Sj*

ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿರುವ, ನಿತೀಶ್ ತಿವಾರಿ ನಿರ್ದೇಶನದ ಬೃಹತ್ ದೃಶ್ಯಕಾವ್ಯ ‘ರಾಮಾಯಣ’ ಚಿತ್ರದ ಮ್ಯೂಸಿಕಲ್‌ ಜರ್ನಿ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಚಿತ್ರತಂಡವು ಶ್ರೀರಾಮನ ದಿವ್ಯ ಚೇತನವನ್ನು ಕೊಂಡಾಡುವ ‘ಜೈ ಜೈ ರಾಮ್’ ಎಂಬ ಪ್ರಥಮ ಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ಪ್ರಚಾರದ ಮೊದಲ ಹೆಜ್ಜೆಯನ್ನು ಇಟ್ಟಿದೆ. ಆಧ್ಯಾತ್ಮಿಕ ಆರತಿಯ ಪವಿತ್ರತೆಯೊಂದಿಗೆ ವಿಶಾಲವಾದ ಸಿನಿಮಾ ಸಂಗೀತವನ್ನು ಸಮ್ಮಿಳಿತಗೊಳಿಸಿ ಈ ಹಾಡನ್ನು ನಿರ್ಮಿಸಲಾಗಿದೆ.

ಭಾರತೀಯ ಚಿತ್ರರಂಗದ ದೈತ್ಯ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ದಿವ್ಯ ಗೀತೆಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಕನ್ನಡ ಆವೃತ್ತಿಗೆ ವರದರಾಜ್ ಚಿಕ್ಕಬಳ್ಳಾಪುರ ಅವರು ಮನಮುಟ್ಟುವ ಸಾಹಿತ್ಯ ರಚಿಸಿದ್ದು, ಗಾಯಕರಾದ ರಾಘವ್ ಕೌಶಿಕ್ ಮತ್ತು ರಕ್ಷಿತಾ ಸುರೇಶ್ ತಮ್ಮ ದೈವಿಕ ಕಂಠಸಿರಿಯಲ್ಲಿ ಹಾಡಿದ್ದಾರೆ. ಶ್ರೀರಾಮನ ಕರುಣೆ, ಅಭಯ, ರಕ್ಷಣೆ ಹಾಗೂ ಧರ್ಮನಿಷ್ಠೆಯನ್ನು ಬಣ್ಣಿಸುವ ಈ ಸಾಲುಗಳು, ಮತ್ತೆ ಮತ್ತೆ ಪುನರಾವರ್ತನೆಯಾಗುವ ‘ಜೈ ಜೈ ರಾಮ್’ ನಾಮಸ್ಮರಣೆಯ ಮೂಲಕ ಕೇಳುಗರ ಮನಸ್ಸಿನಲ್ಲಿ ಭಕ್ತಿರಸವನ್ನು ಸೃಷ್ಟಿಸುತ್ತವೆ.

ಈ ವಿಶೇಷ ಗೀತೆಯ ಕುರಿತು ಮಾತನಾಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಶ್ರೀರಾಮನು ರಾಮಾಯಣದ ಹೃದಯಭಾಗವಾಗಿದ್ದು, ತಲೆಮಾರುಗಳಿಂದ ಪ್ರತಿಯೊಬ್ಬರ ಜೀವನದ ದಾರಿದೀಪವಾಗಿದ್ದಾನೆ ಎಂದಿದ್ದಾರೆ. ಕತ್ತಲೆಯ ಕ್ಷಣಗಳಲ್ಲಿ ಆತನ ಶಕ್ತಿ, ಗೊಂದಲದ ಸಮಯದಲ್ಲಿ ಆತನ ಧರ್ಮದ ಮಾರ್ಗ ಹಾಗೂ ಸಂತೋಷದ ಕ್ಷಣಗಳಲ್ಲಿ ಕೃತಜ್ಞತೆಯಿಂದ ಆತನನ್ನು ಸ್ಮರಿಸಲಾಗುತ್ತದೆ. ‘ಜೈ ಜೈ ರಾಮ್’ ಗೀತೆಯು ಪ್ರತಿಯೊಬ್ಬ ಭಾರತೀಯನು ಶ್ರೀರಾಮನೊಂದಿಗೆ ಹೊಂದಿರುವ ಅತ್ಯಂತ ವೈಯಕ್ತಿಕ ಮತ್ತು ಪವಿತ್ರ ಸಂಬಂಧದ ಅಭಿವ್ಯಕ್ತಿಯಾಗಿದೆ ಎಂದು ಅವರು ಹಂಚಿಕೊಂಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ರಾಮಾಯಣವನ್ನು ಅತ್ಯಂತ ಬೃಹತ್ ಪ್ರಮಾಣದಲ್ಲಿ ನಿರ್ಮಿಸುತ್ತಿದ್ದರೂ, ಅದರ ನಿಜವಾದ ತಳಹದಿ ಇರುವುದು ನಮ್ಮ ಭಾವನೆ, ಮೌಲ್ಯ ಮತ್ತು ಭಕ್ತಿಯಲ್ಲಿದೆ ಎಂದಿದ್ದಾರೆ. ಆದ್ದರಿಂದಲೇ ಸಿನಿಮಾದ ಮೊದಲ ಹಾಡು ಆ ಆತ್ಮವನ್ನು ಪ್ರತಿಬಿಂಬಿಸಬೇಕು ಎಂಬ ಉದ್ದೇಶದಿಂದ ರೂಪಿಸಲಾಗಿದೆ. ಶ್ರೀರಾಮ ಕೇವಲ ನಾವು ಪೂಜಿಸುವ ದೇವರಷ್ಟೇ ಅಲ್ಲ, ನಮ್ಮೊಳಗೆ ನಾವು ಕೊಂಡೊಯ್ಯುವ ಧೈರ್ಯ, ಮಾರ್ಗದರ್ಶಿ ಮತ್ತು ಶಕ್ತಿಯ ಮೂಲ ಎಂಬುದನ್ನು ಈ ಗೀತೆ ಪ್ರತಿಯೊಬ್ಬರಿಗೂ ನೆನಪಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮಾತನಾಡಿ, ಶ್ರೀರಾಮನ ಹೆಸರಿನ ಸರಳ ಮತ್ತು ಶಕ್ತಿಯುತ ಜಪವೇ ಈ ‘ಜೈ ಜೈ ರಾಮ್’ ಹಾಡಿನ ಜೀವಾಳವಾಗಿದೆ ಎಂದಿದ್ದಾರೆ. ಕಿವಿಗೆ ತಲುಪುವ ಪ್ರಾರ್ಥನೆಯ ಸಾತ್ವಿಕತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುತ್ತಲೇ, ಅದನ್ನು ವಿಶಾಲವಾದ ಸಿನಿಮಾ ಮಟ್ಟದ ಗೀತೆಯಾಗಿ ಬೆಳೆಸುವುದು ತಮ್ಮ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ. ಸಾಹಿತ್ಯದ ಭಕ್ತಿಭಾವಕ್ಕೆ ಗಾಯಕರು ತಮ್ಮ ಎಮೋಷನಲ್ ಗಾಯನದ ಮೂಲಕ ಜೀವ ತುಂಬಿದ್ದು, ಈ ಹಾಡು ಪ್ರತಿಯೊಬ್ಬ ಆಲಿಸುವ ಹೃದಯಕ್ಕೂ ಶಾಂತಿ, ನೆಮ್ಮದಿ ಮತ್ತು ದೈವಿಕ ಸಂಪರ್ಕವನ್ನು ನೀಡುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ದೃಶ್ಯಕಾವ್ಯದಲ್ಲಿ ಪ್ರಸಿದ್ಧ ತಾರಾಗಣವೇ ಒಂದಾಗಿದೆ. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಲಂಕೇಶ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ವೈಭವೋಪೇತವಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಿದೆ.

ಈ ಮಹೋನ್ನತ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ಜಾಗತಿಕ ವಿಎಫ್‌ಎಕ್ಸ್ ಸಂಸ್ಥೆ ‘DNEG’ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ‘ಮಾನ್ಸ್‌ಟರ್ ಮೈಂಡ್ ಕ್ರಿಯೇಷನ್ಸ್’ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಭಾರತದ ಪ್ರಮುಖ ಸಂಗೀತ ಲೇಬಲ್ ‘ಟಿ-ಸೀರೀಸ್’ ಈ ಚಿತ್ರದ ಸಂಗೀತದ ಹಕ್ಕನ್ನು ಹೊಂದಿದ್ದು, ಸೋನಿ ಪಿಕ್ಚರ್ಸ್ ಸಂಸ್ಥೆಯು ಭಾರತವನ್ನು ಹೊರತುಪಡಿಸಿ ವಿಶ್ವದಾದ್ಯಂತ ಚಿತ್ರವನ್ನು ಬೃಹತ್ ಮಟ್ಟದಲ್ಲಿ ವಿತರಣೆ ಮಾಡಲಿದೆ. ‘ರಾಮಾಯಣ: ಪಾರ್ಟ್‌ 1’ 2026ರ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ನಿರ್ಮಾಣದಲ್ಲಿ ಭಾಗಿಗಳಾಗಿರುವ ‘DNEG’ ಸಂಸ್ಥೆಯು visual effects ಮತ್ತು ಅನಿಮೇಷನ್ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯಲ್ಲಿದ್ದು, ‘Coyote vs. Acme’, ‘Klara and the Sun’, ‘Street Fighter’ ನಂತಹ ಹಲವು ಬೃಹತ್ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಗೆಯೇ, ‘ದಿ ಗಾರ್ಫೀಲ್ಡ್ ಮೂವಿ’ಯ ಮೂಲಕ ಜಾಗತಿಕವಾಗಿ 2400 ಕೋಟಿಗೂ ಹೆಚ್ಚು ಗಳಿಕೆ ಕಂಡು ಯಶಸ್ವಿಯಾಗಿರುವ ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ಪ್ರಸ್ತುತ ‘Animal Friends’ ಮತ್ತು ‘The Angry Birds Movie 3’ ನಂತಹ ಬೃಹತ್ ಚಿತ್ರಗಳನ್ನು ನಿರ್ಮಿಸುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ