃತ ಮಾಹಿತಿ, ಓದುಗರಿಗಾಗಿ ಈ ಮೂಲಕ ಪ್ರಸ್ತುತಪಡಿಸುತ್ತಿದ್ದಾಳೆ!

ಬಂಗಾಳಿ : ಧೂಮಕೇತು
ಕಳೆದ ಒಂದು ದಶಕದಿಂದ ಹಲವಾರು ಪ್ರತಿಕೂಲ ಸಂದರ್ಭಗಳನ್ನು ಎದುರಿಸುತ್ತಿದ್ದ ಬಂಗಾಳಿ ಚಿತ್ರ `ಧೂಮಕೇತು' ಕಳೆದ ತಿಂಗಳು ಬಿಡುಗಡೆಯ ಭಾಗ್ಯ ಕಂಡಿತು. ಚಿತ್ರ ಆರಂಭದಿಂದಲೇ ಪ್ರೇಕ್ಷಕರ ಹೃದಯ ಗೆದ್ದಿದೆ. ಪ್ರೇಕ್ಷಕರು ಈ ಚಿತ್ರ ವೀಕ್ಷಿಸಲು ಬಲು ಉತ್ಸುಕರಾಗಿದ್ದರು. ಈ ಚಿತ್ರ ದೇವ್ ಶುಭಶ್ರೀ ನಟನೆಯಿಂದ ಅತ್ಯಧಿಕ ರೋಚಕತೆ ಗಳಿಸಿತ್ತು. ಸಹಜವಾಗಿಯೇ ಬಾಕ್ಸ್ ಆಫೀಸಿನಲ್ಲಿ ಜ್ವಾಲಾಮುಖಿಯಾಗಿ ಸ್ಛೋಟಿಸಿತು. ಚಿತ್ರದ ನಿರ್ದೇಶಕ ಕೌಶಿಕ್ ಗಂಗೋಪಾಧ್ಯಾಯ ಈ ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಬಹಳ ಸಂತೃಪ್ತರು, ವೀಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಚಿತ್ರದ ಬಿಡುಗಡೆಗೆ ಮುನ್ನ ಇದರ ಪ್ರೊಮೋಶನ್ ಇವೆಂಟ್ಸ್ ಗಾಗಿ ಬರುತ್ತಿದ್ದ ವೀಕ್ಷಕರ ದಂಡು, ಆಸಕ್ತಿ ಗಮನಿಸಿಕೊಂಡು, ಈ ಚಿತ್ರದ ಬಿಡುಗಡೆಗೆ ಒಂದು ವಾರದ ಮುನ್ನವೇ ಹಲವಾರು ಕಡೆ ಟಿಕೆಟ್ ಬುಕಿಂಗ್ ಕೌಂಟರ್ಸ್ ತೆರೆಯಲಾಗಿತ್ತು. ಈ ಚಿತ್ರಕ್ಕಾಗಿ ಪ್ರೇಕ್ಷಕರು ತೋರಿದ ಅಪಾರ ಆಸಕ್ತಿ ಕಂಡು, ದ. ಬಂಗಾಳದ ರಾಜ್ಯವಿಡೀ ಎಲ್ಲಾ ಥಿಯೇಟರ್ ಗಳು ಈ ಬಂಗಾಳಿ ಚಿತ್ರದ ರನ್ನಿಂಗ್ ಶೋ ಹೆಚ್ಚಿಸಿ, ಹಲವು ಹಿಂದಿ ಚಿತ್ರಗಳ ಶೋ ರದ್ದುಗೊಳಿಸಿದ! ಈ ಲೇಖನ ಅಚ್ಚಿಗೆ ಹೋಗುವ ಹೊತ್ತಿಗೆ `ಧೂಮಕೇತು' ಚಿತ್ರ ಒಟ್ಟಾರೆ 28 ಕೋಟಿಗೂ ಅಧಿಕ ಹಣ ಬಾಚಿಕೊಂಡಿತ್ತು!
ಈ ಚಿತ್ರದ ಕಥೆ ಪ. ಬಂಗಾಳ ರಾಜ್ಯದ ಮಲೆನಾಡಿನ ಜೀವಾಳ ಪ್ರತಿಬಿಂಬಿಸುವ, ಅದರ ಒಳಹೊರಗನ್ನು ಸಮರ್ಥವಾಗಿ ನಿರೂಪಿಸುವ ಕಥಾನಕ ಹೊಂದಿದೆ. ಗೆಳೆತನ, ಪ್ರೀತಿಪ್ರೇಮ, ಕೌಟುಂಬಿಕ ಬಾಂಧವ್ಯ, ಹಳ್ಳಿ ಬಿಟ್ಟು ನಗರ ಸೇರುವ ನಾಯಕನ ಕಥೆ, ತಮ್ಮನ ಕೊಲೆಯ ರಹಸ್ಯ ಭೇದಿಸಲು ಮತ್ತೆ ವಾಪಸ್ಸು ಬರುವಿಕೆಯನ್ನು ಒಳಗೊಂಡಿದೆ. ಈ ಚಿತ್ರಕ್ಕಾಗಿ ಅನುಪಮ್ ರಾವ್, ಅರಿಜಿತ್ ಸಿಂಗ್, ಶ್ರೇಯಾ ಘೋಶಾಲ್ ಅದ್ಭುತ ಗೀತೆಗಳನ್ನು ಹಾಡಿ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಎಂದಿನಂತೆ ಮುಖ್ಯ ತಾರಾಗಣದಲ್ಲಿ ದೇವ್ ಶುಭಶ್ರೀ ಇದ್ದರೆ ಉಳಿದಂತೆ ಚಿರಂಜೀತ್ ಚಕ್ರವರ್ತಿ, ರುದ್ರಾನಿ ಘೋಷ್, ದುಲಾಲ್ ಲಹಿರಿ, ಪಂಬ್ರತಾ ಚಟರ್ಜಿ ಮುಂತಾದವರು ಇತರ ಪಾತ್ರಗಳಲ್ಲಿದ್ದಾರೆ. `ಧೂಮಕೇತು' ಚಿತ್ರ `ದಾಗ್ ಕ್ರಿಯೆಟಿವ್ ಮೀಡಿಯಾ ದೇವ್ ಎಂಟರ್‌ಟೇನ್ಮೆಂಟ್ ವೆಂಚರ್ಸ್' ಬ್ಯಾನರ್ ನಡಿ ತಯಾರಾಗಿ, ಅಡಿ ವಿತರಣೆಗೊಂಡಿದೆ.





