ಕಿಚ್ಚ ಸುದೀಪ್ ಅಳಿಯ, ಸಂಚಿತ್ ಸಂಜೀವ್ ನಾಯಕನಾಗಿ ಪಾದರ್ಪಣೆ ಮಾಡಿರುವ ಚಿತ್ರದ ಮುಹೂರ್ತ ಈ ಶುಕ್ರವಾರ ನಡೆದಿದೆ. ಈ ಚಿತ್ರದ ನಿರ್ಮಾಣದಲ್ಲಿ ಕಿಚ್ಚನ ಬ್ಯಾನರ್ ಸುಪ್ರಿಯಾನ್ವಿ ಜೊತೆ ಕೆ. ಆರ್. ಜಿ. ಸ್ಟುಡಿಯೋ ಕೈ ಜೋಡಿಸಿದೆ. ವಿವೇಕ ನಿರ್ದೇಶಿಸುತ್ತಿರುವ ಹೆಸರಿಡದ ಈ ಚಿತ್ರಕ್ಕೆ ಕರಾವಳಿ ಬೆಡಗಿ ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಮುಂಬೈನಲ್ಲಿ ಹುಟ್ಟಿ ಬೆಳೆದ ಕಾಜಲ್ ತನ್ನ ವೃತ್ತಿ ಜೀವನವನ್ನು ಹಿಂದಿ ಸೀರಿಯಲ್ ಗಳ ಮೂಲಕ ಆರಂಭಿಸಿದ್ದು , ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುಂಚೆ 'ದೇಯ್ಯ ಬೈದೆತಿ ' ಮತ್ತು 'ಪತ್ತನಾಜೆ ' ಎಂಬ ತುಳು ಚಿತ್ರಗಳಲ್ಲಿ ಅಭಿನಯಸಿದ್ದರು
. 'ಮಾಯಾ ಕನ್ನಡಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಈಕೆ ಮಾಡಿರುವುದು ಬೆರಳೆಣಿಕೆಯ ಸಿನಿಮಾಗಳಾದರೂ ಕೂಡ, ಪಾತ್ರಗಳ ಆಯ್ಕೆ ವಿಷಯ ಬಂದಾಗ ಬೇರೆ ಹೊಸ ನಾಯಕಿಯರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ. ಈಕೆ ಈ ಹಿಂದೆ ಮಾಡಿರುವ 'ಬಾಂಡ್ ರವಿ ' ಕೆ. ಟಿ. ಎಂ,'ಪೆಪೆ ' ಮತ್ತು ಬಿಡುಗಡೆಗೆ ಸಿದ್ದವಾಗಿರುವ 'ಬೆಳ್ಳಿ ಚುಕ್ಕಿ ಹಳ್ಳಿ ಹಕ್ಕಿ 'ಚಿತ್ರಗಳೇ ಇದಕ್ಕೆ ಸಾಕ್ಷಿ
ಸಂಚಿತ್ 1 ಎಂದು ತಾತ್ಕಾಲಿಕವಾಗಿ ಹೆಸರಿಟ್ಟಿರುವ ಹೊಸ ಚಿತ್ರದಲ್ಲಿ ಅಭಿನಯಕ್ಕೆ ಒತ್ತು ಕೊಡುವ ಪಾತ್ರ ತನಗೆ ಸಿಕ್ಕಿದೆಯೆಂದು ತಿಳಿಸಿರುವ ಕಾಜಲ್ ಗೆ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡುವ ಸಾಧ್ಯತೆಯಿದೆ.
ಕನ್ನಡ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಇಚ್ಚಿಸಿ ಬೆಂಗಳೂರಿಗೆ ಶಿಫ್ಟ್ ಆಗಿ ಕನ್ನಡ ಕಲಿತಿರುವ ಕಾಜಲ್ ಬಗ್ಗೆ ಈ ಹಿಂದೆ ನಟಿಸಿದ ಎಲ್ಲಾ ಚಿತ್ರತಂಡಗಳು ಮೆಚ್ಚುಗೆ ಸೂಚಿಸಿವೆ.
ಸರೋವರ್ ಸಂಜೀವ್ (ಕಿಚ್ಚ ಸುದೀಪ್ ಅವರ ತಂದೆ ) ಮನೆಯ ಕುಡಿ ಬಗ್ಗೆ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಭರವಸೆ ಹುಟ್ಟಿಕೊಂಡಿದೆ. ಕಾಜಲ್ ಕುಂದರ್ ಗೆ ಕೂಡ ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ತಂದು ಕೊಡಲೆಂದು ನಮ್ಮ ಹಾರೈಕೆ.